ADVERTISEMENT

ಬಿ.ಆರ್‌.ಸತ್ಯನಾರಾಯಣ ಅವರ ಅನುವಾದಿತ ಕಥೆ: ವ್ಯಾಪಾರಕ್ಕಾಗಿ ಮುಚ್ಚಲಾಗಿದೆ

ಬಿ.ಆರ್.ಸತ್ಯನಾರಾಯಣ, ಬೆಂಗಳೂರು
Published 3 ಮೇ 2025, 23:30 IST
Last Updated 3 ಮೇ 2025, 23:30 IST
   

ಹಳ್ಳಿಯ ಜನ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಪ್ರಾರಂಭಿಸಲು ತಮ್ಮ ಹಾಸಿಗೆಗಳನ್ನು ಬಿಟ್ಟು ಎದ್ದೇಳುವ ಮುಂಚೆಯೇ, ಹಕ್ಕಿಗಳ ಚಿಲಿಪಿಲಿ ಸದ್ದು ಪ್ರಾರಂಭವಾಗುವ ಮುಂಚೆಯೇ, ಅವುಗಳು ಹುಳ-ಉಪ್ಪಟೆ ಹುಡುಕುತ್ತಾ ಪೊದೆಯಿಂದ ಪೊದೆಗೆ ಧಾವಿಸುವ ಮೊದಲೇ ಜೋಸೆಫ್ ತನ್ನ ಬೇಕರಿಯ ಮುಂಭಾಗದವರೆಗೂ ಸಾಗುವ ಕಾಡುದಾರಿಯಲ್ಲಿ ಎಂದಿನಂತೆ ನಡೆಯುತ್ತಿರುತ್ತಾರೆ.

ತನ್ನ ಚಿಕ್ಕ ಹಳ್ಳಿಯನ್ನು ಸುತ್ತುವರೆದಿರುವ ಅಂಕುಡೊಂಕಾದ ಕಾಡುದಾರಿಯಲ್ಲಿ ಅವರು ಸಾಗುತ್ತಿರುವಾಗ, ಇನ್ನೂ ಮುಂಜಾನೆಯ ಕತ್ತಲು ಸರಿದಿರಲಿಲ್ಲ. ಎಲ್ಲೋ ಅರ್ಧ ದಾರಿಯಲ್ಲಿ, ಎಲ್ಲೆಂದು ಅವರಿಗೆ ಮಾತ್ರ ಗೊತ್ತಿರುವ, ಶತಶತಮಾನಗಳಿಂದ ಅಲ್ಲೇ ಬಿದ್ದಿರುವ ಬಹುತೇಕ ಕುರ್ಚಿಯಾಕಾರದಲ್ಲಿರುವ ದೊಡ್ಡ ಬಂಡೆಯ ಮೇಲೆ ಕುಳಿತುಕೊಳ್ಳುತ್ತಾರೆ. ಕುಳಿತು ಒಂದು ಗುಟುಕು ನೀರು ಕುಡಿಯುತ್ತಾ, ಬಣ್ಣ ಬದಲಿಸುತ್ತಿದ್ದ ದಿಗಂತದತ್ತ ಕಣ್ಣಾಗುತ್ತಾರೆ. ಕೆಲವೇ ನಿಮಿಷಗಳಲ್ಲಿ ಬೆಳಗಾಗುತ್ತದೆ.

ನೀಲಿ ಬಣ್ಣದ ವರ್ಣಚಿತ್ರಕ್ಕೆ ದಾರಿ ಮಾಡಿಕೊಡುವಂತೆ ಆಕಾಶ ತೆರೆದುಕೊಳ್ಳುತ್ತದೆ. ನೀರಲ್ಲಿ ಮಿಂದೆದ್ದು ಬಂದಂತೆ ಸೂರ್ಯ, ಕಪ್ಪಾದ ಬೆಟ್ಟಗಳ ಹಿಂದಿನಿಂದ ಪುಟಿದೇಳುತ್ತಾನೆ. ಜೋಸೆಫ್ ಆಶ್ಚರ್ಯದಿಂದ ನೋಡುತ್ತಾರೆ. ಸೂರ್ಯನ ಬೆಳಕು ಪ್ರಖರವಾದಂತೆ, ಅದರ ಶಕ್ತಿಯೆಲ್ಲವೂ ತನ್ನೊಳಗೆ ಇಳಿಯಲೆಂಬಂತೆ ಕಣ್ಣು ಮುಚ್ಚಿ ಮುಖ ಮೇಲೆ ಮಾಡುತ್ತಾರೆ. ತೆಳುವಾದ ಮೋಡಗಳನ್ನು ಛೇದಿಸಿಕೊಂಡು ಬರುವ ಸೂರ್ಯನ ಕಿರಣಗಳು, ಪ್ರಕಾಶಮಾನವಾದ ಸಹಸ್ರಾರು ಕೋಲ್ಮಿಂಚುಗಳಂತೆ ಆಫ್ರಿಕಾಕ್ಕೆ ಮೊದಲು ಬೆಳಕನ್ನು ಚೆಲ್ಲುತ್ತವೆ. ಇದು ಪ್ರತಿಬಾರಿ ಸಂಭವಿಸಿದಾಗಲೂ- ಆಕಾಶ ಮೋಡಗಳಿಲ್ಲದೆ ಸ್ವಚ್ಛವಾಗಿದ್ದಾಗಲೂ- ‘ಆಫ್ರಿಕಾ ಉದಯವಾಗುತ್ತಿದೆ!’ ಎಂಬ ತೀರ್ಮಾನಕ್ಕೆ ಜೋಸೆಫ್ ಬರುತ್ತಾರೆ.

ಮಂಜು ಮುಸುಕಿದ ಮೋಡಗಳು ನಿಧಾನವಾಗಿ ದೂರವಾದಂತೆ, ಎಲೆಗಳಿಂದ ತೂಗುವ, ತೊಟ್ಟಿಕ್ಕುವ ಇಬ್ಬನಿಯ ಸಾಲು ಸಾಲು ಹನಿಗಳು ಹೊಳೆಯುವಂತೆ ಸೂರ್ಯನ ಬೆಳಕು ಚೆಲ್ಲುತ್ತದೆ. ದೂರದಲ್ಲಿ ಹಲವಾರು ಸಣ್ಣ ಸಣ್ಣ ತೊರೆಗಳು ಬೆಳ್ಳಿಯ ತಗಡಿನಂತೆ ಹೊಳೆಯುತ್ತವೆ. ಈಗ, ಪರ್ವತ ತನ್ನ ನಿಜವಾದ, ಮೈರೋಮಾಂಚನಗೊಳಿಸುವ ಹಸಿರು ಸಂಪತ್ತನಿಂದ ಕಂಗೊಳಿಸುತ್ತದೆ. ದೂರ ದಿಗಂತದಲ್ಲಿ, ಹಿಂದೂ ಮಹಾಸಾಗರದ ಆಳವಾದ ನೀಲಿಬಣ್ಣ ಸ್ಪಷ್ಟವಾಗಿಯೇ ಗೋಚರಿಸುತ್ತದೆ. ಅದೆಲ್ಲವನ್ನೂ ಆಸ್ವಾದಿಸುತ್ತಾ ಜೋಸೆಫ್ ತಮ್ಮ ತೊಡೆಯ ಮೇಲೆ ತಾಳ ಹಾಕಿಕೊಳ್ಳುತ್ತಾರೆ.

ನಂತರ, ಊಟದ ಡಬ್ಬಿಯನ್ನು ತೆಗೆದುಕೊಂಡು ಬೇಕರಿಯ ದಾರಿ ಹಿಡಿಯುತ್ತಾರೆ.

