ADVERTISEMENT

170 ಗಂಟೆ ನಿರಂತರ ನೃತ್ಯ: ಭರತನಾಟ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ ರೆಮೋನ

ಕೋಡಿಬೆಟ್ಟು ರಾಜಲಕ್ಷ್ಮಿ
Published 10 ಆಗಸ್ಟ್ 2025, 0:30 IST
Last Updated 10 ಆಗಸ್ಟ್ 2025, 0:30 IST
<div class="paragraphs"><p>ಭರತನಾಟ್ಯ ಕಲಾವಿದೆ ರೆಮೋನಾ ಇವೆಟ್‌ ಪಿರೇರಾ</p></div>

ಭರತನಾಟ್ಯ ಕಲಾವಿದೆ ರೆಮೋನಾ ಇವೆಟ್‌ ಪಿರೇರಾ

   

ಪ್ರಜಾವಾಣಿ ಚಿತ್ರ :ಫಕ್ರುದ್ದೀನ್ ಎಚ್

ಇದು ಅಮ್ಮ ಮಗಳಿಬ್ಬರ ಕನಸೊಂದು ಸಾಕಾರಗೊಂಡ ಕಥೆ. ನೃತ್ಯವನ್ನು ಅದಮ್ಯವಾಗಿ ಪ್ರೀತಿಸುವ ಅಮ್ಮನಿಗೆ ನೃತ್ಯ ಕಲಿಯುವ ಅವಕಾಶ ಒದಗಿಬರಲೇ ಇಲ್ಲ. ಆದರೇನಂತೆ ಮಗಳು ಚಿಕ್ಕಂದಿನಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತ ಸಂತೋಷ ಪಡುವುದನ್ನು ಗುರುತಿಸಿ, ಆಕೆಯನ್ನು ನೃತ್ಯಕಲಾವಿದೆಯನ್ನಾಗಿ ಮಾಡುವ ಕನಸು ಕಂಡರು. ಆ ಕನಸಿನ ಸಂತೃಪ್ತಿಯ ಕ್ಷಣಗಳು ಇತ್ತೀಚೆಗೆ ಮಂಗಳೂರಿನ ಸೇಂಟ್ ಅಲೋಷಿಯಸ್‌ ಕಾಲೇಜಿನ ಸಭಾಂಗಣದಲ್ಲಿ ಸಾಕಾರಗೊಂಡವು. ರೆಮೋನ ಇವೆಟ್‌ ಪಿರೇರಾ ಜಗತ್ತಿನಲ್ಲಿಯೇ 170 ಗಂಟೆಗಳು ಸುದೀರ್ಘವಾಗಿ ನಿರಂತರ ನೃತ್ಯ ಪ್ರದರ್ಶನ ನೀಡಿದ ಪ್ರಥಮ ನೃತ್ಯಕಲಾವಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಮಗಳ ಈ ಸಾಧನೆಗೆ ಆಧಾರವಾಗಿ ನಿಂತವರು ಅಮ್ಮ ಗ್ಲಾಡಿಸ್‌ ಪಿರೇರಾ.

ADVERTISEMENT

ಕಲಾವಿದೆ ರೆಮೋನ ಪದವಿ ವಿದ್ಯಾರ್ಥಿನಿ. ಆದರೆ ಭರತನಾಟ್ಯವೆಂದರೆ ರಾತ್ರಿ ಹಗಲೆನ್ನದೆ ಹೆಜ್ಜೆ ಹಾಕುವ ಅವರು ‘ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌’ನಲ್ಲಿ ತಮ್ಮ ಹೆಸರು ಸೇರಬೇಕು ಎಂದು ಪಣತೊಟ್ಟಿದ್ದು ಇತ್ತೀಚೆಗೆ. ದಾಖಲೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿ, ಅವಕಾಶ ದೊರೆತಾಗಲೇ ಅಮ್ಮ ಮಗಳಿಬ್ಬರೂ ಖುಷಿಯಾಗಿದ್ದರು. ಆದರೆ ಮೂರೇ ತಿಂಗಳ ಅವಧಿಯಲ್ಲಿ ಈ ನಿರಂತರ ನೃತ್ಯಕ್ಕೆ ಶಕ್ತಿ ಸಂಚಯನ ಮಾಡುವುದು ಹೇಗೆ ಎಂದು ಸ್ವಲ್ಪ ಚಿಂತೆಯಾಗಿದ್ದು ಹೌದು. ಆದರೂ ದೊರೆತ ಅವಕಾಶವನ್ನು ಕೈಬಿಡದೇ ಪ್ರಯತ್ನಿಸಿಯೇ ತೀರುವುದೆಂದು ರೆಮೋನ ನೃತ್ಯಕ್ಕೆ ಸಿದ್ಧತೆಗಳನ್ನು ಮಾಡಿಕೊಂಡರು. ಅವರು ಪದವಿ ಓದುತ್ತಿರುವ ಸೇಂಟ್‌ ಅಲೋಷಿಯಸ್‌ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವರ್ಗದವರು ರೆಮೋನ ಅವರ ಈ ಹೊಸ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. ತಮ್ಮದೇ ಕಾಲೇಜಿನ ಸಭಾಂಗಣದಲ್ಲಿ ಈ ವಿಶ್ವ ದಾಖಲೆಯ ಪ್ರದರ್ಶನ ನೀಡಲು ಅವಕಾಶವನ್ನೂ ಮಾಡಿಕೊಟ್ಟರು.

ತಾಯಿ ಗ್ಲಾಡಿಸ್‌ ಪಿರೇರಾ ಜೊತೆಗೆ ರೆಮೋನ

ಜುಲೈ 21ರಂದು ಬೆಳಿಗ್ಗೆ ಸಭಾಂಗಣದಲ್ಲಿ ನೃತ್ಯ ಆರಂಭ ಮಾಡಿದ ರೆಮೋನ, ಜುಲೈ 28ರ ಮಧ್ಯಾಹ್ನದ ಹೊತ್ತಿಗೆ ಮಂಗಳ ಹಾಡಿದರು. ಎಂಟು ದಿನಗಳು ಸೇಂಟ್‌ ಅಲೋಷಿಯಸ್‌ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ. ರೆಮೋನ ನೃತ್ಯ ಪ್ರದರ್ಶನ ನೀಡುತ್ತಿದ್ದ ಸಭಾಂಗಣದಲ್ಲಿ ನೃತ್ಯಪ್ರಿಯರು, ಅಭಿಮಾನಿಗಳು, ಆಕೆಯ ಸಾಧನೆಯ ಹೆಜ್ಜೆಯನ್ನು ಪ್ರೋತ್ಸಾಹಿಸುವವರು ಸಾಲುಗಟ್ಟಿ ಬಂದು ಕುಳಿತು ಚಪ್ಪಾಳೆಯೊಂದಿಗೆ ಅಭಿನಂದಿಸಿದರು. ನಿರಂತರತೆ ಎನ್ನುವುದು ಸುಲಭವೇನಲ್ಲ. ಅವರು ಈ ಪ್ರದರ್ಶನಕ್ಕೆ ಬೇಕಾಗಿ ಪೂರಕವಾದ ಪುಷ್ಪಾಂಜಲಿ, ವರ್ಣಗಳು, ಅಭಿನಯ ಪ್ರಧಾನ ಕೃತಿಗಳು, ದಾಸರಪದಗಳು ಸೇರಿದಂತೆ ಹತ್ತಾರು ನೃತ್ಯಗಳನ್ನು ಪದಗತ ಮಾಡಿಕೊಂಡಿದ್ದರು. ಎಂಟು ದಿನಗಳು ಅಪಾರ ಸಾಧ್ಯತೆಯನ್ನು ಅನಾವರಣಗೊಳಿಸಿದರು. ‘ನಾನು ಕ್ರಿಶ್ಚಿಯನ್‌ ಸಮುದಾಯದಲ್ಲಿ ಹುಟ್ಟಿದ್ದರೂ ಗುರುಗಳ ಮೂಲಕ ಮಹಾಕಾವ್ಯಗಳ ಕಥೆಗಳನ್ನು ತಿಳಿದುಕೊಂಡಿದ್ದೇನೆ. ಭರತನಾಟ್ಯವನ್ನು ಕಲಿಯುತ್ತ ಹೋದಷ್ಟೂ ಅದರ ಸಾಧ್ಯತೆಯ ವಿಸ್ತಾರವನ್ನು ಕಂಡು ನಿಜಕ್ಕೂ ವಿಸ್ಮಯಗೊಂಡಿದ್ದೇನೆ. ಎಂಟು ದಿನಗಳು ನಾನು ನಿರಂತರವಾಗಿ ನೃತ್ಯ ಮಾಡಬೇಕಾದರೆ ಈ ಕಲಾ ಪ್ರಕಾರವೂ ಸುಂದರವಾಗಿದೆ ಎಂಬರ್ಥವನ್ನು ಕೊಡುತ್ತದೆ ಅಲ್ಲವೇ’ ಎನ್ನುತ್ತಾರೆ.

