ADVERTISEMENT

ಅಭಂಗವಾರಿ ಭಕ್ತಿಸಂಗೀತದ ತೀರ್ಥಯಾತ್ರೆ: ಹಿಂದೂಸ್ತಾನಿ ಗಾಯಕ ಮಹೇಶ್ ಕಾಳೆ ಸಂದರ್ಶನ

ಉಮಾ ಅನಂತ್
Published 5 ಜುಲೈ 2025, 23:26 IST
Last Updated 5 ಜುಲೈ 2025, 23:26 IST
ಮಹೇಶ್ ಕಾಳೆ
ಮಹೇಶ್ ಕಾಳೆ   

‘ಸಂಗೀತ ನನ್ನ ಬದುಕಿನ ಭಾಗ, ಭಕ್ತಿರಸವೇ ಸಂಗೀತದ ಶಕ್ತಿ’–ಹೀಗೆ ಸ್ಪಷ್ಟಮಾತುಗಳಲ್ಲಿ ಹೇಳಿದವರು ಅಭಂಗಗಳ ಮೂಲಕ ಮನೆಮಾತಾದ ಹಿಂದೂಸ್ತಾನಿ ಗಾಯಕ ಮಹೇಶ್ ಕಾಳೆ. ಸದ್ಯದ ಮಟ್ಟಿಗೆ ದೇಶದ ಬಹುಬೇಡಿಕೆಯ ಕಲಾವಿದ‌. ಸಂಗೀತದ ‘ಅಭಂಗ’ ಪ್ರಕಾರದಲ್ಲಿ ಹೆಚ್ಚು ಜನಪ್ರಿಯವಾಗಿರುವ ಇವರು, ‘ಅಭಂಗವಾರಿ ಸಂಗೀತ ಯಾತ್ರೆ’ಯ ಭಾಗವಾಗಿ ಜುಲೈ 13 ರಂದು ಸಂಜೆ 6.30ಕ್ಕೆ ಬೆಂಗಳೂರಿನ ಚೌಡಯ್ಯ ಹಾಲ್‌ನಲ್ಲಿ ಸಂಗೀತ ಕಛೇರಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ‘ಭಾನುವಾರ ಪುರವಣಿ’ಯೊಂದಿಗೆ ಮಾತನಾಡಿದ್ದಾರೆ.

––––

ಶಾಸ್ತ್ರೀಯ ಸಂಗೀತದ ‘ಮಳೆ ರಾಗ’ಗಳನ್ನು ಹಾಡುವುದೆಂದರೆ ಬಹಳ ಇಷ್ಟ ಎಂದಿರಿ. ಏಕೆ?

