
ತಿರುಪತಿ ಭಂಗಿ ಅವರ ಕಥೆ: ಮಸಾರಿ ಹ್ವಲಾ..
ಮಂಗ್ಳೂರ್ಗೆ ಹೆಂಡ್ತಿ ಮಕ್ಕಳ್ನ ಕರ್ಕೊಂಡ ದುಡಿಯಾಕ ಹ್ವಾದ ಧರಿಯಪ್ಪ ಊರಿಗೆ ಬರ್ದ ಭಾಳ ವರ್ಷವೇ ಗತಿಸಿತ್ತು. “ಮುಂಗಾರ ಮಳೀ ಪಾಡತಂಗ ಆಗೇತಪೋ, ಬಿತ್ತಾನ ಮೆಲ್ಲಕ ಶುರು ಹಿಡದಾವ, ಅಲ್ಲಿ ಧಮ್ಮನ ಪಗಾರ ಐತೆಂತ ಮಿಜಿಮಿಜಿ ಮಾಡಬ್ಯಾಡ, ಗಡಗ್ನ ಬಂದೆಂದ್ರ ನಿನ್ನ ಹ್ವಲಾನೂ ಬೀಜಗಾನಸೂನು” ಎತ್ತರ ದನಿ ಮಾಡಿ ಅರ್ಧಾ ಊರಿಗೆ ಕೇಳುವಂಗ ಗಡ್ಡಿಗಾಲ ತುಳಸ್ಯಾ ಪೋನನ್ಯಾಗ ಧರಿಯಪ್ಪನ ಕಿವಿಯಾಗ ಡಂಗರಾ ಹೋಡದ್ಹಂಗ ಹೇಳಿದ್ದ ಹೊಳ್ಳಮುಳ್ಳ ಹೇಳೀ ಹೇಳೀ ಅಂವನ ಹೈರಾನ ಮಾಡಿದ.
ಆ ಹೊಲ್ಕ ಹಾಕೀ ಹಾಕೀ ನಮ್ಮ ಮನಿಯಲ್ಲಾ ಸತ್ಯಾನಾಶಿ ಆಗೇತಿ ಬಿಡೋ ಮಾರಾಯನಾ,, ‘‘ನೆಚ್ಚಿದ ಎಮ್ಮಿಗೊಡ್ಡ ಕ್ವಾಣಾ ಇಳದ್ಹಂಗ ಆಗೇತಿ ನನ್ನ ಗತಿ,”, ಧರಿಯಪ್ಪ ಹೊಲದ ಮ್ಯಾಲಿನ ಸಿಟ್ಟಿಗೆ ಬ್ಯಾಸರದ ಮಾತು ಮಾತಾಡಿದ. “ಹಿಂಗಂದ್ರ ಹ್ಯಾಂಗಪೋ ನೀನೂ. ನಿಮ್ಮ ಅಪ್ಪಾ ಆ ಮಸಾರಿ ಹ್ವಲದ ಮ್ಯಾಲ ಜೀವಾನ ಇಟಗೊಂದಿದ್ದ. ಅಂವನ ಆಸೇಗೆ ಎಳ್ಳು ನೀರು ಬಿಡಬ್ಯಾಡ” ಹೊಳ್ಳಮುಳ್ಳ ಗಡ್ಡಿಗಾಲ ತುಳಸ್ಯಾ ಏನೇನಾರ ಅನಕೋತ ಧರಿಯಪ್ಪನ ಹೆಂಗಾರಾ ಮಸಲತ್ತ ಮಾಡಿ ಊರಿಗೆ ಈ ವರ್ಷ ಕರಸ್ಬೇಕಂತ ಅಂವನ ತೆಲಿಯಾಗಿದ್ದ ತತ್ವಾ, ಉಪದೇಶ ಎಲ್ಲಾನೂ ಕೂಡಿಸಿ, ಕಲಿಸಿ ಧರಿಯಪ್ಪನ ತೆಲಿಯಾಗ, ಮನಸನ್ಯಾಗ ಇಟೀಟ ಇಟೀಟ ಬಿತ್ತಿ, ಅಂವ್ನ ಚಿತ್ತ ಊರಕಡೆ ಹೊಳಸ್ಯಾಡಾಕ ಗುದಮುರಗಿ ಹಾಕಿ ಹಾಕಿ ಬ್ಯಾಸತ್ತ. ಕಡೀಕ “ನೀನರಾ ಅಂವಗ ಹೇಳಪಾ ಪುಣ್ಯಾತ್ಮಾ ನನ್ನ ಮಾತೀಗೆ ಅಂವ ಮಿಸಗ್ಯಾಡವಲ್ಲಾ” ತನ್ನ ಕೈಯಾಗಿದ್ದ ಪೋನ್ ಮಗ್ಗಲಿದ್ದ ಕೌದ್ಯಾ ರಾಮನ ಕೈಯಾಗ ಇಟ್ಟ. “ಹಲೋ ಮಾಮಾ ಆರಾಮ ಅದೀss ಅಕ್ಕಾ, ಆರಾಮ ಅದಾಳಾ, ನನ್ನ ಹೆಂತ್ಯಾರ ಹೆಂಗದಾರಾ” ಹಹ.. ಹಹ.. ಹಲ್ಲ ಕಿಸದ ನಕ್ಕ, ಒಂದ ಉಸಲನ್ಯಾಗ ಮಾತ ಮಾರುದ್ದ ಜಗ್ಗಿದ.ಕೌದ್ಯಾನ ಮಾತಿಗೆ ಧರಿಯಪ್ಪಾ ಹೂಂ ಹೂಂ ಅನ್ನುವ ಎರಡಕ್ಷರವಷ್ಟೇ ಉತ್ತರಾಡಿದ.
ಗಡ್ಡಿಗಾಲ ಹೇಳಿದ್ಹಂಗ ಈ ವರ್ಷ ಮಳಿ ಊರಾಗ ಬಲ್ಲಂಗ ಗಜ್ಜ ಹಿರ್ದೈತಿ, ವಡ್ಡಗಿಡ್ಡೆಲ್ಲಾ ಹರದ ಚಿನಾಛಿದ್ರ ಆಗ್ಯಾವ, ಕಂಟಗಾರ ಮನಿ ಮುಂದಿನ ಕೆರಿ ತುಂಬಿ ಹೊರಚೆಲ್ಲೆತಿ, ಸಣ್ಣ ಹುಡಗ್ರು ತಮ್ಮ ಹೇತಕುಂಡಿ ಅದ ನೀರಾಗ ತೊಳ್ಕೊಂಡ ಎಂಜಾಯ್ ಮಾಡ್ತಾವ, ಅಂದ್ಹಂಗ ನೀ ಈಗಿಂದದೀಗ ಬಸ್ಸ ಹತ್ತೇಬಿಡು,. ಹ್ವಲಾ ಬೀಳಗೆಡವಿ ಮತ್ತ ಹಾಳ ಹಿಡಸಬ್ಯಾಡ, ಈಗ ಹದಾ ಐತಿ. ನಾಕ ಕಾಳ ಬಿತ್ತಿ, ನಾಕ ಕಾಳ ತಕ್ಕೋಳ್ನು, ಹಿಂದಿಂದ ನೆನಪ ಮಾಡ್ಕೊಂಡ ಕುಂತ್ರ ಹೆಂಗಪಾ, ಹಿರ್ಯಾರ ಆಸ್ತಿ ತಮ್ಮ ಬೇವರಾ ರಕ್ತಾ ಸುರಿಸಿ, ಮಕ್ಕಳು ಮೊಮ್ಮಕ್ಳು ಚಂದಿರ್ಲಿ ಅಂತ ದುಡದ ಮಾಡಿಟ್ಟ ಹೋಗಿರ್ತಾರ, ನಾಂವ ಇದ್ದದ್ದ ಬೀಳಗೆಡವಿ,ಕುಂತ್ರ ಅವ್ರ ಪರಿಶ್ರಮಕ್ಕೇನ ಬೆಲೆಕೊಟ್ಹಂಗ ಅಕೈತಿ, ನೀನ ಹೇಳು.
