ADVERTISEMENT

ಸ್ಮಿತಾ ಅಮೃತರಾಜ್ ಅವರ ಕಥೆ: ಮುಟ್ಟಾಗದವಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 23:47 IST
Last Updated 6 ಡಿಸೆಂಬರ್ 2025, 23:47 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

“ಮನೂ... ಇವತ್ತು ಬೆಳಗೆ ಬೇಜಾರು ಅಯ್ತಾ..ಅಷ್ಟು ದೊಡ್ಡ ರಂಪ ರುಯಿಲಾಟ ಆಯ್ತಲ್ಲ..ಡ್ಯಾಡಿದೂ.?”

‘ಎಷ್ಟೆಂದರೂ ಡ್ಯಾಡಿ ಮಾಡಿದ್ದು ತಪ್ಪು ಅಲ್ಲವಾ ಪುಟ್ಟ..?

ADVERTISEMENT

ನೋಡು! ಊರವರು ಈಗ ಏನೆಲ್ಲಾ ಗುಸು ಗುಸು ಮಾತಾಡ್ತಿದ್ದಾರೆ. ಅಷ್ಟು ಗೊತ್ತಾಗುವುದಿಲ್ಲವಾ ಡ್ಯಾಡಿಗೆ? ’

ಮಗ ಮನ್‌ದೀಪ್ ಈಗ ಒಂಬತ್ತನೇ ತರಗತಿ ಓದುವ ಹುಡುಗ. ಇವತ್ತು ಎಲ್ಲವೂ ಖುಲ್ಲಾಂ ಖುಲ್ಲಂ ಭೋರ್ಗರೆಯುವ ಜಲಪಾತದಂತೆ ಪ್ರಳಯವೊಂದು ಸಂಭವಿಸಿದ ಮೇಲೆ, ಮೌನವೊಂದು ಮಿಸುಕಾಡದೇ ಬಿದ್ದುಕೊಂಡಿರುವ ಹೊತ್ತಿನಲ್ಲಿ, ಮಗನ ಮೇಲೆ ಇದು ಯಾವುದೂ ಪರಿಣಾಮ ಬೀರಬಾರದು ಅನ್ನುವ ಉದ್ದೇಶದಲ್ಲಿ ಮೆಲ್ಲನೆ ಅನುನಯದ ಸ್ವರದಲ್ಲಿ ಅವನೊಂದಿಗೆ ಮಾತಿಗಿಳಿದಿದ್ದಳು..

“ಅಯ್ಯೋ..ಅದಕ್ಕೇನಾಯ್ತು ಮಮ್ಮೀ ಈಗ? ನಂಗೆ ಡ್ಯಾಡಿ ಬಗ್ಗೆ ಏನೂ ಸಿಟ್ಟು ಬರಲಿಲ್ಲ. ನಿನ್ನ ಬಗ್ಗೆ ನನಗೆ ಎಷ್ಟು ಸಿಟ್ಟು ಬಂತು ಗೊತ್ತಾ?”

'ಹ್ಮಾಂ! ನನ್ನ ಬಗ್ಗೆಯಾ? ನಾ ಎಂತ ತಪ್ಪು ಮಾಡಿದೆ?’

ನಿಧಿಗೆ ಭವಿಷ್ಯದ ಕನಸೊಂದು ಈ ಕ್ಷಣದಲ್ಲೇ ಕರಗಿ ಕಾಲಡಿಯಲ್ಲೇ ರೊಯ್ಯನೇ ಹರಿದು ಹೋದ ಅನುಭವ.

ತಲೆ ಧಿಂ ಅಂತ ಸಿಡಿದೇ ಹೋಗುತ್ತದೇನೋ ಅನ್ನಿಸುತ್ತಿತ್ತು.

ಮಗ ಹತ್ತಿರ ಬಂದು,

‘ಯಾಕ್ ಅಳ್ತಿ ಅಮ್ಮಾ.. ಅಳಬೇಡ ನಾನಿಲ್ಲವಾ.. ನಿನಗೆ’ ಅಂತ ಒಂದು ಮಾತು ಹೇಳಿದ್ದರೇ…?

ಅಸಲಿಗೆ ಅವಳು ಅದೇ ಮಾತಿನ ನಿರೀಕ್ಷೆಯಲ್ಲಿದ್ದಳು ಕೂಡ.‌ ಎಲ್ಲರ ಎದುರು ಅನುಭವಿಸಿದ ಅವಮಾನಗಿಂತಲೂ ಮಗ ಆಡಿದ ಮಾತಿಗೆ ದುಃಖ ಒತ್ತರಿಸಿ ಬಂದಿತು. ಒತ್ತಿ ಬರುವ ಅಳು ನುಂಗಿ ಕೊಳ್ಳುತ್ತಾ ಪಟಪಟ ಹೊಡೆದುಕೊಳ್ಳುತ್ತಿರುವ ತಲೆಗೆ ಗಟ್ಟಿಯಾಗಿ ಚಾಲೆಮುಂಡೊಂದನ್ನ ಕಟ್ಟಿಕೊಂಡಳು. ಒಂಥರಾ ಹಗುರ ಅನ್ನಿಸತೊಡಗಿತು.

*** 

ನಿಧಿ ಎಳೆವೆಯಲ್ಲಿದ್ದಾಗ ಅವಳಮ್ಮ ಆಗಾಗ್ಗೆ ಹಣೆಗೆ ಗಟ್ಟಿಯಾಗಿ ಚಾಲೆಮುಂಡೊಂದನ್ನ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಳು. ಆಗೆಲ್ಲಾ ಆಕೆ ಅಮ್ಮನನ್ನು ಪ್ರಶ್ನೆ ಮಾಡುತ್ತಿದ್ದಳು.

‘ವಿಪರೀತ ತಲೆನೋವು ನಿಧಿ, ಈ ಚಾಲೆಮುಂಡು ಬಿಗಿದು ಕಟ್ಟಿದರೆ ಸರಿಹೋಗ್ತದೇನೋ’

ಅಂತಂದು ಮಾತು ಮರೆಸುತ್ತಿದ್ದದ್ದ ನೆನಪೊಂದು ಧಿಮ್ಮನೆ ನುಗ್ಗಿಬಂದು ಅವಳ ಚಿತ್ತವನ್ನ ಮತ್ತಷ್ಟು ಕದಡಿಸಿ ಬಿಟ್ಟಿತು. ಆ ಚಾಲೆ ಮುಂಡೊಂದು ಸದಾ ಅವಳೊಂದಿಗೆ. ಸ್ನಾನ ಮಾಡಿ ಚಂಡಿ ತಲೆಗೆ ಕಟ್ಟುವಲ್ಲಿಂದ ಹಿಡಿದು, ಅಡುಗೆ ಮಾಡುವಾಗ ಹೆಗಲಮೇಲೆ, ತೋಟಕ್ಕೆ ಇಳಿಯುವಾಗ ಸೊಂಟಕ್ಕೆ, ಹಳತಾದರೆ ಒಗೆದು ಮಡಿ ಮಾಡಿ ಮುಟ್ಟಿನ ಬಟ್ಟೆಗೆ, ಹರಿದು ಹೋದರೆ ಅಡುಗೆ ಮನೆಯ ಮಸಿ ಬಟ್ಟೆಗೆ. ಚಾಲೆಮುಂಡೊಂದು ನಿತ್ಯ ಸಂಗಾತಿ.

***

ನೆನಪು ಕೆದಕಿದರೆ ಅಪ್ಪನೊಂದಿಗೆ ಜಗಳವಾದಾಗಲೆಲ್ಲಾ ಅವಳು ಹೀಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಿದ್ದಳು. ನಾನು ತನ್ನ ಪುಟ್ಟ ಕೈಗಳಿಂದ ಆಕೆಯ ಹಣೆಯನ್ನು ನೇವರಿಸುತ್ತಾ ನಿನಗೆ ನಾನಿದ್ದೇನೆ ಆಯ್ತಾ … ಅಂತ ಹೇಳುವಾಗ ಆಕೆಯ ದುಃಖದ ಕಟ್ಟೆಯೊಡೆಯುತ್ತಿತ್ತು. ಆಕೆ ಅತ್ತರೆ ಮತ್ತೆ ಹೆಚ್ಚು ತಲೆನೋವು ಆಗುತ್ತದೆ ಅಂತ ನಾನು ಮಾತಿಲ್ಲದೆ ನನಗೆ ವಹಿಸಿದ ಎಲ್ಲಾ ಕೆಲಸಗಳನ್ನು ಬಿರಬಿರನೆ ಮಾಡಿ ಮುಗಿಸಿ ಗಪ್ ಚುಪ್ ಕುಳಿತು ಬಿಡುತ್ತಿದ್ದೆ. ಆ ದಿನ ಅಣ್ಣ, ಎಷ್ಟು ಗೋಳು ಹೊಯ್ದುಕೊಂಡರೂ ತಾನು ಉಸ್ಕ್‌ಡಂ ಎತ್ತದೆ ಇರುತ್ತಿದ್ದೆ.

ಆಗ ಅಮ್ಮನ ಹಣೆಗೆ ಮುತ್ತಿಟ್ಟು,

ನಾನು ದೊಡ್ಡವಳಾದ ಮೇಲೆ ನಿನ್ನ ನೋಡಿಕೊಳ್ತೇನೆ ಅಯ್ತಾ..ಅಂತ ಅನ್ನುತ್ತಿದ್ದೆ.

