ADVERTISEMENT

ತಟ್ಟುಚಪ್ಪಾಳೆ ಪುಟ್ಟಮಗು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2019, 9:24 IST
Last Updated 13 ನವೆಂಬರ್ 2019, 9:24 IST
ಕಲೆ: ಆರ್‌.ಎಂ.ಹಡಪದ
ಕಲೆ: ಆರ್‌.ಎಂ.ಹಡಪದ   

ಹಾಡುಗಳಿಲ್ಲದ ಲೋಕದಲ್ಲಿ ಮಕ್ಕಳು ಬೆಳೆಯುವುದು ಹೇಗೆ ಎಂದು ಕೇಳಿದ್ದರು ಕೀರ್ತಿನಾಥ ಕುರ್ತ ಕೋಟಿ. ಅಂಥ ಶಿಶು ಗೀತೆಗಳನ್ನು ಮಕ್ಕಳು ಸವಿಯಲಿ ಎಂದು ಪ್ರೀತಿಯಿಂದ ಬೊಳುವಾರು ಮಹಮ್ಮದ್‌ ಕುಂಞಿ ಸಂಪಾದಿಸಿದ ಕೃತಿಯೇ ‘ತಟ್ಟು ಚಪ್ಪಾಳೆ ಪುಟ್ಟಮಗು’. ಶತಮಾನದ ನೂರಾರು ಅನನ್ಯ ಶಿಶುಗೀತೆಗಳು ಈ ಕೃತಿಯಲ್ಲಿವೆ. ಪ್ರತಿ ಮಗುವೂ ಓದಲೇಬೇಕಾದ ಪುಸ್ತಕ ಇದು.

***

ಕರಡಿ ಕುಣಿತ

ADVERTISEMENT

ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾಂವ ಬಂದಾನ!
ಗುಣುಗುಣುಗುಟ್ಟುತ ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ!

ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನ?
‘ಧಣಿಯರ ಮನಿಮುಂದ ಕಾವಲು ಮಾಡಣ್ಣ
ಧಣಿ ದಾನ ಕೊಡುವನು’ ಅಂದಾನ.
ನೀ ನನಗಿದ್ದರೆ
–ದ.ರಾ. ಬೇಂದ್ರೆ

**

ಸಂತೆಗೆ ಹೋದನು ಭೀಮಣ್ಣ

ಹಿಂಡಿಯ ಕೊಂಡನು ಹತ್ತು ಮಣ;
ಕತ್ತೆಯ ಬೆನ್ನಿಗೆ ಹೇರಿಸಿದ
ಕುದುರೆಯ ಜತೆಯಲಿ ಸಾಗಿಸಿದ.

ಕತ್ತೆಯು ಅರಚಿತು ‘ಓ ಗೆಳೆಯ,
ಅರ್ಧವ ನೀ ಹೊರು, ದಮ್ಮಯ್ಯ’
ಕುದುರೆಗೆ ಕೂಗದು ಕೇಳಿಸಿತು
ಕತ್ತೆಯ ಕಿರುಚನು ಚಾಳಿಸಿತು.

–ಕಯ್ಯಾರ ಕಿಂಞ್ಞಣ್ಣ ರೈ

***

ಕಲೆ: ಮೋಹನ ಸೋನ

ಕಾಶೀಗ್ ಹೋದ ನಂ ಬಾವ

ಕಾಶೀಗ್ ಹೋದ ನಂ ಬಾವ
ಕಬ್ಣದ್ ದೋಣೀಲಿ
ರಾಶಿ ರಾಶಿ ಗಂಗೆ ತರೋಕ್
ಸೊಳ್ಳೇ ಪರದೇಲಿ
ತಂಗಿ ಯಮುನಾದೇವಿಯಳ
ಸಂಗವಾಯ್ತೆಂದುಬ್ಬಿ ಉಬ್ಬಿ
ಗಂಗಾದೇವಿ ಉಕ್ಕಿ ಉಕ್ಕಿ
ಬೀಸಿ ಬೀಸಿ ದೋಣಿ ಕುಕ್ಕಿ
ಬಾವ ಅತ್ತು ಬಿಕ್ಕಿ ಬಿಕ್ಕಿ
ಬಂಡೆ ತಾಕಿ ದೋಣಿ ಒಡ್ದು
ಸೊಳ್ಳೇ ಪರದೆ ಬಾವನ್ ಬಡ್ದು
ಮಂಡೆ ದವಡೆ ಪಟ್ಟಾಗೊಡ್ದು
ಕಾಶೀ ಆಸೆ ನಾಶವಾಗಿ
ಮೀಸೇ ಉಳಿದದ್ ಎಷ್ಟೋ ವಾಸೀಂತ
ಕಾಶೀಂದ್ ಬಂದ ನಂ ಬಾವ
–ಟಿ.ಪಿ. ಕೈಲಾಸಂ

***

ಹಿಂದಿನ ಸಾಲಿನ ಹುಡುಗರು

‘ಹಿಂದಿನ ಸಾಲಿನ ಹುಡುಗರು’ ಎಂದರೆ
ನಮಗೇನೇನೂ ಭಯವಿಲ್ಲ!
ನಮ್ಮಿಂದಾಗದು ಶಾಲೆಗೆ ತೊಂದರೆ:
ನಮಗೆಂದೆಂದೂ ಜಯವಿಲ್ಲ!


ನೀರಿನ ಜೋರಿಗೆ ತೇಲದು ಬಂಡೆ;
ಅಂತೆಯೇ ನಾವೀ ತರಗತಿಗೆ!
ಪರೀಕ್ಷೆ ಎಂದರೆ ಹೂವಿನ ಚೆಂಡೆ?
ಚಿಂತಿಸಬಾರದು ದುರ್ಗತಿಗೆ.

– ಕೆ.ಎಸ್‌.ನರಸಿಂಹಸ್ವಾಮಿ

***

ಕಲೆ: ಮೋನಪ್ಪ

ನನ್ನ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ
ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ
ಕಾಲಿಲ್ಲದೆಯೇ ನಡೆಯುವ ಕುದುರೆ
ಕೂಳಿಲ್ಲದೆಯೇ ಬದುಕುವ ಕುದುರೆ
ನಾಲನು ಬಡಿಸದ ಜೂಲವ ಹೊದಿಸದ
ಲಾಲನೆ ಪಾಲನೆ ಬಯಸದ ಕುದುರೆ
ಅಜ್ಜನ ಕೋಲಿದು ನನ್ನಯ ಕುದುರೆ

– ಸಿದ್ದಯ್ಯ ಪುರಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.