ADVERTISEMENT

ಅತ್ತೆ ಅಮ್ಮನಂತಿರಲು ಸಾಧ್ಯವೇ?

ಅತ್ತೆ– ಸೊಸೆ ಒಂದುಗೂಡದ ಸಮಾನಾಂತರ ರೇಖೆಗಳು

ವಿದ್ಯಾಶ್ರೀ ಎಸ್.
Published 12 ಏಪ್ರಿಲ್ 2019, 19:31 IST
Last Updated 12 ಏಪ್ರಿಲ್ 2019, 19:31 IST
   

ಅತ್ತೆ– ಸೊಸೆ– ಮಗ– ಈ ಮೂರು ಬಿಂದುಗಳು ಸೇರಿಕೊಂಡು ಖುಷಿಯ ತ್ರಿಕೋನವಾಗಲು ಸಾಧ್ಯವೇ? ಇಂತಹದೊಂದು ಪ್ರಶ್ನೆ 80– 90ರ ದಶಕದಲ್ಲಿ ಸಿನಿಮಾಗಳನ್ನು ನೋಡಿದವರಿಗೆ ಕಾಡಿದ್ದಂತೂ ನಿಜ. ಈ ಅತ್ತೆ ಎನ್ನುವ ಪಾತ್ರ ಲಿಂಗ ಸಮಾನತೆಯ, ಸ್ತ್ರೀಶಕ್ತಿಯ ದ್ಯೋತಕ; ಯಾವ ಖಳನಾಯಕಿಗೂ ಕಡಿಮೆಯಿಲ್ಲ. ನಾಯಕಿಯನ್ನು ಟೀಕಿಸುವುದು, ಸೊಸೆಗೆ ಕಿರುಕುಳ ನೀಡುವುದು, ಮಗ, ಗಂಡ, ಅಳಿಯ ಎನ್ನದೇ ಅವಮಾನ ಮಾಡುವುದು, ಮನೆಯಲ್ಲಿ ಎಲ್ಲವೂ ಅವಳ ಕೈಯಲ್ಲೇ– ಹಣಕಾಸು ವ್ಯವಹಾರ, ಅಡುಗೆಯ ಉಸ್ತುವಾರಿ ಎಲ್ಲವೂ.

90ರ ನಂತರ, 2000ದಲ್ಲಿ ಬಂದ ಟಿವಿ ಧಾರಾವಾಹಿಗಳಂತೂ ‘ಸಾಸ್‌– ಬಹೂ’ ಧಾರಾವಾಹಿಗಳೆಂದೇ ಪ್ರಚಾರ ಪಡೆದವು. ಸೊಸೆ ವಿರುದ್ಧ ತಂತ್ರ ಹೆಣೆಯುವ ಅತ್ತೆ, ಅದಕ್ಕೆ ಪ್ರತಿತಂತ್ರ ಹೆಣೆಯುವ ಸೊಸೆ. ಇಬ್ಬರ ಕಣ್ಣಿನಲ್ಲೂ ಕಲಹದ ಪ್ರತಿಬಿಂಬ.

ಅದೇ ಈಗಿನ ಧಾರಾವಾಹಿಗಳಲ್ಲಿ ಅತ್ತೆ– ಸೊಸೆ ಸಂಘರ್ಷ ಕಾಣುವುದು ಬಲು ಅಪರೂಪ. ಟಿ.ವಿ ಪರದೆಯ ಮೇಲೆ ಅತ್ತೆ– ಸೊಸೆ ಸದ್ದು ಜೋರಾಗಿಯೇ ಇದ್ದ ಕಾಲ ಹೋಗಿ, ಈಗ ಇಬ್ಬರೂ ತಾಯಿ, ಮಗಳಂತೆ ಮಧುರವಾದ ಬಾಂಧವ್ಯದಲ್ಲಿ ತೇಲುತ್ತಿದ್ದಾರೆ.

ADVERTISEMENT

ಅಸ್ತಿತ್ವದ ಸಂಘರ್ಷ

ಅತ್ತೆ– ಸೊಸೆ ಜಗಳ ಎನ್ನುವುದಕ್ಕಿಂತ ಇಬ್ಬರ ನಡುವಿನ ಮಾನಸಿಕ ಸಂಘರ್ಷ ಎಂಬ ಪದವೇ ಸೂಕ್ತವೆನ್ನಿಸುತ್ತದೆ. ಕುಟುಂಬ ವ್ಯವಸ್ಥೆ ಆಧುನಿಕತೆಯತ್ತ ಸಾಗಲಾರಂಭಿಸಿರುವುದರಿಂದ ಈಗ ಅತ್ತೆಗೆ ಹೆದರಿ ಕೂರುವ ಸೊಸೆಯಾಗಲಿ, ಸೊಸೆಯನ್ನು ಶೋಷಣೆ ಮಾಡುವುದು ಹಿರಿತನದ ಹೆಗ್ಗಳಿಕೆಯೆಂದು ಭಾವಿಸುವ ಅತ್ತೆಯಾಗಲಿ ಕಾಣುವುದು ವಿರಳ. ಆದರೆ ಇವರಿಬ್ಬರ ನಡುವೆ ಮಾನಸಿಕ ಸಂಘರ್ಷಗಳಿಗೆ ಯಾವುದೇ ಕಾಲದ ಮಿತಿಯಿಲ್ಲ ಎನ್ನುತ್ತಾರೆ ಆಪ್ತ ಸಮಾಲೋಚಕರು.