ನನಗೆ ಅಣ್ಣನಿಲ್ಲದೇ ಇರುತ್ತಿದ್ದರೆ, ರಾಜಾರೋಶವಾಗಿ ಯಾರಿಗೂ ಕ್ಯಾರೇ ಎನ್ನದೆ ನಾನು ಅಮ್ಮನ ಬಳಿಯೇ ಇದ್ದು ಬಿಡುತ್ತಿದ್ದೆನೇನೋ?

‘ಯಾರಿಗೆ ಯಾರೂ ಇರುವುದಿಲ್ಲ, ಅವರ ತಲೆಗೆ ಅವರದೇ ಕೈ’

ಅಂತ ಅಮ್ಮ ಯಾವುದೋ ಸಂದರ್ಭದಲ್ಲಿ ಪಕ್ಕದ ಮನೆ ಸುಶಿ ಆಂಟಿ ಜೊತೆಗೆ ಆಡಿದ ಮಾತುಗಳು, ನನ್ನ ಇವತ್ತಿನ ಸಂದರ್ಭಕ್ಕೆ ಹೆಚ್ಚು ಹೊಂದಿಕೆಯಾಗುತ್ತದೆ ಅಂತನ್ನಿಸುತ್ತದೆ.

‘ಒಂದು ಮಾತಿನ ಅರ್ಥ ದಕ್ಕಲು ಎಷ್ಟು ದಶಕಗಳ ಕಳೆಯ ಬೇಕಲ್ಲವಾ ಸುಧಾ…?’

..ಎಷ್ಟೋ ದಿನಗಳಿಂದ ಕಟ್ಟಿಟ್ಟಿದ್ದ ಒಡ್ಡು ಈಗ ಸಡಿಲಗೊಂಡು ಹರಿಯತೊಡಗಿದೆ. ಈ ಪರಿಸ್ಥಿತಿಯಲ್ಲಿ ಅವಳಿಗೆ ಕಿವಿಯಾಗುವುದಷ್ಟೇ ನಾನು ಕೊಡುವ ಅತಿ ದೊಡ್ಡ ಬೆಂಬಲ ಅಂತನ್ನಿಸಿತು.

ನಾನು ಯಾವುದೂ ತವರು ಮನೆಯವರೆಗೆ ಇಲ್ಲಿ ತನಕ ತೆಗೆದುಕೊಂಡು ಹೋದದ್ದೇ ಇಲ್ಲ ಸುಧಾ.. ಮೊದಲೇ ಗೊತ್ತಾಗಿದ್ದರೆ ಇಲ್ಲಿ ತನಕ ಬರುತ್ತಿರಲಿಲ್ಲವೇನೋ? ಅಣ್ಣನಿಗೆ ಮದುವೆಯಾಗಿದೆ. ಅಣ್ಣ ಅತ್ತಿಗೆಗೆ ಗೌರವ ಕೊಡುತ್ತಾನೆ. ಎರಡು ಮಕ್ಕಳು. ಅವರ ಸಂತೃಪ್ತ ಕುಟುಂಬ ನೋಡುವಾಗ ನನಗೂ ಒಳಗೊಂದು ಸಂಕಟ. ನಮ್ಮದು ಅನ್ಯೋನ್ಯ ಸಂಸಾರ ಅಂತ ನಾಟಕ ಮಾಡಿಕೊಂಡೇ ನಾನು ಇಲ್ಲಿ ತನಕ ಬಂದಿದ್ದೇನೆ. ಎಲ್ಲರೂ ಚೆನ್ನಾಗಿದ್ದಾರೆ ಅಂದರೆ ಎಲ್ಲವೂ ಚೆನ್ನಾಗಿರುತ್ತದೆ. ಸಂಸಾರ ಹಳಿ ತಪ್ಪಿದ ಸುಳಿವು ಸಿಕ್ಕರೆ ನಮ್ಮ ಸ್ಥಾನಮಾನವೇ ಬದಲಾಗಿ ಬಿಡುತ್ತದೆ ಅನ್ನುವ ವಾಸ್ತವದ ಅರಿವು ನನಗಿದೆ.

ಬಹುಶಃ ಅಮ್ಮನಿಗೂ ಇಂತದೇ ಸಂದಿಗ್ಧ ಪರಿಸ್ಥಿತಿ ಇದ್ದಿರಬಹುದಾ?

ಅಮ್ಮ‌ ಅರ್ಥವಾಗಬೇಕಾದರೆ ಇಷ್ಟೆಲ್ಲವನ್ನೂ ನಾನು ಹಾಯಬೇಕಾಯಿತಾ ?

ತನ್ನ ತಲೆ ಸಿಡಿದು ಸಹಸ್ರ ಹೋಳಾಗಿ ಬಿಡುತ್ತದೇನೋ ಅಂತ ಹಣೆಯ ಚಾಲೆಮುಂಡನ್ನು ಮತ್ತಷ್ಟು ಬಿಗಿಗೊಳಿಸುತ್ತಾ ಮಗನೊಂದಿಗೆ ಕೇಳಿದ್ದೆ,

‘ಯಾಕೆ ಮನು ಪುಟ್ಟ? ನನ್ನಿಂದ ಏನು ತಪ್ಪಾಯಿತು?’

“ಅಲ್ಲವಾ, ಮತ್ತೆ ಡ್ಯಾಡಿ ಪ್ರೇಮಾ ಆಂಟಿ ಜೊತೆ ಮಾತಾಡಿದರೆ , ಪ್ರೆಂಡ್‌ಶಿಪ್ ಮಾಡಿದರೆ ಏನಾಯ್ತು?”

“ಅದು ತಪ್ಪಲ್ಲವಾ ಮನೂ..ಹಾಗೆಲ್ಲ ಮತ್ತೊಂದು ಹೆಂಗಸರ ಜೊತೆ ಆತ್ಮೀಯತೆ ಇಟ್ಟುಕೊಳ್ಳಬಾರದು ಅಲ್ಲವಾ? ನೋಡಿದವರಿಗೆ ಚೆಂದ ಕಾಣುವುದಿಲ್ಲ ತಾನೇ? ಬೆಳೆಯುತ್ತಿರುವ ಹುಡುಗ ನೀನು. ನಿನಗೂ ಅದು ಗೊತ್ತಿರಬೇಕು, ಯಾವುದು ತಪ್ಪು? ಯಾವುದು ಒಪ್ಪು? ಇಂತಹ ತಪ್ಪುಗಳು ಇನ್ನು ಮಂದೆ ನಿನ್ನ ಕೈಯಿಂದ ಆಗಬಾರದಲ್ಲ?”

“ಅದೇ ನೀನು ಮಾಡಿದ ತಪ್ಪು . ಮೇಲ್ ಗೆ ಪಿಮೇಲ್ ಫ್ರೆಂಡ್ ಇರಬಾರದು ಅಂತ ಎಲ್ಲಿದೆ ರೂಲ್ಸ್? ಅದರಲ್ಲಿ ಏನೀಗ? ನಮ್ಮ ಕ್ಲಾಸ್‌ಮೇಟ್ ಗರ್ಲ್ಸ್ ಎಲ್ಲ ನಮಿಗೆ ಫ್ರೆಂಡ್ಸೇ. ಅದರಲ್ಲಿ ನಮ್ಮ ಕ್ಲಾಸ್ ಮಹಿಮಾ ಇದ್ದಾಳಲ್ಲ… ಅವುಳ ಮೇಲೆ ರಜತ್‌ಗೆ ಕ್ರಷ್ ಗೊತ್ತುಂಟಾ? ನೀ ನೋಡಿದರೆ, ಅಜ್ಜಿ,ತಾತ, ಅತ್ತೆ ಮಾಮನ ಕರೆದು ಅಡಗೂಲಜ್ಜಿ ತರಹ ದೊಡ್ಡ ಸಂಗತಿ ಮಾಡಬೇಕಿತ್ತಾ? “

ಎಲಾ ! ಇವನಾ? ಇವ ನನ್ನ ಮಗನಾ?

ಈ ಹಿಂದೆ ಮನುವಿನ ಸೈನ್ಸ್ ಮಿಸ್ ರಮಾ ಮ್ಯಾಮ್ ಸಿಕ್ಕಾಗ, ಮನು ಕಲಿಯುದರಲ್ಲಿ ಬುದ್ದಿವಂತ. ಆದರೆ ಎಲ್ಲಾ ವಿಷಯದಲ್ಲೂ ಹೆಚ್ಚೇ ಫಾಸ್ಟ್ ಇದ್ದಾನೆ. ಈಗಿನ ಮಕ್ಕಳಲ್ಲವಾ? ಸ್ವಲ್ಪ ಗಮನ ಕೊಡಿ ಅಂದದ್ದು ಇದಕ್ಕೇ ಇರಬಹುದಾ?!

ತಲೆ ಇದ್ದಲ್ಲಿಗೆ ಧುಮುಗುಡು ಹತ್ತಿತ್ತು.