ಕೌದ್ಯಾ ಧರಿಯಪ್ಪನ ತೆಲಿಯಾಗಿದ್ದ ಹ್ವಲದ ಮ್ಯಾಲೀದ್ದ ಜಿಡ್ಡನೆಲ್ಲಾ, ತನ್ನ ಮಾತಿನ ಸಾಬೂನಿಂದ ಹಸನ್ಹಂಗ ತಿಕ್ಕಿ ತೋಳದ. “ಹಂಗಾರ ನಾ ಇಂದ ಬಸ್ಸ ಹತ್ತಿ ಬಿಡ್ತನೋಡ, ಬೆಳಗಾಗೂತ್ಲೇ ಊರಾಗಿರ್ತಿನಿ” ಅಂದ. ಗೆಳೆಯರಿಬ್ಬರ ಮನದಾಗ ನೆಮ್ಮದಿಯ ನೆರಳು ತಂಪು ಕೊಟ್ಟಿತು.
ತನ್ದು ಹೆಂತಿದೂ, ಮಕ್ಕಳದೂ ದಿನದ ದುಡಕಿ ನೆನಸ್ಕೊಂಡ, ಎರಡ ಸಾವಿರ ಗಡಿ ಹತ್ತಿರಕ್ಕ ಇತ್ತು. ಹೊಲದ ಲಾಭ ಲೆಕ್ಕಾ ಹಾಕಿದ, ಜೀರೋ ಅನಿಸಿತು. ಮಸಾರಿ ಹ್ವಲಕ್ಕ ಅಪ್ಪ ಪಟ್ಟಪಾಡು ನೆನಪಾಗಿ, ಬಸ್ಸ ಹತ್ತಾಕ ಸಜ್ಜಾದ.
***
ಬಸ್ಸ ಹತ್ತಿ ಕುಂತಾಗ ಸೂರ್ಯಾ ತಾಯಿ ಹೊಟ್ಟಿ ಎಂದಿನಂತೆ ಸೇರಿಕೊಂಡಿದ್ದ. ಕತ್ತು ತಿರುಗಿಸಿ, ಮಂಗ್ಳೂರ ಶಹರ ನೋಡುತ್ತ ಕುಂತ, ದೊಡ್ಡ ದೊಡ್ಡ ಅಂಗಡಿ, ಮಹಲ್ಗಳು, ಹೊಟೇಲ್, ದೀಪದ ಬೆಳಕಿನ್ನಲ್ಲಿ ಜಗಮಗಿಸುತ್ತಿದ್ದವು. ಹತ್ತಾರು ವರ್ಷದಿಂದ ತನ್ನ ಬದುಕಿಗೊಂದು ನೆಲೆಕೊಟ್ಟ ಪುಣ್ಯ ನೆಲ ಮಂಗ್ಳೂರು. ಆ ನೆಲಕ್ಕೆ ಎಷ್ಟು ವಂದಿಸಿದರೂ ಕಡಿಮಿನೇ ಅನ್ನುವ ಭಾವ ಧರಿಯಪ್ಪನ ಎದೆಯಲ್ಲಿ ಉಕ್ಕಿ, ಎರಡು ಹನಿ ಕಣ್ಣೀರಿಗೆ ಸಾಕ್ಷಿಯಾಯಿತು. ಬಸ್ಸು ತನ್ನ ಪಾಡಿಗೆ ಮಂಗ್ಳೂರನ್ನು ಹಿಂದೆ ಬಿಟ್ಟು ಮುಂದೆ ಹೊರಟಿತ್ತು. ಧರಿಯಪ್ಪನ ನೆನಪುಗಳು ಅಂವನ ಹಿಂದಿಂದೆ ಬೆನ್ನುಬಿದ್ದವು.
