ಜಯಸಿಂಹ ಆರ್.
ಮಂಡ್ಯ: ಹಿಂದಿ ಹೇರಿಕೆಯ ವಿರುದ್ಧ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯ ದಿನ ಆರಂಭವಾದ ಪ್ರತಿಭಟನಾ ದನಿಯು, ಕೊನೆಯ ದಿನವಾದ ಭಾನುವಾರದ ಕವಿಗೋಷ್ಠಿಯಲ್ಲೂ ಬಲವಾಗಿ ಕೇಳಿಬಂದಿತು.
ಕವಿಗೋಷ್ಠಿಯಲ್ಲಿ ಆಶಯ ನುಡಿಯಾಡಿದ ಕವಿ ಕೆ.ಪಿ.ಮೃತ್ಯುಂಜಯ, ‘ತ್ರಿಭಾಷಾ ಸೂತ್ರವು ಕನ್ನಡಿಗರನ್ನು ತ್ರಿಶೂಲದಂತೆ ಇರಿಯುತ್ತಿದೆ ಎಂದು ಕುವೆಂಪು ಹೇಳಿದ್ದರು. ಅದು ಈ ಕಾಲಕ್ಕೆ ನಿಜವಾಗಿಹೋಗಿದೆ. ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿಯನ್ನು ಹೇರಲಾಗುತ್ತಿದೆ. ಈಚೆಗೆ ಇದೇ ಸೂತ್ರದ ಅಡಿಯಲ್ಲಿ ಇಂಗ್ಲಿಷ್–ಹಿಂದಿ–ಸಂಸ್ಕೃತ ಬಂದು ಕುಳಿತಿವೆ. ಕನ್ನಡವನ್ನು ಹೊರಗಟ್ಟಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ಹಿಂದಿ ಹೇರಿಕೆ ಮೊದಲಿನಿಂದ ಇದ್ದರೂ ಕೇಂದ್ರದಲ್ಲಿ ಈಗ ಅಧಿಕಾರದಲ್ಲಿರುವ ಪಕ್ಷ ಸರ್ಕಾರ ರಚಿಸಿದಾಗಿನಿಂದ ಹೇರಿಕೆ ತೀವ್ರಗೊಂಡಿದೆ. ಅದನ್ನು ಪ್ರಬಲವಾಗಿ ವಿರೋಧಿಸಿ, ರಾಜ್ಯ ಸರ್ಕಾರದ ಗಮನ ಸೆಳೆಯಬೇಕು. ತ್ರಿಭಾಷಾ ಸೂತ್ರವನ್ನು ರದ್ದುಮಾಡುವವರೆಗೂ ಹೋರಾಡಬೇಕು. ಇಲ್ಲದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ’ ಎಂದು ಪ್ರತಿಪಾದಿಸಿದರು.
‘ಜಾಗತಿಕ ಮಟ್ಟದಲ್ಲಿ ಕನ್ನಡ ಕಟ್ಟುವ’ ಬಗೆ ಕುರಿತು ಮಾತನಾಡಿದ ಬ್ರಿಟನ್ ಕನ್ನಡ ಕೂಟದ ಅಶ್ವಿನ್ ಪ್ರಸಾದ್, ‘ದಶಕಗಳ ಹಿಂದೆ ನಾವು ಬೆಂಗಳೂರು ಬಿಟ್ಟಾಗ, ಅಲ್ಲಿ ಕನ್ನಡವೇ ಪ್ರಧಾನವಾಗಿತ್ತು. ಈಗ ಎಲ್ಲವೂ ಬದಲಾಗಿದೆ. ಬೆಂಗಳೂರಿನ ಯಾವ ಹೋಟೆಲ್‌ಗೆ ಹೋದರೂ, ‘ಕ್ಯಾ ಚಾಹಿಯೇ’ ಎನ್ನುವವರೇ ಇದ್ದಾರೆ. ಎಲ್ಲ ರಂಗಗಳಲ್ಲೂ ಹಿಂದಿ ಬಂದು ಕೂತಿದೆ’ ಎಂದರು.
