ಅನ್ನಪೂರ್ಣಾ ದೇವಿ
ಸರೋದ್‌ವಾದಕರಾದ ಆಶೀಷ್ ಖಾನ್, ರಾಜೀವ ತಾರಾನಾಥ, ಬಸಂತ್ ಕಾಬ್ರಾ, ಸುರೇಶ್ ವ್ಯಾಸ್, ಪ್ರದೀಪ್ ಬರೋಟ್, ಅಮಿತ್ ಭಟ್ಟಾಚಾರ್ಯ, ಬಾನ್ಸುರಿ ವಾದಕರಾದ ಹರಿಪ್ರಸಾದ್ ಚೌರಾಸಿಯಾ ಮತ್ತು ನಿತ್ಯಾನಂದ ಹಳದೀಪುರ, ಸಿತಾರ್ ವಾದಕರಾದ ನಿಖಿಲ್ ಬ್ಯಾನರ್ಜಿ,ಸುಧೀರ್ ಫಾಡ್ಕೆ, ಸಂಧ್ಯಾ ಫಾಡ್ಕೆ, ಶಾಶ್ವತೀ ಸಹಾ, ಹಿರಿಯ ಹಿಂದೂಸ್ತಾನಿ ಗಾಯಕ ವಿನಯ ಭರತ್ ರಾಮ್... ವಿವಿಧ ತಲೆಮಾರಿನ, ವಿಭಿನ್ನ ವಾದ್ಯಗಳ ವಾದಕರಾಗಿದ್ದ ಈ ಎಲ್ಲರಿಗೂ ಸಾಮಾನ್ಯವಾಗಿದ್ದ ಒಂದು ಅಂಶವಿತ್ತು. ಇವರೆಲ್ಲರಿಗೂ ಒಂದಲ್ಲ ಒಂದು ಕಾಲಘಟ್ಟದಲ್ಲಿ ಗುರುವಾಗಿ ಕಲಿಸಿದ್ದು ಅನ್ನಪೂರ್ಣಾ ದೇವಿಯವರು. ಇವರೆಲ್ಲರಿಗೆ ಕಲಿಸಿದ್ದು, ವಿವಿಧ ವಾದ್ಯಗಳಲ್ಲಿ ತಮ್ಮದೇ ಚಹರೆಯನ್ನು ಕಂಡುಕೊಳ್ಳುವುದಕ್ಕೆ ಸಾಧ್ಯಗೊಳಿಸಿದ್ದು ಮಾತ್ರ ತಮ್ಮ ಗಾಯನದ ಮೂಲಕವೇ. ಅನ್ನಪೂರ್ಣಾ ಅವರು ಎಷ್ಟು ಶ್ರೇಷ್ಠ ವಾದಕಿಯಾಗಿದ್ದರೋ ಅಷ್ಟೇ ಎತ್ತರದ ಗುರುವಾಗಿದ್ದರು.
ಪ್ರತಿಯೊಬ್ಬ ಶಿಷ್ಯರನ್ನೂ ಅವರಿಗೆ ನಿಜಕ್ಕೂ ಕಲಿಯುವ ಆಸಕ್ತಿ ಎಷ್ಟು ತೀವ್ರವಾಗಿದೆ ಎಂಬುದನ್ನು ಪರೀಕ್ಷಿಸಿಯೇ ತೆಗೆದುಕೊಳ್ಳುತ್ತಿದ್ದರು. ಆ ಶಿಷ್ಯರು ಮೊದಲು ಎಷ್ಟೇ ಕಲಿತಿದ್ದರೂ ಕೂಡ, ಅದನ್ನೆಲ್ಲ ಕೈಬಿಟ್ಟು, ಆರಂಭದಿಂದ ಕಲಿಯಬೇಕೆಂಬ ಷರತ್ತನ್ನೂ ವಿಧಿಸುತ್ತಿದ್ದರು. ಯಾವುದಾದರೂ ಸಂಗತಿಯನ್ನು ಹಾಡಿ ಕಲಿಸಿದ ನಂತರ, ಅದು ಪರಿಪೂರ್ಣವಾಗಿ ಶಿಷ್ಯರ ಕೈಬೆರಳುಗಳಿಗೆ ಇಳಿದು, ವಾದ್ಯದಲ್ಲಿ ಪರಿಪೂರ್ಣವಾಗಿ ಹೊರಹೊಮ್ಮುವವರೆಗೆ ಅಭ್ಯಾಸ ಮಾಡಿ ಎನ್ನುತ್ತಿದ್ದರು.