ಸಾವುದು ನಾಕೈದಿ ದಿನ ಇದ್ದಾಗ ಅವರಪ್ಪ ಆಡಿದ ಮಾತು ಎದಿಗೆ ಮುಳ್ಳು ಚುಚ್ಚಿದಂತೆ ಅನಿಸಿತು. “ನಂಬಿದವ್ರರ್ನ ಭೂಮಿತಾಯಿ ಎಂದೂ ಕೈಬಿಡ್ಹಂಗಿಲ್ಲಪಾ, ಈಗ ನಮಗ ಲುಕ್ಸಾನ ಆಗಿರಬಹುದ, ಮುಂದ ಒಂದ ಕಾಲಕ್ಕ ಅದರ ಹತ್ತ ಪಟ್ಟ ಆ ತಾಯಿ ಕೊಟ್ಟ ಕೊಡ್ತಾಳ ಅಕಿ ಮ್ಯಾಲಿನ ನಂಬಗಿ ಕಳ್ಕೋಬ್ಯಾಡ, ನಾ ಸತ್ತ ಕಾಲಕ್ಕ ಹ್ವಲಾ ಗಿಲಾ ಮಾರಿಗೀರಿ” ಈ ಮಾತು ಮಗನಿಗೆ ಹೇಳುವಾಗ ಲೋಕಣ್ಣನ ಕಣ್ಣಾಲೆಗಳು ತುಂಬಿದ್ದವು.
ಭೂಮಿತಾಯಿ ನಂಬಿ ಅಪ್ಪ ಜೀವಾ ಬಿಟ್ಟಾ. ಮೈತುಂಬ ಸಾಲ, ಮನಿ ತುಂಬ ಬಡತನಾ ಇಟ್ಟ ಹ್ವಾದಾ. ನಂಬಿದವ್ರ ಬದುಕು ಈ ಭೂಮಿತಾಯವ್ವಾ ನುಚ್ಚನೂರ ಮಾಡಿದ್ಳು. ಭೂಮಿ ಚಿಂತ್ಯಾಗ ಅಪ್ಪ, ಅಪ್ಪನ ಚಿಂತ್ಯಾಗ ಅವ್ವಾ, ಮರದಾಗಿನ ವಣಾ ಎಲಿ ಉದರಿ ಬಿದ್ಹಂಗ ಉದರಿ ನನ್ನನ್ನ ಅನಾಥನ ಮಾಡಿದ್ರು. ಇದೆಲ್ಲಾ ಆಗಿದ್ದು ಆ ಮಸಾರಿ ಹ್ವಲದಿಂದ, ಸಾಲದಾರ ಕಾಟಾ ತಾಳಲಾರ್ದ ಹುಟ್ಟಿದ ಊರ ಬಿಟ್ಟ ಮಂಗ್ಳೂರ ಸೇರುದಾತು, ಎರಡು ಹೆಣ್ಣ ಮಕ್ಕಳ್ನ ಓದಿಸಿ ಬರಿಸಿ ನಾಕಕ್ಷರ ಕಲಿಸಿಕೊಡಲಾರ್ದ ಅವನ್ನೂ ನಮ್ಮ ಜೋಡಿ ಗಾರೆ ಕೆಲಸಕ್ಕ ಹಚ್ಚುದಾತು, ಹಾಳಾದ ಹ್ವಲಾ ನಮ್ಮ ಬದುಕು ನುಚ್ಚನೂರ ಮಾಡಿಬಿಟ್ಟತಿ, ಧರಿಯಪ್ಪ ಹ್ವಲ ನೆನಸಿ ಮತ್ತೊಮ್ಮೆ ಹಳಹಳಿಸಿ ಕಿಡಕಿಯಲ್ಲಿ ನೋಟ ಚಲ್ಲಿದ.