ADVERTISEMENT

ಸಂಗೀತದಲ್ಲಿ ಆಯಾಯ ಪ್ರಹರಕ್ಕೆ, ಕಾಲಕ್ಕೆ, ಋತುವಿಗೆ ಹಾಡುವಂಥ ರಾಗಗಳಿವೆ. ಇದರಲ್ಲಿ ಮಳೆ ರಾಗಗಳಾದ ಮೇಘ ಮಲ್ಹಾರ್, ಮಿಯಾ ಮಲ್ಹಾರ್, ಗೌಡ್ ಮಲ್ಹಾರ್, ದೇಶ್ ಮಲ್ಹಾರ್, ಸುರ್ ಮಲ್ಹಾರ್, ರಾಮದಾಸಿ ಮಲ್ಹಾರ್ ಮುಂತಾದ ರಾಗಗಳು ಮಳೆಗಾಲಕ್ಕಾಗಿಯೇ ಇರುವಂಥವು. ಈ ರಾಗಗಳು ಮಳೆಯ ಧ್ವನಿ ಹಾಗೂ ಮೋಡಗಳ ವರ್ಣನೆಯನ್ನು ಸಂಗೀತದಲ್ಲಿ ಅಭಿವ್ಯಕ್ತಿಸುತ್ತವೆ. ಇದೇ ರೀತಿ ಕರ್ನಾಟಕ ಸಂಗೀತದ ‘ಅಮೃತವರ್ಷಿಣಿ’ ರಾಗದಲ್ಲಿ ಒಂದು ಬಂದೀಶ್ ಅನ್ನು ರಚಿಸಿದ್ದೇನೆ. ‘ತಾಲ ಸುರ್ ಗಾನ್..’ ಇದು ಮಳೆಯ ವೈಭವವನ್ನು ಅನಾವರಣಗೊಳಿಸುತ್ತದೆ. ಅಲ್ಲದೆ ರಾಗಗಳಲ್ಲಿ ಪ್ರಯೋಗವನ್ನೂ ಮಾಡಿದ್ದೇನೆ. ಜನಪದ ಗೀತೆಯನ್ನು ಶಾಸ್ತ್ರೀಯ ಚೌಕಟ್ಟಿನಲ್ಲಿ ಹಾಡಿದ್ದೇನೆ. ‘ಜೋಗ್’ ರಾಗದಲ್ಲಿ ಜನಪದ ಟೋನ್ ತಂದಿದ್ದೇನೆ. ಇದು ಚಿಂತನೆ ಹಾಗೂ ಲವಲವಿಕೆಯನ್ನು ಕೇಳುಗರಲ್ಲಿ ಹುಟ್ಟುಹಾಕುತ್ತದೆ. ರಾಗ ಬಸಂತ್, ಇದು ವಸಂತ ಋತುವಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಹೊಸತನ, ಹೊಸ ಚೈತನ್ಯ ತುಂಬುವಂತೆ ಮಾಡುತ್ತದೆ. ಹೀಗೆ ರಾಗಗಳೊಂದಿಗೆ ಪ್ರಯೋಗಶೀಲ ಗುಣವನ್ನು ಬೆಳೆಸಿಕೊಂಡರೆ ಕೇಳುಗರು ಹೆಚ್ಚು ಆಪ್ತರಾಗುತ್ತಾರೆ.

ಸಂಗೀತದ ಜೊತೆಗೆ ಜೀವನ ಪ್ರೀತಿ ಕೂಡ ಮುಖ್ಯ. ಅದರಲ್ಲೂ ಜನರ ಪ್ರೀತಿ ಗಳಿಸುವುದು ಬಹಳ ಮುಖ್ಯ’ ಎಂದಿರಿ. ಈ ಮಾತನ್ನು ನೀವು ಹೇಗೆ ಪ್ರತಿಪಾದಿಸುತ್ತೀರಿ?