ಭರತನಾಟ್ಯ ಹೇಳಿಕೊಟ್ಟ ನೃತ್ಯ ಗುರುಗಳಾದ ಸುರೇಶ್‌ ಅತ್ತಾವರ್‌, ಉಮಾ ಕಲ್ಲೂರಾಯ, ಪ್ರಸ್ತುತ ನೃತ್ಯ ಗುರುಗಳಾಗಿರುವ ಶ್ರೀವಿದ್ಯಾ ಅವರು ನನ್ನ ಈ ಸಾಧನೆಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳುವುದನ್ನು ರೆಮೋನ ಮರೆಯುವುದಿಲ್ಲ. ಈಗ ಅವರ ನೃತ್ಯ ಗುರು ಶ್ರೀವಿದ್ಯಾ ಅವರು ಭರತನಾಟ್ಯದಲ್ಲಿ ಪಿಎಚ್‌.ಡಿ ಮಾಡಿದವರು. ‘ಅವರಂತೆಯೇ ನನಗೂ ಭರತನಾಟ್ಯದಲ್ಲಿ ಪಿಎಚ್‌.ಡಿ ಮಾಡಬೇಕು ಎಂಬ ಆಸೆಯಿದೆ’ ಎಂದು ತಮ್ಮ ಕನಸನ್ನು ಹಂಚಿಕೊಂಡರು.

‘ನಿರಂತರ ನೃತ್ಯವೆಂದರೆ ವಿಶ್ರಾಂತಿಯ ಅಗತ್ಯ ಕಾಣಲಿಲ್ಲವೇ?’ ಎಂಬ ಪ್ರಶ್ನೆಗೆ ರೆಮೋನ ನಗುತ್ತಾರೆ,‘ಮೊದಲನೆಯದ್ದಾಗಿ ಈ ದಾಖಲೆಯನ್ನು ಮಾಡಬೇಕು ಎಂಬ ತುಡಿತವೇ ನನ್ನ ನಿದ್ದೆಯನ್ನು ಕಿತ್ತುಕೊಂಡಿತು. ಈ ನಿರಂತರ ದಾಖಲೆಯನ್ನು ಮಾಡುವ ಸಂದರ್ಭದಲ್ಲಿರುವ ನಿಯಮಗಳ ಪ್ರಕಾರ, ಮೂರು ಗಂಟೆ ನೃತ್ಯ ಮಾಡಿದ ಬಳಿಕ 15 ನಿಮಿಷಗಳ ವಿರಾಮಕ್ಕೆ ಅವಕಾಶವಿದೆ. ಈ ವಿರಾಮದಲ್ಲಿ ನಾನು ನನ್ನ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳಬೇಕು. ಈ ಬಿಡುವೇ ವಿಶ್ರಾಂತಿಯೂ ಹೌದು’ ಎಂದು ನಕ್ಕರು.