ಬೇಕರಿಯ ಒಳಹೋಗುವ ಮುನ್ನ, ಮತ್ತೊಮ್ಮೆ ತಾನು ಕಂಡ ‘ತನ್ನ ಪ್ರಪಂಚ’ವನ್ನು ನೋಡುತ್ತಾರೆ. ಏಕೆಂದರೆ, ಒಮ್ಮೆ ಒಳಹೋದರೆ, ಆ ದಿನಕ್ಕೆ ಬೇಕಾದಷ್ಟು ಬ್ರೆಡ್ ಬೇಯಿಸುವವರೆಗೂ ಹೊರಗೆ ಬರಲಾಗುವುದಿಲ್ಲವೆಂದು ಅವರಿಗೆ ಗೊತ್ತಿದೆ. ಅವರ ಕಣ್ಣಳತೆಯಲ್ಲಿ ಮರಗಳು, ಉಷ್ಣವಲಯದ ಸಸ್ಯವರ್ಗಗಳಿಂದ ಕೂಡಿದ ದಟ್ಟವಾದ ಕಣಿವೆ, ನಡುವೆ ಅವರು ಸಾಗಿಬಂದ ದಾರಿ, ಪಟ್ಟೆಪಟ್ಟೆಯಾಗಿ ಕಾಣುವ ಬಾಳೆ ಮತ್ತು ಕಬ್ಬಿನ ತೋಟಗಳು ಕಂಗೊಳಿಸುತ್ತಿವೆ. ಅವರು ನಿಂತಿದ್ದಲ್ಲಿಗೇ. ದೂರ ಕೆಳಗೆ, ತನ್ನ ಹಳ್ಳಿಯಲ್ಲಿ ಹೆಂಗಸರು ಆಗ ತಾನೆ ಹೊತ್ತಿಸಿದ ಬೆಂಕಿಯ ಕಾರಣದಿಂದ ಮೇಲೇಳುತ್ತಿದ್ದ ಹೊಗೆಯ ಸಣ್ಣ ಸಣ್ಣ ಸುರಳಿಗಳು ಗೋಚರಿಸುತ್ತವೆ. ಮಕ್ಕಳು ಬಯಲಿನಲ್ಲಿ ಆಟವಾಡುತ್ತಿರುವುದೂ ಕಾಣುತ್ತದೆ. ನಂತರ ಅವರ ಕಣ್ಣುಗಳು ‘ಬಿಳಿನಗರ’ ಇರುವ ದೂರದ ಕಡೆಗೆ, ಮೇಲಕ್ಕೆ ಚಲಿಸುತ್ತವೆ; ಬಿಳಿನಗರದ ಕಟ್ಟಡಗಳು ಮತ್ತು ಅದನ್ನಾವರಿಸಿದ್ದ ಹೊಗೆ ದಿನದ ಸೊಬಗನ್ನೇ ಮಸುಕಾಗಿಸಿದ್ದವು!

ADVERTISEMENT

ಈಗ ಕೆಲಸದ ಸಮಯ.
ಇಂದು ಶುಕ್ರವಾರ. ಸುಮಾರು 700 ಮೈಲಿ ದೂರದ ಜೋಹಾನ್ಸ್‌ಬರ್ಗ್‌ನಿಂದ ಬಂದ ಅತಿಥಿಗಳ ಸತ್ಕಾರಕ್ಕಾಗಿ, ‘ಬಿಳಿನಗರ’ದಲ್ಲಿರುವ ಹೋಟೆಲ್, ಎರಡು ಪಟ್ಟು ಬ್ರೆಡ್‌ಗೆ ಆರ್ಡರ್ ಕೊಟ್ಟಿದ್ದ ಕಾರಣ, ದುಪ್ಪಟ್ಟು ಕೆಲಸ ಮಾಡಬೇಕಾಗುತ್ತದೆ ಎಂಬುದು ಜೋಸೆಫ್‌ಗೆ ತಿಳಿದಿತ್ತು. ನಿಖರವಾಗಿ ಐವತ್ತೈದು ಲೋಫ್ ಬ್ರೆಡ್ ಅನ್ನು ಮಧ್ಯಾಹ್ನದ ಹೊತ್ತಿಗೆ ಸರಿಯಾಗಿ ತಲುಪಿಸಬೇಕಾಗಿತ್ತು. ಒಂದು ಲೋಫ್‌ಗೆ ಹದಿನೈದು ಸೆಂಟ್‌ಗಳ ಬೆಲೆ. ಹಲವಾರು ಪೀಳಿಗೆಗಳಿಂದ, ತಂದೆಯಿಂದ ಮಗನಿಗೆ ಬಂದಿದ್ದ, ಅದೇ ಸಾಮಗ್ರಿ-ಪಾಕವಿಧಾನವನ್ನು ಬಳಸಿಕೊಂಡೂ, ಬ್ರೆಡ್ಡಿನ ಗುಣಮಟ್ಟ ಉತ್ತಮಗೊಂಡಿದ್ದರೂ, ಬೆಲೆ ಮಾತ್ರ ಎಂದಿಗೂ ಬದಲಾಗಿರಲಿಲ್ಲ!

ಜೋಸೆಫ್ ತನ್ನ ದಿನದ ಕೆಲಸ ಮುಗಿಸುವ ಹೊತ್ತಿಗೆ, ಬೇಯಿಸಿದ ಬ್ರೆಡ್‌ನ ಪರಿಮಳ ಬೇಕರಿಯೊಳಗಿನ ಗಾಳಿಯಲ್ಲಿ ದಟ್ಟವಾಗಿರುತ್ತದೆ. ಶತಮಾನಗಳಲ್ಲದಿದ್ದರೂ, ಹಲವಾರು ವರ್ಷಗಳಿಂದ ಬಿಳಿಯ ಗೋಡೆಗಳ ಬಿರುಕುಗಳೆಲ್ಲಾ ಆ ಸುವಾಸನೆಯನ್ನು ತುಂಬಿಸಿಕೊಂಡು ಮುಚ್ಚಿಹೋಗಿವೆ!

ಕಾಳು ಬಿಡಿಸಿದ ಜೋಳದ ದಿಂಡುಗಳನ್ನು ಒಣಗಲು ಹೊರಗೆ ಹಾಕಲಾಗಿತ್ತು. ಅವುಗಳನ್ನೊಂದಿಷ್ಟು ತುಂಬಿಸಿಕೊಂಡ ಜೋಸೆಫ್‌, ಜೊತೆಗೆ ಒಂದಷ್ಟು ಕಬ್ಬಿನ ಸಿಪ್ಪೆಯನ್ನೂ ಹಿಡಿದು ಬಂದರು. ಅವರೆಡೂ, ಕೈಯಿಂದ ಮಾಡಿದ ಮಣ್ಣಿನ ಒಲೆಯನ್ನು ಉರಿಸಲು ಅವರಿಗೆ ಅಗತ್ಯವಿದ್ದ ಸೌದೆ! ಒಮ್ಮೆ ಸರಿಯಾಗಿ ಬೆಂಕಿ ಹೊತ್ತಿಸಿದ ನಂತರ, ಜೋಸೆಫ್ ನೀರು ತರಲು ಹತ್ತಿರದ ಬಾವಿಗೆ ಹೊರಡುತ್ತಾರೆ.

ಬೆಂಕಿ ಚೆನ್ನಾಗಿ ಉರಿಯುತ್ತಿದ್ದಂತೆ, ತೃಪ್ತಿಯ ನಗು ಮುಖದಲ್ಲಿ ಮೂಡುತ್ತದೆ, ಸೌದೆಯ ಶಾಖವು ಗಂಟೆಗಳ ಕಾಲ ಉಳಿಯುತ್ತದೆ. ಅಂದರೆ, ಐವತ್ತೈದು ಲೋಫ್ ಮತ್ತು ಅವರ ಹಳ್ಳಿಯ ಮನೆಗಳಿಗೆ ಬ್ರೆಡ್ ತಯಾರಿಸಲು ಅದು ಬೇಕಾದಷ್ಟು ಆಗುತ್ತದೆ.

ಕಬ್ಬಿನ ಸಣ್ಣ ಸಣ್ಣ ಚಿಗುರುಗಳನ್ನು ನೆನೆಹಾಕಿದ್ದ, ನೀರು ತುಂಬಿದ್ದ ಪಾತ್ರೆಯನ್ನು ಮರದ ಮೇಜಿನ ಕೆಳಗೆ ಇರಿಸಲಾಗಿತ್ತು. ಜೋಸೆಫ್ ಅದಕ್ಕೆ ನಿಖರವಾದ ‘ಯೀಸ್ಟ್ಅ’ನ್ನು ಸೇರಿಸಿ, ಅದನ್ನು ಚೆನ್ನಾಗಿ ಮಿಶ್ರಣ ಮಾಡುತ್ತಾರೆ. ಹುದುಗು ಬರಲೆಂದು, ಸುಮಾರು ಆರು ನಿಮಿಷಗಳ ಕಾಲ ಪಾತ್ರೆಯನ್ನು ಕಿಟಕಿ ಕಟ್ಟೆಯ ಮೇಲಿಡುತ್ತಾರೆ. ಅದು ಹೆಚ್ಚು ಬಿಸಿಯಾಗುವುದನ್ನು ತಡೆಯಲು, ಪಾತ್ರೆಯನ್ನು ಕಾಡುಬಾಳೆಯ ಎಲೆಗಳಿಂದ ಮುಚ್ಚುತ್ತಾರೆ. ನಂತರ ಜೋಸೆಫ್, ಕರಾರುವಾಕ್ಕಾಗಿ ಹದಿನೆಂಟು ಹಿಡಿ ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ಉಪ್ಪನ್ನು ಸೇರಿಸಿ ಮೇಜಿನ ಒಂದು ಮೂಲೆಯಲ್ಲಿ ಇರಿಸುತ್ತಾರೆ. ನಂತರ ಮೊಟ್ಟೆಗಳನ್ನು ಒಡೆದು, ಆಲೀವ್ ಎಣ್ಣೆಯೊಂದಿಗೆ ಚೆನ್ನಾಗಿ ಬೆರೆಸುತ್ತಾರೆ. ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ. ತದನಂತರ ಅದರ ಸಿಹಿಯ ಮಿಶ್ರಣದೊಂದಿಗೆ ಯೀಸ್ಟ್ ಮಿಶ್ರಣವನ್ನು ಸೇರಿಸುತ್ತಾರೆ.

