ಸಾಂದರ್ಭಿಕ ಚಿತ್ರ
‘ಈ ಸರ್ತಿ ಮಗ ಮೈಸೂರಿಂದ ಬರುವ ಸಮಯದಲ್ಲಿ ಊರ ದೇವರ ಜಾತ್ರೆಯಾಗುತ್ತೆ. ಅವನನ್ನು ಮಡೆಸ್ನಾನ ಮಾಡಿಯೇ ಹೋಗುವಂತೆ ಹೇಳಬೇಕು' ಎಂದು ಪುಷ್ಪ ಗಂಡ ವೆಂಕಪ್ಪನಿಗೆ ಪದೇಪದೇ ಒತ್ತಾಯಿಸುತ್ತಿದ್ದಳು. ಚಿಕ್ಕದಿರುವಾಗ ಅವನಿಗೆ ಬಂದ ಜ್ವರ ಯಾವ ಮದ್ದಿಗೂ ಬಗ್ಗಿರಲಿಲ್ಲ. ಮಗು ಬದುಕುವುದಿಲ್ಲ ಅನ್ನುವ ಸ್ಥಿತಿ ಬಂದಾಗ ಅಕ್ಕಪಕ್ಕದವರು, `ಇದು ದೇವರ ಉಪದ್ರ ಅನಿಸುತ್ತದೆ. ಯಾವುದಕ್ಕೂ ಜೋಯಿಸರ ಹತ್ತಿರ ಹೋಗಿ ಬಲಿಮ್ಮೆ ಇಟ್ಟು ಕೇಳುವುದು ಉತ್ತಮ' ಎಂದು ಸಲಹೆ ನೀಡಿದ್ದರು. ಹಾಗೆ ಜೋಯಿಸ ತೋಳ್ಪಡಿತ್ತಾಯರ ಹತ್ತಿರ ಹೋಗಿ ವೆಂಕಪ್ಪ ರಾಶಿ ಪ್ರಶ್ನೆ ಇಟ್ಟು ಕೇಳಿದಾಗ, ‘ಅನುಮಾನವೇ ಇಲ್ಲ. ನಿನ್ನ ಹೆಂಡತಿ ಮುಟ್ಟಾಗಿರುವಾಗ ಊರ ದೇವರು ಜಳಕಕ್ಕೆ ಹೋಗುವುದನ್ನು ನೋಡಿದ್ದಾಳೆ. ಇದರಿಂದ ದೇವರು ಸಿಟ್ಟಗಿದ್ದಾರೆ. ಇದರ ಪರಿಣಾಮ ಮಗುವಿನ ಮೇಲಾಗಿದೆ' ಎಂದಿದ್ದರು. ವೆಂಕಪ್ಪ ಹೌಹಾರಿ, `ಹೌದಾ? ಹಾಗಿದ್ದರೆ ಇದಕ್ಕೆ ಏನು ಪರಿಹಾರವಿದೆ?' ಎಂದು ಕೇಳಿದ್ದ.
ದೇವರ ವರ್ಷಾವಧಿ ಜಾತ್ರೆ ದಿವಸ ಬ್ರಾಹ್ಮಣರ ಊಟ ಆದ ತಕ್ಷಣ ಅವರ ಎಂಜಲೆಲೆಯಿಂದ ಹೊರಳಾಟ ಆರಂಭಿಸಿ, ದೇವರ ಮಹಾದ್ವಾರದ ತನಕ ಉರುಳುತ್ತ ಬರುವ ಮಡೆಸ್ನಾನದ ಹರಕೆ ಹೊತ್ತುಕೊಳ್ಳಿ. ಮಗುವಿಗೆ ಕಾಯಿಲೆ ಕಡಿಮೆಯಾಗುತ್ತದೆ. ಅವನು ದೊಡ್ಡವನಾದ ಮೇಲೆ ಈ ಸೇವೆ ಮಾಡಿಸಿ. ಸೇವೆ ಬಾಕಿಯಾದರೆ ನಿಮ್ಮ ಸಂತಾನ ಪರಂಪರೆಯ ವರೆಗೆ ಬೆನ್ನಟ್ಟಿ ಬರುತ್ತದೆ. ನೆನಪಿಟ್ಟುಕೊಳ್ಳಿ' ಎಂದು ಜೋಯಿಸರು ಪರಿಹಾರ ಸೂಚಿಸಿದ್ದರು.
ವೆಂಕಪ್ಪ ಮನೆಗೆ ಬಂದು ಹೆಂಡತಿಯ ಜೊತೆಗೆ ಭಯಭಕ್ತಿಯಿಂದ ಕೈಮುಗಿದು ಹರಕೆ ಹೊತ್ತುಕೊಂಡ. ಮರುದಿನ ಮಗುವಿನ ಜ್ವರ ಇಳಿಯಿತು. ಇದು ದೇವರ ಮಹಿಮೆ ಎಂದು ದಂಪತಿಗೆ ಮನದಟ್ಟಾಯಿತು. ಮಗ ಡೀಕಯ್ಯ ಶಾಲೆಗೆ ಹೋಗಲು ತೊಡಗಿದಾಗ ಮಡೆಸ್ನಾನದ ನೆನಪು ಮಾಡಿದರು. ಆದರೆ ಅದಾಗಲೇ ಡೀಕಯ್ಯ ದೇವಸ್ಥಾನದ ಮುಂದೆ ಹೀಗೆ ಸೇವೆ ಮಾಡುವವರನ್ನು ನೋಡಿ ಬಿಟ್ಟಿದ್ದ. ಬ್ರಾಹ್ಮಣರ ಎಲೆಯಲ್ಲಿ ಉಳಿದಿದ್ದ ಅನ್ನ, ಸಾಂಬಾರಿನ ಮೇಲೆ ಉರುಳಾಡಿ ಬರಿಮೈಗೆ ಅದನ್ನೆಲ್ಲ ಮೆತ್ತಿಕೊಂಡು ಅಂಗಣದ ಧೂಳಿನಲ್ಲಿ ಹೊರಳಾಡುತ್ತಾ ಅದ್ದಿಟ್ಟಿನಲ್ಲಿ ಅದ್ದಿದ ಆಲೂಗಡ್ಡೆಯಂತಾಗುತ್ತಿದ್ದ ಜನರ ಸ್ಥಿತಿ ಕಂಡು ಅವನಿಗೆ ಹೇಸಿಗೆಯಾಗಿತ್ತು. ಪಾಠ ಹೇಳುವ ಗುರುಗಳು ಒಬ್ಬರೇ ಇದ್ದಾಗ, ‘ಸರ್, ಹೀಗೆ ಎಂಜಲೆಲೆಯಲ್ಲಿ ಉರುಳಾಡಿದರೆ ದೇವರಿಗೆ ಯಾಕೆ ಖುಶಿಯಾಗ್ತದೆ? ಬ್ರಾಹ್ಮಣರ ಎಂಜಲಿಗೆ ಅಂತಹ ಶಕ್ತಿ ಇರೋದೇ ಆದ್ರೆ ಆಸ್ಪತ್ರೆಗಳು ಯಾಕಿರ್ತವೆ? ದೊಡ್ಡ ಕಾಯಿಲೆಗಳಿಗೆಲ್ಲ ಇದೇ ಹರಕೆ ಹೊತ್ತು ಗುಣಪಡಿಸಬಹುದಲ್ಲ?' ಎಂದು ಕೇಳಿದ್ದ.