***

ಮದುವೆಯಾಗಿ ಮೂರು ವರ್ಷ ಆದರೂ ಮಕ್ಕಳಾಗದೇ ಇದ್ದಾಗ ಎಡತಾಕದ ವೈದ್ಯರಿಲ್ಲ, ದೇವಸ್ಥಾನಗಳಿಲ್ಲ. ಪ್ರತೀ ಸಲ ಮುಟ್ಟು ನಿಂತಾಗ ಗರ್ಭ ಕಟ್ಟಿತ್ತೇನೋ ಅಂತ ಅಂದುಕೊಳ್ಳುವುದು, ಅದನ್ನು ಸುಳ್ಳಾಗಿಸುವಂತೆ ಮತ್ತೆ 4-5 ತಿಂಗಳ ನಂತರ ಕಿಬ್ಬೊಟ್ಟೆಯಿಂದ ಬೆಂಕಿಯೊಂದು ಎದ್ದು ತೊಡೆ ಸಂಧಿ ಕೆಂಪಾಗುವುದು..

ಈ ಕಾರಣಕ್ಕಾಗಿಯೇ ನನಗೆ ಗರ್ಭ ಕಟ್ಟುವುದಿಲ್ಲವೆಂದು ವೈದ್ಯರಿಗೆ ಗೊತ್ತಾಗಿ ಸಾವಿರಾರು ಖರ್ಚು ಮಾಡಿ ನಿಯಮಿತವಾಗಿ ಮುಟ್ಟು ಆಗುವಂತೆ ಮಾಡಿದ ಮೇಲೆಯಿಂದ ತಾನೇ ಒಂದು ದಿನ ಮುಟ್ಟು ನಿಂತು ಈ ಮಗರಾಯನನ್ನು ಹಡೆದದ್ದು.

ಇಷ್ಟೆಲ್ಲಾ ನನ್ನೊಂದಿಗೆ ಹೇಳುತ್ತಿರುವಾಗಲೇ, ಕಿಬ್ಬೊಟ್ಟೆಯಲ್ಲಿ ಸಣ್ಣಗೆ ನೋವು ಶುರುವಾಗಿರಬೇಕು ಆಕೆಗೆ.

“ತಾನು ಬಂಡೆಗಲ್ಲು ಅಂದುಕೊಂಡಿದ್ದವಳಿಗೆ ನೀನು ಹೆಣ್ಣು ಅನ್ನುವುದನ್ನ ‌ಮತ್ತೆ ಮತ್ತೆ ತೋರಿಸಿಕೊಡುತ್ತದೆ ನೋಡು ಈ ಹಾಳು ಹೊಟ್ಟೆ ನೋವು! ಯಾವತ್ತೋ ಒಮ್ಮೆ ಆಗುವ ಈ ಶೂಲೆ ಅತ್ತ ಸಾಯಿಸುವುದೂ ಇಲ್ಲ, ಇತ್ತ ಬದುಕಲೂ ಬಿಡುವುದಿಲ್ಲ.”

ಹೊಟ್ಟೆ ಗಟ್ಟಿಯಾಗಿ ಹಿಡಿದುಕೊಂಡು ಮಾತಾಡಿದಂತೆ ಆಕೆಯ ಸ್ವರದಲ್ಲಿ ದಣಿವು ಗೋಚರಿಸುತ್ತಿತ್ತು.

***

ಅಂದು ನಾನು ಮುಟ್ಟಾದ ದಿನ.

ಅಮ್ಮನಿಗೆ ಆತಂಕದೊಂದಿಗೆ ಸಂಭ್ರಮವೂ. ನನಗೆ ಯಾರಿಗೂ ಮುಖ ತೋರಿದಷ್ಟು ನಾಚಿಕೆ. ಹೆಣ್ಣಿಗೆ ಲಜ್ಜೆ ಶುರುವಾಗುವುದೇ ಅಲ್ಲಿಂದ ಇರಬೇಕು. ನಾನು ಯಾರಿಗೂ ಗೊತ್ತಾಗುವುದು ಬೇಡವೆಂದು ಗೋಗೆರೆದರೂ ಏಳು ದಿನ ಕಳೆದ ಬಳಿಕ ಅಮ್ಮ ನೆರೆಮನೆಯವರನ್ನೆಲ್ಲಾ ಕರೆಯಿಸಿದಳು. ಅಪ್ಪ ಆಚೆ ಮನೆ ಶಿವು ಚಿಕ್ಕನ ಜೊತೆ ಸೇರಿ ಸಣ್ಣ ಚಪ್ಪರ ಹಾಕಿಸಿದರು. ಸಣ್ಣ ಮಟ್ಟಿನ ಜಂಬರವನ್ನೇ ತೆಗೆದುಬಿಟ್ಟರು.

ನನ್ನನ್ನ ಹೊರ ಜಗಲಿಯಲ್ಲಿ ಕೂರಿಸಿದ್ದರು.

ಅಣ್ಣನನ್ನ ಊರಿನ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಕಳುಹಿಸಿ ದೇವಸ್ಥಾನದಿಂದ ತೀರ್ಥ ನೀರು ತರಿಸಿದರು.

ಅದನ್ನ ಗಿಂಡಿ ಚೆಂಬಿನೊಳಗೆ ಐದೆಲೆ ಮಾವಿನ ಸೊಪ್ಪು ಇಟ್ಟು ಮೈಯೆಲ್ಲಾ ಪ್ರೋಕ್ಷಿಸಿ, ನಂತರ ಮುತ್ತೈದೆಯರೆಲ್ಲರಿಂದ ತಲೆಗೆ ನೀರು ಹೊಯ್ದು ನೆರ್ದ ಮದ್ವೆ ಮಾಡಿಸಿದ್ದಳು.

ಆ ನಂತರ ಪ್ರತೀ ಹದಿನೈದು ದಿನಕ್ಕೊಮ್ಮೆ ಮುಟ್ಟಾಗುವುದು ನನಗೆ. ಬಳಬಳ ಕೆಂಪು ಹೋಗುವುದು. ಅದು ಎಷ್ಟು ದಿನ ಅಂತೀಯಾ..? ಒಂದೇ ಸಮ ಹತ್ತು ಹದಿನೈದು ದಿನ. ಅದೆಷ್ಟು ಹಳೆ ಚಾಲೆಮುಂಡು, ಅಮ್ಮನ ಸೀರೆ ತುಂಡು ಮುಗಿದು, ಅಪ್ಪನ ಪಂಚೆ, ಹಾಸಿಗೆಯ ಹರಿದ ಹೊದಿಕೆ ಎಲ್ಲವೂ ಖರ್ಚಾಗಿ, ಮೈ ತುಂಬಿಕೊಂಡಿದ್ದ ನಾನು ಒಣಗಿ, ಬಿಳಚಿಕೊಂಡು ಮೂಳೆ ಚಕ್ಕಳ ಆಗುವಾಗ ಅಮ್ಮ ಗಾಬರಿ ಬಿದ್ದಿದ್ದಳು. ‌ಯಾರಿಂದಲೋ ವಿಷಯ ಸಂಗ್ರಹಿಸಿ, ಎರಡು ಬಸ್ಸು ಹತ್ತಿ ಇಳಿದು ಹಳ್ಳಿಮೂಲೆಯಲ್ಲಿ ನಾಟಿ ಔಷದಿ ಕೊಡುವ ಕುಂಞಿರಾಮ ವೈದ್ಯರಲ್ಲಿಗೆ ನನ್ನನ್ನು ಕರೆದುಕೊಂಡು ಹೋದದ್ದು.

‘ಅವರು ಕೊಡುತ್ತಿದ್ದ ಕಷಾಯ ತಿಂಗಾಳಾನುಗಟ್ಟಲೆ ಗಟಗಟ ಕುಡಿದು ಮುಟ್ಟಾಗುವುದೇ ನಿಂತೋಯಿತು ನೋಡು!’

ಯಾವುದೋ ಒಂದು ತಿಂಗಳು‌ ಒಂದೆರಡು ದಿನ ನಾನಿದ್ದೇನೆ ಅನ್ನುವುದನ್ನ ಸಾಬೀತು ಪಡಿಸಿ ಮರೆಯಾಗುತ್ತಿತ್ತು. ಆದರೆ ಮುಟ್ಟಾಗುವಾಗ ಆ ದಿನ ಇದೆಯಲ್ಲಾ? ಇಷ್ಟು ತಿಂಗಳ ಎಲ್ಲ‌ ನೋವುಗಳು ನನ್ನ ಹೊಟ್ಟೆಯೊಳಗಿಂದ ಎದ್ದು ನರ‌ನಾಡಿ ವ್ಯಾಪಿಸಿ ಯಮಯಾತನೆ ಹೈರಾಣು ಮಾಡಿ ಬಿಡುತ್ತಿತ್ತು. ಆಗ ಹೊಟ್ಟೆಗೂ ಗಟ್ಟಿಯಾಗಿ ಅಮ್ಮನ ಚಾಲೆಮುಂಡನ್ನೇ ಬಿಗಿದುಕೊಂಡು ಕವಚಿ ಮಲಗಿಬಿಡುತ್ತಿದ್ದೆ.

ಈ ಅನುಭವಿಸಲಾಗದ‌ ನೋವು ತರುವ ಮುಟ್ಟು ಬರುವುದೇ ಬೇಡ ದೇವರೇ..ಅಂತ ಯಾವ ಗಳಿಗೆಯಲ್ಲಿ ಉಸುರಿದ್ದೆನೋ ಏನೋ? ನಾನು ಮದುವೆ ಆದ ನಂತರ ನನಗೆ ಮುಟ್ಟು ಬರಲೇ ಇಲ್ಲ.

