ಕವಿತೆ
ನನ್ನೊಳಗೊಬ್ಬಳು ಹೆಣ್ಣಿದ್ದಳು
ಅದೆಂಥಾ ಹಠಮಾರಿ
ಹದಿ ಅರಿವಿರದ ಹೆಣ್ಣು
ಗುಟುಕು ಪ್ರೀತಿಗೆ ನನ್ನೆದೆ ಗೂಡಲ್ಲಿ ಕೂತ ಮಾಂಗಟ್ಟೆ* ಅವಳು
ಪ್ರತಿ ಸಲದ ಭೇಟಿಗೆ
ನನ್ನಿಷ್ಟದ ಉಡುಗೆ-ತೊಡುಗೆ
ಮುಂಜಾವಿನ ಶುರುವಿಗೂ
ರಾತ್ರಿಯ ಕೊನೆಗೂ
ಮೊದಲ ಶುಭ ಸಂದೇಶ ಕೊಟ್ಟವಳು
ಅದು ಇದು, ಹಾಗೆ ಹೀಗೆ
ಆಗಾಗ ಬರೆವ ಕವನದ ಸಾಲಿಗೆ
ಸಲಿಗೆ ಕೊಟ್ಟು
ಕಾಡಿಸಿ-ಪೀಡಿಸಿ ಕೈ ತೋಳುಗಳ ಅಂಟಿಸಿ
ನಡೆವ ತವಕಕ್ಕೆ ಅದೆಷ್ಟು ರಿಂಗಣಗಳು
ಕೂಸು ತಾಯ್ಗತ್ತಂತೆ ಅವಳು ನನಗಾಗಿ
ನಾನು ಬೆಳೆದಂತೆ
ನನ್ನ ಅಹಮ್ಮಿಕೆಯ ಉಪೇಕ್ಷೆಗೆ
ಮೌನಕ್ಕೋದವಳು
ನನ್ನೊಲವಿಗಾಗಿ ಇದ್ದವಳು ಹೊರಟೇ ಬಿಟ್ಟಳು
ನನ್ನೆದೆಯೊಳಗೆ ಪ್ರಾಣಬಿಟ್ಟು
ದುರಂತ
ಅವಳದೋ? ನನ್ನದೋ?
(*ಮಾಂಗಟ್ಟೆ [Hornbill] ಹೆಣ್ಣು ಗೂಡಲ್ಲೇ ಉಳಿದು ಗಂಡು ತರುವ ಆಹಾರ ಮಾತ್ರ ತಿನ್ನುವ ಪಕ್ಷಿ, ಗಂಡು ಪಕ್ಷಿ ಮರಳಿ ಬಾರದೆ ಇದ್ದರೆ ಗೂಡಲ್ಲೇ ಪ್ರಾಣ ಬಿಡುತ್ತದೆ.)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.