ADVERTISEMENT

ಸಂಗೀತ ಸಮಯ| ನವರಾತ್ರಿ ಸಂಭ್ರಮ; ಉತ್ತರಾದಿ, ದಕ್ಷಿಣಾದಿ ರಾಗಗಳ ಸಂಗಮ

ಉಮಾ ಅನಂತ್
Published 21 ಅಕ್ಟೋಬರ್ 2020, 3:53 IST
Last Updated 21 ಅಕ್ಟೋಬರ್ 2020, 3:53 IST
ದುರ್ಗೆ
ದುರ್ಗೆ   

ನವರಾತ್ರಿ ಬಂತೆಂದರೆ ಅದು ಸಂಗೀತ ಕಛೇರಿಗಳ ಸುಗ್ಗಿ ಕಾಲವೆಂದೇ ಹೇಳಬೇಕು. ಈ ಸಲ ಕೊರೊನಾ ಸೃಷ್ಟಿಸಿದ ಆತಂಕದಿಂದಾಗಿ ನವರಾತ್ರಿಯಲ್ಲೂ ವೇದಿಕೆ ಕಛೇರಿಗಳು ನಡೆಯದೆ ಎಲ್ಲ ಸಂಗೀತ ಕಛೇರಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಸ್ಥಾನ ಪಡೆದುಕೊಂಡಿವೆ. ಹಲವು ಸಂಘ ಸಂಸ್ಥೆಗಳು ಆನ್‌ಲೈನ್‌ ಕಛೇರಿಗಳನ್ನು ಆಯೋಜಿಸಿದ್ದು, ಸಂಗೀತಾಸಕ್ತರಿಗೆ ಮನೆಯೊಳಗೇ ಸುರಕ್ಷಿತವಾಗಿ ಕುಳಿತು ಸಂಗೀತ ಆಲಿಸಿ ಆಸ್ವಾದಿಸುವ ಸುಯೋಗವಂತೂ ಒದಗಿಬಂದಿದೆ.

ಸಾಮಾನ್ಯವಾಗಿ ನವರಾತ್ರಿಯಲ್ಲಿ ದೇವಿ ಆರಾಧನೆ ಜೊತೆಗೆ ದೇವಿ ಕೀರ್ತನೆ, ಸೌಂದರ್ಯಲಹರಿ, ಲಲಿತಾ ಸಹಸ್ರನಾಮ, ದುರ್ಗಾ ಸಪ್ತಶತಿ ಪಾರಾಯಣಗಳಿಗೇ ಆದ್ಯತೆ. ಶರನ್ನವರಾತ್ರಿಯ ಒಂಬತ್ತೂ ದಿನಗಳಲ್ಲಿ ನಡೆಯುವ ದೇವಿ ಸಂಕೀರ್ತನೆ ಮನಸ್ಸಿಗೆ ನೆಮ್ಮದಿ, ಖುಷಿ ಕೊಡುವ ಸಮಾಚಾರವೂ ಹೌದು. ಅದೂ ಇಂಥ ತಳಮಳದ ಪರಿಸ್ಥಿತಿಯಲ್ಲಿ ಮನಸ್ಸಿಗೆ ಸಾಂತ್ವನ ನೀಡುವ ಸಾಧನ ನಮಗೆ ಬೇಕೇ ಬೇಕು. ಸಕಾಲಿಕವೋ ಎಂಬಂತೆ ಈ ಹಬ್ಬದ ಪ್ರಯುಕ್ತ ನಡೆಯುತ್ತಿರುವ ಆನ್‌ಲೈನ್‌ ಸಂಗೀತ ಕಛೇರಿಗಳು ನವರಾತ್ರಿಯ ರಂಗಿಗೆ ರಾಗಗಳ ಗುಂಗನ್ನು ಸೃಷ್ಟಿಸುತ್ತಿರುವುದು ಸಮಂಜಸವಾಗಿಯೇ ಇದೆ.

ಹಬ್ಬವೂ, ಸಂಗೀತವೂ...