ಜೋರಾಗಿ ನಕ್ಕು ಡೀಕಯ್ಯನನ್ನು ಬಳಿಗೆ ಕರೆದು ಬೆನ್ನು ತಟ್ಟಿದರು ಗುರುಗಳು,‘ಭೇಷ್, ದೊಡ್ಡೋನಾದ್ಮೇಲೆ ಭಾರೀ ವಿಚಾರವಾದಿಯಾಗುವ ಹಾಗಿದೆ. ನೋಡು, ಯಾವ ದೇವರೂ ಅವನು ಮೇಲ್ಜಾತಿ, ಇವನು ಕೆಳಜಾತಿ ಎಂದು ಹೇಳ್ಲಿಕ್ಕಿಲ್ಲ. ಅವನಿಗೆ ಎಲ್ಲರೂ ಒಂದೇ. ಅವನವನ ಕರ್ಮದಿಂದ ಜಾತಿ ನಿರ್ಣಯವಾಗುತ್ತದೆ. ಹೀಗಾಗಿ ಒಬ್ಬನ ಎಂಜಲಿಗೆ ಶ್ರೇಷ್ಠತೆ ಬರೋದು ಹೇಗೆ ಅಂತ ನನಗೂ ಗೊತ್ತಿಲ್ಲ. ಆತ್ಮ ಪರಮಾತ್ಮ ಅನ್ನುವುದು ನಿಜವಾದ್ರೆ ನನಗೂ ನಿನಗೂ ಭೇದ ಇಲ್ಲ ಕಣಯ್ಯ' ಎಂದಿದ್ದರು. ಆದರೆ ಇಂಥ ವಿಚಾರ ತಪ್ಪು ಎಂದು ಪ್ರತಿಪಾದಿಸಿದರೆ ತನ್ನ ಕೆಲಸಕ್ಕೆ ಸಂಚಕಾರ ಬಂದೀತೆಂಬ ಅಳುಕು ಅವರಿಗೆ ಇದ್ದ ಕಾರಣ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದರು.
ಆದರೆ ಡೀಕಯ್ಯ ಮಾತ್ರ ಸೇವೆ ಒಪ್ಪಿಸುವುದನ್ನು ಮುಂದೂಡುತ್ತಲೇ ಬಂದುದು ವೆಂಕಪ್ಪನ ತಾಳ್ಮೆ ಕೆಡಿಸುತ್ತಿತ್ತು. ‘ವಿದ್ಯೆ ಕಲಿತು ಬುದ್ಧಿವಂತನಾಗಿದ್ದೀನಿ ಅಂದ್ಕೋಬೇಡ. ಇಲ್ಲಿಯ ದೇವರು ಮನಸ್ಸು ಮಾಡಿದರೆ ಏನೂ ಮಾಡಿಯಾರು. ಅಂಥ ಕೋಪಿಷ್ಠ ದೇವರು. ಇದ್ರಲ್ಲಿ ನಾಚಿಕೆ ಮಾಡ್ಲಿಕೆ ಏನಿಲ್ಲ. ಎಲ್ರ ಒಟ್ಟಿಗೆ ಸೇವೆ ಸಲ್ಲಿಸಿದರಾಯಿತು' ಎಂದು ಎಚ್ಚರಿಸಿದ್ದ. ಅದಕ್ಕೆ ಡೀಕಯ್ಯ ಪಾಟೀ ಸವಾಲು ಹಾಕುತ್ತಿದ್ದ. ‘ನನ್ನ ಕ್ಲಾಸಲ್ಲಿ ಶಂಕರ ಅನ್ನುವ ಭಟ್ಟರ ಹುಡುಗನಿಗೆ ಚರ್ಮರೋಗ ಉಂಟು. ಅವನ ಅಪ್ಪ ಇದೇ ದೇವಸ್ಥಾನದಲ್ಲಿ ಹೂ ಕಟ್ಟುವ ಕೆಲಸ ಮಾಡ್ತಾರೆ. ಅರ‍್ಯಾಕೆ ಹುಡುಗನನ್ನು ಔಷಧಿಗೆ ಅಂತ ಬೇರೆ ಬೇರೆ ಊರಿಗೆ ಕರೆದುಕೊಂಡು ಹೋಗ್ತಾ ಇದ್ದಾರೆ? ಮಡೆಸ್ನಾನ ಮಾಡಿಸಿ ಗುಣಪಡಿಸೋಬಹುದಲ್ವ?' ಕೇಳಿದ್ದ.
ವೆಂಕಪ್ಪ ನಿಟ್ಟುಸಿರುಬಿಟ್ಟು, ‘ಅದೆಲ್ಲ ನನಗೆ ಗೊತ್ತಿಲ್ಲ. ನನ್ನಲ್ಲಿ ಇಂತಹ ಪ್ರಶ್ನೆ ಕೇಳಬಾರದು. ಒಟ್ರಾಸಿ ನೀನು ಸೇವೆ ಒಪ್ಪಿಸಬೇಕು ಅಷ್ಟೇ' ಎಂದು ಹೇಳಿದ್ದ. ಡೀಕಯ್ಯ ಹೆತ್ತವರ ಮನ ನೋಯಿಸಬಾರದು ಎಂಬ ಒಂದೇ ಕಾರಣಕ್ಕೆ ಒಪ್ಪಿಕೊಂಡರೂ ಸೇವೆಯನ್ನು ಮುಂದೂಡುತ್ತಲೇ ಬಂದಿದ್ದ ವಿನಃ ಅವನಿಗೆ ಮಡೆಸ್ನಾನದ ಕುರಿತು ಒಲವು ಮೂಡಲೇ ಇಲ್ಲ.