ಬಾಬಾ ಎಂದೇ ಹೆಸರಾಗಿದ್ದ ಉಸ್ತಾದ್ ಅಲಾವುದ್ದೀನ್ ಖಾನರು ಮಗಳು ಅನ್ನಪೂರ್ಣಾ ಚಿಕ್ಕವರಿದ್ದಾಗ ಆರಂಭದಲ್ಲಿ ಸಂಗೀತ ಕಲಿಸುವುದಕ್ಕೆ ಹಿಂಜರಿದಿದ್ದರು. ತನ್ನಣ್ಣ ಅಲಿ ಅಕ್ಬರ್ ಖಾನರಿಗೆ ಬಾಬಾ ಸರೋದ್ ಕಲಿಸುವುದನ್ನು ಮರೆಯಲ್ಲಿ ನಿಂತು ಕೇಳಿ, ಪ್ರತಿಯೊಂದು ಅಂಶವನ್ನು ಅನ್ನಪೂರ್ಣಾ ಮೈಗೂಡಿಸಿಕೊಂಡಿದ್ದರು. ಅಲಿ ಅಕ್ಬರ್ ಖಾನ್ ರಿಯಾಜ್ ಮಾಡುತ್ತಿರುವಾಗ ತಪ್ಪಿದ್ದನ್ನು ಪುಟ್ಟ ಹುಡುಗಿ ಅನ್ನಪೂರ್ಣಾ ಸರಿಪಡಿಸುವುದನ್ನು ಕಂಡ ಬಾಬಾ ಆಕೆಗೆ ಕಲಿಸುವ ನಿರ್ಧಾರ ಮಾಡುತ್ತಾರೆ. ತಮ್ಮ ನಂತರ ಸುರಬಹಾರ್ ಉಳಿಯುವುದಿದ್ದರೆ ಅದು ಈಕೆಯಿಂದಲೇ ಎಂದು ಬಾಬಾಗೆ ಆಳದಲ್ಲಿ ಅನ್ನಿಸಿದ್ದಿರಬಹುದು. ಹೀಗಾಗಿ ಅಲಿ ಅಕ್ಬರ್ ಖಾನರಿಗೆ ಸರೋದ್, ರವಿಶಂಕರ್‌ಗೆ ಸಿತಾರ್ ಕಲಿಸಲು ಶುರು ಮಾಡಿದರೆ, ಅನ್ನಪೂರ್ಣಾ ಅವರಿಗೆ ಸುರಬಹಾರ್ ಕಲಿಸಿದರು.
‘‘ಅನ್ನಪೂರ್ಣಾ ದೇವಿಯವರು ಉಸ್ತಾದ್ ಅಲ್ಲಾವುದ್ದೀನ್ ಖಾನ್‌ರ (ಬಾಬಾ) ಸಂಗೀತವನ್ನು ಶೇಕಡ 80 ರಷ್ಟನ್ನು ಮೈಗೂಡಿಸಿಕೊಂಡಿದ್ದರು, ಅಲಿ ಅಕ್ಬರ್ ಖಾನ್ ಶೇಕಡ 70ರಷ್ಟು ಮತ್ತು ರವಿಶಂಕರ್ ಶೇಕಡ 40ರಷ್ಟನ್ನು ಮೈಗೂಡಿಸಿಕೊಂಡಿದ್ದರು’’ ಎಂದು ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್ ಅಮೀರ್ ಖಾನ್ ತಮ್ಮ ಹತ್ತಿರದ ಶಿಷ್ಯಂದಿರಲ್ಲಿ ಹೇಳುತ್ತಿದ್ದರಂತೆ.
ಇದನ್ನು ಅರಿತಿದ್ದ ಅಲಿ ಅಕ್ಬರ್ ಖಾನರೇ ಒಂದು ಕಡೆ ‘‘ರವಿಶಂಕರ್, ನಾನು ಮತ್ತು ಪನ್ನಾಲಾಲ್ ಘೋಷ್‌ರನ್ನು ತಕ್ಕಡಿಯ ಒಂದು ಕಡೆ ಇಡಿ, ಇನ್ನೊಂದು ಕಡೆ ಅನ್ನಪೂರ್ಣಾರನ್ನು ಇಡಿ, ಆಗಲೂ ತಕ್ಕಡಿ ಅನ್ನಪೂರ್ಣಾ ಅವರ ಕಡೆಗೇ ಭಾರವಾಗಿ ವಾಲುತ್ತೆ’’ ಎಂದಿದ್ದರು.