ADVERTISEMENT

ಶರನ್ನವರಾತ್ರಿಗೂ ಸಂಗೀತಕ್ಕೂ ಅನನ್ಯ ನಂಟು. ನವರಾತ್ರಿಯ ನವಾವರಣ ಕೃತಿಯನ್ನು ಹಬ್ಬದ ಸಂಭ್ರಮದೊಂದಿಗೆ ಬೆಸೆಯುವ ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ವಿದುಷಿ ನಳಿನಾಕ್ಷಮ್ಮ, ‘ಶರದ್‌ ಋತುವಿನ ಆಶ್ವಯುಜ ಮಾಸ ಶುಕ್ಲ ಪಕ್ಷದಲ್ಲಿ ಬರುವ ಈ ಹಬ್ಬದ ಒಂಬತ್ತು ದಿನಗಳೂ ದೇವಿಯ ಆರಾಧನೆ ನಡೆಯುತ್ತದೆ. ದುರ್ಗೆ, ಸರಸ್ವತಿ, ಚಾಮುಂಡೇಶ್ವರಿ, ಕಾಳಿ, ಲಕ್ಷ್ಮಿ, ಪಾರ್ವತಿ... ಇವೇ ಮುಂತಾದ ದೇವತೆಗಳ ನಾನಾ ಗುಣಗಳ ವರ್ಣನೆ ಕೃತಿಗಳ ಮೂಲಕ ಅನಾವರಣಗೊಳ್ಳುತ್ತದೆ. ಇದಕ್ಕಾಗಿಯೇ ಹಿರಿಯ ವಾಗ್ಗೇಯಕಾರರಾದ ಮುತ್ತಯ್ಯ ಭಾಗವತರ್‌, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿಗಳು ದೇವಿಯ ಮೇಲೆ ಅನೇಕ ಕೃತಿಗಳನ್ನೂ ರಚಿಸಿರುವುದು’ ಎಂದು ವಿವರ ನೀಡುತ್ತಾರೆ.

‘ದೇವಿ ಕೃತಿಗಳ ಜತೆಗೆ ಸೌಂದರ್ಯಲಹರಿ, ಶಿವಾನಂದ ಲಹರಿ, ಸ್ತೋತ್ರ ಪಠಣಕ್ಕೂ ಈ ದಿನಗಳಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಸೌಂದರ್ಯ ಲಹರಿ ಹಾಡಿದರೆ ಇಡೀ ವರ್ಷ ಮನಸ್ಸಿಗೆ ಸುಖ, ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆಯೂ ಬಲವಾಗಿದೆ. ದೇವಿಯ ಶಕ್ತಿ ರೂಪ, ಅಲಂಕಾರ, ಅವತಾರ, ಶೃಂಗಾರ, ಕಾಂತಿಯ ವೈವಿಧ್ಯತೆಯನ್ನು ವರ್ಣಿಸುವ ಈ ಸಂಕೀರ್ತನೆಗಳು ಕೇಳುಗರಿಗೆ ಪಾರಮಾರ್ಥಿಕ ಸುಖವನ್ನು ನೀಡುತ್ತದೆ’ ಎನ್ನುತ್ತಾರೆ ವಿದುಷಿ ನಳಿನಾಕ್ಷಮ್ಮ.

ದೇವಿ ದುರ್ಗೆಯ ಒಂಬತ್ತು ರೂಪಗಳಾದ ಕಾತ್ಯಾಯಿನಿ, ಮಹಾಕಾಳಿ, ಶೈಲಪುತ್ರಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಮಹಾಗೌರಿ, ಸಿದ್ಧಿಧಾತ್ರಿ, ಬ್ರಹ್ಮಚಾರಿಣಿ.. ಹೀಗೆ ಎಲ್ಲ ಅವತಾರಗಳ ಮೇಲೂ ಕೀರ್ತನೆಗಳಿವೆ. ಇವುಗಳನ್ನು ರಾಗ, ಶ್ರುತಿ, ಲಯ, ತಾಳ ಬದ್ಧವಾಗಿ ಹಾಡುವುದನ್ನು ಕೇಳುವುದೇ ಪರಮಾನಂದ. ಇಷ್ಟೇ ಅಲ್ಲದೆ ದೇವಿಗೆ ಸಂಬಂಧಿಸಿದ ಕೃತಿ, ಕೀರ್ತನೆ, ಶ್ಲೋಕ, ಉಗಾಭೋಗಗಳನ್ನು ಹಾಡಲಾಗುತ್ತದೆ. ದೇವಿಯ ಇಷ್ಟೂ ಅವತಾರಗಳ ಮೂರ್ತಿಗಳನ್ನು ಇಟ್ಟು ನೈವೇದ್ಯ ಮಾಡಿ ಪೂಜೆ ಸಲ್ಲಿಸುವುದು ನವರಾತ್ರಿ ಹಬ್ಬದ ಮತ್ತೊಂದು ವೈಶಿಷ್ಟ್ಯ.

ದೇವಿ ದುರ್ಗೆ ದಯಾನಿ ದಯಾಕರೊ...