ಆದರೆ ಮಗನ ವರ್ತನೆಯಿಂದ ವೆಂಕಪ್ಪನ ಕಳವಳ ಹೆಚ್ಚುತ್ತಲೇ ಹೋಯಿತು. ಒಂದು ಸಲ ದೇವಸ್ಥಾನದ ಬಾವಿಗೆ ದನವೊಂದು ಬಿದ್ದು ಸತ್ತಿತು. ಅದರ ಬೆನ್ನಿಗೇ ಮಳೆಗಾಲದ ಆಟಿ ತಿಂಗಳಲ್ಲಿ ಒಂದು ರಾತ್ರಿ ಕಳ್ಳರು ಗರ್ಭಗುಡಿಯ ಬೀಗವನ್ನು ಮುರಿದು ಒಳಗೆ ಹೊಕ್ಕು ವಿಗ್ರಹದ ಮೇಲಿದ್ದ ಒಡವೆ, ಕಾಣಿಕೆ ಹುಂಡಿಯಲ್ಲಿದ್ದ ಹಣ ದೋಚಿಕೊಂಡು ಹೋದರು. ತತ್ಸಂಬಂಧ ಕೇರಳದಿಂದ ಪೊದುವಾಳರನ್ನು ಬರಮಾಡಿಸಿ ಅಷ್ಟಮಂಗಳ ಪ್ರಶ್ನೆ ಇಡಿಸಿದಾಗ, ‘ದೇವರು ಕೋಪದಲ್ಲಿದ್ದಾನೆ. ಇಲ್ಲಿ ಯಾರೋ ಹರಕೆ ಹೊತ್ತವರು ಅದನ್ನು ನೆರವೇರಿಸದೆ ಉಳಿಸಿದ ಕಾರಣ ಹೀಗಾಗಿದೆ. ಊರಿನಲ್ಲಿ ಪ್ರತಿ ಮನೆಯವರನ್ನೂ ವಿಚಾರಿಸಿ ಅಂತಹ ಹರಕೆಗಳಿದ್ದರೆ ಒಪ್ಪಿಸಲು ಹೇಳಬೇಕು' ಎಂದು ತಿಳಿದುಬಂತು.
ನಲ್ಕೆಯ ಚನಿಯ ತೆಂಬರೆ ಹಿಡಿದುಕೊಂಡು ಪ್ರತಿ ಮನೆಗೂ ಹೋಗಿದ್ದ. ‘ದೇವರಿಗೆ ಹರಕೆ ಹೊತ್ತವರು ನೆನಪು ಮಾಡಿಕೊಂಡು ಕೂಡಲೇ ಅದನ್ನು ಒಪ್ಪಿಸಲು ಮುಂದಾಗಬೇಕು. ಅದಲ್ಲವಾದರೆ ಊರಿಗೆ ವಿಪತ್ತು ಕಾದಿದೆ' ಎಂದು ಹೇಳಿದ. ವೆಂಕಪ್ಪನ ಮಗನೂ ಮನೆಯಲ್ಲಿದ್ದ. ವೆಂಕಪ್ಪ ಎದೆ ಢವಢವ ಎನ್ನುತ್ತ ಮಗನನ್ನು ಕರೆದು, ‘ಕೇಳಿದೆಯಾ? ನಮ್ಮದೂ ಒಂದು ಹರಕೆ ಬಾಕಿಯಿದೆ. ಏನಾದರಾಗಲಿ, ಈ ಸಲ ನೀನು ಮಡೆಸ್ನಾನ ಮಾಡಲೇಬೇಕು. ಎಲ್ಲ ದೇವರ ಹಾಗೆ ಇಲ್ಲಿಯ ದೇವರು ಶಾಂತಮೂರ್ತಿ ಅಲ್ಲ. ಸಿಟ್ಟಿಗೆದ್ದರೆ ಏನೂ ಮಾಡಿಯಾರು' ಎಂದು ಹೇಳಿದ.
‘ನೀವೊಮ್ಮೆ ಸುಮ್ನೆ ಕೂತ್ಕೊಳ್ಳಿ ಅಪ್ಪ. ದೇವರಲ್ಲಿ ಹಾಗೆಲ್ಲ ಭೇದ ಉಂಟಾ? ದೇವರಿಗೆ ಕೋಪ ಬಂದ್ರೆ ಅವ್ನು ದೇವ್ರಾಗ್ತಾನಾ? ನಾನು ಇಂಥ ಹೇಸಿಗೆಯ ಸೇವೆ ಮಾಡೋದಕ್ಕೆ ಹೋಗೋದಿಲ್ಲ. ದೇವ್ರನ್ನು ನಂಬ್ತೀನಿ. ಮನಸ್ಸಲ್ಲಿ ಮಾತ್ರ' ಎಂದ ಡೀಕಯ್ಯ.
ಏನು ಮಾಡುವುದೆಂದು ತಿಳಿಯದೆ ವೆಂಕಪ್ಪ ವಿಲಿವಿಲಿ ಒದ್ದಾಡುತ್ತಿದ್ದಾಗ ಹಟ್ಟಿಯಲ್ಲಿದ್ದ ಹಾಲು ಕರೆಯುವ ದನ ಧಡಾಲ್ಲನೆ ಉರುಳಿ ಕೈಕಾಲು ಬಡಿಯುತ್ತ ಸೆಗಣಿ ಗೊಬ್ಬರ ತಿನ್ನತೊಡಗಿತು. ಪುಷ್ಪ ತಲೆಗೆ ಹೊಡೆದುಕೊಂಡು ಗೋಳಿಟ್ಟಳು. `ದೇವರನ್ನು ಸಸಾರ ಮಾಡಿದರೆ ಇನ್ನೇನಾಗುತ್ತೆ? ಕರು ಹಾಕಿ ಎರಡು ದಿನವೂ ಆಗಿಲ್ಲ. ನಮ್ಮ ಕುಟುಂಬಕ್ಕೆ ಆಧಾರವಾಗಿತ್ತು. ಇವನೊಬ್ಬನ ಹಠದಿಂದಾಗಿ ಅದನ್ನೀಗ ಕಳೆದುಕೊಳ್ಳುವ ಸ್ಥಿತಿ ಬಂತಲ್ಲ' ಎಂದು ಅಳಲಾರಂಭಿಸಿದಳು.
