
ಸೀರೆಯಲ್ಲಿ ನಾರಿ
ಹಾಳುಬಿದ್ದ ಗುಡಿಸಲಿನ ಮುಂದೆ
ಹೊಳೆಯುತಿವುದು ಬೆಳ್ಳಿರೇಖೆಯು
ಎಳೆ-ಎಳೆಯು ತೂಗಿ ಬಾಗಿ
ಮುರಿದ ಮುಂಬಾಗಿಲಿನಲಿ
ಚುಕ್ಕಿಗಳು ಕಂಗೊಳಿಸುತಿಹವು
ಊರದೇವರ ಶಪಿಸಿ
ಹಸಿಕಟ್ಟಿಗೆಯ ಕುಟುಕಿ
ಊದುಗೊಳುವೆಯ ಊದಿ
ರೊಟ್ಟಿಬಡಿದಳು ಅವ್ವ
ಅರ್ಧ ಸೀಕು ಮತ್ತರ್ಧ ಹಸಿಮುರುಕು
ಮಕ್ಕಳೊಟ್ಟೆ ಭರ್ತಿಯಾದರೆ
ಅವಳೊಟ್ಟೆಗೆ
ತುಕ್ಕಿಡಿದ ಊದುಗೊಳವೆಯಂತೆ
ಮತ್ತೂ ಬದುಕು
ಉಟ್ಟ ಸೀರೆಯ ಸುಕ್ಕಿಗೂ
ಸೆರಗಿನಲಿ ಕಟ್ಟಿಕೊಂಡ ಕೆಂಡಕ್ಕೂ
ಹರೆಯದೂರಲಿ ಕಳ್ಳರದೇ ಕಾಟ
ಕಣ್ಕುಕ್ಕುವ ಮೈಮಾಟಕ್ಕೆ
ಹಾಳೂರಿನ ಹದ್ದಿಗೂ ಚಪಲ
ಕಾಯ್ದುಕೊಳ್ಳಬೇಕು
ನಿಗಿನಿಗಿಯ ಕೆಂಡವಿದು
ಸರಿಹೊತ್ತಿನ ಸರಪರಗಳಿಗೆ
ಮಗ್ಗುಲಲಿದ್ದ ಈಳಿಗೆಮಣಿಯೇ ಜೊತೆಗಾರ
ಆಡುಹಗಲಿನ ಗುಳ್ಳೆನರಿಗಳಿಗೆ
ಕುಡುಗೋಲು-ದೊಣ್ಣೆಗಳು
ಕಾವಲುಗಾರರೂ
ಹರೆಯದ ಮೈಮಾಟ
ಕಾಳಿಯಾಗಿಸಿದೆ ಬದುಕ
ಮಕ್ಕಳ ಕಿಲಕಿಲಕೆ
ನಗುತಿಹಳು ಈ ಅವ್ವಾ
ಇವಳ ಬೆನ್ನೇರಿ ನಡೆಯುತಿರೇ
ಅವುಗಳಿಗದುವೇ
ಆನಂದ
ನಗುವಿನ ಹಬ್ಬವಿದು ಸದಾಕಾಲವು
ಸಂಭ್ರಮದ ತೋರಣವೂ ಹಸಿರಾಗಿವುದು
***
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.