‘ಏನು ಪ್ರಸಾದು, ನೀ ನಿನ್ನ ಹೆಂಡತಿಯನ್ನು ಮುಟ್ಟೋದೇ ಇಲ್ಲವಾ ಹೇಗೆ?”

ಅಂತ ನೆರೆಕರೆಯವರು ಪದೇಪದೇ ಕೇಳುವುದು ಅವನಿಗೂ ಕಿರಿಕಿರಿ ಆಯಿತೇನೋ?

“ಅವಳು ಎಲ್ಲ ಹೆಣ್ಣುಮಕ್ಕಳಂತಲ್ಲ.. ಅವಳಿಗೆ ಮುಟ್ಟುಚಟ್ಟು ಒಂದೂ ಇಲ್ಲ, ಬಟ್ಟೆ ಪ್ಯಾಡುಗಳ ಖರ್ಚು ಬವಣೆ ಎರಡೂ ಇಲ್ಲ

ನಿಮ್ಮ ಜೊತೆ ಮಾತ್ರ ಹೇಳುವುದು, ಯಾರಲ್ಲೂ ಹೇಳಬೇಡಿ.. ಮತ್ತೆ!”

ಅವಳಿಗೆ ’ ಆ ಜಾಗವೇ’ ಇಲ್ಲ! ಬಿಡಿ ನನ್ನ ಕರ್ಮ!‌ ಎಂದು ಹೇಳಿ ಕನಿಕರದ ಮಳೆಯಲ್ಲಿ ಮಿಂದಿದ್ದ. ಆ ಸುದ್ದಿ ಊರ ತುಂಬಾ ರೆಕ್ಕೆಪುಕ್ಕ ಹೊತ್ತು ವರ್ಣರಂಜಿತವಾಗಿ ಹಬ್ಬಿ, ಒಂದು ದಿನ‌ ನನಗೂ ಗೊತ್ತಾಗಿ, ಓರಗಿತ್ತಿ ಜತೆಗೆ ತನ್ನ ಬೇಸರ ಹಂಚಿಕೊಂಡಿದ್ದೆ.

“ಬಿಡೇ, ಅದರಲ್ಲೇನಿದೆ? ಅವನು ಎಲ್ಲರ ಜೊತೆ ಆ ವಿಷಯವನ್ನ ಹೇಳಿ ಹಳತು ಮಾಡಿದ್ದಾನೆ. ಅದನ್ನು ಬಿಟ್ಟು ಹೊಸತೇನಾದರೂ ಇದ್ದರೆ ಹೇಳು’’

ಅಂತಂದು ವಿಷಯಾಂತರ ಮಾಡಿದ್ದಳು.

ಆ ಕ್ಷಣದಲ್ಲಿ ಮಗು ಪಡೆಯಲೇಬೇಕೆಂಬ ಛಲ ಹುಟ್ಟಿ ಬಿಟ್ಟಿತ್ತು. ತದನಂತರ ನಾನು ಸುತ್ತದ ವೈದ್ಯರಿಲ್ಲ. ಪ್ರತೀ ವೈದ್ಯರಲ್ಲಿಗೆ ಹೋದಾಗಲೂ ಅವರು ಸಹಜವೆಂಬಂತೆ ಪೂರ್ವಾಪರ ಕೆದಕುತ್ತಿದ್ದರು. ಆಗ ಅದು ತಿಂಗಳಿಗೆರಡಾವರ್ತಿ ಪೈಪಿನಲ್ಲಿ ಹೋದಂತೆ ಬಳಕ್ಕನೆ ಹೋಗುವ ಕೆಂಪಿನಿಂದ ಹಿಡಿದು,ಇಷ್ಟು ದಪ್ಪ ಚಾಲೆಮುಂಡನ್ನ ಮಡಚಿ ತೊಡೆಸಂದಿಯೊಳಗಿಟ್ಟು ಅಮ್ಮನೊಂದಿಗೆ ತಿರುಗಿದ್ದರಿಂದ, ಕಷಾಯ ಕೊಟ್ಟು ಮುಟ್ಟನ್ನೇ ನಿಲ್ಲಿಸಿದ ಕುಂಞಿರಾಮ ವೈದ್ಯರಲ್ಲಿಗೇ ಬಂದು ನಿಲ್ಲುತ್ತಿತ್ತು. ಅಷ್ಟರಲ್ಲಿ ಸುತ್ತಲಿಡೀ ಕೆಂಪೇ ಕಂಡಂತಾಗಿ ಬವಳಿ ಬಿದ್ದು ಬಿಡುತ್ತಿದ್ದೆ.

ಒಂದು ದಿನ ಯಾವುದೋ ಹೊಸ ವೈದ್ಯರಲ್ಲಿಗೆ ಹೋಗಲು ತಯಾರಿಯಲ್ಲಿರುವಾಗ ಅಮ್ಮನ ಹತ್ತಿರ ಹೋಗಿ ಕೇಳಿಯೇ ಬಿಟ್ಟೆ,

‘ಅಮ್ಮಾ..ಕುಂಞಿರಾಮ ವೈದ್ಯರು ಈಗ ಇದ್ದಾರ?’

‘ಅವರು ಹೋಗಿ ಹತ್ತು ವರ್ಷಗಳ ಮೇಲೆಯೇ ಕಳೆದು ಹೋಯಿತಲ್ಲ. ಯಾಕೀಗ ಈ ವಿಷಯ?’

“ಅವರಿದ್ದಿದ್ದರೆ ನಾನು ಅವರ ಕೊರಳಪಟ್ಟಿ ಹಿಡಿದು ಕಪಾಳಕ್ಕೆ ಬಿಗಿಯುತ್ತಿದ್ದೆ”

ಮಗಳು ಮಡಿಲು ತುಂಬುವುದಕ್ಕಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಮಾರಿಯಂತೆ ಅಲೆಯುವ ಸಂಕಟ ಆಕೆಗೆ ಅರ್ಥವಾಗುತ್ತಿತ್ತು.

ಅದೆಷ್ಟೋ ಹರಕೆ ಹಾಡು ಹೇಳಿಕೊಂಡಳು, ಉರುಳು ಸೇವೆಗೈದಳು. ಔಷದಿಯ ಫಲವೋ, ದೇವರ ಅನುಗ್ರಹವೋ, ನಿಯಮಿತವಾಗಿ ಮುಟ್ಟಾಯಿತು. ಕುಲೋದ್ಧಾರಕನೊಬ್ಬ ದಕ್ಕಿದ ನಂತರ ಮುಟ್ಟಿನದು ಹಳೇ ಕತೆ.

‘ಇಷ್ಟು ದಿನ ಪಟ್ಟ ಪಾಡೆಲ್ಲವೂ ಇದೇ ಸುಖಕ್ಕಾ,.?’

ಏನೂ ಹೇಳದೆ ಸುಮ್ಮಗೆ ಮಗನನ್ನೇ ನೋಡಿದೆ.

ನನ್ನೊಳಗಿನ ಸಂಕಟದ ಸುಯಿಲಿನ ಕಿಂಚಿತ್ತು ಎಳೆಯೂ ಅವನೊಳಗೆ ಇಳಿಯಲಿಲ್ಲವೇ?

ಅವನು‌ ಮಾತಾಡಲು ಶುರು ಮಾಡಿದಾಗ ಕೆಲವೊಮ್ಮೆ ಅವನ ಅಪ್ಪನ ಸ್ವರದಂತೇ ಕೇಳಿಸುತ್ತಿತ್ತು. ಆಗೆಲ್ಲಾ ನಾನು ತಡಬಡಿಸುತ್ತಿದ್ದೆ. ಈಗಲೂ ಅದೇ ದಾಟಿಯಲ್ಲಿ,

“ಅವರು ಹೇಳಿದರು ಅಂದ ಮಾತ್ರಕ್ಕೆ ಡ್ಯಾಡಿ ಪ್ರೇಮಾ ಆಂಟಿ ಜೊತೆ ಮಾತು ಬಿಡ್ತಾರೆ , ತಿರುಗಾಡೋದು ಬಿಡ್ತಾರೆ ಅಂತ ಅಂದುಕೊಂಡಿದ್ದೀಯ? ಮಾಮನ ಮನೆಯವರು ಎಷ್ಟು ದಿನ ನಮ್ಮ ಜೊತೆ ಇರುತ್ತಾರೆ? ಕೊನೆಗೆ ನಾನು ನೀನು ಡ್ಯಾಡಿ ಮಾತ್ರ ತಾನೇ ಇರಬೇಕಾದದ್ದು?”

ಇನ್ನೂ ಹದಿನೈದು ತುಂಬದ,ಪೂರ್ತಿಯಾಗಿ ಹದಿಹರೆಯಕ್ಕೆ ಕಾಲಿಡದ ಇವನು ಇಷ್ಟೆಲ್ಲ ನನಗೆ ಬುದ್ದಿ ಹೇಳುವಷ್ಟು ಪ್ರಪಂಚ ಕಂಡಿರುವನಾ?