ಡೀಕಯ್ಯ ಅವಳಿಗೆ ಸಮಾಧಾನ ಹೇಳುವ ಗೋಜಿಗೆ ಹೋಗಲಿಲ್ಲ. ಮೌನವಾಗಿ ಎದ್ದು ಹೋಗಿ ಪಶು ವೈದ್ಯರನ್ನು ಕರೆದುತಂದ. ಅವರು ಬರುವಾಗಲೇ ಒಂದು ಬಾಟಲಿ ಕ್ಯಾಲ್ಸಿಯಂ, ಒಂದು ಬಾಟಲಿ ಮೆಗ್ನೀಷಿಯಂ ದ್ರಾವಣ ತಂದಿದ್ದರು. ಅದನ್ನು ಒಂದೊಂದೇ ಹನಿಯಾಗಿ ದನದ ಮೈಯೊಳಗೆ ಹರಿಸಿದರು. ಬಾಟಲಿ ಖಾಲಿಯಾಗುತ್ತಲೇ ದನ ತಾನಾಗಿ ಎದ್ದುನಿಂತು ಎಲ್ಲ ವಿಕಾರ ತೊರೆದು ಹುಲ್ಲು ತಿನ್ನಲಾರಂಭಿಸಿತು. ಡೀಕಯ್ಯ ತಾಯಿಯನ್ನು ಕರೆದ. ‘ನೋಡಮ್ಮ, ದನಗಳು ಕರು ಹಾಕಿ ಮೂರು ದಿನದೊಳಗೆ ಕೆಳಗೆ ಉರುಳಿ ಗೊಬ್ಬರ ತಿನ್ನತೊಡಗಿದರೆ ಜೋಯಿಸರ ಹತ್ರ ಓಡಿ ಬಲಿಮ್ಮೆ ಕೇಳುವುದು ಬೇಡ. ಅದು ಯಾವ ದೇವರ ಕೋಪವೂ ಅಲ್ಲ. ಕ್ಯಾಲ್ಸಿಯಂ, ಮೆಗ್ನೀಷಿಯಂ ಸತ್ವ ಕಡಿಮೆಯಾದರೆ ಹೀಗೆ ಆಗುತ್ತದೆ. ಇದು ದೇವರ ಪ್ರತಾಪ ಅಲ್ಲ, ನಮ್ಮ ಅಜ್ಞಾನ. ನೀನೇ ನೋಡಿದ್ಯಲ್ಲ, ಗೋ ಡಾಕ್ಟ್ರು ಬಂದ ಕೂಡ್ಲೇ ದೇವ್ರು ಹೇಗೆ ಶಾಂತನಾದ ಅಂತ' ಎಂದು ತೋರಿಸಿದ.
ದನ ಹುಷಾರಾದುದಕ್ಕೆ ಪುಷ್ಪನಿಗೆ ಸಮಾಧಾನವಾದರೂ ಮಗನ ತೀರ್ಮಾನಕ್ಕೆ ಬದ್ಧಳಾಗಲು ಅವಳು ಸಿದ್ಧಳಿರಲಿಲ್ಲ. ‘ನಾನು ಆವಾಗ್ಲಿಂದ ದೇವರ ಜಪ ಮಾಡುತ್ತಲೇ ಇದ್ದೆ. ಹೀಗಾಗಿ ದೇವರು ಕಣ್ತೆರೆದ. ಹರಕೆ ತಪ್ಪಿಕೊಳ್ಲಿಕ್ಕೆ ಇದೆಲ್ಲ ಆಟ ಆಡ್ಬೇಡ' ಎಂದಳು ಆಕೆ.
ಆದರೆ ಡೀಕಯ್ಯನಿಗೆ ಇದೆಲ್ಲ ಕಂದಾಚಾರ ಅನಿಸುತ್ತಿತ್ತು. ಉಳ್ಳವರಿಗೆ ಗ್ರಹಚಾರ ಬಂದಾಗ ಬಡವರನ್ನು ಕರೆಸಿ ಕಂಗಿನ ಹಾಳೆಯಲ್ಲಿ ಅನ್ನ ಬಡಿಸಿ ಕೊಡುವುದನ್ನು ಅವನು ಕಂಡಿದ್ದ. ಆದರೆ ದಾನ ಪಡೆದವನು ಅದನ್ನು ಉಣ್ಣಲಾಗದೆ ಪ್ರತಿ ತುತ್ತಿಗೂ ಪಡುವ ಸಂಕಟವನ್ನು ಅವನು ಗಮನಿಸಿದ. ಬಳಿಗೆ ಹೋಗಿ ಹಿಡಿ ಅನ್ನವನ್ನು ಬಡವರ ಎಡೆಯಿಂದ ತೆಗೆದು ಪರೀಕ್ಷಿಸಿ ನೋಡಿದ ಡೀಕಯ್ಯನಿಗೆ ಕರುಳು ಹಿಂಡಿದ ಹಾಗಾಗಿತ್ತು. ಅನ್ನದ ಪ್ರತಿ ತುತ್ತಿನಲ್ಲೂ ಬೆರೆಸಿದ ತಲೆಗೂದಲು, ಉಗುರುಗಳ ಮಿಶ್ರಣ. ಅಚ್ಚರಿಯಿಂದ ಅವನು ಕೇಳಿದ್ದ, ‘ಇದನ್ನು ಹೇಗೆ ತಿನ್ತೀರಿ? ಇದರಲ್ಲಿ ಏನೇನೋ ಬೆರೆತಿದೆ. ಇದ್ಯಾಕೆ ಹೀಗೆ ಮಾಡಿ ಕೊಟ್ಟಿದ್ದಾರೆ?' `ಇದು ಅನಾದಿಯಿಂದ ನಡೆದುಬಂದ ಪದ್ಧತಿ. ಗ್ರಹಚಾರವಿದ್ದವರು ಉಗುರು ಮತ್ತು ಕೂದಲು ಅನ್ನಕ್ಕೆ ಬೆರೆಸಿ ನಮಗೆ ಕೊಡ್ತಾರೆ. ಅದನ್ನು ನಾವು ಊಟ ಮಾಡಿದ್ರೆ ಅವರ ದೋಷ ಪರಿಹಾರವಾಗ್ತದೆ' ಊಟ ಮಾಡಲಾಗದೆ ಒದ್ದಾಡುತ್ತ ಒಬ್ಬಾತ ಹೇಳಿದ್ದ.
