ADVERTISEMENT

ನಮ್ಮ ಓಣಿ ಪೂರಾ ನೀರಾಗ ಮುಳುಗಿತ್ತು

ನೆರೆಪೀಡಿತ ಪ್ರದೇಶಗಳ ಮಕ್ಕಳ ಮಾತು

ಸಾಗರ್ ಗುಂಡಪ್ಪ ಗೊರಚಿಕ್ಕನವರ
Published 9 ನವೆಂಬರ್ 2019, 19:30 IST
Last Updated 9 ನವೆಂಬರ್ 2019, 19:30 IST
ಸಾಗರ್ ಗುಂಡಪ್ಪ ಗೊರಚಿಕ್ಕನವರ, 4ನೇ ತರಗತಿ, ಸಂಗಮೇಶ್ವರ ಪ್ರಾಥಮಿಕ ಶಾಲೆ, ಕೂಡಲಸಂಗಮ
ಸಾಗರ್ ಗುಂಡಪ್ಪ ಗೊರಚಿಕ್ಕನವರ, 4ನೇ ತರಗತಿ, ಸಂಗಮೇಶ್ವರ ಪ್ರಾಥಮಿಕ ಶಾಲೆ, ಕೂಡಲಸಂಗಮ   

ನಮ್ಮ ಮನೆ ಹೊಳಿ ದಂಡೆಯ ಬಳಿನ ಐತ್ರಿ. ಅವತ್ತು ಸಂಜೆ ನಮ್ಮ ಮನೆ ಸಮೀಪ ನೀರು ಇತ್ತು. ಅವ್ವ-ಅಪ್ಪ ನೀರು ಬರಲ್ಲ ಅಂತ ಹೇಳಿ ಮಲಗಿಕೊಳ್ಳಲು ಹೇಳಿದರು. ರಾತ್ರಿ ನೀರು ಬಂತು. ಬೇಗ ಹೋಗಬೇಕು ಅಂತ ನನ್ನ ಕರೆದುಕೊಂಡು ಹೋದರು. ನಾವು ರಾತ್ರಿ ಬಸವಧರ್ಮ ಪೀಠದ ಆಶ್ರಮದ ರೂಂನಲ್ಲಿ ಇದ್ದೆವು. ಬೆಳಿಗ್ಗೆ ಮನೆಗೆ ಹೋಗಬೇಕು ಅಂದರೆ ನಮ್ಮ ಮನೆ, ಓಣಿ ನೀರಿನಲ್ಲಿ ಸಂಪೂರ್ಣ ಮುಳುಗಿತ್ತು. ಒಂಬತ್ತು ದಿನ ಮನೆ ನೀರನಲ್ಲಿಯೇ ಇತ್ತು. ನೀರು ಕಡಿಮೆಯಾದ ನಂತರ ಮನೆಗೆ ಹೋದರೆ ಮನೆಯಲ್ಲಿ ಸಂಪೂರ್ಣ ರಾಡಿ ತುಂಬಿತ್ತು.

ನನ್ನ ಪುಸ್ತಕಗಳು ರಾಡಿಯಲ್ಲಿ ಸಿಲುಕಿಕೊಂಡಿದ್ದವು, ಲೆಕ್ಕ ಮಾಡಲು ಇಟ್ಟುಕೊಂಡ ಪಾಠಿ ನೀರಿನಲ್ಲಿ ಹರಿದು ರಸ್ತೆ ಬಳಿಯ ಕೆಸರಿನಲ್ಲಿ ಸಿಕ್ಕಿಕೊಂಡಿತ್ತು. ಶಾಲೆ ಬ್ಯಾಗ್, ಬೂಟ್ ಸಿಗಲೇ ಇಲ್ಲ. ಅವತ್ತು ಶಾಲೆಯಲ್ಲಿ ಕೊಟ್ಟ ಹೋಮ್‌ ವರ್ಕನ್ನು ಮಾಡಿ ಇಟ್ಟಿದ್ದೆ. ನಿತ್ಯ ಶಾಲೆಯಲ್ಲಿ ಹೇಳಿದ ಪಾಠದ ಪ್ರಶ್ನೆಗೆ ಉತ್ತರಗಳನ್ನು ಬರೆದಿದ್ದೆ, ಚಿತ್ರದ ಪುಸ್ತಕದಲ್ಲಿ ಚೆನ್ನಾಗಿ ಚಿತ್ರ ಬಿಡಿಸಿ ಬಣ್ಣ ಹಚ್ಚಿದ್ದೆ. ಅವೆಲ್ಲವೂ ಕೆಸರಿನಲ್ಲಿ ಸಿಕ್ಕು ಹಾಳಾಗಿ ಹೋಗಿದ್ದಾವೆ.

ನಾವು ಇದ್ದ ಜಾಗಕ್ಕೆ ಬಹಳಷ್ಟು ಜನ ಬಂದು ಅಕ್ಕಿ, ಬಟ್ಟೆ, ಪಾತ್ರೆ ತಂದುಕೊಟ್ಟರು. ಆದರೆ ಯಾರೂ ಪುಸ್ತಕ ಕೊಡಲಿಲ್ಲ. ನಮ್ಮ ಅಪ್ಪ, ಅವ್ವನಿಗೆ ಪುಸ್ತಕ, ಅಂಕಲಿಪಿ, ಪಾಠಿ, ಪೆನ್ನು ಕೊಡಿಸು ಅಂತ ದಿನಾಲೂ ಕೇಳುತ್ತಿದ್ದೇನೆ. ನೋಟ್ ಪುಸ್ತಕ, ಪೆನ್ ಮಾತ್ರ ಕೊಡಿಸಿದ್ದಾರೆ. ಶಾಲಾ ಪಠ್ಯ ಪುಸ್ತಕವೇ ಇಲ್ಲ. ನಮ್ಮ ಶಾಲೆಯಲ್ಲಿ ಬಹಳಷ್ಟ ಜನರಿಗೆ ನೋಟ್ ಪುಸ್ತಕಗಳು ಇಲ್ಲವೇ ಇಲ್ಲ. ಎಲ್ಲಾ ವಿಷಯಗಳನ್ನು ಒಂದೇ ನೋಟ‌್ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದೇವೆ. ಹೊಳಿ ಬರದೆ ಇದ್ದರೆ ಚೆನ್ನಾಗಿ ಇರುತ್ತಿದ್ದೆವು. ಮನೆಗೆ ಹೋಗಲು ಭಯವಾಗುತ್ತಿದೆ ಈಗ. ನಮ್ಮ ಓಣಿಯಲ್ಲಿ ಬಹಳಷ್ಟು ಮನೆಗಳು ಬಿದ್ದಿವೆ. ಸಂಜೆಯಾದರೆ ಸಾಕು ಸೊಳ್ಳೆಗಳು ಅಧಿಕವಾಗುತ್ತವೆ. ಓದಲು ಕಷ್ಟವಾಗುತ್ತಿದೆ. ಕಷ್ಟ ಏನೇ ಬರಲಿ ನಾ ಓದುವ ಹಟ ಬಿಡಲಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.