ಅವನು ಸಣ್ಣವನು ಅಂತ ಅವನ ಮಾತನ್ನು ತಳ್ಳಿ ಹಾಕುವ ಹಾಗಿಲ್ಲವಲ್ಲ? ಕೊನೆಗೂ ನಾನು ಇರಬೇಕಾದದ್ದು ಇವನ ಅಪ್ಪನೊಂದಿಗೇ ಅನ್ನುವುದನ್ನ ಇವನೂ ಕೂಡ ನಿರ್ಧರಿಸಿಬಿಟ್ಟಿದ್ದಾನಲ್ಲ?

ಇವರೆಲ್ಲರೂ ತನ್ನ ವ್ಯಕ್ತಿತ್ವದ ಒಂದೊಂದೇ ಪದರನ್ನ ಕಿತ್ತು ಕಾಲಡಿಗೆ ಬಿಸಾಡಿದಂತೆ ಅನ್ನಿಸತೊಡಗಿತು.

ನಿನಗೂ ಗೊತ್ತಲ್ಲವಾ ಸುಧಾ..?

ಆ ರಾತ್ರಿ ನಾನು ಬಸ್ಸು ಹತ್ತುವ ಮುನ್ನ,” ನೀ ಬರುವುದಾದರೆ ನಿನ್ನ ಮನೆಯವರನ್ನೆಲ್ಲ ಕರೆದುಕೊಂಡು ಬಾ, ಯಾವುದಾದರೂ ಒಂದು ಇತ್ಯರ್ಥ ಆಗಲೇಬೇಕಿದೆ, ಇಲ್ಲದಿದ್ದರೆ ನೀ ಬರುವುದೇ ಬೇಡ”

ಎಂದು ಎಷ್ಟು‌ ನಿಷ್ಟುರವಾಗಿ ಕಡ್ಡಿ ತುಂಡು ಮಾಡಿಬಿಟ್ಟಂತೆ ಹೇಳಿಬಿಟ್ಟನಲ್ಲ?

ಬೇರೆಯವರಿಗೆ ಹೇಳಿದಷ್ಟು ಸುಲಭವಲ್ಲ ಅವನನ್ನು ಅನುಸರಿಸುವುದು.

ಅವನು ಒಮ್ಮೆ ಹಾಗೆ ಹೇಳಿದರೆ ಮುಗಿಯಿತು, ಮತ್ತೆ ಎರಡನೆ ಮಾತಿಗೆ ಅವಕಾಶವೇ ಇರುವುದಿಲ್ಲ.

ನಮ್ಮ‌ ನಡುವೆ ಮೊದಲೆಲ್ಲಾ ಹೀಗೆ ಮನಸ್ತಾಪಗಳು ಬಂದಾಗಲೆಲ್ಲಾ ಯಾವೊತ್ತೂ ತಪ್ಪಿತಸ್ಥಳ ಸ್ಥಾನದಲ್ಲಿ ನಾನೇ ನಿಲ್ಲುವ ಕಾರಣ ಚರ್ಚೆಗೆ ಇಳಿಯುವುದ ಯಾವತ್ತೋ ಬಿಟ್ಟಿರುವೆ. ಸಣ್ಣ ಚರ್ಚೆಗಳೂ ಎಷ್ಟು ದೊಡ್ಡ ಕಲಹಕ್ಕೆ ದಾರಿ ಮಾಡಿ ಕೊಡುತ್ತಿದ್ದವೆಂದರೆ ರಾತ್ರಿ ಅಕ್ಕಪಕ್ಕದ ಮನೆಯವರಿಗೆಲ್ಲ ಗೊತ್ತಾಗಿ ಬಿಡುತ್ತಿತ್ತು. ಅವನೋ ಬೆಳಗೆ ಎದ್ದು ಹಾಲು ಪೇಪರ್ ಅಂತ ಕ್ಯಾರೇ ಇಲ್ಲದೆ ಗುಡುಗುಡು ಬೈಕ್ ಸದ್ದು ಮಾಡಿ ಹೋದರೆ, ನಾನೋ ಮುಖ ತೊಳೆದು ಹೊಸಿಲಿಗೆ ರಂಗೋಲಿ ಹಾಕಲೆಂದು ಬಾಗಿಲು ತೆಗೆದು ಹೊರಗೆ ಇಣುಕುವುದಕ್ಕೂ ನಾಚಿಕೆ. ಅಕ್ಕಪಕ್ಕದವರೆಲ್ಲ ತಲೆ ಹೊರಗೆ ಹಾಕಿ ಎಂದಿನಂತೆ,

‘ಏನು ನಿನ್ನೆ ರಾತ್ರಿ ಗಲಾಟೆ?’

ಕೇಳಿ ಬಿಡ್ತಾರೋ ಅಂತ ಮುಜುಗರ‌ ಆಗುತ್ತಿತ್ತು.

ಜಗಳಕ್ಕೆ ಇಂತದೇ ಕಾರಣ ಬೇಕಿಲ್ಲ.

‘ರ್ರೀ..ಇವತ್ತು ಶರಣ್ಯನ ಮನೆಗೆ ಹೋಗಿ ಬರೋಣವಾ?

ಅವಳ ಮಗಳ ಡೆಲಿವರಿ ಆಗಿದೆ. ಹೆಣ್ಣು ಮಗು ಅಂತೆ. ಅವರು ನಮ್ಮ ಮನು ಹುಟ್ಟಿದಾಗ ನೋಡಲು ಬಂದಿದ್ದರು. ಹೋಗ್ತಾ ಏನಾದರೂ ತಕೊಂಡು ಹೋಗುವ’

‘ನೀ ಬೇಕಾದರೆ ಹೋಗಿ ಬಾ, ನನಗೆ ಪುರುಸೊತ್ತಿಲ್ಲ’

‘ಯಾರೇ ಕರೆದರೂ ಹಾಕಿದ ಅಂಗಿಯಲ್ಲಿ ಹೊರಟು ಬಿಡುವ ನಿಮಗೆ ನಾ ಕರೆದಾಗ ಯಾವೊತ್ತೂ ಪುರುಸೊತ್ತಿಲ್ಲ’ ಹುಸಿ ಮುನಿಸಿನಿಂದ ಹೇಳಿದ್ದಷ್ಟೇ.‌

ಅಲ್ಲಿಗೆ‌ ಮತ್ತೊಂದು ರೌದ್ರಾವತಾರದ ಅಂಕ ಶುರುವಾಗುತ್ತಿತ್ತು.

ಕಟ್ಟಿಕೊಂಡ ಹೆಂಡತಿಯಾಗಿ ಅಷ್ಟೂ ಹೇಳುವ ಹಕ್ಕಿಲ್ಲವಾ ನನಗೆ?!

ಒಮ್ಮೊಮ್ಮೆ ಎಷ್ಟು ಗಟ್ಟಿಯಾಗಿ ಹಿಡಿದಿಟ್ಟುಕೊಂಡರೂ ತುಟಿ ಮೀರಿ ಮಾತು ಮುಗುಚಿಯೇ ಬಿಡುತ್ತದೆ ನೋಡು!

ಅಷ್ಟೇ ಸಾಕು, ‘ಮನೆಗೆ ಬಂದು ಹೊಕ್ಕುವ ಮುಂಚೆ ಶುರುವಾಯಿತು ಇವಳದು. ದರಿದ್ರ ಹೆಂಗಸು. ನಾನೇನು ನಿನ್ನನ್ನು ಹೋಗುವುದು ಬೇಡ ಅಂದೆನಾ? ಯಾವಾಗ ನೋಡಿದರೂ ಕಿರಿಕಿರಿ. ‘

ಯಾವ ವಿಷಯಕ್ಕೆ ಹೇಗೆ ಜಗಳ‌ ಶುರುವಾಗುತ್ತದೆ ಅನ್ನುವುದೇ ಗೊತ್ತಾಗುತ್ತಿರಲಿಲ್ಲ. ಮತ್ತು ಅದು ಎಲ್ಲೆಲ್ಲಿಗೋ ಹೋಗಿ,

‘ಕಣ್ಣು ಕೆಕ್ಕರಿಸಿಕೊಂಡು, ನನಗೆ ಎರಗಲು ಬರುವುದು ಮತ್ತು ನಾನು ಹೆದರಿ ನಂದು ತಪ್ಪಾಯ್ತು..ತಪ್ಪಾಯ್ತು.. ಇನ್ನು ಮುಂದೆ ಹಾಗೆ ಮಾತಾಡಲ್ಲ ..ದಮ್ಮಯ್ಯ..’

ಅಂತ ಅವನ ಕಾಲಿಗೆರಗಿದ ಮೇಲೆಯೇ ತುಸು ತಣ್ಣಗಾಗುವುದು.

ಇದು ಎಲ್ಲಿಯ ತನಕ?!