ಆ ಮಿಶ್ರಣವನ್ನು ಹಿಟ್ಟಿನೊಂದಿಗೆ ಸೇರಿಸಿ, ಕೈಗಳಿಂದ ಚೆನ್ನಾಗಿ ತಿರುಗಿಸುತ್ತಾರೆ. ಹಿಟ್ಟು ನಯವಾಗುವ ತನಕ ನಾದಬೇಕು. ಅದಕ್ಕಾಗಿ ಅದನ್ನು ಬೇಕರಿಯೊಳಗೇ ಬಿಸಿಲು ಬೀಳುವ ಜಾಗಕ್ಕೆ ಇಡುತ್ತಾರೆ. ಅದು ಚೆನ್ನಾಗಿ ಹುದುಗಿ ಬರಲು ಒಂದು ಗಂಟೆ ಸಮಯ ಬೇಕಾಗುತ್ತದೆ. ಆ ಸಮಯದಲ್ಲಿ ಮುಂದಿನ ಬಾರಿಗೆ ಬೇಕಾದ ಮಿಶ್ರಣ, ಹಿಟ್ಟು ಇತ್ಯಾದಿಗಳನ್ನು ಹೊಂದಿಸಲು ಪ್ರಾರಂಭಿಸುತ್ತಾರೆ. ನಡುವೆ ಹಿಟ್ಟು ಹುದುಗಿದೆಯೇ ಎಂಬುದನ್ನೂ ಆಗಾಗ ನೋಡುತಿರುತ್ತಾರೆ.

ಹಿಟ್ಟು ಚೆನ್ನಾಗಿ ಹುದುಗು ಬಂದಿದೆ ಎಂದು ಖಚಿತವಾಗುತ್ತದೆ. ಅವರು ತಪ್ಪು ಮಾಡಿದ್ದು ತೀರಾ ಅಪರೂಪ. ಜೋಸೆಫ್ ಹಿಟ್ಟನ್ನು ಅರ್ಧ ಚಂದ್ರಾಕೃತಿಗೆ ಹೊಂದಿಸಲಾರಂಭಿಸಿದಂತೆ, ಸಮಯ ಬೇಗನೆ ಕಳೆದುಹೋಗುತ್ತದೆ. ಬಿಳಿನಗರದ ಹೋಟೆಲ್‌ನಿಂದ ಬೇಡಿಕೆಯಿರುವ ಅಷ್ಟೂ ಬ್ರೆಡ್ ಮಧ್ಯಾಹ್ನದ ಗಡುವಿನ ಮುಂಚೆಯೇ ಒಲೆಯಿಂದ ಹೊರಬಂದಿರುತ್ತವೆ.


ಬೇಕರಿಯ ಹೊರಗೆ ತಾಳ್ಮೆಯಿಂದ ಕುಳಿತು ಹಳ್ಳಿಯ ಮಕ್ಕಳು ಕಾಯುತ್ತಿದ್ದರು. ಆರು ಮೈಲುಗಳಷ್ಟು ದೂರದ ಹೋಟೆಲ್‌ಗೆ ಬ್ರೆಡ್ ಒಯ್ಯಲು ಜೋಸೆಫ್‌ಗೆ ಸಹಾಯ ಮಾಡಲೆಂದು ಅವರು ಬಂದಿದ್ದರೂ, ಸುಸಂಬದ್ಧವಾಗಿ ದಡಕ್ಕೆ ಅಪ್ಪಳಿಸುತ್ತಿದ್ದ ತೆರೆಗಳ, ಬಿಳಿಯರು ಮಾತ್ರ ಸ್ನಾನ ಮಾಡುತ್ತಿದ್ದ ಸ್ವಚ್ಛವಾದ ಕಡಲದಂಡೆಯನ್ನು ಧ್ಯಾನಿಸುತ್ತಿದ್ದರು.

ಬಾಗಿಲು ತೆರೆಯಿತು.

‘ಹತ್ತು ಲೋಫ್ ನಿನಗೆ... ನಿನಗೆ ಎಂಟು... ನಿನಗೆ ಮೂರು ಸಾಕು... ನೀನು ಸ್ವಲ್ಪ ದೊಡ್ಡವನಾಗುವವರೆಗೂ ಕಾಯಪ್ಪಾ. ಆಗ ನೀನು ಹೆಚ್ಚು ಹೊರಬಹುದು’. ಒಬ್ಬರ ಹಿಂದೆ ಒಬ್ಬರು... ಆಟದ ಉತ್ಸಾಹದಲ್ಲಿ, ನಾಯಕ ಜೋಸೆಫ್ ಹಿಂದೆ ಮೆರವಣಿಗೆ ಸಾಗುತ್ತದೆ. ತಮ್ಮ ಕುಟುಂಬಗಳನ್ನು ಪೋಷಿಸಲು ಬೇರೆ ಬೇರೆ ಕಡೆ ಕೆಲಸಕ್ಕೆ ಹೋಗವ ತನ್ನ ಹಳ್ಳಿಯ ಹೆಂಗಸರು ಬ್ರೆಡ್ಡಿಗಾಗಿ ಕಾಯುತ್ತಿದ್ದರು. ಅವರಿಗೆ ಹೆಚ್ಚುವರಿ ಬ್ರೆಡ್ಡನ್ನು ಕೊಟ್ಟು, ಹಳ್ಳಿಯ ಮೂಲಕ ಸಾಗಿದ ಮೆರವಣಿಗೆಯು, ನಗರಕ್ಕೆ ಹೋಗುವ ಮುಖ್ಯ ರಸ್ತೆಗೆ ಸೇರಲು ಕಾಡಿನ ಮಾರ್ಗದಲ್ಲಿ ಮುಂದುವರಿಯುತ್ತದೆ.
ಮಧ್ಯಾಹ್ನದ ಹೊತ್ತಿಗೆ, ಅವರು ಹೋಟೆಲ್‌ನ ಹಿಂಭಾಗದ ಪ್ರವೇಶದ್ವಾರದಲ್ಲಿ ಸೇರಿ, ಬ್ರೆಡ್ ಪರಿಶೀಲನೆಗಾಗಿ ಹೋಟೆಲ್ ಮಾಲೀಕರನ್ನು ಕಾಯುತ್ತಿದ್ದರು - ‘ಬ್ರೆಡ್‌ಗೆ ಎಂದಾದರೂ ತಪಾಸಣೆ ಅಗತ್ಯವಿದೆಯೇ?’ ಆದರೆ ಜೋಸೆಫ್‌ಗೆ ಮಾರಾಟದ ವಿಧಿವಿಧಾನಗಳು ಚೆನ್ನಾಗಿ ಗೊತ್ತಿದ್ದವು. ತನ್ನ ತಂದೆ ಮತ್ತು ಚಿಕ್ಕಪ್ಪನಂತೆಯೇ ಅನೇಕ ವರ್ಷಗಳಿಂದ ಅದನ್ನವರು ಅರಿತಿದ್ದರು.