ಮುಂದಿದ್ದ ಕತ್ತಲನ್ನು ಸೀಳಿ ಬಸ್ಸು “ಬಂವ್ ಬಂವ್” ದನಿ ಮಾಡಿ, ಕರಿ ರಸ್ತೆಯ ಮೇಲೆ ತನ್ನ ಕೃತಕ ಬೆಳಕನ್ನು ಚೆಲ್ಲಿ ವೇಗ ಮತ್ತಷ್ಟು ಹೆಚ್ಚಿಸಿ. ಗುರಿ ಮುಟ್ಟುವ ಕ್ರೀಡಾ ಪಟುವಂತೆ ಓಡುತ್ತಿತ್ತು.
***
ಮಸಾರಿ ಹ್ವಲದ ಜೋಡಿ ಅಪ್ಪ ಭಾಳ ತೆಲಿ ಕೆಡಿಸಕೊಂಡ. ಅದರ ಉಸಾಬರಿ ಮಾಡಲಿಲ್ಲಂದ್ರ ಇನ್ನ ಬದುಕಿ ಬಾಳತಿದ್ದ. ಅವ್ವನೂ ಎಮ್ಮಿ ಹೈಣಾ ಮಾಡಿ, ಮೊಮ್ಮಕ್ಳಿಗೆ ಉಣಿಸಿ, ತಿನಿಸಿ ನಕ್ಕೋತ ಇರ್ತಿದ್ಳು. ಅಪ್ಪನ ದಿನದ ಬೆವರಿನ ಕೂಲಿಯಲ್ಲಾ ಹ್ವಲಕ್ಕ ಹಾಕಿ ತನ್ನ ಕೈ ಬರೀದ ಮಾಡ್ಕೊಂಡ, ಅದಷ್ಟ ಅಲ್ಲದ ಮನಿನೂ ಬರೀದ ಮಾಡಿದ. ನಮ್ಮ ಬದುಕೆಲ್ಲ ಬೀದಿಪಾಲಾತು. ಧರಿಯಪ್ಪನನ್ನು ಹಿಂದೆ ಗತಿಸಿ ಹೋದ ಹಳೆ ನೆನಪುಗಳು ಆ ರಾತ್ರಿ ಜೀವ ಹಿಂಡುತ್ತ, ಅಂವನ ನಿದ್ದಿಯನ್ನು ನುಂಗುತೊಡಗಿದ್ದವು.
ಹೊರಗೆ ಮೋಡ ಮುಸಿಕಿತ್ತು. ಚಂದಿರನ ಪತ್ತೆ ಇರಲಿಲ್ಲ. ಕಿಡಕಿಯಿಂದ ತಂಪನೆಯ ಗಾಳಿ ಹರಿದು ಬಂದು ಮೈಗೆ ಅಹಲ್ಲಾದ ನೀಡುತ್ತಿತ್ತು. ಆ ಗಾಳಿಗೆ ಮೈ ಒಡ್ಡಿ, ಹೆಂತಿ, ಮಕ್ಕಳಿಬ್ಬರು ಪಕ್ಕದಲ್ಲಿ ಮಲಗಿ ಬದುಕಿನ ಯಾವ ಜಂಜಾಟ ನಮಗಿಲ್ಲಾ ಅನ್ನುವ ಹಾಗೆ ಸುಖನಿದ್ರೆಗೆ ಜಾರಿದ್ರು.
ಬೋರಂಗಿಯಂತೆ ಗುಂಯ್ ಗುಡುತ್ತ ಹೊರಟಿದ್ದ ಬಸ್ಸು ಒಮ್ಮಿಂದೊಮ್ಮಲೆ ಗಕ್ಕನೆ ನಿಂತಿತು. “ಐದ ನಿಮಿಷ ಟೈಮ್ ಐತಿ, ಯಾರಾರ ಒಂದಕ ಗಿಂದಕ ಮಾಡ್ತಿದ್ರ ಲಗೂನ ಮಾಡಿ ಬರ್ರೀ” ಕಂಡಕ್ಟರ್ ಮಲಗಿದ್ದವರು ಎಚ್ಚರಾಗುವಂತೆ ದೊಡ್ಡ ದನಿ ತಗೆದು ಕಿರಚಿದ್ದ.