ಮನು ಬೆಳೆಯುತ್ತಿರುವ ಹುಡುಗ. ಅದೆಷ್ಟೋ ಸಲ ಇದಕ್ಕೆಲ್ಲ ಮೂಕ ಪ್ರೇಕ್ಷಕನಾಗಿದ್ದಾನೆ. ಅವನಿಗೊಂದು ಒಳ್ಳೆ ಬಾಲ್ಯ ಕೊಡಲಾಗಲಿಲ್ಲ ಅನ್ನುವ ಪಾಪಪ್ರಜ್ಞೆ ಯಾವೊತ್ತೂ ನನಗೆ ಕಾಡಿದೆ. ಈಗ ಅವನದೂ ಗರ್ವ ಶುರುವಾಗಿದೆ. ಹೇಳಿದ ಮಾತು ಅಷ್ಟಾಗಿ ಕೇಳುವುದಿಲ್ಲ. ಮುಂದೆ ಸರಿ ಆಗ್ತಾನೆ, ಈಗ ಹರೆಯದ ಹುಡುಗಾಟಿಕೆ ಅಂತ ನನ್ನನ್ನು ನಾನೇ ಸಮಾಧಾನಿಸಿ ಕೊಳ್ಳುತ್ತಿದ್ದೇನೆ. ನಮ್ಮ ಒಳಗಿನ ವೈಮನಸು ಅವನ ಬೆಳವಣಿಗೆ ಮೇಲೆ ಕುಂಠಿತಗೊಳ್ಳಬಾರದು ಅನ್ನುವುದಕ್ಕೆ ತಾನೇ ನಾನು ವಾತಾವರಣ ತಂಪಾಗುವಂತೆಯೇ ನೋಡಿಕೊಳ್ಳುವುದು.

*** 

ಸುಮಾರು ಎರಡು ಗಂಟೆ ಆಗಿರಬಹುದು ನಿಧಿ ಬಸ್ಸಿನಿಂದ ಇಳಿಯುವಾಗ.

ನಾವಿಬ್ಬರೂ ಹಿಂದಿನ ರಾತ್ರಿ ಗೆಳತಿ ವಿನುತಾಳ ಮಗಳ ಮದುವೆ ಕಾರ್ಯಕ್ರಮಕ್ಕೆ ಹೋಗಿ ವಿನುತಾಳೇ ಗೊತ್ತು ಮಾಡಿದ್ದ ರೆಸಾರ್ಟ್‌ನಲ್ಲೇ ತಂಗಿದ್ದೆವು. ನಿಧಿ ನಮ್ಮೂರಿನವಳೇ ಆದರೂ ಮನೆ ತುಂಬಾ ದೂರನೇ ಇತ್ತು. ಪೋನಿನಲ್ಲಿ ಪ್ರತಿನಿತ್ಯದ ಮಾತುಕತೆಗೇನೂ ಕೊರತೆ ಇರಲಿಲ್ಲ. ಊರಿನಲ್ಲಿ ಯಾವುದೇ ಕಾರ್ಯಕ್ರಮ ಇರಲಿ ನಾವಿಬ್ಬರೂ ಜತೆಯಾಗುತ್ತಿದ್ದೆವು. ಹಾಗೇ ನೋಡಿದರೆ ಅವಳಿಗಿಂತ ಹೆಚ್ಚೇ ನಾನು ಒಳಗಿನದ್ದೆಲ್ಲಾ ಒದರಿ ಹಗುರವಾಗುತ್ತಿದ್ದದ್ದು. ಅವಳು ಹಾಗಲ್ಲ, ಸಮಸ್ಯೆ ಶುರುವಾದಾಗ ಏನು ಹೇಳುವುದಿಲ್ಲ, ಅದು ಮುಗಿದು ಪರಿಹಾರ ಸಿಕ್ಕಿದ ಮೇಲೆ ಯಾವತ್ತೋ ಒಂದು ದಿನ ನಿರ್ಲಿಪ್ತವಾಗಿ ಹೇಳಿ ಮುಗಿಸುತ್ತಾಳೆ. ಇಷ್ಟು ದಿನ ಆ ಬೇಗೆಯನ್ನ ಒಡಲೊಳಗೆ ಹೇಗೆ ಕಟ್ಟಿಟ್ಟುಕೊಂಡಿದ್ದಳೋ ಅಂತ ನನಗೆ ಅಚ್ಚರಿ ಆಗುವುದಿತ್ತು. ನಾನೋ ತುಸು ಬೇಜಾರಾದರೂ ಅವಳಿಗೊಮ್ಮೆ ಪೋನಾಯಿಸಿ ಒದರಿ‌ದರೇ ಸಮಾಧಾನ.‌ ಆಗೆಲ್ಲಾ ಅವಳು, ತನ್ನ ಎಂದಿನ‌ ದಾಟಿಯಲ್ಲಿ, ‘ಸಾಯಲಿ ಬಿಡು ಸುಧಾ.. ನಮಗೂ ಒಳ್ಳೆ ದಿನ‌ ಉಂಟು,ನಂಗೂ ತುಂಬಾ ಹೇಳಲಿಕ್ಕುಂಟು, ಈಗ ಆಗುವುದಿಲ್ಲ, ಇನ್ಯಾವತ್ತದರೂ ಹೇಳುವೆ’ ಅಂತ ಹೇಳಿ‌ ಆ ವಿಷಯವನ್ನೇ ಆಕೆ ಮರೆತುಬಿಡುತ್ತಿದ್ದಳು.

ಇವತ್ತು ಅಷ್ಟೇ ತಣ್ಣಗೆ, ಅಣ್ಣ ಬರ್ತಾನೆ ಈಗ ನೀನೇನೂ ಹೆದರಬೇಡ‌ ಅಂತಂದು ನಡುರಾತ್ರೆ ಇಳಿದು ಹೋದಳು.‌ ನನಗೆ ಎದೆ ಡವಗುಟ್ಟುತ್ತಿತ್ತು. ತಲೆಯ ನರಗಳೆಲ್ಲ ಹೆಣೆದುಕೊಂಡು ಸಿಕ್ಕು ಸಿಕ್ಕಾಗಿವೆ. ಒಬ್ಬೊಬ್ಬರದು ಒಂದೊಂದು ಕತೆ. ಬದುಕಿನ ಸಿಕ್ಕಿನೊಳಗೆ ನಾವು ಸಿಕ್ಕಿ ಹಾಕೊಂಡದ್ದಾ? ಅಥವಾ ನಾವೇ ಬದುಕನ್ನ ಸಿಕ್ಕುಗೊಳಿಸಿಕೊಳ್ಳುವುದಾ? ಒಟ್ಟಾರೆಯಾಗಿ ಸಿಕ್ಕುಗಳನ್ನ ಬಿಡಿಸಿಕೊಳ್ಳುವುದರಲ್ಲೇ ಬದುಕು ಮುಗಿದು ಹೋಗುತ್ತಿದೆ.

ಆ ರಾತ್ರಿ ಪದೇ ಪದೇ ಬರುವ ಅವಳ ಗಂಡನ ಪೋನಿನಿಂದಾಗಿ ನಮಗಿಬ್ಬರಿಗೂ ನಿದ್ದೆಯಿಲ್ಲ. ಮರುದಿನ ಮದುವೆ ಮುಗಿಸಿ ರಾತ್ರೆ ಬಸ್ಸು ಹತ್ತಬೇಕು. ನಿಧಿಯ ಮುಖ ಕಳಾಹೀನವಾಗಿತ್ತು. ಬಸ್ಸಿನಲ್ಲೂ ಅಷ್ಟೇ, ಪ್ರಯಾಣದ ಅಷ್ಟೂ ಹೊತ್ತು ಅವಳು ಪೋನು ಕಿವಿಗೆ ಅಂಟಿಸಿಕೊಂಡೇ ಇದ್ದಳು. ಎಂತ ಇವಳದು ಇಷ್ಟು ಮಾತು! ಅಂತ ನಾನೂ ಒಳಗೊಳಗೆ ಗೊಣಗಿದ್ದೆ. ಎಲ್ಲ ಶಾಸ್ತ್ರ ಮುಗಿಸಿ ರಾತ್ರಿ ಊಟಕ್ಕೆ ಕುಳಿತುಕೊಂಡಾಗ ಮತ್ತೆ ಆಕೆಯ ಪೋನು ರಿಂಗಣಿಸಿತು.

‘ಎಲ್ಲಾ ಇದ್ದಾರೆ, ಆಮೇಲೆ ಮಾತಾಡ್ತೇನೆ. ಈಗ ಪೋನಿನಲ್ಲಿ ಚಾರ್ಜ್ ಇಲ್ಲ‌’

ಅಂತ‌ ಆಕೆ ಗಾಬರಿಯಿಂದ ಪಿಸುದನಿಯಲ್ಲಿ ಹೇಳುತ್ತಿದ್ದಳು. ಆಕೆ ಊಟದ ಶಾಸ್ತ್ರವಷ್ಟೇ ಮಾಡಿದ್ದಳು. ರೂಮಿಗೆ ಬಂದು ಪೋನು ಚಾರ್ಜಿಗೆ ಹಾಕಿ ಹಾಸಿಗೆ ಮೇಲೆ ಬಿದ್ದು ಒಂದೇ ಸಮ ರೋದಿಸತೊಡಗಿದಳು.

‘ಏನೇ ನಿಧಿ..ಎಂತಾಯ್ತು?’

ನಾನು ಗಾಬರಿ‌ ಬಿದ್ದೆ.

ದುಃಖಳಿಸುತ್ತಲೇ ಅರೆಬರೆ ಹೇಳತೊಡಗಿದಳು. ಪ್ರಸಾದನ ಪ್ರೇಮ ಪ್ರಕರಣಗಳು..ಒಂದಲ್ಲ, ಎರಡಲ್ಲ. ಯಾವುದನ್ನೂ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದರೆ ನಾನು ಅನುಮಾನದ ಪಿಶಾಚಿ.