ಅತ್ತೆ– ಸೊಸೆ ಇಬ್ಬರೂ ಸುಶಿಕ್ಷಿತರಾದರೂ, ಮಾನಸಿಕ ಕಿತ್ತಾಟಗಳು ಇದ್ದದ್ದೇ. ಆಧುನಿಕ ಕಾಲಘಟ್ಟದಲ್ಲಿ ಅತ್ತೆ–ಸೊಸೆ ಸಂಘರ್ಷಗಳು ವಿಭಿನ್ನ ರೂಪು ಪಡೆದುಕೊಂಡಿವೆ ಎಂಬುದು ಅವರ ಅಭಿಮತ.

ಗಂಡ, ಹೆಂಡತಿ ಇಬ್ಬರೂ ದುಡಿಯುವ ಈ ಕಾಲದಲ್ಲಿ ಮಕ್ಕಳನ್ನು ಯಾರದ್ದೋ ಬಳಿ ಬಿಡುವ ಬದಲು ಅತ್ತೆಯೇ ಮಕ್ಕಳನ್ನು ನೋಡಿಕೊಂಡರೆ ಸುರಕ್ಷಿತ ಎಂಬ ಮನಃಸ್ಥಿತಿ ಬಹುತೇಕ ಸೊಸೆಯರದ್ದು. ಹೀಗಾಗಿ ಅತ್ತೆ–ಮಾವ ಜೊತೆಗೆ ಇರಲಿ ಎಂದೇ ಬಯಸುತ್ತಾರೆ. ಆದರೆ ಈ ನಿರೀಕ್ಷೆಗಳು ಸ್ವಲ್ಪ ಅದಲು ಬದಲಾದರೂ ಮತ್ತೆ ಮಾನಸಿಕ ತಳಮಳ ಶುರುವಾಗುತ್ತದೆ. ಮೊಮ್ಮಕ್ಕಳನ್ನು ಇಡೀ ದಿನ ನೋಡಿಕೊಳ್ಳಬೇಕು, ಚಿಕ್ಕ ಮಗುವಾದರೆ ಆರಾಮ ಮಾಡಲೂ ಸಾಧ್ಯವಿಲ್ಲ, ತಾನೇನು ಕೆಲಸದವಳ ಥರವೇ ಎಂಬ ಭಾವನೆ ಮತ್ತೆ ಜಗಳಕ್ಕೆ ನಾಂದಿ ಹಾಡುವುದಿದೆ.

ಅತ್ತೆಯೇನು ಶತ್ರುವೇ?

ಹುಡುಗಿ ಹರೆಯಕ್ಕೆ ಬಂದಳೆಂದರೆ ಸಾಕು ‘ತಡಿ ನಿನಗೆ ಅತ್ತೆ ಮನೆಯಲ್ಲಿ ಕಾದಿದೆ’ ಎಂದು ಅತ್ತೆಯೆಂದರೇನೆ ಶತ್ರು ಎಂಬಂತೆ ಬಿಂಬಿಸಲಾಗುತ್ತದೆ. ಮದುವೆಯ ನಂತರ ಹೊಸ ಮನೆಗೆ ಕಾಲಿಟ್ಟ ಯುವತಿಯು ಇದೇ ಹಿಂಜರಿಕೆಯಲ್ಲಿಯೇ ಅತ್ತೆ ಜೊತೆಗೆ ಹೊಂದಿಕೊಳ್ಳಲು ಹೆಣಗಾಡುತ್ತಾಳೆ.

ಇನ್ನು ಅತ್ತೆಯ ವಿಷಯಕ್ಕೆ ಬಂದರೆ, ‘ಸೊಸೆಯೇ ಇವರಿಗೆ ಬುದ್ಧಿ ಕಲಿಸುತ್ತಾಳೆ’ ಎಂಬ ಮಾತುಗಳೂ ಮಹಿಳೆಗೆ ಭವಿಷ್ಯದ ಸೊಸೆಯ ವಿರುದ್ಧವಾದ ಮನಸ್ಥಿತಿ ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಸೊಸೆಯ ಮೇಲೆ ಹಿಡಿತ ಸಾಧಿಸಬೇಕು. ಇಲ್ಲದಿದ್ದರೆ ಮಗ ಎಲ್ಲಿ ಕೈ ಜಾರುತ್ತಾನೋ ಎಂಬ ಆತಂಕದಲ್ಲಿ ಅತ್ತೆಯೂ ತನ್ನ ಪಾರಮ್ಯ ಸಾಧಿಸಲು ಶುರು ಮಾಡುತ್ತಾರೆ.