‘ಜೋಸೆಫ್!’ ‘ಹಾಲಿಡೇ ಹೈಟ್ಸ್’ ಎಂಬ ಎರಡು ನಕ್ಷತ್ರಗಳ ಹೋಟೆಲ್‌ನ ಮಾಲೀಕ ಪಿಕ್ ವಾನ್, ತನ್ನ ಕಠೋರವಾದ ಆದರೆ ಸ್ನೇಹಪರವಾದ ಧ್ವನಿಯಲ್ಲಿ ಕೂಗಿದರು. "ಬ್ರೆಡ್ ತುಂಬಾ ಚೆನ್ನಾಗಿರಬೇಕು; ಇಲ್ಲದಿದ್ದರೆ ನಾನದನ್ನು ತೆಗೆದುಕೊಳ್ಳುವುದಿಲ್ಲ" ಎನ್ನುತ್ತಾ, ಒಂದು ತುಂಡನ್ನು ಮುರಿದು ಬಾಯಿಗೆ ಹಾಕಿಕೊಂಡು ಅಗಿಯತೊಡಗಿದರು. ತನ್ನ ಟೋಪಿಯನ್ನು ತನ್ನೆದೆಗೆ ಆನಿಸಿ ಹಿಡಿದು ನಿಂತಿದ್ದ ಜೋಸೆಫ್, ಮಾಲೀಕರ ಉತ್ತರ ಮತ್ತು ಹಣದ ಪಾವತಿಗಾಗಿ ಕಾಯುತ್ತಿದ್ದರು.

"ಹುಂ... ಇದು ಸಕ್ಕತ್ತಾಗಿದೆ, ಮಗಾ! ರುಚಿ ಚೆನ್ನಾಗಿದೆ. ನೀನು ಅದನ್ನು ಹೇಗೆ ಮಾಡುತ್ತೀಯ ಎಂದು ನನಗೆ ತಿಳಿದಿಲ್ಲ. ಆದರೆ ಜೋಸೆಫ್, ಇಲ್ಲಿ ಕೇಳು, ಎಚ್ಚರಿಕೆಯಿಂದ... ಒಂದು ಮುಖ್ಯವಾದ ವಿಷಯ... ನೀನು ಕೇಳುತ್ತಿದ್ದೀಯಾ? ಇನ್ನು ಮೇಲೆ ನನಗೆ ನಿನ್ನ ಬ್ರೆಡ್ ಬೇಡ! ಬ್ಲೋಮ್‌ಫಾಂಟೈನ್‌ನಿಂದ ಒಬ್ಬ ಬೇಕರ್ ಪಟ್ಟಣಕ್ಕೆ ಬಂದಿದ್ದಾನೆ. ಮುಂದೆ ನಾವು ಅವನಿಂದ ಖರೀದಿಸಲಿದ್ದೇವೆ. ಆದ್ದರಿಂದ ಜೋಸೆಫ್, ಇನ್ನು ನಿನ್ನ ದಾರಿ ನೀನು ನೋಡಿಕೊಳ್ಳಬೇಕಾಗುತ್ತದೆ.''


ಹೋಟೆಲ್‌ನ ಹಿಂದಿನ ಪ್ರವೇಶದ್ವಾರದ ಬಾಗಿಲು ಮುಚ್ಚಿತು. ಜೋಸೆಫ್ ಶೂನ್ಯವನ್ನೇ ದಿಟ್ಟಿಸುತ್ತಾ, ಗೊಂದಲಕ್ಕೊಳಗಾದರು. ಪಿಕ್ ವಾನ್ ಕೊಟ್ಟಿದ್ದ, ಅಂದಿನ ಅವರ ಸಂಪಾದನೆಯ ಹಣವನ್ನು ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದಿದ್ದರು. ಅವರ ಕಣ್ಣುಗಳು ಸೊಂಪಾಗಿ ಹೊಳೆಯುತ್ತಿದ್ದವಾದರೂ ಗಾಯಗೊಂಡಂತೆ ಕೆಂಪಾಗಿದ್ದವು. ಮಕ್ಕಳು ಒಬ್ಬರನ್ನೊಬ್ಬರು ಓಡಾಡಿಸಿ ಆಟವಾಡುತ್ತಿದ್ದರು. ಅವರು ಮನೆಗೆ ಹಿಂದಿರುಗಲು ತಮ್ಮ ಹಿರಿಯನಿಗಾಗಿ ಕಾಯುತ್ತಿದ್ದರು.
ಸಂಪ್ರದಾಯದ ಭಾಗವಾಗಿ ಮಾರ್ಪಟ್ಟಿದ್ದ ಎಲ್ಲವೂ, ಬಹಳ ಕಾಲದಿಂದಿದ್ದ ಸಜ್ಜನರ ಒಪ್ಪಂದ ಮುರಿದುಹೋಗಿ, ಇದ್ದಕ್ಕಿದ್ದಂತೆ ಮುಚ್ಚಿದ ಪುಸ್ತಕವಾಗಿತ್ತು. ‘ಬಿಳಿಯ ಬೇಕರ್ ಒಬ್ಬ ಪಟ್ಟಣಕ್ಕೆ ಬರುತ್ತಾನೆ’ ಎಂಬ ಹೆದರಿಕೆ ಅವರಿಗಿತ್ತಾದರೂ, ಅದು ಇಷ್ಟು ಬೇಗ ಆಗುತ್ತದೆ ಎಂದುಕೊಂಡಿರಲಿಲ್ಲ. ಅಷ್ಟಕ್ಕೂ ಅವರೊಬ್ಬ ಕರಿಯ ಮತ್ತು ಅವರ ಪ್ರವೇಶ ಹೋಟೆಲ್ಲಿನ ಹಿಂಬದಿಯ ಪ್ರವೇಶದ್ವಾರದವರೆಗೆ ಮಾತ್ರ ಎಂದೂ ಗೊತ್ತಿತ್ತು. ಅವರ ಪ್ರಮುಖ ಗ್ರಾಹಕರಾಗಿದ್ದ ಪಿಕ್ ವಾನ್ ಮತ್ತು ಅವರಿಂದ ಬ್ರೆಡ್‌ಗಾಗಿ ನಿಯಮಿತವಾಗಿ ಬರುತ್ತಿದ್ದ ಆರ್ಡರ್‌ಗಳು, ಅವರ ಹಳ್ಳಿಯ ಜನರಿಗೆ ತುಂಬಾ ಅಗತ್ಯವಾಗಿ ಬೇಕಾಗಿದ್ದ ವಸ್ತುಗಳನ್ನು ಖರೀದಿಸಲು ಸಹಾಯ ಮಾಡುತ್ತಿದ್ದವು.

ಜೋಸೆಫ್, ತಾನು ರಾತ್ರಿ ತಡವಾಗಿ ಬರುತ್ತೇನೆಂದು ಮನೆಯಲ್ಲಿ ಹೇಳುವಂತೆ ಸೂಚಿಸಿ, ಮಕ್ಕಳನ್ನು ಮನೆಗೆ ಕಳಿಸಿ, ಹೋಟೆಲ್‌ನ ಮುಂಭಾಗಕ್ಕೆ ಬಂದರು. ಹೊರಭಾಗದ ತೊಲೆಗಳಿಗೆ ತಾಜಾ ಗುಲಾಬಿ ಬಣ್ಣ, ಕಿಟಿಕಿಯ ಪಟ್ಟಿಗಳಿಗೆ ಗಾಢ ನೀಲಿಬಣ್ಣ ಬಳಿಯಲಾಗಿತ್ತು. ಮೆಟ್ಟಿಲುಗಳನ್ನು ಹತ್ತಿ ವರಾಂಡಕ್ಕೆ ಬಂದ ಅವರು, ಅಲ್ಲಿ ಊಟಕ್ಕೆ ಕುಳಿತಿದ್ದ ಅತಿಥಿಗಳನ್ನು ನೋಡಿದರು. ಅವರು ಮಾತನಾಡುತ್ತಿರುವುದನ್ನು ಜೋಸೆಫ್ ಮೌನವಾಗಿ ವೀಕ್ಷಿಸಿದರು. ಕೆಲವರು ತಮ್ಮ ಬ್ರೆಡ್ ಅನ್ನು ಕತ್ತರಿಸಿ, ಪ್ರತಿ ತುಂಡಿಗೂ, ಅದರ ಮೂಲೆ ಮೂಲೆಗೂ ಸಾಕಷ್ಟು ದಪ್ಪಕ್ಕೆ ಬರುವಂತೆ ಉದಾರವಾಗಿ ಬೆಣ್ಣೆ ಸವರುತ್ತಿದ್ದರು. ಕೆಲವರು ಕಣ್ಣು ಮುಚ್ಚಿ ತಿನ್ನುತ್ತಿದ್ದುದನ್ನು, ಮತ್ತೂ ಕೆಲವರು ಎರಡನೆಯದಕ್ಕೆ ಕೈ ಹಾಕುತ್ತಿದ್ದುದನ್ನು ಜೋಸೆಫ್ ನೋಡಿದರು.