ನಾನು ಎಲ್ಲವೂ ಗೊತ್ತಿದ್ದು ಏನೂ ಗೊತ್ತಿಲ್ಲದಂತೆ ಇರುವೆ. ಇತ್ತೀಚೆಗಂತೂ ಪ್ರೇಮಾ ಜೊತೆ ಜಾಸ್ತಿ ಓಡಾಟ.

ಮೊನ್ನೆ ಒಂದು ದಿವಸ ಶರಣ್ಯ ಮನೆಗೆ ಹೋಗುವ ಅಂದಾಗ ಬರಲಿಲ್ಲ. ಆದರೆ ಮಾರನೇ ದಿನವೇ ಪ್ರೇಮಾ ಮತ್ತೆ ಅವಳ ಮಕ್ಕಳನ್ನ ಮಂಗಳೂರುವರೆಗೆ ಕರೆದುಕೊಂಡು ಹೋಗಿ ಅವಳ ಮಗಳನ್ನ‌ ಶಾಲೆಗೆ ಅಡ್ಮಿಷನ್ ಮಾಡಿ ಬಂದಿದ್ದಾನಂತೆ. ಅದು ನಮ್ಮ ಕಾರಿನಲ್ಲೇ. ನನಗೆ ಹೇಗಾಗಬೇಡ ಹೇಳು? ಅಷ್ಟಕ್ಕೂ ನಾನೇನು ಕಲ್ಲುಬಂಡೆಯಾ?

ಇವರಿಗೆ ಸೊಂಟ ನೋವಿನಿಂದ ದೂರ ಡ್ರೈವ್ ಮಾಡಲಿಕ್ಕೆ ಆಗುವುದಿಲ್ಲ, ಆ ಕಾರಣಕ್ಕೆ ಡ್ರೈವರ್ ಮಾಡಿಕೊಂಡು‌ ಹೋದದ್ದು. ಡ್ರೈವರ್‌ಗೆ ಇದೆಲ್ಲ ಸೂಕ್ಷ್ಮಗಳು ಗೊತ್ತಾಗದೇ ಇರುತ್ತದಾ?

ಅವನು ಬಂದು ಅಲ್ಲಿ ಇಲ್ಲಿ ಇವರ ವಿಷಯವೆಲ್ಲ ಊದಿದ್ದಾನೆ. ಗಾಸಿಪ್‌ಗಳು ಯಾರಿಗೆ ಬೇಡ? ಎಲ್ಲರಿಗೂ ಅದು ಹಂಚುವಷ್ಟು ರುಚಿ. ಅದು ಊರು ಸುತ್ತಿ ನನ್ನವರೆಗೆ ಬಂದು ತಲುಪಿದೆ.

‘ನೀವು ಪ್ರೇಮಾ ನಿನ್ನೆ ಮಂಗಳೂರು ಹೋಗಿದ್ರಂತೆ’ ಅಂತ ನಿನ್ನೆ ಬಸ್ಸಿನಲ್ಲಿ ಬರುವಾಗ ಒಂದು ಮಾತು ನನ್ನ ಬಾಯಿ ತಪ್ಪಿ ಹೊರಗೆ ಬಿದ್ದಿತ್ತು ಅಷ್ಟೇ,

ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ‌ ಎನ್ನುವಂತೆ , ‘ನಿನಗೆ ಸಂಶಯ.. ಯಾರು ಹೇಳಿದ್ದು ನಿನಗೆ.. ಅಥವಾ ನೀನೇ ಉಂಟು ಮಾಡಿ ಊರು ಪೂರ ಬಿತ್ತುವುದಾ?!’

ಅಂತ ಹೇಳಿದ್ದನ್ನೇ ಒಂದೇ ಸಮನೆ ನಿನ್ನೆಯಿಂದ ಹಿಂಸೆ ಕೊಡುತ್ತಾ ಎಲ್ಲವನ್ನೂ ನನ್ನ‌ ತಲೆ ಮೇಲೆ ಹೊರೆಸುತ್ತಿದ್ದಾನೆ. ಪಾರಾಗುವ ವರಸೆ ಅವನಿಗೆ ಕರಗತ.

ಅಷ್ಟರಲ್ಲಿ, ಮತ್ತೆ ಪೋನು ರಿಂಗಣಿಸುತ್ತದೆ.!

“ಬಾ..ಬಾ.. ಬೆಂಕಿ ಹಚ್ಚಿದ್ದೀಯಲ್ಲ..ನೀನೇ ಇತ್ಯರ್ಥ ಮಾಡು’ ಅನ್ನುತ್ತಾ, ಕಾನ್ಪರೆನ್ಸ್‌ ಕಾಲ್ ಹಾಕುತ್ತಾನೆ.

“ಹೇಳು..ಹೇಳು ..ಈಗ ..ನಿನ್ನಿಂದಾಗಿ ಪ್ರೇಮಾಳಿಗೆ ಬೇಸರ ಆಗಿದೆ’’ ರೇಗುತ್ತಾನೆ.

ಅತ್ತಲಿನಿಂದ ಪ್ರೇಮಾ, ತೀರಾ ಸಣ್ಣ ದನಿಯಲ್ಲಿ,

‘ನಾವಿಬ್ಬರೂ ಸ್ನೇಹಿತರು, ಅದಕ್ಕೆ ನೀವು ಯಾಕೆ ಅನುಮಾನ ಪಡ್ತಾ ಇದ್ದೀರಿ?’

‘ನೋಡಿ, ನಾವು ಸಮಾಜಕ್ಕೆ ಹೆದರಬೇಕು, ನಮಗೂ ಮಕ್ಕಳಿದ್ದಾರೆ’

ನಿಧಿ ಆದಷ್ಟು ಮೆತ್ತಗೆ ಉಸುರುತ್ತಾಳೆ.

‘ ಅಂತದ್ದೇನಾಗಿದೆ ಈಗ? ಮೊದಲು ನಿಮ್ಮ ಗಂಡನ ಬಗ್ಗೆ ನಂಬಿಕೆ ಇಟ್ಟುಕೊಳ್ಳಿ.’

ಪ್ರೇಮಳೇ ಬುದ್ಧಿವಾದ ಹೇಳುತ್ತಿದ್ದಾಳೆ.

‘ನಿಮ್ಮ ಗಂಡನಿಗೆ ನಿಮ್ಮ ಬಗ್ಗೆ ಯಾರಾದರೂ ಹೇಳಿದರೆ ಏನಾಗಬಹುದು?’

ಅವರಿಗೆ ಇಷ್ಟೆಲ್ಲಾ ಗುಲ್ಲು ಆದದ್ದು ಗೊತ್ತಿದೆಯಾ?’ ನಿಧಿ ಕೇಳುತ್ತಾಳೆ.

‘ಗೊತ್ತಿದೆ.

ಅವರಿಗೆ ನನ್ನ ಮೇಲೆ ನಂಬಿಕೆ ಇದೆ.’

‘ಅವರೆಲ್ಲಿ ಇದ್ದಾರೆ ಈಗ?’,

‘ಇಲ್ಲೇ ಇದ್ದಾರೆ.’

ಪೋನ್ ಸ್ಪೀಕರ್ ಲೌಡ್ ಇತ್ತು.

ನನಗೆ ಎಲ್ಲವೂ ಕೇಳಿಸುತ್ತಿತ್ತು.

ಇವರ ನಡುವೆ ಏನೂ ಇಲ್ಲ, ನಾನು ಸುಮ್ಮಗೆ ಸಂಶಯ ಪಟ್ಟುಕೊಳ್ತೀನಿ ಅನ್ನುವ ಪಶ್ಚಾತ್ತಾಪ ಭಾವದಿಂದ ನಿಧಿ ನನ್ನೆಡೆಗೆ ನೋಡುತ್ತಾಳೆ.

ಇದೆಲ್ಲೋ ಮಿಸ್ ಹೊಡೀತದೆ ಅಂತ ನನಗೆ ಅನ್ನಿಸಿತು.

ತಕ್ಷಣ ನಿಧಿಗೆ ತಿವಿದು, ಅವಳ ಗಂಡನಿಗೆ ಪೋನು ಕೊಡಲಿಕ್ಕೆ ಹೇಳು ಅಂದೆ.

‘ಸರಿ..ಬಿಡಿ, ಒಮ್ಮೆ ನಿಮ್ಮ ಯಜಮಾನರಿಗೆ ಪೋನು ಕೊಡಿ’

ಅಂದಳು.

ತಕ್ಷಣ ಕಾಲ್ ಕಟ್ ಆಯಿತು.

ಮತ್ತೆ ಪ್ರಸಾದನದ್ದು ಮಾತ್ರ ಪೋನು.

ಅದೇ ಹೇಳಿದ್ದೇ ಹೇಳುವುದು..

“ಮನೆಯವರನ್ನ ಕರೆದುಕೊಂಡು ಬರುವುದಾದರೆ ಮಾತ್ರ ಮನೆ ಮೆಟ್ಟು ಹತ್ತು” ಅಂತ ಫೋನಿಟ್ಟಿದ್ದ.

