ಬುಟ್ಟಿ ತುಂಬಾ ಹೊತ್ತ ಸೊಪ್ಪು
ತರಕಾರಿಯನಿಳಿಸಿ ಎದುರಿನವರ ಹಸಿವ
ಹಿಂಗಿಸಲು ಹಾದಿ ಮಾಡಿಕೊಟ್ಟು
ಮತ್ತೆ ಹೊತ್ತು ನಡೆದ ಮೇಲೂ
ಉಳಿಯುತ್ತವೆ ಎಲೆ, ದಂಟು, ಕಟ್ಟಿನ ಕಸ
ನಸು ಕಮನೀಯತೆ ಆಕೆಯ ನೆನಪಿಗೆ
ಬರೆ ಬರೆದು ಅಳಿಸಿ ಮತ್ತೆ ಬರೆವ ಅಕ್ಷರ
ಅಭ್ಯಾಸದ ದಾರಿಯಲಿ ಕರೆದೊಯ್ಯುವರ
ಮಾತು, ಉಳಿಯ ಮೊನಚಾಗಿ ಕಲ್ಲ ಪಯಣಕೆ
ಶಿಲ್ಪವ ಕನಸುತ್ತದೆ ಗುರುತು ಮೂಡಿಸಿ
ಗುರುವಿನ ಗುಲಾಮನಾಗುವರ ನೆನೆದು
ಹನಿ ಹನಿ ಹಳ್ಳ ಕೊಳ್ಳ ನದಿಯ
ಪಯಣಕೆ ತಡೆಯೊಡ್ಡುವ ಕಲ್ಲು
ನೀರುಂಡುಟ್ಟು ತೇಗಿ ಬದಲಾದ ರೂಪುರೇಷೆ
ಕೊರೆತ ಮಾತ್ರವಲ್ಲ ಸಾತತ್ಯತೆಯ ಗುರುತು
ಕಾಲಕಾಲಕೂ ಪಾಠ ಬೋಧನೆ
ನೀ ನಿನ್ನ ನೆನಪು ಎಲ್ಲವು ದೂರ
ದೂರಕ್ಕೆ ಕಳಿಸಿ ಮನಸು ಖಾಲಿ ಪಾತ್ರೆಯ ಕಲೆ
ಚಿಗಿತು ಬಲಿತು ಕಂಪ ಸೂಸುವ ಎಲೆ
ಉದುರುವ ಮುನ್ನ ಚಿಗುರಿಗೆ ಹಾದಿ
ಹಾಸಿ ಮಣ್ಣ ಸೇರಿದಂತೆ ನಿತ್ಯ ನೂತನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.