ನಾಕಾರು ಮಂದಿ ಕಣ್ಣು ತಿಕ್ಕಿಕೊಳ್ಳುತ್ತ ನಿದ್ದಿಗಣ್ಣಿನಲ್ಲಿ ಕತ್ತಲ ಹುಡುಕಿಕೊಂಡು ಹೋಗಿ ಕುಳಿತೆದ್ದು ಬಂದರು. ಧರಿಯಪ್ಪ ಹೆಂಡತಿ ಮಕ್ಕಳನ್ನು ಎಬ್ಬಿಸಿದ್ದ. ಅವರೂ ಕತ್ತಲಲ್ಲಿ ಕುಂತೆದ್ದು ಬಂದು ಬಸ್ಸೇರಿ ನಿದ್ದೆಗೆ ಮತ್ತೆ ಅನಿಯಾದರು. ಬಸ್ಸ ಹೊರಟಿತು. ಧರಿಯಪ್ಪನನ್ನು ಮತ್ತೆ ಮತ್ತೆ ಊರಿನ ಹಳೆ ನೆನಪುಗಳು ಆವರಿಸಿಕೊಂಡವು.
“ಧರಿಯಪ್ಪಾ ನಿಮ್ಮ ಅಪ್ಪಾ ಭಾಳ ದುಡಕೀದಾ, ಹಿಂದ ಮುಂದ ಯೋಚನಾ ಮಾಡಲಿಲ್ಲ, ಅಂವನೇನ ಕುಡದ ಹಾಳ ಮಾಡಲಿಲ್ಲಾ, ಇಸ್ಪೇಟು, ಮಟಕಾ ಆಡಿ ಲುಕ್ಸಾನ ಆಗಲಿಲ್ಲಾ, ಮಸಾರಿ ಹ್ವಲದ ಸಿರಿಪಾದದಿಂದ ಚಿಂತಿ ಹಚಗೊಂದ ಸಾವುದಾತು, ಅಂವನ ಯಾಳೆ ಆ ಹೊತ್ತನ್ಯಾಗ ಒಂದ ತಟಗ ಎದರಿತ್ತು, ಸ್ವಲ್ಪ ಹೋಳಾಗಿ ನಿಂದರಲಿಲ್ಲ ಪುಣ್ಯಾತ್ಮ” ಅವರಪ್ಪ ಸತ್ತ ಮರುದಿನ ಹೊನ್ನಪ್ಪ ಕಾಕಾ ಮನಿತನಕಾ ಬಂದು ಅವರಪ್ಪನ ಜೀವನದ ಕತಿ ಮತ್ತೊಮ್ಮೆ ಚುಟುಕಾಗಿ ತಿರುವಿ ಹಾಕಿ ಹೋದ. ಅಂವ ಎದ್ದು ಹೋದ ಮೇಲೆ, ಅವರಪ್ಪನ ನೆನಪುಗಳು ಧರಿಯಪ್ಪನ ಎದೆಯ ಹೊತ್ತಿಗೆಯಲ್ಲಿ ಒಂದೊಂದೆ ಪುಟ ಬಿಚ್ಚತೊಡಗಿದವು.
***
ಶಿವನೂರಿನ್ನಲ್ಲಿ ಲೋಕಣ್ಣ ಎಲ್ಲರಿಗೂ ಬೇಕಾದ ಮನುಷ್ಯ.
“ಜಗವೆಲ್ಲ ನಗುತಿರಲಿ
ಜಗದಳವು ನನಗಿರಲಿ
ನಾನಳಲು ಜಗವು
ನನ್ನನ್ನು ಎತ್ತಿಕೊಳ್ಳದೆ..”