ನಾನು ಎಲ್ಲೇ ಸಂಗೀತ ಕಛೇರಿಗೆ ಹೋದರೂ ಕೇಳುಗರು ಕಿಕ್ಕಿರಿದು ಸೇರುತ್ತಾರೆ. ಎಷ್ಟೋ ಕಡೆಗಳಲ್ಲಿ ನಾನು ಹಾಡುವುದರ ಜೊತೆಗೆ ಕೇಳುಗರನ್ನೂ ಸಂಗೀತದಲ್ಲಿ ತೊಡಗಿಸಿಕೊಳ್ಳುವಂತೆ ಹಾಡುತ್ತೇನೆ. ಇದರಿಂದ ಜನ ನಮಗೆ ಹತ್ತಿರವಾಗುತ್ತಾರೆ. ಮನೆ ಮಗನಂತೆ ನನ್ನನ್ನು ಸ್ವೀಕರಿಸುತ್ತಾರೆ. ಸಾಮಾಜಿಕ ಬದುಕಿನಲ್ಲೂ ಅಷ್ಟೆ. ಎಲ್ಲರನ್ನೂ ನಾವು ಪ್ರೀತಿಸಬೇಕು, ‘ಅವರೊಂದಿಗೆ ನಾವಾಗಿ, ನಮ್ಮೊಂದಿಗೆ ಅವರಾಗಿ’ ಬೆರೆಯುವಂತಹ ವಾತಾವರಣವನ್ನು ನಾವೇ ಸೃಷ್ಟಿಸಿಕೊಳ್ಳಬೇಕು. ಉದಾಹರಣೆಗಾಗಿ: ನಾನು ಪುಣೆಯಲ್ಲಿ ಮಾಸ್ಟರ್ಸ್‌ ಮಾಡುತ್ತಿರುವಾಗ ಪೀಜಿಯಲ್ಲಿದ್ದೆ. ಮನೆಯಲ್ಲಿ ಹಣಕಾಸಿನ ತೊಂದರೆ ಇದ್ದ ಕಾರಣ ಸಣ್ಣ ರೂಮ್‌ ಅನ್ನು ಇಬ್ಬರು ಶೇರ್‌ ಮಾಡ್ತಿದ್ದೆವು. ನನ್ನ ರೂಮ್‌ಮೇಟ್ ಎಂಜಿನಿಯರ್. ತಡರಾತ್ರಿ ರೂಮಿಗೆ ಬಂದು ಮಲಗುತ್ತಿದ್ದ. ನಾನು ನಸುಕಿನಲ್ಲೇ ಎದ್ದು ರಿಯಾಜ್ ಮಾಡಬೇಕಿತ್ತು. ರಾತ್ರಿ ಬಹಳ ಹೊತ್ತಾದ ಮೇಲೆ ಬರುತ್ತಿದ್ದ ಸ್ನೇಹಿತನಿಗೆ ನಿದ್ದೆಗೆ ಯಾವುದೇ ತೊಂದರೆಯಾಗಬಾರದೆಂದು ನಾನು ಬೆಳಿಗ್ಗೆ ನಾಲ್ಕಕ್ಕೇ ಎದ್ದು ಬಾತ್‌ರೂಮಿಗೆ ಹೋಗಿ ಮುಖದ ಮೇಲೆ ದಿಂಬು ಇಟ್ಟುಕೊಂಡು ಆಕಾರ, ಊಕಾರ, ಓಂಕಾರಗಳನ್ನು ಮಂದ್ರದಲ್ಲಿ ಹಾಡುತ್ತಾ ಕುಳಿತಿರುತ್ತಿದ್ದೆ. ಹೀಗಾಗಿ ಆತನ ನಿದ್ದೆಗೂ ತೊಂದರೆಯಾಗುತ್ತಿರಲಿಲ್ಲ. ನಾವಿಬ್ಬರೂ ನಮ್ಮ ವೃತ್ತಿ ಹಾಗೂ ಬದುಕನ್ನು ಪ್ರೀತಿಸುತ್ತಿದ್ದೆವು. ಹೀಗಾಗಿ ನಮ್ಮಿಬ್ಬರ ಮಧ್ಯೆ ಉತ್ತಮ ಸಾಮರಸ್ಯ ಇತ್ತು. ಹೀಗೆ ಜೀವನ ಪ್ರೀತಿ ಎಂಬುದು ನಮ್ಮ ನಡವಳಿಕೆಯಿಂದ ವ್ಯಕ್ತವಾಗಬೇಕು.

ನೀವು ಶಾಸ್ತ್ರೀಯ ಸಂಗೀತದ ಜೊತೆಗೆ ‘ಅಭಂಗ ಪ್ರಕಾರ’ದಲ್ಲಿ ಹೆಚ್ಚು ಜನಪ್ರಿಯರಾಗಿದ್ದೀರಿ. ಈ ಶೈಲಿಯ ಗಾಯನಕ್ಕೆ ನೀವು ಹೆಚ್ಚು ಪ್ರಾಶಸ್ತ್ಯವನ್ನೂ ನೀಡುತ್ತಿದ್ದೀರಿ. ಇದಕ್ಕೆ ನಿರ್ದಿಷ್ಟ ಕಾರಣಗಳಿವೆಯೇ?