ಜೋಸೆಫ್ ತಾವು ಮಾಡಿದ ಬ್ರೆಡ್ಡನ್ನು, ತನ್ನ ಹಳ್ಳಿಯ ಜನರನ್ನು ಹೊರತುಪಡಿಸಿ ಬೇರೆಯವರು ತಿನ್ನುವುದನ್ನು ನೋಡಿದ್ದು ಅದೇ ಮೊದಲ ಬಾರಿ!

ಊಟದ ಕೋಣೆಯ ಹಿಂಭಾಗದಲ್ಲಿ ಒಂದು ಮೇಜಿನ ಬಳಿ ಮಾಲೀಕರು, ಅತಿಥಿಯೊಬ್ಬರ ಭುಜದ ಮೇಲೆ ಕೈಹಾಕಿ ನಿಂತಿದ್ದರು. ಇಬ್ಬರೂ ನಗುತ್ತಿದ್ದರು. ಆಕಸ್ಮಿಕವಾಗಿ ಮಾಲೀಕರು ಜೋಸೆಫ್ ನಿಂತಿದ್ದ ಕಡೆಗೆ ನೋಡಿಯೋ ನೋಡದವರಂತೆ, ಮುಂದಿದ್ದ ಅತಿಥಿಗಳೆಡೆಗೆ ತಿರುಗಿ, ಮತ್ತೆ ಪಕ್ಕಕ್ಕೆ ತಿರುಗಿ ನಡೆದರು. ಜೋಸೆಫ್ ಹೋಟೆಲ್ಲಿನಿಂದ ಹೊರನಡೆದರು.


ಪಟ್ಟಣವು ಚಿಕ್ಕದಾಗಿದ್ದು ಹೆಚ್ಚು ರಸ್ತೆಗಳಿಲ್ಲದೆ ಕೇವಲ ಒಂದೇ ಒಂದು ಮುಖ್ಯ ಬೀದಿಯನ್ನು ಹೊಂದಿತ್ತು. ಜೋಸೆಫ್ ಬೀದಿಯಲ್ಲಿ ನಡೆಯತೊಡಗಿದರು. ಪಟ್ಟಣದ ಜನರಿಗೆ ಜೋಸೆಫ್ ಪರಿಚಯವಿದ್ದುದರಿಂದ, ಎದುರಾದವರು ಮಾತನಾಡಿಸಿದರು. ಜೋಸೆಫ್ ಹೊಸ ಬೇಕರಿಯ ಹೊರಗೆ ನಿಂತರು. ಸ್ವಚ್ಛವಾಗಿಹೊಳೆಯುತ್ತಿದ್ದ, ಗಾಜಿನ ಕಪಾಟಿನಲ್ಲಿ ಹೊಸದಾಗಿ ಬೇಯಿಸಿದ ಬ್ರೆಡ್ ಮತ್ತು ಕೇಕ್ ತುಂಬಿದ್ದರು. ಮಾಲೀಕನ ಒಬ್ಬ ಮಗ ಬ್ರೆಡ್ ಪ್ಯಾಕ್ ಮಾಡುತ್ತಿದ್ದಾಗ, ಮಾಲೀಕ ತನ್ನ ಕೆಲವು ಗ್ರಾಹಕರೊಂದಿಗೆ ಹರಟೆ ಹೊಡೆಯುತ್ತಿದ್ದನು. ಮತ್ತೊಬ್ಬ ಮಗನೂ ಕೆಲಸ ಮಾಡುತ್ತಿದ್ದನು.
ಜೋಸೆಫ್ ಒಳಗೆ ಕಾಲಿಟ್ಟರು- ಅದೂ ಬೇರೆಯದೇ ಜಗತ್ತಿಗೆ! ಆದರೆ ಅವರಿಗೆ ಚೆನ್ನಾಗಿ ತಿಳಿದಿತ್ತು, ತಮ್ಮನ್ನು ಆಕರ್ಷಿಸುವ ಪರಿಮಳದ ಒಳಗೆ ಸಿಕ್ಕಿಹಾಕಿಕೊಂಡೂ ಹೊರಬರುವುದು ಅವರಿಗೆ ಗೊತ್ತಿತ್ತು. ಎಲ್ಲವೂ ಕೌಂಟರ್, ಒಲೆ, ಗಾಜಿನ ಕಪಾಟು, ಎಲ್ಲವೂ ಸ್ವಚ್ಛವಾಗಿದ್ದು, ಒಮ್ಮೆ ಭೇಟಿ ನೀಡಿದ ‘ಆಸ್ಪತ್ರೆ’ಯನ್ನೂ ಮತ್ತದರ ‘ವಾಸನೆ’ಯನ್ನೂ ನೆನಪಿಸುತ್ತಿದ್ದವು!

"ನಿನಗೆ ಏನು ಬೇಕು?" ಮಾಲೀಕನ ಮಗ ಒರಟಾಗಿ ಕೇಳಿದ. ಜೋಸೆಫ್ ತಿರುಗಿ, ಒಂದು ಲೋಫ್ ಬ್ರೆಡ್ ತೆಗೆದು ಅದನ್ನು ಕೌಂಟರ್ ಮೇಲೆ ಇಟ್ಟರು. ತಕ್ಷಣ, ಇಡೀ ಬೇಕರಿಯೇ ಯಾಂತ್ರೀಕೃತಗೊಂಡಂತೆ, ಮಗ ಗುಡುಗುಸಹಿತವಾಗಿ ಜೋಸೆಫ್‌ಗೆ ಮತ್ತೆ ಕಪಾಟನ್ನು ಮುಟ್ಟದಂತೆ ಆದೇಶಿಸಿತ್ತಾ, "ಕಾಫಿರ್ ಮಗನೆ, ನಿನಗೆ ಬ್ರೆಡ್ ಬೇಕಾ? ನೀನು ಬಾಗಿಲು ತಟ್ಟಿ ಕೇಳಬೇಕು. ಆಗ ಕೊಡುವ ಬಗ್ಗೆ ನಾನು ಯೋಚಿಸುತ್ತೇನೆ. ಈಗ ಮೂವತ್ತು ಸೆಂಟ್‌ಗಳನ್ನು ನೀಡಿ ತೊಲಗು."

ಪ್ಯಾಕ್ ಕೂಡಾ ಇಲ್ಲದೆ, ಜೋಸೆಫ್ ಹೊರಬಂದರು. ಹೊರಗೆ ಎಲ್ಲವೂ ಹಾಗೆಯೇ ಇತ್ತು.

"ಜೋಸೆಫ್ ಚೆನ್ನಾಗಿದ್ದೀಯಾ? ಹೋ... ಜೋಸೆಫ್, ಹಳ್ಳಿ ಹೇಗಿದೆ?" ಎದುರಿಗೆ ಸಿಕ್ಕವರು ಕೇಳುತ್ತಲೇ ಇದ್ದರು.
ಥಳಕುಬೆಳಕಿನ ಬೇಕರಿಯಿಂದ ಹೊರಬಿದ್ದು ನಡೆಯುತ್ತಾ ಬಂದ ಜೋಸೆಫ್ ಬೀದಿಯುದ್ದಕ್ಕೂ ಮೌನವಾಗಿದ್ದರು. ಬ್ರೆಡ್ಡಿಂದ ಒಂದು ತುಂಡನ್ನು ತೆಗೆದು ತಿನ್ನುವಾಗ ಅವರ ಕಣ್ಣಲ್ಲಿ ನೀರು ಬಂತು. ಸುಮಾರು ಐದು ವರ್ಷಗಳ ಹಿಂದೆ, ಅವರ ತಂದೆ ಸತ್ತ ನಂತರ ಮೊದಲ ಬಾರಿಗೆ, ಅವರು ತನ್ನ ತಂದೆಯ ಮಾತುಗಳನ್ನು ನೆನಪಿಸಿಕೊಂಡು ಅಳುತ್ತಾರೆ, "ಮಗನೇ, ಬೆಟ್ಟದ ತುದಿಯಲ್ಲಿರುವ ಬೇಕರಿ ಈಗ ನಿನ್ನದಾಗಿದೆ, ಬ್ರೆಡ್ ಮಾಡುವುದನ್ನು ನಿನ್ನ ಮಕ್ಕಳಿಗೆ ಕಲಿಸು. ಅವರು ತಮ್ಮ ಮಕ್ಕಳಿಗೆ ಕಲಿಸಬಹುದು ಮತ್ತು ಅವರು ನಮ್ಮ ಹಳ್ಳಿಯ ಜೀವನವನ್ನು ಉಳಿಸಿಕೊಳ್ಳಬಹುದು." ಆ ಮಾತುಗಳೊಂದಿಗೇ ತನ್ನ ತಂದೆ ತನ್ನ ಮಡಿಲಲ್ಲಿಯೇ ಅವರ ಕೊನೆಯುಸಿರು ಎಳೆದಿದ್ದನ್ನು ಜೋಸೆಫ್ ಕಂಡಿದ್ದರು.