ಹಾಗಂತ ಈ ವಿಷಯದಲ್ಲಿ ಎಲ್ಲರ ಮನೆಯ ದೋಸೆಯೂ ತೂತು ಎನ್ನಲಾಗದು. ಮಕ್ಕಳೇ ಕಡೆಗಣಿಸಿರುವ ತಂದೆ– ತಾಯಿಯನ್ನು ಸೊಸೆ ಪ್ರೀತಿಯಿಂದ ಸಾಕುತ್ತಿರುವ ಉದಾಹರಣೆಗಳು ಸಾಕಷ್ಟಿವೆ. ಹಾಗೆಯೇ ಸೊಸೆಯನ್ನೇ ತನ್ನ ಮಗಳೆಂದು ಯಾವುದೇ ಅಹಂಭಾವಕ್ಕೆ ಆಸ್ಪದ ಕೊಡದೆ ತುಂಬು ಪ್ರೀತಿಯಿಂದ ನೋಡಿಕೊಳ್ಳುವ ಅತ್ತೆಯರೂ ಹಲವರಿದ್ದಾರೆ.

ಸಾಂಸ್ಕೃತಿಕ ವಿಭಿನ್ನತೆಯಿಂದ ವೈರುಧ್ಯ

ಯಾವುದೋ ಒಂದು ಸಿನಿಮಾದಲ್ಲಿ ಅತ್ತೆ ಬಜಾರಿಯಾಗಿದ್ದಳೆಂದರೆ, ಅದನ್ನು ಸಾರ್ವತ್ರೀಕರಿಸುವುದು ಸರಿಯಲ್ಲ. ಅತ್ತೆ–ಸೊಸೆ ಇಬ್ಬರೂ ತಮ್ಮ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟ ಹಲವು ಸಂಘರ್ಷಗಳಿಗೆ ಕಾರಣವಾಗುತ್ತದೆ.

ತಾಯಿ, ಮಗಳ ನಡುವೆ ರಕ್ತ ಸಂಬಂಧವಿರುವುದರಿಂದ ಇಬ್ಬರ ನಡುವೆ ನಂಬಿಕೆ ಇರುತ್ತದೆ. ಆದರೆ ಅತ್ತೆ ಸೊಸೆ ನಡುವೆ ಇಂತಹ ಬಂಧವಿಲ್ಲದಿರುವ ಕಾರಣ ಸಾಂಸ್ಕೃತಿಕ ವಿಭಿನ್ನತೆ ಇರುತ್ತದೆ. ಇಬ್ಬರೂ ತಮ್ಮದಲ್ಲದ ಇನ್ನೊಂದು ಸಂಸ್ಕೃತಿಗೆ ಹೊಂದಿಕೊಳ್ಳ ಬೇಕಾಗಿರುತ್ತದೆ. ಜೊತೆಗೆ ಮನೆಯ ಸ್ಥಾನದ ನೆಲೆ ಇಬ್ಬರ ವೈರುದ್ಧ್ಯಕ್ಕೆ ಕಾರಣವಾಗುತ್ತದೆ.

ಇಷ್ಟರವರೆಗೂ ಅಮ್ಮನ ಮಾತು ಕೇಳುತ್ತಿದ್ದ ಮಗ, ಇದಕ್ಕಿದ್ದಂತೆ ಹೆಂಡತಿ ಮಾತು ಕೇಳಲು ಆರಂಭಿಸಿದಾಗ ಅತ್ತೆಗೆ ಸ್ಥಾನದ ಅಭದ್ರತೆ ಶುರುವಾಗುತ್ತದೆ. ಅದೇ ರೀತಿ ಗಂಡ ಮೂರು ಹೊತ್ತು ಅಮ್ಮ, ಅಮ್ಮ... ಎನ್ನುತ್ತಾ ತಿರುಗುತ್ತಿದ್ದರೆ ಸೊಸೆಯಾದವಳಿಗೆ ಗಂಡ–ಅತ್ತೆ ಸೇರಿ ನನ್ನನ್ನು ಹೀಯಾಳಿಸಬಹುದು ಎಂಬ ಭಾವ ಆವರಿಸಿಕೊಳ್ಳುತ್ತದೆ. ಇಲ್ಲಿ ಇಬ್ಬರಲ್ಲೂ ವಿಚಿತ್ರವಾದ ಭಯ ಕೆಲಸಮಾಡುತ್ತದೆ.

ಒಂದು ವಯಸ್ಸಿನವರಿಗೆ ಮಕ್ಕಳ ಕಾರಣಕ್ಕೆ ಅತ್ತೆ–ಮಾವನೊಂದಿಗೆ ಹೊಂದಿಕೊಳ್ಳುವ ಸೊಸೆ, ಮಕ್ಕಳು ಕಾಲೇಜಿನ ಹಂತಕ್ಕೆ ಬಂದ ಮೇಲೆ ಅವರನ್ನು ನಿಕೃಷ್ಟವಾಗಿ ಕಾಣುವಂತಹ ಪ್ರವೃತ್ತಿ ಬೆಳೆಯುತ್ತಿದೆ.

–ಶಾಂತಾ ನಾಗರಾಜ್‌,ಆಪ್ತ ಸಮಾಲೋಚಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.