ದೇವಿ ದುರ್ಗೆಗೂ ರಾಗಗಳಿಗೂ ಅನನ್ಯ ನಂಟು. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಮುತ್ತಯ್ಯ ಭಾಗವತರ ‘ದುರ್ಗಾ ದೇವಿ ದುರಿತ ನಿವಾರಿಣಿ.. ಕೃತಿ ನವರಸ ಕಾನಡ ರಾಗ ಆದಿ ತಾಳದಲ್ಲಿದ್ದು ಸಾಮಾನ್ಯವಾಗಿ ನವರಾತ್ರಿಗಳಲ್ಲಿ ಈ ಕೃತಿ ಹಾಡುತ್ತಾರೆ. ಅದೇ ರೀತಿ ಸುಬ್ಬರಾಯ ಶಾಸ್ತ್ರಿಗಳ ರಚನೆ ‘ಜನನಿ ನಿನ್ನು ವಿನಾ..’ ರೀತಿಗೌಳ ರಾಗ, ಮಿಶ್ರ ಛಾಪು ತಾಳದಲ್ಲಿದ್ದು ಇದನ್ನು ಭಾವಪೂರ್ಣವಾಗಿ ಹಾಡಿದರೆ ಭಕ್ತಿರಸದ ಸಿಂಚನವಾಗುತ್ತದೆ.

ಹಿಂದೂಸ್ತಾನಿ ಸಂಗೀತದಲ್ಲಿ ಕೆಲವು ಪ್ರಮುಖ ರಾಗಗಳು ನವರಾತ್ರಿ ವೈಭವವನ್ನು ವರ್ಣಿಸಿವೆ, ಸಾಮಾನ್ಯವಾಗಿ ನವರಾತ್ರಿ ಹಬ್ಬದಂದು ಸಾಯಂಕಾಲದ ಸುಮಧುರ ರಾಗಗಳೇ ವಿಜೃಂಭಿಸುತ್ತವೆ. ಹಿಂದೂಸ್ತಾನಿ ಸಂಗೀತದ ರಾಗ ‘ದುರ್ಗಾ’ದಲ್ಲಿರುವ ಬಂದೀಶ್‌ ‘ದೇವಿ ದುರ್ಗೆ ದಯಾನಿ ದಯಾಕರ್‌..’ ಮತ್ತು ರಾಗ ಅಢಾಣ ಕಾನಡದಲ್ಲಿ ‘ಮಾತಾ ಕಾಲಿಕಾ..’ ಸುಪ್ರಸಿದ್ಧವಾಗಿವೆ. ರಾಗದ ನಿಯಮಾನುಸಾರಕ್ಕೆ ತಕ್ಕಂತೆ ದೇವಿಯ ಮೇಲೆ ಇರುವ ಬಂದೀಶ್‌ಗಳು ಭಕ್ತಿಯ ರಾಗರಸ ಸೂಸುವುದರಿಂದ ಸಂಗೀತ ಜ್ಞಾನ ಇಲ್ಲದವರಿಗೂ ಇಷ್ಟವಾಗುತ್ತವೆ. ಸರಸ್ವತಿ ಮೇಲಿನ ಬಂದೀಶ್‌ ‘ವೀಣಾಧಾರಿಣಿ ಸರಸ್ವತಿ..’ ಜೈಜವಂತಿ ರಾಗದಲ್ಲಿದ್ದು ಅತ್ಯಂತ ಸಮಯೋಚಿತ ರಾಗ. ಕರ್ನಾಟಕ ಸಂಗೀತದಲ್ಲಿ ಸಾಮರಾಗದ ಕೃತಿ ‘ಅನ್ನಪೂರ್ಣೆ ವಿಶಾಲಾಕ್ಷಿ..’ ಬಿಲಹರಿ ರಾಗದ ‘ಶ್ರೀ ಚಾಮುಂಡೇಶ್ವರಿ ಪಾಲಯಮಾಂ...’, ಮುಂತಾದ ಕೀರ್ತನೆಗಳು ಅತ್ಯಂತ ಜನಪ್ರಿಯವೂ, ಕರ್ಣಾನಂದಕರವೂ ಆಗಿವೆ. ಇವಲ್ಲದೆ ಮಂಗಳ ರಾಗ ಭೈರವಿಯಲ್ಲಿ ಭಜನ್‌ ‘ಭವಾನಿ ದಯಾನಿ ಮಹಾ ವಾಕ್‌ವಾಣಿ..’ ಶಾಸ್ತ್ರ, ಸಮಯವನ್ನು ಮೀರಿ ಇಂತಹ ಹಾಡು ಕೂಡ ಶ್ರವಣಸುಖವನ್ನು ನೀಡುವಂಥವೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.