ವಾರಗಟ್ಟಲೆ ಜೋಸೆಫ್ ಸುಮ್ಮನೆ ಕುಳಿತುಕೊಳ್ಳುತ್ತಿದ್ದರು. ಕೆಲವೊಮ್ಮೆ ಬೆಟ್ಟವನ್ನು ದಿಟ್ಟಿಸುತ್ತಿದ್ದರು. ಈಗ, ‘ಆಫ್ರಿಕೋದಯ’ದ ವೈಭವವನ್ನು ಆನಂದಿಸಲು ಸೂರ್ಯೋದಯಕ್ಕೆ ಮುಂಚಿತವಾಗಿ ಎಚ್ಚರಗೊಳ್ಳುವ ಅಗತ್ಯವಿರಲಿಲ್ಲ. ಅದು ಒಂದು ಕಾಲದಲ್ಲಿ ಅವರಿಗೆ ಬಲ ನೀಡುತ್ತಿತ್ತು. ಆದರೆ ಈಗ, ಅದು ಅವರಿಗೆ ಮುಖ್ಯವಲ್ಲ ಎಂದು ತೋರುತ್ತಿದೆ. ಹೆಚ್ಚಾಗಿ ಅವರು ತಮ್ಮ ಗುಡಿಸಲಿನಲ್ಲಿ ಮಲಗಿರುವುದನ್ನು ಕಾಣಬಹುದು. ಒಮ್ಮೊಮ್ಮೆ, ಬೆಳಿಗ್ಗೆ ಬೆಂಕಿಗೆ ಬೇಕಾಗಿದ್ದ ಕಟ್ಟಿಗೆ ತರಲು ಅವರ ಹೆಂಡತಿಗೆ ಎಲ್ಲಿಸ್‌ಗೆ ಸಹಾಯ ಮಾಡುತ್ತಾರೆ. ಹಳ್ಳಿಯ ಜನ ಅವರ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ.

ಒಂದು ದಿನ, ಜೋಸೆಫ್ ಗಾಢ ನಿದ್ರೆಯಲ್ಲಿದ್ದಾಗ, ಗುಡಿಸಲಿನ ಹೊರಗೆ ಉಂಟಾದ ಹಠಾತ್ ಗದ್ದಲವು ಅವರನ್ನು ಎಚ್ಚರಗೊಳಿಸಿತು. "ಬೇಕರ್ ಜೋಸೆಫ್ ಎಲ್ಲಿದ್ದಾನೆ?" ಕಿವಿಗಪ್ಪಳಿಸಿದ ಧ್ವನಿಯನ್ನು ಜೋಸೆಫ್ ತಕ್ಷಣವೇ ಗುರುತಿಸಿದರು. ಬಿಳಿನಗರದಲ್ಲಿರುವ ಹೋಟೆಲ್ ಮಾಲೀಕ ಪಿಕ್ ವಾನ್! ನಾನೀಗ ಅವನೊಂದಿಗೆ ಮಾತನಾಡಲು ಬಯಸುತ್ತೇನೆ!''
ಅರೆನಿದ್ರೆಯಲ್ಲಿದ್ದ ಜೋಸೆಫ್, ಬಂದವರನ್ನು ಸ್ವಾಗತಿಸಲು ಎದ್ದು ಬಿದ್ದು ಹೊರಬಂದರು.

ಇದೇ ಮೊದಲ ಸಲ, ಬಿಳಿಯನೊಬ್ಬ ಹಳ್ಳಿಗೆ ಕಾಲಿಟ್ಟಿದ್ದ!

‘‘ನೋಡು ಜೋಸೆಫ್, ನನ್ನ ಅತಿಥಿಗಳು, ಪಟ್ಟಣದಲ್ಲಿ ಹೊಸ ಬೇಕರ್‌ನಿಂದ ನಾವು ಖರೀದಿಸುತ್ತಿರುವ ಬ್ರೆಡ್ ಬಗ್ಗೆ ದೂರು ನೀಡುತ್ತಿದ್ದಾರೆ. ಹೆಚ್ಚಿನವರು ನಿನ್ನ ಬ್ರೆಡ್ಡಿಗೇ ಆದ್ಯತೆ ನೀಡುತ್ತಿದ್ದಾರೆ. ನಾನು ನಿನ್ನಿಂದ ಮಾತ್ರ ಖರೀದಿಸಲು ನಿರ್ಧರಿಸಿದ್ದೇನೆ. ನಾನು ಹೊಸ ಬೇಕರ್‌ಗೆ ಅವನ ಬ್ರೆಡ್ ನನಗೆ ಬೇಡ ಎಂದು ಹೇಳಿದ್ದೇನೆ. ಶುಕ್ರವಾರ ಮಧ್ಯಾಹ್ನ, ಐವತ್ತೈ ದು ಲೋಫ್ ಬ್ರೆಡ್ ಬೇಕು. ತಡ ಮಾಡಬೇಡ ಮತ್ತೆ" ಎಂದು ಹೋಟೆಲ್ ಮಾಲೀಕರು ಮುಗುಳ್ನಕ್ಕು ಹೊರಟರು.
ಹಳ್ಳಿಯಲ್ಲಿ ಸಂತೋಷದ ಕುಣಿತ, ಹಾಡುಗಳು ಶುರುವಾಗಿದ್ದವು. ಜೋಸೆಫ್ ತನ್ನ ಕಣ್ಣುಗಳನ್ನು ಉಜ್ಜಿಕೊಂಡರು. "ಇಂದು ಗುರುವಾರ. ಶುಕ್ರವಾರ ಕಠಿಣ ಕೆಲಸ ಇರುತ್ತದೆ."

ಆ ರಾತ್ರಿ ಆಕಾಶವು ಸ್ಪಷ್ಟವಾಗಿತ್ತು. ನಕ್ಷತ್ರಗಳು ಪ್ರಕಾಶಮಾನವಾಗಿದ್ದವು. ಚಂದ್ರನು ಕಣಿವೆಯ ಆಳವನ್ನು ಬೆಳಗಿ, ದೂರದ ಸಾಗರವನ್ನು ಬೆಳಗಿಸುತ್ತಿದ್ದಾನೆ. ಹಳ್ಳಿಯ ಮೂಲಕ ಹಾದುಹೋಗುತ್ತಿದ್ದ ಹೊಗೆಯು ಕಣಿವೆಯ ಕೆಳಭಾಗಕ್ಕೆ ಕೆಳಮುಖವಾಗಿ ಚಲಿಸುತ್ತಿದ್ದಂತೆ ಗ್ರಾಮವು ಶಾಂತಿಯುತವಾಗಿ ನಿದ್ರಿಸುತ್ತಿತ್ತು.

ನಡುರಾತ್ರಿ ಕಿರುಚಾಟ ಪ್ರಾರಂಭವಾಯಿತು.

‘‘ಬೇಕರಿಗೆ ಬೆಂಕಿ ಬಿದ್ದಿದೆ, ಜೋಸೆಫ್... ಬೆಟ್ಟದ ಮೇಲೆ... ಬೇಕರಿಗೆ ಬೆಂಕಿ ಬಿದ್ದಿದೆ.... ಜೋಸೆಫ್ ಬೇಗ ಬಾ!''
ತನ್ನ ಬೇಟೆಯನ್ನು ಹಿಡಿಯಲು ಹೊರಟ ಚಿರತೆಯಂತೆ, ಜೋಸೆಫ್ ಬೇಕರಿಯ ಏರು ದಾರಿಯನ್ನು ಹತ್ತತೊಡಗಿದರು. ಕುಳಿತು ಆಫ್ರಿಕೋದಯದ ಕನಸು ಕಾಣುತ್ತಿದ್ದ ಕುರ್ಚಿಯಾಕಾರದ ಬಂಡೆಯನ್ನು ದಾಟಿ, ತನ್ನ ಕಾಲುಗಳಿಗೆ ಗಾಯವಾದರೂ, ಉಸಿರುಗಟ್ಟಿ, ಕೆಂಪು ಉರಿಯ ಕಡೆಗೆ ಓಡಿದರು. ಅವರ ಬೇಕರಿಯನ್ನಿಡೀ ಆವರಿಸಿದ್ದ ಬೆಂಕಿಯೀಗ ಜೋರಾಗಿ ಉರಿಯುತ್ತಿದೆ; ಬೇಕರಿ ಮುರಿದು, ಮದುರಿ ಸಾಯುತ್ತಿದೆ. ಅವರು ಕೆಲಸ ಮಾಡುತ್ತಿದ್ದ ಮರದ ಮೇಜು ಒಂದು ಮೂಲೆಯಲ್ಲಿ, ಸುಟ್ಟು ಕಪ್ಪಾಗಿ ಬಿದ್ದಿದೆ. ಇಡೀ ಬೇಕರಿ ಸುಟ್ಟು ಕರಕಲಾಗಿತ್ತು.