ಹೊರನಾಡು ಕನ್ನಡಿಗ ಕಮಲಾಕರ ಕಡವೆ ಮಾತನಾಡಿ, ‘ಕನ್ನಡಿಗರು ಎಲ್ಲರೊಂದಿಗೂ ಸುಲಭವಾಗಿ ಬೆರೆಯುತ್ತಾರೆ. ಹೊರಗಿನವರ ಭಾಷೆಯಲ್ಲೇ ಅವರನ್ನು ಮಾತನಾಡಿಸುತ್ತಾರೆ. ಅದನ್ನೇ ಕಾರಣವಾಗಿ ಇರಿಸಿಕೊಂಡು ಕನ್ನಡಿಗರು ನಿರಭಿಮಾನಿಗಳು ಎಂದು ಕರೆಯಲಾಗುತ್ತದೆ. ಕನ್ನಡ ಉಳಿಸಿಕೊಳ್ಳುವಲ್ಲಿ ಇದೂ ತೊಡಕಾಗಿರಬಹುದು’ ಎಂದು ಗೋಷ್ಠಿಯೊಂದರಲ್ಲಿ ಹೇಳಿದರು.
ಶನಿವಾರ ನಡೆದಿದ್ದ ‘ಯುವಜನತೆ ಮತ್ತು ಸಬಲೀಕರಣ’ ಗೋಷ್ಠಿಯಲ್ಲೂ ಹಿಂದಿ ಹೇರಿಕೆ ಬಗ್ಗೆ ಚರ್ಚೆಯಾಗಿತ್ತು.
ಕರಪತ್ರ ವಿತರಿಸಿ ಕಿರು ಅಭಿಯಾನ
ಹೇರಿಕೆ ವಿರುದ್ಧ ಅಭಿಯಾನ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಬಳಿ ಸಮ್ಮೇಳನದ ಆವರಣದಲ್ಲಿ ಹಲವು ಯುವಕರು ಮತ್ತು ಕೆಲ ಸಂಘಟನೆಗಳು ಹಿಂದಿ ಹೇರಿಕೆಯನ್ನು ವಿರೋಧಿಸಿ ಕರಪತ್ರ ವಿತರಿಸಿ ಕಿರು ಅಭಿಯಾನವನ್ನು ನಡೆಸಿದವು. ಪುಸ್ತಕ ಮಳಿಗೆಗಳ ರಣಬಳಿ ರೀಲ್ಸ್ ಮಾಡುತ್ತಿದ್ದ ಕೆಲ ಇನ್‌ಫ್ಲುಯೆನ್ಸರ್‌ಗಳು ಶಾಲಾ ಮಕ್ಕಳನ್ನು ಸೇರಿಸಿಕೊಂಡು ‘ಹಿಂದಿ ಹೇರಿಕೆ ನಿಲ್ಲಲ್ಲಿ ನಿಲ್ಲಲಿ. ಹಿಂದಿ ಪರೀಕ್ಷೆ ಬೇಡ. ಕನ್ನಡವೇ ಇರಲಿ’ ಎಂದು ಘೋಷಣೆ ಕೂಗಿಸಿದರು. ತಿಂಡಿ–ತಿನಿಸು ಆಟಿಕೆಗಳನ್ನು ಮಾರುತ್ತಿದ್ದ ಕೆಲ ಹಿಂದಿ ವ್ಯಾಪಾರಿಗಳಿಗೆ ಕನ್ನಡದಲ್ಲಿ ವ್ಯವಹರಿಸುವ ಬಗೆಯನ್ನು ಕೆಲವರು ಹೇಳಿಕೊಡುತ್ತಿದ್ದರು.
ಹಿಂದಿ ರಾಷ್ಟ್ರಭಾಷೆ ಎಂದು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಆಸಕ್ತಿ ಇದ್ದವರು ಕಲಿಯಲಿ ಆದರೆ ಅದನ್ನು ಹೇರಬಾರದು.ರಾಕೇಶ್ ಎಚ್.ಎಸ್. ದ್ವಿತೀಯ ಪಿಯು ವಿದ್ಯಾರ್ಥಿ ಮಂಡ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.