ಈ ಕವಿ ವಾಣಿಯಂತೆ ನಿತ್ಯ ಸತ್ಯದಂತೆ ಲೋಕಣ್ಣ ತನ್ನ ಜೀವನ ನೆಡಿಸಿದವ, ನಿತ್ಯವೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದ. ಅವರಿವರೆನ್ನದೇ ಯಾವ ಕುಲ ಜಾತಿ ನೋಡದೆ, ಬಡವ, ಶ್ರೀಮಂತ ತಾರತಮ್ಯ ಇಲ್ಲದೆ, ಯಾರೇ ಕರೆದರೂ ಅವರ ಹ್ವಲ ಮನಿ ಕೆಲಸಕ್ಕೆ ಹೋಗುತ್ತಿದ್ದ.
ಅವರಪ್ಪ ಕಟ್ಟಿಸಿದ್ದ ಜಂತಿಯ ಮನೆಯೇ ಅವನ ಶೂರು. ಇದ್ದ ಒಬ್ಬನೇ ಮಗನಿಗೆ ಮದುವೆ ಮಾಡಿದ್ದ, ಹೆಂಡತಿ ಎಮ್ಮೆ ಹೈಣಾ ಮಾಡಿ ಒಂದಿಷ್ಟು ಹಣ ಕೂಡಿಟ್ಟಿದ್ದಳು. ಮಗನೂ ತಪ್ಪದೇ ಕೆಲಸಕ್ಕೆ ಹೋಗುತ್ತಿದ್ದ. ಲೋಕಣ್ಣನಿಗೆ ಯಾವ ತೊಂದರೆ ತಾಪತ್ರಯ ಇಲ್ಲದೆ ನೆಮ್ಮದಿ ಬದಕು ನಡೆಸುತ್ತಿದ್ದ. ರಟ್ಟೆಯ ಮೇಲೆ ನಾಕೈದು ಲಕ್ಷ ಕೂಡಿಸಿ, ಊರಿನ ಗ್ರಾಮೀಣ ಬ್ಯಾಂಕ್ ನಲ್ಲಿ ಎಫ್. ಡಿ. ಇಟ್ಟಿದ್ದ. ಅದು ಅಲ್ಲದೆ ಆರು ಎಕರೆ ಮಸಾರಿ ಹ್ವಲಾ ಇತ್ತು. ಆ ಹ್ವಲದ ಮೈ ತುಂಬ ಮುಳ್ಳಿನ ಗಿಡ ಎದ್ದು, ಸಣ್ಣ ಕಾಡಾಗಿತ್ತು. ಲೋಕಣ್ಣನಿಗೆ ಬೇರೆಯವರ ಕೂಲಿ ಕೆಲಸಕ್ಕೆ ಹೋಗುವುದರಲ್ಲಿಯೇ ಏನೋ ಒಂದು ಸುಖ ಇತ್ತು. ಹಿಂಗಾಗಿ ತನ್ನ ಬೀಳು ಬಿದ್ದ ಮಸಾರಿ ಹ್ವಲದ ಗೊಡವಿಗೆ ಹೋಗಿರಲಿಲ್ಲ ಮತ್ತು ಅವನಿಗೆ ಅದರ ಪರಿವೇ ಇರಲಿಲ್ಲ.
ಅವರಪ್ಪ ಇದ್ದಾಗ ಮಗ್ಗಲ ಹ್ವಲದ ಕುಲಕರಣಿಯವರು ಒಮ್ಮೆ ತಕರಾರು ಮಾಡಿದ್ದರು. “ನೀವ ಹಿಂಗತಿ ಹ್ವಲಾ ಬೀಳ ಗೆಡವಿದ್ರ ಮಗ್ಗಲ ಹೊಲದಾರ ಗತಿ ಹೆಂಗ, ಏನು,ಎತ್ತಾ ಅಂತ ಇಚಾರ ಮಾಡಿರಿಲ್ಲೋ, ಮಾಡೂದ ನೀಗಲಿಲ್ಲಂದ್ರ ಯಾರಿಗರಾ ಮಾರ್ಯಾರ ಮಾರ್ರೀ, ಇಲ್ಲಂದ್ರ ಇಂತಿಷ್ಟ ವರ್ಷ ಮಾಡುವವರಿಗರಾ ಮಾಡಾಕ ಕೊಡ್ರೀ” ಬಾಜು ಹೊಲದ ಕುಲಕರಣಿ ಭೀಮರಾಯರು ಮನಿ ಮಟಾ ಬಂದು ಲೋಕಣ್ಣನ ತಂದಿ ಜೋಡಿ ಕಣಿ ಕಣಿ ಹಾಕ್ಯಾಡಿದ.