ಪರಿಮಳದ ಲೇಪನ ಗೋಡೆಯ ಬಿರುಕಗಳಿಂದ ತಪ್ಪಿಸಿಕೊಂಡಿತ್ತು!

ಅದರ ಸ್ಥಳದಲ್ಲಿ, ಒಲೆಯಲ್ಲಿ ಸುಟ್ಟ ಬ್ರೆಡ್ ಕಪ್ಪಾಗಿ, ಪುಡಿಯಾಗಿ ಹೊಮ್ಮಿಸುತ್ತಿದ್ದ ಗಬ್ಬು ವಾಸನೆಯಿಂದ ಬೇಕರಿಯೊಳಗಿನ ಗಾಳಿಯು ಕೊಳೆಯುತ್ತಿದೆ. ಜೋಸೆಫ್ ಗೇಟ್ ಮುಂದೆ ಕೆಳಗೆ ಕುಸಿದು ಕುಳಿತುಕೊಂಡಾಗ ಗ್ರಾಮಸ್ಥರು ಅವರನ್ನು ಸುತ್ತುವರೆದರು. ಒಂದು ಮೋಡವು ಚಂದ್ರನನ್ನು ಆವರಿಸಿತ್ತು. ಹಳ್ಳಿಗರು ಸುಸ್ತಾಗಿ, ಏನೂ ಮಾಡಲಾಗುವುದಿಲ್ಲ ಎಂದು ತಿಳಿದು, ಮನೆಯ ಕಡೆಗೆ ಹೊರಟಾಗ ಸಣ್ಣ ತುಂತುರು ಮಳೆ ಬೀಳಲು ಪ್ರಾರಂಭಿಸಿತು. ಜೋಸೆಫ್ ಕುಳಿತೇ ಇದ್ದರು.
ಮರುದಿನ ಮಧ್ಯಾಹ್ನ, ಹೋಟೆಲ್‌ನ ಹಿಂಬಾಗಿಲು ತೆರೆಯಿತು. ಜೋಸೆಫ್‌ನ ಹೆಂಡತಿ ಎಲಿಸ್ ಅಲ್ಲಿ ನಿಂತಿದ್ದಳು. "ಮಾಸ್ಟರ್, ಬಾಸ್, ಏನೋ ಕೆಟ್ಟದಾಗಿದೆ. ದೇವರು ಬೇಕರಿಯನ್ನು ಬೆಂಕಿಯ ಮೂಲಕ ತೆಗೆದುಕೊಂಡು ಹೋದ. ಜೋಸೆಫ್ ಬ್ರೆಡ್ ಮಾಡಲಾಗಲಿಲ್ಲ.''
ಹೋಟೆಲ್ ಮಾಲೀಕ ಪಿಕ್ ವಾನ್ ಮೌನವಾಗಿ ನಿಂತಿದ್ದರು. ಅವರು ಹೋಟೆಲ್ ನಡೆಸುತ್ತಿದ್ದ ಇಷ್ಟು ವರ್ಷಗಳಲ್ಲಿ ಜೋಸೆಫ್ ಬ್ರೆಡ್ ಪೂರೈಕೆ ಮಾಡದಿದ್ದದ್ದು ಇದೇ ಮೊದಲು.
"ಒಳಗೆ ಕುಳಿತುಕೊಳ್ಳಿ, ಬನ್ನಿ ಎಲಿಸ್" ಅವರು ಅವಳನ್ನು ಹೋಟೆಲ್ ಜಗಲಿಗೆ ಕರೆದೊಯ್ದರು. ಅಲ್ಲಿ ಕುಳಿತಿದ್ದ ಅತಿಥಿಗಳನ್ನು ನೋಡುತ್ತಿದ್ದಂತೆ ಸಂಕೋಚದಿಂದ ಅವಳ ತಲೆ ಬಾಗುತ್ತದೆ.


ಹೊಸ ಬೇಕರಿ ಅಭಿವೃದ್ಧಿ ಹೊಂದಿತ್ತು. ಗ್ರಾಹಕರು ಬಂದು ಹೋಗುತ್ತಿದ್ದರು. ಪಿಕ್ ವಾನ್ ಒಳಗೆ ಹೋದರು. "ಶುಭೋದಯ ಸರ್ ವಾನ್. ನಿಮ್ಮ ಹೋಟೆಲ್‌ಗೆ ಇಂದು ನಮ್ಮ ಬ್ರೆಡ್ ಅಗತ್ಯವಿದೆ ಎಂದುಕೊಳ್ಳುತ್ತೇನೆ" ಮಾಲೀಕರು ನಕ್ಕರು, ಅವರ ಮಕ್ಕಳೂ ಸೇರಿಕೊಂಡರು.

"ನಿನ್ನೆ ರಾತ್ರಿ ಪಕ್ಕದ ಹಳ್ಳಿಯ ಜೋಸೆಫ್ ಅವರ ಬೇಕರಿ ಸುಟ್ಟು ಹಾಕಿದ್ದು ನಿಮಗೆ ಗೊತ್ತಾ?"
ಕೆಲಸ ಮಾಡುತ್ತಲೇ ಇದ್ದ ಬೇಕರಿಯವನ ಮಗ ಇನ್ನಷ್ಟು ಜೋರಾಗಿ ನಗುತ್ತಾ "ಆ ಕಾಫಿರ್‌ನ ಬೇಕರಿಯನ್ನು ಸುಡುವುದು ಸುಲಭವಾಯಿತು. ನಮಗೆ ಆ ಕಾಫಿರ್‌ನ ಸ್ಪರ್ಧೆ ಬೇಕು ಎಂದು ನಿಮಗನ್ನಿಸುತ್ತದೆಯಾ? ಸಾಧ್ಯವೇ ಇಲ್ಲ! ಮಿಸ್ಟರ್ ವಾನ್ ನಿಮಗೆ ತಿಳಿದಿದೆಯಾ? ಈ ಪಟ್ಟಣವು ನಮ್ಮ ಬ್ರೆಡ್ಡನ್ನು ಬಯಸುತ್ತದೆಯೇ ಹೊರತು, ಆ ಕೊಳಕು ಕಪ್ಪು ಕೈಗಳಿಂದ ಮಾಡಿದ ಬ್ರೆಡ್ಡನ್ನಲ್ಲ.''

ನಿಶ್ಯಬ್ದತೆಯ ಹಿಮ ಹೆಪ್ಪುಗಟ್ಟಿತ್ತು. ಕೆಲವು ಗ್ರಾಹಕರ ಮುಖದಲ್ಲಿ ಅಸಮಾಧಾನ ಮೂಡಿತ್ತು. ಕೆಲವರು ಹೊರನಡೆಯಲಾರಂಬಿಸುತ್ತಿದ್ದಂತೆಯೇ ಅವರನ್ನು ಉಳಿದವರೂ ಅನುಸರಿಸಿದರು. ಅವರಲ್ಲಿ ಯಾರೂ ಏನನ್ನೂ ತೆಗೆದುಕೊಳ್ಳಲಿಲ್ಲ!

ಪಟ್ಟಣದ ಎಲ್ಲರಿಗೂ ವಿಷಯ ತಿಳಿಸಲು ಪಿಕ್ ವಾನ್ ದೌಡಾಯಿಸಿದರು. ದಾರಿಯಲ್ಲಿ ಸಿಕ್ಕಸಿಕ್ಕವರಿಗೆ, ‘ಎಲ್ಲರೂ ತುರ್ತಾಗಿ ಹೋಟೆಲ್ಲಿನಲ್ಲಿ ಸೇರಲು ಹೇಳಿ’ ಎಂದು ಹೇಳುತ್ತಲೇ ಹೋದರು. ವಿಷಯ ಏನು? ಎತ್ತ? ಎಂದು ತಿಳಿಯದೆ, ಒಂದು ಗಂಟೆಯಲ್ಲಿ ಬಹುತೇಕ ಊರಿನ ಜನರೆಲ್ಲಾ ಹೋಟೆಲ್ಲಿನಲ್ಲಿ ಜಮಾಯಿಸಿದ್ದರು.