ವೇದಿಕೆಯ ಮೇಲೆ ವಿದುಷಿ ಅನ್ನಪೂರ್ಣಾ ದೇವಿಯವರು ನೀಡಿದ ಸಂಗೀತ ಕಛೇರಿ ಬೆರಳೆಣಿಕೆಯಷ್ಟು. ಯಾರು ಎಷ್ಟೇ ಮನವೊಲಿಸಲು ಯತ್ನಿಸಿದರೂ, ಅವರು ಸುರಬಹಾರ್ ನುಡಿಸಾಣಿಕೆಯನ್ನು ರೆಕಾರ್ಡ್ ಮಾಡುವುದಕ್ಕೆ ಒಪ್ಪಿರಲಿಲ್ಲ. ಈಗ ಅವರ ನಾಲ್ಕಾರು ಧ್ವನಿಮುದ್ರಿಕೆಗಳಷ್ಟೇ ಯುಟ್ಯೂಬ್‌ನಲ್ಲಿ ಲಭ್ಯವಿವೆ. ಅವರೊಬ್ಬರೇ ನುಡಿಸಿರುವ ಮಾಂಜ್ ಕಮಾಜ್, ಕೌಂಸಿ ಕಾನಡಾ, ಮತ್ತು ರವಿಶಂಕರ್ ಜೊತೆಗೂಡಿ ಯಮನ್ ಕಲ್ಯಾಣ್ ನುಡಿಸಿರುವ ಒಂದು ಜುಗಲಬಂದಿ ಕಛೇರಿಯ ಧ್ವನಿಮುದ್ರಿಕೆ ಲಭ್ಯವಿವೆ.
ವೈವಾಹಿಕ ಬದುಕಿನಲ್ಲಿ ಗಂಡ-ಹೆಂಡತಿಯ ನಡುವೆ ಯಾಕೆ, ಎಲ್ಲಿ ತಪ್ಪುಗಂಟಾಗುತ್ತದೆ, ಯಾವುದು ಸರಿಹೋಗುವುದಿಲ್ಲ ಎಂದು ಹೇಳುವುದು ಕಷ್ಟ. ರವಿಶಂಕರ್ ಮತ್ತು ಅನ್ನಪೂರ್ಣಾ ದೇವಿಯವರ ವೈವಾಹಿಕ ಜೀವನ ಮುರಿದು ಬಿದ್ದ ನಂತರ ದೇವಿಯವರು ತೀರಾ ಏಕಾಂತಕ್ಕೆ ಸರಿದು ಹೋದರು. ತದನಂತರದ ವರ್ಷಗಳಲ್ಲಿ ಬಾಬಾ ಹಾಗೂ ಇದ್ದ ಒಬ್ಬನೇ ಮಗ ಶುಭೋ ತೀರಿಕೊಂಡ ನಂತರ ಅವರು ಮತ್ತಷ್ಟು ಮೌನಿಯಾದರು.
ಪ್ರೇಕ್ಷಕರನ್ನು ಸಂತೋಷಗೊಳಿಸಲು ಸಂಗೀತವನ್ನು ಸ್ವಲ್ಪ ಲಘುವಾಗಿಸಬೇಕು, ತುಸು ಪಾಶ್ಚಾತ್ಯಗೊಳಿಸಬೇಕು, ಅವರ ಮನಸ್ಸಿಗೆ ಹಿತವಾಗುವಂತೆ ಇರಬೇಕು ಎನ್ನೋದು ರವಿಶಂಕರ್ ಅವರ ಅಭಿಪ್ರಾಯವಾಗಿತ್ತು. ಆದರೆ ಅನ್ನಪೂರ್ಣಾ ದೇವಿಯವರು ಶಾಸ್ತ್ರೀಯ ಪರಂಪರೆಯೊಂದಿಗೆ ಅನುರೂಪವಾಗಿರಬೇಕೆಂದು ಬಯಸಿದ್ದರು. ಪ್ರೇಕ್ಷಕರು ನಮ್ಮ ಈ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಅದರ ಶುದ್ಧತೆಯಲ್ಲಿ ರಸಾಸ್ವಾದನೆ ಮಾಡುವ ಮಟ್ಟಕ್ಕೆ ಬೆಳೆಯಬೇಕೇ ವಿನಃ ಕಲಾವಿದರು ಕೆಳಗಿಳಿಯುವುದಲ್ಲ ಅನ್ನೋದು ಅನ್ನಪೂರ್ಣಾ ಅವರ ಅಭಿಪ್ರಾಯವಾಗಿತ್ತು.