‘ಅಯ್ಯೋ ದೇವರೇ, ಅವರ ಒಳಿತಿಗಾಗಿ ನೀವ್ಯಾಕೆ ಇಂಥ ಕೊಳಕನ್ನು ಊಟ ಮಾಡಬೇಕು? ಬೇಡ ಅನ್ನಬಹುದಿತ್ತಲ್ಲವೆ?' ಕಳಕಳಿಯಿಂದ ಕೇಳಿದ್ದ ಡೀಕಯ್ಯ.
‘ಬೇಡ ಅನ್ನೋಕಾಗುತ್ತಾ? ನಾವು ಸ್ವೀಕರಿಸಲೇಬೇಕು. ಇದು ಸಂಪ್ರದಾಯ. ಇದರ ಒಟ್ಟಿಗೆ ನೂರು ರೂಪಾಯೀನೂ ಕೊಡ್ತಾರೆ. ಖರ್ಚಿಗೆ ಆಗ್ತದೆ' ಅವನು ಹೇಳಿದ. ‘ನೀವೆಲ್ಲ ಸಂಪ್ರದಾಯ ಅಂತ ಒಪ್ಪಿಕೊಂಡಿರುವವರೆಗೂ ಇಂತಹ ಶಿಕ್ಷೆ ಅನುಭವಿಸದೆ ವಿಧಿಯಿಲ್ಲ. ಯಾರದೋ ಸುಖಕ್ಕಾಗಿ ನೀವ್ಯಾಕೆ ಇದನ್ನೆಲ್ಲ ತಿಂದು ಸಂಕಷ್ಟಕ್ಕೊಳಗಾಗುತ್ತೀರೋ ನನಗರ್ಥವಾಗುವುದಿಲ್ಲ' ಡೀಕಯ್ಯ ವಿಷಾದದಿಂದ ಹೇಳಿದ್ದ.
ಡೀಕಯ್ಯ ಇದರ ಬಗೆಗೆ ವಿಚಾರವಾದಿಗಳ ಗಮನ ಸೆಳೆದ. ಎಂಜಲು ಎಲೆಯಲ್ಲಿ ಹೊರಳಾಡುವ ಅನಿಷ್ಠ ಪದ್ಧತಿ ಕೈಬಿಡಬೇಕೆಂದು ಅವರಿಂದ ಪತ್ರಿಕೆಗಳಲ್ಲಿ ಹೇಳಿಕೆ ಕೊಡಿಸಿದ. ಇದರಿಂದ ಊರಿನಲ್ಲಿ ತಾಕಲಾಟದ ಕಾವೇರಿತು. ದೇವಸ್ಥಾನದ ಆಡಳಿತ ಮಂಡಳಿಯವರು ಇದು ತಮ್ಮ ಉಳಿವಿನ ಪ್ರಶ್ನೆ ಎಂಬಂತೆ ಸೆಟೆದು ನಿಂತರು. ಆದಿಯಿಂದ ನಡೆದುಬಂದ ಸೇವಾ ಪದ್ಧತಿಯನ್ನು ನಿಲ್ಲಿಸಿದರೆ ದೈವ ಪ್ರಕೋಪವುಂಟಾಗುತ್ತದೆ ಎಂದು ಗಂಭೀರ ಎಚ್ಚರಿಕೆ ನೀಡಿದರು. ದೇವಾಲಯದಲ್ಲಿ ಊಳಿಗ ಮಾಡುವವರನ್ನು ಪ್ರಚೋದಿಸಿದರು. ಅವರು, ‘ಯಾರಿಗೆ ಈ ಸೇವೆ ಬೇಡವೆನಿಸಿದೆಯೋ ಅವರು ದೂರ ಇರಲಿ. ಆದರೆ ನಮಗೆ ಇದು ಬೇಕು. ಇದನ್ನೆಲ್ಲಾದರೂ ನಿಲ್ಲಿಸಿದರೆ ನಾವು ದೇವಸ್ಥಾನದ ಕೆಲಸಕ್ಕೆ ಬರುವುದಿಲ್ಲ' ಎಂದು ಪ್ರತಿಭಟಿಸಿದರು. ಅವರಿಗೆ ತಿಳಿ ಹೇಳಲು ಬಂದ ವಿಚಾರವಾದಿಯೊಬ್ಬನ ಬಟ್ಟೆ ಕಳಚಿ ಹೊಡೆದು ಓಡಿಸಿದರು. ಇಷ್ಟೆಲ್ಲ ಆದ ಮೇಲೆ ಡೀಕಯ್ಯನಿಗೆ ತನ್ನೊಂದಿಗೆ ಒಂದಿಷ್ಟು ಜನರು ಸಹಾಯಕ್ಕೆ ಇದ್ದಾರೆ ಎನ್ನುವ ಭಾವ ಮೊಳೆತು ಯಾವುದೋ ಖಾಸಗಿ ಉದ್ಯೋಗ ಸಿಕ್ಕಿತೆಂದು ಮೈಸೂರಿನ ದಾರಿ ಹಿಡಿದಿದ್ದ.
