ADVERTISEMENT

ವಾರದ ಕವಿತೆ: ಬೇರಿಲ್ಲದ ಚಿಗುರು, ಚಿಗುರಿಲ್ಲದ ಬೇರು

ನಾಗರೇಖಾ ಗಾಂವಕರ
Published 7 ಮಾರ್ಚ್ 2021, 4:04 IST
Last Updated 7 ಮಾರ್ಚ್ 2021, 4:04 IST
ನಾಗರೇಖಾ ಗಾಂವಕರ
ನಾಗರೇಖಾ ಗಾಂವಕರ   

ಅಮ್ಮ,
ಬಯಸಿದ್ದು ಬೇರುಳ್ಳ ಚಿಗುರು
ಚಿಗುರುಳ್ಳ ಬೇರು.
ಹೊಲದ ತುಂಬಾ ಹಸಿರು ತೇಪೆ
ಬಾವಿ ತುಂಬಾ ನೀರ ಒರತೆ
ಕಣ್ಣ ತುಂಬಾ ಕನಸಗಾಥೆ

ಅಮ್ಮ
ಇರಿಸಿದ್ದು ಮನೆ ಕಿಬಳಿಗೆ ಚಾಚಿ
ಜೋಡಿಸಿ ಜೋಪಾನ ಹಂಚುಗಳ ಸಾಲು
ಬೇಕಲ್ಲ ಸೋರುವ ಚಾವಣಿಗೆ
ಮಳೆಗಾಲದ ದಿನಮಾನಕ್ಕೆ
ಮತ್ತೊಮ್ಮೆ ಹಂಚು ಹೊದಿಸಲಿಕೆ
ಸೂರು ಗಟ್ಟಿ ಮಾಡಲಿಕ್ಕೆ

ಇಟ್ಟಿದ್ದು,
ಸಣಬಿನ ಕೈ ಚೀಲದಲ್ಲಿ ಸುತ್ತಿ
ಮುರುಕು ಕಪಾಟಿನಲ್ಲೊಂದು ಬುಟ್ಟಿ
ತುಣುಕುಗಳು ,ಸೂಜಿ ,ದಾರ, ದಬ್ಬಣ
ಸುತಳಿಬಳ್ಳಿ, ಕತ್ತದ ಬಳ್ಳಿ, ಅಕ್ಕಿ ಮೂಟೆ
ಕಟ್ಟುವ ಸಣಬಿನ ಬತ್ತಿ.

ADVERTISEMENT

ಹೊಲಿಸಿದ್ದು,
ಶಾಲೆಗೆ ಹೋಗಲು
ಪಾಟೀಚೀಲ,
ಅಪ್ಪನ ಹಳೇ ಕರಿಪ್ಯಾಂಟಿನ ಬಟ್ಟೆ
ಅಂಗಿಯ ಹೊಲಿಯಲು
ಹಳೆ ಸೀರೆಯ ಜರಿ ಪಟ್ಟೆ

ಉದುರಿಸಿದ್ದು,
ಅಕ್ಕಿ ಮಡಿಕೆಯ ಹಳೆಯಕ್ಕಿ ಮೇಲೆ
ಬೇವಿನೆಲೆ ಇಲ್ಲ ಉಕ್ಕಿ ಸೊಪ್ಪಿನ ಎಲೆ
ಅಕ್ಕಿ ಹೂಗಳು ಬೀಳಬಾರದಂತಿರಬೇಕು
ವರ್ಷಕಾಲೇ..

ಅಮ್ಮ,
ಹುಡುಕುತ್ತಿದ್ದದ್ದು ಒಂದೇ
ಬೀಜ ಬೆಳಕುಳ್ಳದ್ದು, ಗಟ್ಟಿಕಾಳಿಂದು
ಇರಬೇಕಷ್ಟೇ. ಮೊಳಕೆಯುಕ್ಕಿ
ಆಳಕ್ಕೆ ಬೇರು ಹೋದರಷ್ಟೇ ಸಸಿ ಚಿಗುರು
ಬೇರಿಂದ ಚಿಗುರು...
ಚಿಗುರುಳ್ಳ ಬೇರು. ಇಷ್ಟೇ ಇಹದ
ಪರಿವಾರದ ಪರದ ನೆರಳು.

ಅಮ್ಮ ಬಯಸಿದ್ದು,
ಇರಿಸಿದ್ದು, ಹೊಲಿಸಿದ್ದು, ಹುಡುಕಿದ್ದು
ಎಲ್ಲ ಅಯೋಮಯವಿಂದು.

ಅಮ್ಮ
ನೊಂದಳು ಕಂಡು
ನಡೆದಾಡುವ ಹೆಜ್ಜೆಗೆ
ದಾರಿ ಹುಡುಕ ಹೊರಟವರ ಸೋತ
ಕಾಲುಗಳ ಹೂತ ಕಲೆಗಳು
ಮಂಜಾದ ಅಮ್ಮನ ಕಂಗಳು

ಅಮ್ಮ
ಬೆಂದಳು ಕಂಡು
ಆಪತ್ಬಾಂಧವ ಪರಮಾತ್ಮನ
ಹೆಸರಲ್ಲಿ ಕಟ್ಟಿದ ಗುಡಿಯಲ್ಲಿ
ಸುತ್ತು ಸುತ್ತಿದ ಹೆಜ್ಜೆಗಳು
ಪಾದದಲ್ಲಿ ಮೂಡಿದ ಬಿರುಕು ಗೆರೆಗಳು

ಅಮ್ಮ
ದಿಗಿಲಾಗಿಹಳು ಕಂಡು,
ಹೆಜ್ಜೆಯನ್ನೆ ಮರಳುಗೊಳಿಸಿ
ನಡೆದ ದಾರಿಯೇ
ಕತ್ತಲೆಯ ಕೂಪಕ್ಕೆ ತಳ್ಳಿ
ರೋಗದ ಮಾಯೆ ಹಬ್ಬಿ
ಕಾಲುದಾರಿ ಕಾಡದಾರಿಯಾಗಿ
ಗುಡಿ ಗೋಪುರಗಳ ಘಂಟೆಗಳು
ಸ್ತಬ್ದವಾಗಿ ಜೀವದ ಘಂಟೆಯ ಬಡಿತವ
ಜೋಪಾನ ಮಾಡುವ ಕಾಲ ಬಂತೆಂದು.

ಅಮ್ಮ
ಚೆಲ್ಲಿದಳು ಉಸಿರು
ಜಗದ ಜಾಲದಲ್ಲಿ ಬಂಧಿಯಾದ
ಬೇರಿಲ್ಲದ ಚಿಗುರು
ಚಿಗುರಿಲ್ಲದ ಬೇರು ಬೇಯುವುದ ಕಂಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.