ಇವರಿಬ್ಬರೂ ನೀಡಿದ ಜುಗಲಬಂದಿ ಕಛೇರಿಗಳಲ್ಲಿ ಪ್ರೇಕ್ಷಕರು ಅನ್ನಪೂರ್ಣಾ ಅವರ ವಾದನವನ್ನು ಬಹಳವಾಗಿ ಮೆಚ್ಚಿಕೊಂಡಿದ್ದರು. ಅನ್ನಪೂರ್ಣಾ ಅವರು ನೀಡಿದ ಕೆಲವೇ ಸೋಲೋ ಕಛೇರಿಗಳಲ್ಲಿಯೂ ಅವರಿಗೆ ಅಪಾರ ಮೆಚ್ಚಿಗೆ ವ್ಯಕ್ತವಾಗಿತ್ತು. ಇದೂ ಕೂಡ ರವಿಶಂಕರರ ಮನಸ್ಸಿನಲ್ಲಿ ಅಸಮಾಧಾನ ಹೊಗೆಯಾಡಲು ಕಾರಣವಾಗಿತ್ತು; ಮದುವೆಯನ್ನು ಉಳಿಸಿಕೊಳ್ಳಬೇಕೆಂದು, ಈ ಯಾವುದೂ ಬಾಬಾಗೆ ಗೊತ್ತಾಗುವುದು ಬೇಡವೆಂದು ಅನ್ನಪೂರ್ಣಾ ಅವರು ಹೊರಗೆ ಕಛೇರಿ ಕೊಡುವುದನ್ನೇ ನಿಲ್ಲಿಸಲು ನಿರ್ಧರಿಸಿದರು ಎನ್ನಲಾಗುತ್ತದೆ.
ನೈಜ ಕಾರಣಗಳು ಏನೇ ಇರಬಹುದು. ಆದರೆ ಜಗತ್ತು ಏಕೈಕ ಶ್ರೇಷ್ಠ ಸುರಬಹಾರ್ ವಾದನವನ್ನು ಕೇಳುವ ಅವಕಾಶದಿಂದ ಶಾಶ್ವತವಾಗಿ ವಂಚಿಸಿಕೊಂಡಿತು. ಒಂದು ಅವಕಾಶವಿತ್ತು. ಆ ಒಂದೇ ಅವಕಾಶ ಕೂಡ ಯಾವುದೋ ಕಾರಣಕ್ಕೆ ಅನಂತ ಬ್ರಹ್ಮಾಂಡದಲ್ಲಿ ಕಳೆದೇ ಹೋಯಿತು.
ಮಾಧ್ಯಮಗಳು, ಪ್ರಚಾರ, ಥಳಕುಬಳಕು, ಅಬ್ಬರ-ಆಡಂಬರ ಎಲ್ಲದರಿಂದ ದೂರವುಳಿದ ಅವರು ಪದ್ಮಭೂಷಣ ಪ್ರಶಸ್ತಿ ಬಂದಾಗಲೂ ಆಪ್ತರೊಬ್ಬರನ್ನು ಸ್ವೀಕರಿಸಲು ಕಳಿಸಿದರು. ಎಂದೂ ಯಾರಲ್ಲಿಯೂ ತೋಡಿಕೊಳ್ಳದ ಮನದಾಳದ ನೋವನ್ನು ಮರೆಯುವುದಕ್ಕೆ ಅವರಿಗೆ ಆಸರೆಯಾಗಿದ್ದು ಏಕಾಂತದ ಸುರಬಹಾರ್ ಸಾಧನೆ. ಮೈಹರ್ ಘರಾನೆಯ ಖಜಾನೆಯನ್ನು ತೆರೆದು ಶಿಷ್ಯರಿಗೆ ಕಲಿಸುವುದನ್ನು ಮತ್ತು ಏಕಾಂತ ಸಾಧನೆಯನ್ನು ಮಾತ್ರ ಗುರಿಯಾಗಿಸಿಕೊಂಡು, ನಿಸ್ಸಂಗವನ್ನು ತಮಗೆ ತಾವೇ ಹೇರಿಕೊಂಡ ಸಂತಳ ಬದುಕು ಅವರದು. ಅವರ ಜನ್ಮದಿನದ ಕುರಿತೂ ಸರಿಯಾದ ಮಾಹಿತಿಗಳಿಲ್ಲ. ಉಸ್ತಾದ್ ಅಲಿ ಅಕ್ಬರ್ ಖಾನರು ಆಕೆ ತಮಗಿಂತ ಐದು ವರ್ಷ ಚಿಕ್ಕವರೆಂದು ಹೇಳುತ್ತಿದ್ದರಂತೆ. ಅದರ ಆಧಾರದ ಮೇಲೆ ಅವರ ಶಿಷ್ಯಂದಿರು ಸೇರಿ, ಈ ವರ್ಷವನ್ನು ಅವರ ಜನ್ಮ ಶತಮಾನೋತ್ಸವ ಸ್ಮರಣಿಕೆಯ ವರ್ಷನ್ನಾಗಿ ಸಂಭ್ರಮಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ನಿತ್ಯಾನಂದ ಹಳದೀಪುರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.