ಪುಣೆಯಲ್ಲಿ ಅಭಂಗ ಬಹಳ ಜನಪ್ರಿಯ. ಇದಕ್ಕೆ ತನ್ನದೇ ಆದ ದೊಡ್ಡ ಕೇಳುಗರ ಸಮುದಾಯವೇ ಇದೆ. ಮರಾಠಿ ಅಭಂಗ ಭಕ್ತಿಯ ಸಿಂಚನ ನೀಡುತ್ತದೆ. ಮನಸ್ಸನ್ನು ಉಲ್ಲಾಸಗೊಳಿಸಿ, ಬದುಕಿನ ನೋವನ್ನು ಮರೆಸುತ್ತದೆ. ಪಂಡಿತ ಭೀಮಸೇನ ಜೋಶಿ ಹಾಡಿರುವ ಪಂಢರಪುರದ ಪುರಂದರ ವಿಠಲನ ಬಗ್ಗೆ ಇರುವ ‘ಮಾಝೆ ಮಾಹೇರಾ ಪಂಢರಿ, ಆಹೆ ಭೀವರೇಚ್ಯಾ ತೀರಿ...’ ಜನಪ್ರಿಯತೆಯ ಉತ್ತುಂಗಕ್ಕೇರಿದ್ದು ಇದೇ ಕಾರಣಕ್ಕಾಗಿ. ನನಗೂ ಅಭಂಗ ಹಾಡೋದು ಬಹಳ ಇಷ್ಟ. ಜನರ ನಾಡಿಮಿಡಿತ ಅರಿತ ನಾನು ಅಭಂಗಗಳಿಗೇ ಹೆಚ್ಚು ಒಲವು ತೋರಲಾರಂಭಿಸಿದೆ.

ಮರಾಠಿ ಅಭಂಗಗಳು ವಿಠಲನ ಮಹಿಮೆಯನ್ನು ಕೊಂಡಾಡಿ ಹಾಡಲಾಗಿರುವ ಭಕ್ತಿಪ್ರಧಾನ ಕಾವ್ಯದ ಒಂದು ರೂಪ. ಆಷಾಢ ಏಕಾದಶಿಯಂದು (ಜುಲೈ 6) ಸಹಸ್ರಾರು ಸಂಖ್ಯೆಯ ವಾರಕರಿಗಳು ಏಕ್ತಾರಿ ಮೀಟುತ್ತಾ ವಿಠಲನ ಭಜನೆಗಳನ್ನು ಹಾಡುತ್ತಾ ಪಾದಯಾತ್ರೆ ಮಾಡುತ್ತಾರೆ. ಪಂಢರಪುರದಲ್ಲಿ ವಿಠಲನ ಸನ್ನಿಧಿಗೆ ಜಮಾಯಿಸುತ್ತಾರೆ. ಈ ಸಂದರ್ಭದಲ್ಲಿ ಪ್ರತೀವರ್ಷ ನಾನು ಇಲ್ಲಿ ಅಭಂಗಗಳನ್ನು ಹಾಡುತ್ತಲೇ ಬಂದಿದ್ದೇನೆ.

ಕರ್ನಾಟಕದಲ್ಲಿ ಪುರಂದರ ದಾಸರ ದೇವರನಾಮವನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಬೆಂಗಳೂರಿಗೆ ಬಂದಾಗ ದಾಸರ ಪದಕ್ಕೇ ಪ್ರಾಶಸ್ತ್ಯ ಕೊಡುತ್ತೇನೆ.

‘ಅಭಂಗವಾರಿ’ ಸರಣಿ ಕಛೇರಿಯ ಪರಿಕಲ್ಪನೆ ಸಾಕಾರಗೊಂಡದ್ದು ಹೇಗೆ?