‘‘ಬೆಟ್ಟದ ಮೇಲಿನ ಹಳ್ಳಿಯ ಬೇಕರಿಯ ಜೋಸೆಫ್, ಈ ಪಟ್ಟಣಕ್ಕೆ ಮತ್ತು ನನ್ನ ಹೋಟೆಲ್‌ಗೆ ಹಲವು ವರ್ಷಗಳಿಂದ ಬ್ರೆಡ್ಡನ್ನು ಪೂರೈಸಿದ್ದಾನೆ. ನಿನ್ನೆ ರಾತ್ರಿ, ಜೋಸೆಫ್ ಅವರ ಬೇಕರಿಯನ್ನು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಹೊಸಬರಾದ ಬೇಕರಿಯವರು ಸ್ಪರ್ಧೆಯನ್ನು ತಪ್ಪಿಸಲು, ಅದೂ ಒಬ್ಬ ಕರಿಯನ ಸ್ಪರ್ಧೆಯನ್ನು ತಪ್ಪಿಸುವ ಉದ್ದೇಶದಿಂದ ಸುಟ್ಟುಹಾಕಿದ್ದಾರೆ. ಸ್ನೇಹಿತರೆ, ನಿಮಗೆಲ್ಲರಿಗೂ ತಿಳಿದಿರುವಂತೆ, ಹಳ್ಳಿಯ ಜನರು ಮತ್ತು ನಮ್ಮ ಊರಿನವರ ನಡುವೆ ಯಾವಾಗಲೂ ಉತ್ತಮವಾದ ಸಂಬಂಧವಿತ್ತು. ಅದನ್ನು ಹಾಗೆಯೇ ನಾವು ಕಾಪಾಡಿಕೊಳ್ಳಬೇಕು.''

ಸಭೆ ಮತ್ತೂ ಎರಡು ಗಂಟೆಗಳ ಕಾಲ ಮುಂದುವರೆಯಿತು. ಪ್ರತಿಯೊಬ್ಬರೂ ತಾವೂ ಏನಾದರು ಹೇಳಲು ಬಯಸುತ್ತಿದ್ದರು.


ಬೆಟ್ಟದ ಮೇಲೆ, ಸುಟ್ಟುಹೋಗಿದ್ದ ಬೇಕರಿಯ ಗೇಟ್ ಬಳಿ, ಜೋಸೆಫ್ ರಾತ್ರಿಯಿಡೀ ಚಲಿಸದೆ ತಣ್ಣಗೆ ಕುಳಿತುಕೊಂಡಿದ್ದಾರೆ. ಹಿಂದಿನಿಂದ ಬಂದ ಒಂದು ಶಬ್ದವು ಅವರ ಮೇಲೆ ಎರಗುವಷ್ಟು ಜೋರಾಗಿ ಮತ್ತೂ ಜೋರಾಗಿ ಕೇಳಿಸತೊಡಗಿತು. ಅವರಿಗೇ ಆಶ್ಚರ್ಯ!

ಪಟ್ಟಣದಿಂದ ನೂರಾರು ಬಿಳಿಯರು- ವೃದ್ಧರು ಮತ್ತು ಯುವಕರು, ಪುರುಷರು ಮತ್ತು ಮಹಿಳೆಯರು...
ಆ ದಿನ ಅವರು ನೋಡಿದ್ದ, ತಮ್ಮ ಬ್ರೆಡ್ ತಿನ್ನುತ್ತಿದ್ದ ಹೋಟೆಲ್ಲಿನ ಕೆಲವು ಅತಿಥಿಗಳು...
ಬಕೆಟ್, ಕರಣೆ, ಸಿಮೆಂಟ್, ಮರಳು ಮತ್ತು ಇಟ್ಟಿಗೆಗಳನ್ನು ಹೊತ್ತುಕೊಂಡು ಬೆಟ್ಟದ ಮೇಲೆ ಬರುತ್ತಿದ್ದಾರೆ!
ಅಂದು ರಾತ್ರಿಯ ಹೊತ್ತಿಗೆ, ಹೊಸ ಬೇಕರಿ ಎದ್ದು ನಿಂತಿದೆ!
ಆ ಶುಕ್ರವಾರ ಮಧ್ಯಾಹ್ನ ಜೋಸೆಫ್ ಹೋಟೆಲ್‌ನ ಹಿಂಬಾಗಿಲನ್ನು ಬಡಿದಿದ್ದಾರೆ.
ಶ್ರೀ ವಾನ್ ಅದೇ ಮುಗುಳ್ನಗೆಯೊಂದಿಗೆ ನಿಂತಿದ್ದಾರೆ. "ಜೋಸೆಫ್, ಬ್ರೆಡ್ ಉತ್ತಮವಾಗಿದ್ದು ಒಳ್ಳೆಯ ಪರಿಮಳ ಬರುತ್ತಿದೆ. ನಿನಗೆ ಕೇಳಿಸುತ್ತಿದೆಯಾ? ನಾನು ಎಣಿಸುತ್ತಿದ್ದೇನೆ... ನೋಡುತ್ತಿದ್ದೀಯಾ?"
ಅವರು ಒಂದು ತುಂಡು ಬ್ರೆಡ್ ಮುರಿದು, ಬಾಯಿಗೆ ಹಾಕಿದರು. "ಹುಂ... ಇದು ಸಕ್ಕತ್ತಾಗಿದೆ, ಮಗಾ! ರುಚಿ ಚೆನ್ನಾಗಿದೆ. ನೀನು ಅದನ್ನು ಹೇಗೆ ಮಾಡುತ್ತೀಯ ಎಂದು ನನಗೆ ತಿಳಿದಿಲ್ಲ..... ಆದರೆ, ಇಂದಿನಿಂದ, ನಿನ್ನ ಬ್ರೆಡ್ ಬೆಲೆ, ಒಂದು ಲೋಫ್‌ಗೆ ಮೂವತ್ತೈದು ಸೆಂಟ್‌ಗಳು. ಪ್ರತಿ ಶುಕ್ರವಾರ ಮಧ್ಯಾಹ್ನ ತಡ ಮಾಡಬೇಡ ಮತ್ತೆ! ನಮ್ಮಲ್ಲಿಗೆ ಹೊಸ ಅತಿಥಿಗಳು ಬರಲಿದ್ದಾರೆ....'' ಜೋಸೆಫ್ ಮುಗುಳ್ನಕ್ಕರು.

ಬ್ರೆಡ್ ಹೊತ್ತು ತಂದಿದ್ದ ಮಕ್ಕಳು ಸಾಲಾಗಿ ಬಿಳಿನಗರದ ರಸ್ತೆಯಲ್ಲಿ ನಡೆಯುತ್ತಿದ್ದಾರೆ. ಅವರು ಹೊಸ ಬೇಕರಿಯಿರುವ ಬೀದಿಯಲ್ಲಿ ಸಾಗುತ್ತಿದ್ದಾರೆ. ಹೊಸ ಬೇಕರಿಯ ಬಾಗಿಲಿನ ಮೇಲೆ ಒಂದು ಬೋರ್ಡ್ ನೇತಾಡುತ್ತಿದೆ.
ಆ ಬೋರ್ಡಿನಲ್ಲಿ ‘ವ್ಯಾಪಾರಕ್ಕಾಗಿ ಮುಚ್ಚಲಾಗಿದೆ’ ಎಂದು ಬರೆಯಲಾಗಿತ್ತು!
ತಕ್ಷಣ, ಜೋಸೆಫ್ ತನ್ನಲ್ಲಿದ್ದ ಮೂವತ್ತೈದು ಸೆಂಟ್‌ಗಳನ್ನು ತೆಗೆದು, ಬಾಗಿಲ ಕೆಳಗಿನಿಂದ ಬೇಕರಿಯೊಳಗೆ ಎಸೆದು, ನಡೆಯುತ್ತಿದ್ದಾರೆ...

ಇಂಗ್ಲಿಷ್ ಮೂಲ: ಇಲಾನ್ ಒಸ್ಸೆಂಡ್ರಾವರ್, ಅನುವಾದ: ಬಿ.ಆರ್. ಸತ್ಯನಾರಾಯಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.