‘ನಮಗೆ ನಮ್ಮದೇ ಆದ ನೆಲೆಯೇ ಇಲ್ಲವಾ?’

ನಿಧಿ ನಿಡುಸುಯ್ದಿದ್ದಳು.

ಇಬ್ಬರೂ ಜತೆಗೇ ಹೋದವರು, ನನಗೂ ಅವಳನ್ನು ಆ ಕತ್ತಲಲ್ಲಿ ಬಿಡುವಂತಿಲ್ಲ, ಕಾಯುವಂತೆಯೂ ಇಲ್ಲ. ಮೊದಲ ದಿನವೇ ಅಣ್ಣನಿಗೆ ಪೋನು ಮಾಡಿ ಹಾದಿಬದಿಯಲ್ಲಿ ಕಾಯಲು ಹೇಳಿದ್ದಳು.

***

ಬೆಳಬೆಳಗೆ ಅಣ್ಣ, ಅತ್ತಿಗೆ ಅಮ್ಮ,ಅಪ್ಪನ ಜೊತೆ ಮನೆ ತಲುಪಿದಾಗ ಆಗಷ್ಟೇ ಅವನು ಎದ್ದಂತಿತ್ತು. ಮನು ಇನ್ನೂ ಮಲಗಿಯೇ ಇದ್ದ.

ನಾನೇ ಅಡುಗೆ ಮನೆ ನುಗ್ಗಿ ಬೆಳಗಿನ ತಿಂಡಿ ಮಾಡುವಷ್ಟು ವಾತಾವರಣ ಸಹಜವಾಗಿತ್ತು.

“ ಏನ್ ಭಾವ? ಎಂತ ಸಮಸ್ಯೆ? ಯಾಕೆ ಬರಹೇಳಿದ್ದು?”ಅಣ್ಣನೇ ಪೀಠಿಕೆ ಇಟ್ಟಿದ್ದ.

“ಸಮಸ್ಯೆ ನನ್ನದೇನಿಲ್ಲ, ಸಮಸ್ಯೆ ನಿಮ್ಮ‌ತಂಗಿಯದೇ

ಅವಳನ್ನೇ ಕೇಳಿ.”

ಇದು ಯಾವ ತರದ ನಾಟಕ? ಎಲ್ಲ‌ ಸೂಕ್ಷ್ಮಗಳನ್ನ ಹೇಗೆ ಬಿಡಿಸಿ ಹೇಳುವುದು?

ಮಗ ಬೇರೆ ಮನೇಲಿ ಇದ್ದಾನೆ. ಎಷ್ಟೆಂದರೂ ಅಣ್ಣನ ಹೆಂಡತಿಯ ಎದುರು ಗಂಡನನ್ನ ತಪ್ಪಿತಸ್ಥ ಸ್ಥಾನದಲ್ಲೇ ನಾನಾಗಿಯೇ ನಿಲ್ಲಿಸಲು ಮನಸು ಒಪ್ಪುತ್ತಿಲ್ಲ.

“ಅಲ್ಲ ಭಾವ, ಅವಳು ಆ ರಾತ್ರೆ ಎಲ್ಲಿಗೆಂತ ಹೋಗುದು?

ನಾ ಮನೆಯಲ್ಲಿ ಇದ್ದ ಕಾರಣ ಆಯಿತು. ಇಲ್ಲಾಂದ್ರೆ?”

“ಅದಕ್ಕೆ ಹೇಳುದು ,ಮರ್ಯಾದೆಯಿಂದ ಇರಬೇಕು. ಸುಮ್ಮಸುಮ್ಮಗೆ ಇಲ್ಲಸಲ್ಲದ ಆರೋಪಗಳನ್ನ ಹೊರೆಸಬಾರದು.”

ಪ್ರೇಮ ಮೊದಲಿಂದನೇ ಪರಿಚಯ, ಜೊತೆಗೇ‌ ಓಡಾಡಿಕೊಂಡು ಬೆಳೆದವಳು. ಎಲ್ಲೋ ಆಕಸ್ಮಿಕವಾಗಿ ಜತೆಜತೆಯಾಗಿ ಸಿಕ್ಕರೆ ಏನಾಯಿತೀಗ?

ನಾನೇನು ಮನೆಗೆ ದುಡಿದು ತಂದು ಹಾಕುತ್ತಿಲ್ಲವಾ? ಮಗನ ಪೀಸು ಕಟ್ಟುತ್ತಿಲ್ಲವಾ? ಇವಳನ್ನು ಹೋಗುವಲ್ಲಿಗೆ ಅಡ್ಡಿ ಮಾಡಿರುವೆನಾ?

ಇಷ್ಟಿರುವಾಗ ಇವಳೇ ಊರಿಡೀ ಗುಲ್ಲು ಮಾಡಿದರೇ?

ಸಮಾಧಾನ ಮಾಡಿ, ಇಬ್ಬರಿಗೂ ಬುದ್ದಿ ಹೇಳಿ ಹೋಗುವುದಷ್ಟೇ ಮನೆಯವರಿಂದ ಆಯಿತು. ಮನು ಎಲ್ಲದಕ್ಕೂ ಸಾಕ್ಷಿಯಾಗುತ್ತಾ ಸೋಪದ ಮೂಲೆಯಲ್ಲಿ ಕುಳಿತ್ತಿದ್ದ.

ಎಷ್ಟೆಂದರೂ ನನ್ನದು ಹೆತ್ತ ಕರುಳು ತಾನೇ?

ಅವನ ಬಳಿಯಲ್ಲದೆ ತನ್ನ ಒಡಲ ಬೇಗೆ ಯಾರೊಂದಿಗೆ ಹೇಳಿಕೊಳ್ಳಲಿ ಹೇಳು?

ಇಷ್ಟೆಲ್ಲ ಆಯಿತು!!!

ಎಷ್ಟೋ ತಿಂಗಳುಗಳ ಬಳಿಕ ಮತ್ತೆ ಹೊಟ್ಟೆ ನೋವು. ಹಣೆಗೂ ಹೊಟ್ಟೆಗೂ ಚಾಲೆಮುಂಡು ಬಿಗಿದುಕೊಂಡು ಒದ್ದಾಡುತ್ತಿರುವೆ.

ನಮ್ಮ ಕಡೆ ಮದುವೆ ಮಾಡಿ ಕಳಿಸುವಾಗ ತವರು ಮನೆಯಿಂದ ಚೌಕುಳಿ ಚಾಲೆಮುಂಡೊಂದನ್ನ ಪೆಟ್ಟಿಗೆ ತುಂಬಿಸಿ ಕಳಿಸುವುದು ಪದ್ಧತಿ.

ಸದ್ಯ! ಚಾಲೆಮುಂಡು ಪೆಟ್ಟಿಗೆ ತುಂಬಿ ಕಳಿಸಲು ನನಗೆ ಹೆಣ್ಣು ಮಗಳಿಲ್ಲ. ಅಂತ ನೋವಿನಲ್ಲೂ ನಕ್ಕಳು.

ನನಗರಿವಿಲ್ಲದೆಯೇ ಕಣ್ಣು ಹನಿಯ ತೊಡಗಿದವು. ಎಲ್ಲಿತ್ತು ಇಷ್ಟು ದಿನ ಈ ಕಾವು? ಯೋಚಿಸಿದಷ್ಟೂ ಆಳದಲ್ಲಿ ಒಮ್ಮೊಮ್ಮೆ ಭೋರ್ಗೆರತದಂತೆ, ಒಮ್ಮೊಮ್ಮೆ ಸುಡುಸುಡು ಕುದಿದಂತೆ ಅನ್ನಿಸಿ ತಲೆ ಮಣಭಾರ.

ಅತ್ತಲಿನಿಂದ ಅವಳು ಭಾರವಾದ ದ್ವನಿಯಲ್ಲಿ ಕುಂಞಿರಾಮ ವೈದ್ಯ ಸರಿಯಾಗೆ ಮದ್ದು ಕೊಟ್ಟಿದ್ದರು, ನಾನು ‘ಮುಟ್ಟಾಗದ ಹೆಣ್ಣೇ’

ಆಗಿದ್ದರೆ ಚೆಂದಿತ್ತು ಕಣೇ.. ಅಂತ ಪೋನಿಟ್ಟಳು.

ನಾನು ತಲೆ ನೋವು ತಾಳಲು ಅಸಾಧ್ಯವಾಗಿ

ಹಣೆಗೆ ಚಾಲೆಮುಂಡೊಂದ ಬಿಗಿಯತೊಡಗಿದೆ.

***

ಪದದ ಅರ್ಥ

ಚಾಲೆಮುಂಡು- ತೆಳ್ಳಗಿನ ಹತ್ತಿಯ ಮೈ ಒರೆಸುವ ಬಟ್ಟೆ. ಹೊರಗೆ ಕೆಲಸ ಮಾಡುವಾಗ ಹೆಂಗಸರು ಹೆಚ್ಚಾಗಿ ಅದನ್ನು ತಲೆಗೆ ಕಟ್ಟಿಕೊಳ್ಳುತ್ತಾರೆ. ಕೊಡಗು ಮತ್ತು ದಕ್ಷಿಣ ಕನ್ನಡದ ಅರೆಭಾಷಿಗರು ಇದನ್ನು ಚಾಲೆಮುಂಡು ಅಂತ ಕರೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.