ಅಭಂಗವಾರಿ ಎಂಬುದು ‘ಅಭಂಗ’ ಶೈಲಿಯ ಹಾಡುಗಾರಿಕೆಯ ಕಛೇರಿಗಳು. ಈ ಅಭಂಗವಾರಿ ಎಂದರೆ ಭಕ್ತಿಸಂಗೀತದ ತೀರ್ಥಯಾತ್ರೆ ಎಂದರ್ಥ. ಇದರಲ್ಲಿ ಭಕ್ತಿನಾಮ ಸಂಕೀರ್ತನೆಗಳನ್ನು ಹಾಡುತ್ತಾ ಬಂದಿದ್ದೇನೆ. ಮುಂಬೈ, ಚೆನ್ನೈ, ಕೋಲ್ಕತ್ತ, ಪುಣೆ, ಬೆಂಗಳೂರಿನಲ್ಲಿ ಈ ಸರಣಿಯ ಕಛೇರಿ ನಡೆಸುವ ತೀರ್ಮಾನ ಮಾಡಿದ್ದೆ. ಸಂಗೀತದ ಮೂಲಕ ಬದುಕಿನ ಜಂಜಡಗಳನ್ನು ಕಳೆಯುವುದು, ಜನರಲ್ಲಿ ಜೀವನಪ್ರೀತಿ ಮೂಡಿಸುವುದು ಇದರ ಮುಖ್ಯ ಉದ್ದೇಶ. ಈ ಸರಣಿಯಲ್ಲಿ ಮರಾಠಿ ಅಭಂಗಗಳನ್ನು ಹಾಡುತ್ತೇನೆ. ‘ಸದಾ ಮಾಝೆ ಡೋಲಾ...’, ಸುಖಾ ಚೇ ಜೇ ಸುಖ್, ಆಮ್ಹಿ ವಿಠಲಾಚೆ ವಾರಕರಿ’ ಮುಂತಾದ ರಚನೆಗಳನ್ನು ಹಾಡುತ್ತೇನೆ. ಸಂದರ್ಭಕ್ಕೆ ಹಾಗೂ ಪ್ರಾದೇಶಿಕತೆಗೆ ಅನುಗುಣವಾಗಿ ಭಕ್ತಿರಸ ಸಿಂಚನ ನೀಡುವುದು ಇದರ ಹಿಂದಿನ ಉದ್ದೇಶ.

ಸಿನಿಮಾ ಸಂಗೀತದಲ್ಲೂ ಜನಪ್ರಿಯ

ಮಹೇಶ್ ಕಾಳೆ ಪುಣೆ ಮೂಲದ ಹಿಂದೂಸ್ತಾನಿ ಗಾಯಕ. ಹಿಂದೂಸ್ತಾನಿ ಗಾಯನ ಅಭಂಗ ದಾದ್ರ ಠಪ್ಪ ಠುಮ್ರಿ ಭಕ್ತಿ ಸಂಗೀತ ಮಾತ್ರವಲ್ಲದೆ ನಾಟ್ಯ ಸಂಗೀತದಲ್ಲೂ ಪರಿಣತಿ ಸಾಧಿಸಿದವರು. ತಾಯಿ ಮಿನಾಲ್‌ ಕಾಳೆ ಸಂಗೀತದ ಮೊದಲ ಗುರು. ಆರನೇ ವಯಸ್ಸಿನಲ್ಲೇ ಸಂಗೀತದ ತಾಲೀಮು ಆರಂಭ. ಮುಂದೆ ಆಗ್ರಾ ಘರಾಣದ ಮೇರು ಗಾಯಕ ಪಂ.ಜಿತೇಂದ್ರ ಅಭಿಷೇಕಿ ಅವರಿಂದ ಸಂಗೀತದ ಮಾರ್ಗದರ್ಶನ ಪಡೆದವರು. ಸಿನಿಮಾ ಸಂಗೀತದಲ್ಲೂ ಇವರು ಜನಪ್ರಿಯರು. ಮರಾಠಿ ಚಿತ್ರ ‘ಕತ್ಯಾರ್ ಕಲ್ಜತ್ ಘುಸ್ಲಿ’ ಗೆ ಇವರು 63ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ಪಡೆದಿದ್ದಾರೆ. ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಹಾಗೂ ಅಮೆರಿಕದ ಸಂತ ಕ್ಲಾರಾ ವಿವಿಯಲ್ಲಿ ಎಂಜಿನಿಯರಿಂಗ್‌ನಲ್ಲೇ ಇನ್ನೊಂದು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಮಹೇಶ್‌ ಕೇಲ್‌ ಸ್ಕೂಲ್ ಆಫ್‌ ಮ್ಯೂಸಿಕ್’ ಸಂಸ್ಥೆ ಸ್ಥಾಪಿಸಿ ಸಂಗೀತವನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.