ಈ ಸರ್ತಿಯಾದರೂ ಡೀಕಯ್ಯನನ್ನು ಸೇವೆಗೆ ಒಪ್ಪಿಸಬೇಕು, ಒಂದು ದಿನವೂ ಮೈಗೆ ಹುಷಾರಿಲ್ಲ. ದನಗಳಿಗೆ ಒಂದಿಲ್ಲೊಂದು ಕಾಯಿಲೆ ತಪ್ಪುವುದಿಲ್ಲ. ಕಳೆದ ಸಲ ಕೊಳೆರೋಗ ಬಂದು ಅಡಕೆ ಫಸಲೆಲ್ಲ ನಾಶವಾಗಿದೆ ಎಂದು ಪುಷ್ಪ ಎಲ್ಲ ನಷ್ಟಕ್ಕೂ ಮಡೆಸ್ನಾನದ ಹರಕೆ ಬಾಕಿಯಾದುದೇ ಕಾರಣ ಎಂದು ಲೆಕ್ಕ ಹಾಕುತ್ತ ಇದ್ದಳು. ಗಂಡನೊಂದಿಗೂ ಹಲವು ಸಲ ಹೇಳಿಕೊಂಡಿದ್ದಳು. ಬಾಕಿಮಾರಿನ ಚೋಮ ಕೂಡ, ಅಜ್ಜನ ಕಾಲದಲ್ಲಿ ಮಡೆಸ್ನಾನ ಮಾಡ್ತೀನಂತ ಹೊತ್ತ ಹರಕೆ ಬಾಕಿಯಾಗಿತ್ತಂತೆ. ಮೊಮ್ಮಗನ ಇಡೀ ಕುಟುಂಬಕ್ಕೆ ಸುಖ ಇರ್ಲಿಲ್ಲ. ಪ್ರಶ್ನೆ ಇಟ್ಟಾಗ ಜೋಯಿಸರು, ‘ಹರಕೆ ಬಾಕಿ ಮಾಡಿ ದೇವರಿಗೆ ಮುನಿಸಾಗಿದೆ. ಇದರ ಪರಿಹಾರ ಮಾಡಲು ನಿಮ್ಮ ಕುಟುಂಬದಲ್ಲಿ ಈಗ ಇರುವ ಎಲ್ಲರೂ ಬಂದು ದೇವರಿಗೆ ಈ ಸೇವೆ ಸಲ್ಲಿಸಬೇಕು' ಎಂದರಂತೆ. ಈ ಸಲ ಅವರ ಮನೆಯವರೆಲ್ಲ ಸೇವೆ ಮಾಡ್ತಿದ್ದಾರೆ ಎಂದಿದ್ದ. ‘ಅಯ್ಯೋ ದೇವರೆ, ಇವನ ಹಠದಿಂದಾಗಿ ನಮ್ಮ ಕುಲಕ್ಕಿನ್ನು ಎಂಥೆಂಥ ಗ್ರಹಚಾರ ಕಾದಿದೆಯೋ' ಎಂದುಕೊಂಡಳು ಪುಷ್ಪ.
ಡೀಕಯ್ಯ ಮೈಸೂರಿನಿಂದ ಬಂದಾಗ ತನ್ನ ಹೆಸರನ್ನೇ ಬದಲಾಯಿಸಿಕೊಂಡಿದ್ದ. ‘ಡೀಕಯ್ಯ ಎನ್ನುವುದು ಎಂಥ ಹೆಸರಮ್ಮ? ಯಾರಾದ್ರೂ ಕರೆದ್ರೆ ಓಗೊಡ್ಲಿಕ್ಕೆ ನಾಚಿಕೆ ಆಗ್ತದೆ. ನನ್ನನ್ನು ಇನ್ನು ಶ್ರೀನಿವಾಸ ಅಂತ ಕರೆಯಬೇಕು. ಹಾಗೆ ಬದಲಾಯಿಸಿಕೊಂಡಿದ್ದೇನೆ' ಎಂದ. ವೆಂಕಪ್ಪ, ‘ಅದು ಜೋಯಿಸರು ಪಂಚಾಂಗ ನೋಡಿ ನಕ್ಷತ್ರಕ್ಕೆ ಹೊಂದುವ ಹೆಸರು ಹೇಳಿದ್ದು. ಹಾಗೆಲ್ಲ ಮನಸ್ಸು ಬಂದಂತೆ ಬದಲಾವಣೆ ಮಾಡೋದಕ್ಕಾಗ್ತದ?' ಕೇಳಿದಾಗ ಶ್ರೀನಿವಾಸ ಕೆಂಡಾಮಂಡಲವಾಗಿದ್ದ. ‘ಜೋಯಿಸರಂತೆ ಜೋಯಿಸರು! ದುಡಿದು ತಿನ್ನುವವರ ಮಕ್ಕಳಿಗೆ ಡೀಕಯ್ಯ, ಅಂಗಾರ, ತನಿಯ, ನಕ್ಕುರ ಇಂಥದೇ ಹೆಸರುಗಳು. ಇನ್ನು ಉಳ್ಳವರ ಮಕ್ಕಳಿಗೆಲ್ಲ ಗಂಗಾಧರ, ನಂದಿಕೇಶ, ಅರ್ಜುನರ ಹೆಸರು. ಇದನ್ನೆಲ್ಲ ನಮ್ಮಂಥವರು ನಂಬುವ ತನಕ ಈ ಮೇಲು ಕೀಳಿನ ತಾರತಮ್ಯ ಇಲ್ಲಿಂದ ಹೋಗೋದಿಲ್ಲ ಅಪ್ಪ' ಎಂದು ಭುಸುಗುಟ್ಟಿದ್ದ. ಆದರೆ ಇದೇ ವಾತಾವರಣದಲ್ಲಿ ಬೆಳೆದು ಬದುಕಿದ ವೆಂಕಪ್ಪನಿಗೆ ಈ ಮಾತು ಅರ್ಥವಾಗಲೇ ಇಲ್ಲ.