ರೆಮೋನ ಇವೆಟ್‌ ಪಿರೇರಾ

170 ಗಂಟೆಗಳು ನಿರಂತರ ನೃತ್ಯ ಮಾಡಿದ ಬಳಿಕವೂ ರೆಮೋನ, ಲವಲವಿಕೆಯಿಂದ ಉತ್ಸಾಹದಿಂದಲೇ ಇದ್ದಳು. ಇದೊಂದು ಅಪೂರ್ವ ಸಾಧನೆಯೇ ಹೌದು. ಆಕೆಯ ಇಚ್ಛಾಶಕ್ತಿಯೇ ಈ ಸಾಧನೆಗೆ ಆಧಾರ’ ಎಂದು ‘ಗೋಲ್ಡನ್‌ ಬುಕ್‌ ಆಫ್‌ ರೆಕಾರ್ಡ್ಸ್‌’ನ ಭಾರತೀಯ ಪ್ರತಿನಿಧಿ ಮನಿಷ್‌ ವಿಷ್ಣೋಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ರೆಮೋನ ಅವರ ನೃತ್ಯ ಜೀವನದ ಅನುಭವಗಳು ವಿಭಿನ್ನವಾಗಿವೆ. ದೇಶದ ವಿವಿಧೆಡೆ ಹಲವಾರು ನಾಟ್ಯೋತ್ಸವಗಳಲ್ಲಿ ನೃತ್ಯ ಪ್ರದರ್ಶನ ನೀಡಿರುವ ಅವರು, ಭರತನಾಟ್ಯದ ಜೊತೆಗೆ ಇತರ ನೃತ್ಯ ಪ್ರಕಾರಗಳನ್ನೂ ಪ್ರದರ್ಶಿಸಿದ್ದಾರೆ. ‘ಸಿನಿಮಾ, ಜನಪದ, ನೃತ್ಯನಾಟಕಗಳನ್ನು ಪ್ರಸ್ತುತಪಡಿಸಿದ್ದಾರೆ. ವೇದಿಕೆಯ ಮೇಲೆ ಮಡಿಕೆಯನ್ನಿಟ್ಟು ಅದರ ಮೇಲೆ ನೃತ್ಯ ಮಾಡುವುದಾಗಲೀ, ಎರಡೂ ಕೈಗಳಲ್ಲಿ ಬೆಂಕಿಯ ಮಡಕೆಗಳನ್ನು ಹಿಡಿದುಕೊಂಡು ನರ್ತಿಸುವುದಾಗಲೀ... ಇನ್ಯಾವುದೇ ವಸ್ತುಗಳನ್ನು ಬಳಸಿಕೊಂಡು ನೃತ್ಯ ಮಾಡುವ ಪ್ರಯೋಗವನ್ನು ಮೊದಲು ಅಮ್ಮ ಮಾಡುವುದು ವಾಡಿಕೆ. ಮಗಳ ನೃತ್ಯಕ್ಕೆ ವಸ್ತ್ರ ವಿನ್ಯಾಸ ಮಾಡುವವರು ಕೂಡ ಅಮ್ಮನೇ. ಪುತ್ತೂರು ಮೂಲದವರಾದ ಅಮ್ಮ ಗ್ಲಾಡಿಸ್‌ ಪಿರೇರಾ, ಮಗಳಿಗೋಸ್ಕರ ಮಂಗಳೂರು ನಗರದಲ್ಲಿದ್ದುಕೊಂಡು ಆಕೆಯ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ.

‘ಪ್ರಯೋಗದಿಂದ ನನಗೆ ತೊಂದರೆ ಆಗುವುದಿಲ್ಲ ಎನ್ನುವುದು ಅಮ್ಮನಿಗೆ ಮನದಟ್ಟಾದರೆ ಮಾತ್ರ  ಅಂತಹ ನೃತ್ಯವನ್ನು ಮಾಡಲು ಹೇಳುತ್ತಿದ್ದರು’ ಎಂದು ಹೇಳುವಾಗ ಕಣ್ಣಲ್ಲಿ ನೀರಿತ್ತು. ಅಷ್ಟಾದರೂ ಒಮ್ಮೆ ಸಮುದ್ರ ದಂಡೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಎರಡೂ ಕೈಗಳಲ್ಲಿ ಬೆಂಕಿಯ ಮಣ್ಣಿನ ಮಡಕೆಗಳನ್ನು ಹಿಡಿದು ನೃತ್ಯ ಮಾಡುತ್ತಿರಬೇಕಾದರೆ ಮಡಕೆ ‘ಟಪ್‌’ ಅಂತ ಒಡೆಯಿತು. ಬೆಂಕಿಯಿರುವ ಮಡಕೆಯನ್ನು ಬಿಸಾಡಿಬಿಡುವಂತಿಲ್ಲ, ಮುಂದೆಯೇ ಪ್ರೇಕ್ಷಕರಿದ್ದಾರೆ. ಹಾಗೆಂದು ಅಂಗೈ ಸುಡುತ್ತಿತ್ತು. ಅಷ್ಟರಲ್ಲಿ ಅಮ್ಮನೇ ಬಂದು ಮಡಕೆಗಳನ್ನು ತೆಗೆದುಕೊಂಡು ಹೋದರು. ಹೊಸ ಪ್ರಯೋಗಗಳನ್ನು ಮಾಡುವಾಗ ಇಂತಹ ಸವಾಲುಗಳಿರುತ್ತವೆ. ಆದರೂ ಹೊಸದನ್ನು ಪ್ರಯತ್ನಿಸುವುದರಲ್ಲಿಯೇ ಹೆಚ್ಚಿನ ಖುಷಿಯಿರುತ್ತದೆ’ ಎಂದು ರೆಮೋನ ಹೇಳುತ್ತಾರೆ. ಮುಂದೇನು ಎಂಬ ಪ್ರಶ್ನೆಗೆ ಭರತನಾಟ್ಯದಲ್ಲಿ ವಿದ್ವತ್‌ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವೆ ಎಂದರು. 

ಇವರಿಗೆ ನೃತ್ಯವೇ ಜೀವ ಮತ್ತು ಜೀವನ, ಎಲ್ಲವೂ. 

ವಿಶ್ವದಾಖಲೆಯ ಸಂಭ್ರಮದಲ್ಲಿ ರೆಮೋನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.