ಹಿಂದಿನ, ಪಕ್ಕದ ಮನೆಯ ದೇವರ
ಮುಖ ತೊಳೆದ ನೀರು
ನನ್ನ ಮನೆಯ ಮುಂದಿನ ಬಾಡಿದ
ಪಾರಿಜಾತ ಗಿಡದ ದಾಹ ತಣಿಸುತ್ತದೆ
ನನ್ನ ಮನೆಯ ಒಂದು ಲೋಟ
ನೀರು ನೆರೆಮನೆಯ, ಹಾದಿಹೋಕರ
ದಾಹ ತಣಿಸಿ ಮುದುಡಿದ ದಣಿದ ಮನ
ಅರಳಿಸುವಂತಾದರೆ ?
ದೇವರ ಮುಖ ತೊಳೆದ ನೀರು
ಹೀರಿದ ಗಿಡ ನಳನಳಿಸಿ ಸಂಜೆ ಹೂ
ಅರಳಿಸಿ ಘಮಗುಡುತ್ತದೆ
ಅದೇ ಹೂ ಅದೇ ದೇವರ ಮುಡಿ
ಸೇರಿ ಪಾವನವಾಗುತ್ತದೆ
ಮುದುಡಿದ ದಣಿದ ಮನದ ದಾಹ
ತಣಿಸಿದ ನನ್ನ ಮನೆಯ
ಒಂದು ಲೋಟ ನೀರಿನಿಂದ
ಆ ಮನದ ಹೂವರಳಿ ನನ್ನ
ಮನವೂ ಪಾವನಗೊಂಡರೆ ?
ಹಿಂದಿನ, ಪಕ್ಕದ ಮನೆಯ
ದೇವರ ಮುಖ ತೊಳೆದ ನೀರು
ನನ್ನ ಮನೆಯ ಮುಂದಿನ ಗಿಡ
ಎರಡೂ ಸೇರಿ ಘಮಿಸುವ ಹೂ
ನಿನ್ನ ಮುಡಿಗರ್ಪಿಸಿ ಭಾವೈಕ್ಯತೆ
ಮೆರೆಯುವುದಾದರೆ ದೇವ
ಮೂರೂ ಮನೆಯ ನಾವು
ಮೂರ್ದಿನದ ದರ್ದಿನ ಜಗದ
ಜೀವನದ ದಾರಿಯ ದಾರಿಹೋಕರು
ಸೇರಿ.....
ಒಂದೇ ತಟ್ಟೆಯ ಹಿಡಿದು
ನಿನಗಾರತಿ ಬೆಳಗಿದರೆ ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.