ಶ್ರೀನಿವಾಸ ಮೈಸೂರಿನಿಂದ ಬಂದಾಗ ಹೊಸ ಸುದ್ದಿಯನ್ನೇ ತಂದಿದ್ದ. ತನ್ನೊಂದಿಗೆ ಕೆಲಸ ಮಾಡುವ ವರದಾ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದ. ಮಗನ ನಿರ್ಧಾರಕ್ಕೆ ಏನು ಹೇಳುವುದೆಂದೇ ಗೊತ್ತಾಗಲಿಲ್ಲ ವೆಂಕಪ್ಪನಿಗೆ. ದೇವಳದ ಅರ್ಚಕರು ಸ್ಪಷ್ಟವಾಗಿ, ‘ಮಗನ ಮಡೆಸ್ನಾನದ ಸೇವೆ ಆಗುವವರೆಗೆ ಮದುವೆ ಮಾಡಬೇಡ. ಸೇವೆ ಬಾಕಿಯಾದರೆ ಮಕ್ಕಳಾಗುವುದಿಲ್ಲ. ಗರ್ಭಿಣಿಯಾದರೆ ಮಗು ಸತ್ತೇ ಹುಟ್ಟುತ್ತದೆ' ಎಂದಿದ್ದರು. ಭಯಭೀತನಾಗಿ ವೆಂಕಪ್ಪ ಇದನ್ನು ಮಗನಿಗೆ ವಿವರಿಸಿದ. ಆದರೆ ಶ್ರೀನಿವಾಸ ಜಗ್ಗುವ ಸ್ಥಿತಿಯಲ್ಲಿ ಇರಲಿಲ್ಲ. ‘ಅಪ್ಪ, ನಾನು ದೇವರನ್ನು ನಂಬ್ತೀನಿ. ದೇವರಿಗೆ ಅಡ್ಡ ಬೀಳ್ತೀನಿ. ಆದ್ರೆ ದೇವರ ಮುಂದೆ ಮೇಲು ಕೀಳು ಪ್ರಶ್ನೆ ಬಂದಾಗ ನಾನು ಕೀಳು ಜಾತಿಯವ ಅಂದ್ಕೊಳ್ತ ಎಂಜಲಿನಲ್ಲಿ ಹೊರಳುವುದು ಖಂಡಿತ ಇಲ್ಲ. ಹೀಗೆ ಮಾಡು ಅಂತ ಯಾವ ದೇವರೂ ಹೇಳಲಿಕ್ಕಿಲ್ಲ' ಎಂದು ಸ್ಪಷ್ಟಪಡಿಸಿದ.
‘ನಿನ್ನದು ಇದೇ ಕಡೆಯ ನಿರ್ಧಾರ ಅಂತಾದ್ರೆ ಅಪ್ಪ-ಅಮ್ಮ ಇಬ್ರೂ ನಿನ್ನ ಪಾಲಿಗೆ ಸತ್ತಿದ್ದಾರೆ ಅಂತ ಅಂದುಕೋ. ನಿನ್ನ ಮದುವೆಗೆ ನಾವಿಬ್ರೂ ಬರೋದಿಲ್ಲ' ಎಂದ ವೆಂಕಪ್ಪ.
ಈ ಮಾತಿಗೆ ಪ್ರತಿ ಹೇಳದೆ ಶ್ರೀನಿವಾಸ ಮೈಸೂರಿಗೆ ಹೋದವನು ಒಂದೇ ವಾರದಲ್ಲಿ, ‘ನಾವು ಇಲ್ಲಿಯ ಗಣಪತಿ ಗುಡಿಯಲ್ಲಿ ಗಂಡ-ಹೆಂಡಿರಾಗುತ್ತಿದ್ದೇವೆ. ಬಂದು ಹರಸಿ' ಎಂದು ಪತ್ರ ಬರೆದಿದ್ದ. ವೆಂಕಪ್ಪ ತನ್ನ ನಿರ್ಧಾರ ಬದಲಿಸಲಿಲ್ಲ. ಮದುವೆಯಾದ ಮೇಲೆ ದಂಪತಿ ಮನೆಗೆ ಬಂದು ಕಾಲಿಗೆರಗಿದಾಗಲೂ ಪುತ್ರ ವಾತ್ಸಲ್ಯದಿಂದ ಹರಸಲಿಲ್ಲ. ಇದಕ್ಕಾಗಿ ಶ್ರೀನಿವಾಸ ತಲೆ ಕೆಡಿಸಿಕೊಳ್ಳದೆ ಮೈಸೂರಿನ ದಾರಿ ಹಿಡಿದಿದ್ದ. ಮದುವೆಯಾಗಿ ನಾಲ್ಕು ವರ್ಷ ದಾಟಿದರೂ ವರದಾ ಗರ್ಭಿಣಿಯಾಗಲಿಲ್ಲ ಎನ್ನುವುದನ್ನು ಗಮನಿಸಿದಳು ಪುಷ್ಪ. ನಮಗಿರುವುದು ಒಬ್ಬನೇ ಮಗ. ಸೊಸೆ ಇನ್ನೂ ಬಸಿರಾಗಲಿಲ್ಲ ಅಂದರೆ...ಎಂದು ತಳಮಳಗೊಂಡಾಗ ವೆಂಕಪ್ಪನಿಗೆ ಸೇವೆ ಸಲ್ಲಿಸದೆ ಮಕ್ಕಳಾಗೋದಿಲ್ಲ ಎಂಬ ಅರ್ಚಕರ ಮಾತು ಎದೆ ತುಂಬ ನಗಾರಿ ಬಾರಿಸಿತು. ಆದರೂ, ‘ಈಗಿನ ಕಾಲದವರಲ್ವೇ, ಬೇಕಾದಾಗ ಮಾಡ್ಕೊಳ್ತಾರೆ. ಸದ್ಯಕ್ಕೆ ಬೇಡಾ ಅಂತ ನಿರ್ಧರಿಸಿರಬಹುದು' ಎಂದಿದ್ದ.
‘ಅಲ್ಲವಂತೆ! ವರದಾ ಮೊನ್ನೆ ಬಂದಾಗ ಹೇಳಿದ್ಲು. ತುಂಬ ಪರೀಕ್ಷೆ, ಮದ್ದು ಆಯಿತಂತೆ. ಡೀಕಯ್ಯನಿಗೆ ದೋಷವಿದೆಯಂತೆ. ಮಕ್ಕಳಾಗೋದು ಕಷ್ಟ. ಆದರೂ ನಿರಂತರ ಮದ್ದು ಮಾಡಿದ್ರೆ ಆದೀತು ಅಂತ ಡಾಕ್ಟ್ರು ಹೇಳಿದ್ದಾರಂತೆ. ಹೀಗಾಗಿ ಇಬ್ರೂ ಈಗ ಅದನ್ನು ತುಂಬ ಶ್ರದ್ಧೆಯಿಂದ ಮಾಡ್ತಿದ್ದಾರಂತೆ' ಸುದ್ದಿ ಬಿಚ್ಚಿಟ್ಟಳು ಪುಷ್ಪ.
ದೇವರೇ ಇಲ್ಲ, ಮೂಢನಂಬಿಕೆ ಅಂತ ಹೇಳುವವರು ಅರ್ಚಕರು ಹೇಳುವ ಮಾತು ಡೀಕಯ್ಯನ ಬದುಕಿನಲ್ಲಿ ಅಕ್ಷರಶಃ ಸತ್ಯವಾಗುತ್ತಿರುವುದಕ್ಕೆ ಏನು ಹೇಳುತ್ತಾರೆ ಎಂದು ವೆಂಕಪ್ಪ ತನ್ನಲ್ಲೇ ಪ್ರಶ್ನಿಸಿಕೊಂಡ. ಉತ್ತರ ಹೊಳೆಯದೆ ಕಂಗಾಲಾದ. ಹೀಗಿರುವಾಗಲೇ ಮೈಸೂರಿನಿಂದ ಶುಭ ಸಮಾಚಾರ ಬಂದಿತ್ತು. ವರದಾ ಮೂರು ತಿಂಗಳ ಗರ್ಭಿಣಿ. ಮಗನ ಮೇಲಿನ ಅಸಮಾಧಾನವನ್ನು ಮರೆತು ವೆಂಕಪ್ಪ ಅದನ್ನು ಕೇಳಿ ಸಂಭ್ರಮಿಸಿದ. ಹೆಂಡತಿಯೊಂದಿಗೆ ಮೈಸೂರಿಗೆ ಹೋಗಿ ಸೊಸೆಯನ್ನು ನೋಡಿ ಜೋಪಾನದ ಮಾತುಗಳನ್ನು ಹೇಳಿಬಂದ.
ಆದರೆ ಈ ಸಂಭ್ರಮ ಹೆಚ್ಚು ದಿನ ಉಳಿಯುವಂತೆ ಕಾಣಲಿಲ್ಲ. ಮಗುವಿನ ಬೆಳವಣಿಗೆ ಸರಿಯಾಗಿಲ್ಲ, ಬೆಡ್ ರೆಸ್ಟ್ ಬೇಕು ಎಂದರು ವೈದ್ಯರು. ವೆಂಕಪ್ಪ ಹೆಂಡತಿಯನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಸೊಸೆಯ ಆರೈಕೆಗೆ ನಿಂತ. ತಿಂಗಳಾಗುತ್ತ ಹೋದಂತೆ ವರದಾಳ ಕಾಲುಗಳಲ್ಲಿ ನೀರು ಕಾಣಿಸಿತು. ಹೆರಿಗೆಯ ಬೇನೆ ಆರಂಭವಾಗಿ ವಾರ್ಡಿಗೆ ಹೋಗುವಾಗ ಡಾಕ್ಟರರ ಮುಖದಲ್ಲಿ ಕಳವಳ ಎದ್ದು ಕಾಣುತ್ತಿತ್ತು. ‘ಮಗುವಿನ ಪರಿಸ್ಥಿತಿ ಚೆನ್ನಾಗಿಲ್ಲ. ಸರಿಯಾಗಿ ಹುಟ್ಟಿದರೆ ಏನೂ ತೊಂದರೆ ಇಲ್ಲ. ಆದರೆ ಜೀವಂತ ಹುಟ್ಟುವುದು ಕಷ್ಟ ಎಂಬರ್ಥ ಅವರ ಮಾತುಗಳಿಂದ ಹೊರಹೊಮ್ಮಿತು.
ವಾರ್ಡಿನ ಹೊರಗೆ ಶ್ರೀನಿವಾಸ ತಲೆಗೆ ಕೈಹೊತ್ತು ಕುಳಿತಿದ್ದಾನೆ. ಪುಷ್ಪಳ ಕಣ್ಣುಗಳಿಂದ ಧಾರಾಕಾರ ನೀರಿಳಿಯುತ್ತಿದೆ. ಮಾತು ಹೊರಗೆ ಬರುತ್ತಿಲ್ಲ. ವೆಂಕಪ್ಪ ಮಾತ್ರ ಹೇಳುತ್ತಲೇ ಇದ್ದಾನೆ. ‘ಮಡೆಸ್ನಾನದ ಸೇವೆ ಮಾಡಲು ಇನ್ನಾದರೂ ಒಪ್ಪು ಮಗಾ. ದೇವರು ನಮ್ಮ ಕೈಬಿಡುವುದಿಲ್ಲ. ಇದಕ್ಕೆಲ್ಲ ಸೇವೆ ಬಾಕಿಯಾಗಿರುವುದೊಂದೇ ಕಾರಣ' ಎಂದು ಒತ್ತಾಯಿಸುತ್ತಿದ್ದಾನೆ.
‘ಅಪ್ಪ, ದೇವರು ಇರುವುದು ನಿಜವೇ ಆದಲ್ಲಿ ನಿಮ್ಮ ಗುಡಿಯ ಅರ್ಚಕರ ಮಗಳು ಏಳು ಸಲ ಬಸಿರಾದಾಗಲೂ ಯಾಕೆ ಒಂದು ಮಗುವೂ ಜೀವಂತ ಹುಟ್ಟಲಿಲ್ಲ? ಅವರು ಯಾಕೆ ಅನಾಥಾಶ್ರಮದ ಮಗುವನ್ನು ದತ್ತಕ ಸ್ವೀಕರಿಸಿದರು? ಮನುಷ್ಯನ ಎಂಜಲಿನಲ್ಲಿ ಮನುಷ್ಯನೇ ಹೊರಳುವ ಆ ಹೇಸಿಗೆಯ ಸೇವೆ ಬೇಕು ಎನ್ನುವ ದೇವರ ಕೃಪೆ ನನಗೆ ಬೇಕಾಗಿಲ್ಲ' ಎಂದ ಶ್ರೀನಿವಾಸ.
ಅಷ್ಟರಲ್ಲಿ ವಾರ್ಡಿನೊಳಗಿಂದ ಮಗು ಅಳುವ ದನಿ ಕೇಳಿಸಿತು. ಬಾಗಿಲು ತೆರೆದು ನರ್ಸ್ ಹೊರಗೆ ಬಂದಳು. ‘ಕಂಗ್ರಾಟ್ಸ್ ಶ್ರೀನಿವಾಸ್, ಗಂಡುಮಗು' ಎಂದಳು. ವೆಂಕಪ್ಪನ ಮೊಗ ಊರಗಲ ಅರಳಿತು. ದೇವರು ದೊಡ್ಡವ ಎಂದುಕೊಂಡ ಪ. ರಾಮಕೃಷ್ಣ ಶಾಸ್ತ್ರೀ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.