“ನಿಮ್ಮ ಬೀಳ ಹೊಲದ ದಸಿಯಿಂದ ನಮ್ಮ ಕಬ್ಬೆಲ್ಲಾ ಲುಕ್ಸಾನ ಆಗಿ ಹೊಂಟೈತಿ, ಆ ಬೀಳ ಕಂಟ್ಯಾಗ ನರಿ, ಹಂದಿ ಸೆರ್ಕೊಂಡ ಬಲ್ಲಂಗ ಕಬ್ಬ ಕಡದ ಹಾಕ್ಯಾವ ಆ ಬೀಳಾ ನನಗರಾ ಕೋಡು, ಅಥವಾ ಲವನಿ ಹಂಗ ಮಾಡಾಕರ ಕೋಡು” ಭೀಮರಾನ ಈ ಮಾತಿಗೆ ಲೋಕಣ್ಣನ ತಂದೆ ಶಂಕರಪ್ಪ ಕ್ಯಾರೇ ಅಂದಿರಲಿಲ್ಲ. ಭೀಮರಾಯನ ಎದಿಯಾಗ ಗೊಂಜಾಳ ತೆನಿ ಸುಡುವಷ್ಟು ಕೋಪದ ಬೆಂಕಿ ತುಂಬಿತ್ತು. ಶಂಕರಪ್ಪನ ಮೇಲೆ ನಿಗಿ ನಿಗೆ ಉರಿಯುತ್ತಲೇ ಅಂದು ಮನಿಕಡೆ ಮುಖಮಾಡಿದ್ದ.
“ನೋಡಪಾ ನಾ ಸತ್ತಮ್ಯಾಲ ನಿನಗ ಎಂಥಾ ಕಷ್ಟ ಕಾರ್ಪಣ್ಯಾ ಬಂದ್ರೂ ಆ ಮಸಾರಿ ಹ್ವಲಾ ಮರಿಬ್ಯಾಡ, ಅದನ ಅಪ್ಪಿ ತಪ್ಪಿ ಮಾರೀದ್ರ ನನ್ನ ಮಾರ್ಕೊಂಡ ತಿಂದ್ಹಂಗ ನೋಡು” ಅಂದು ಶಂಕ್ರಪ್ಪ ಮಗನಾದ ಲೋಕಣ್ಣನನ್ನು ಹತ್ತಿರ ಕರೇದು ಹೇಳಿದ ತಿಂಗಳೊಪ್ಪತ್ತಲ್ಲಿ ಜೀವ ಬಿಟ್ಟಿದ್ದ.
ಅಚಾನಕ್ಕಾಗಿ ಅಂದು ಲೋಕಣ್ಣ ಕುಲಕರಣಿ ಭೀಮರಾಯ ಹ್ವಲದಾಗಿನ ಕಬ್ಬಿನ ಮಡ್ಡು ಆರಿಸಲು ಬಂದಿದ್ದ. ಲೋಕಣ್ಣ ಅಂವನೊಂದಿಗೆ ಬಂದಿದ್ದ ಐದಾರು ಮಂದಿ ಮದ್ಯಾನ ಊಟಕ್ಕ ಮಾವಿನ ನೆರಳಿನ ಕೆಳಗೆ ಕುಂತಕೊಂಡಿದ್ರು. ಭೀಮರಾಯರೂ ಅದ ನೆರಳ ಕೆಳಗ ಕುರ್ಚಿ ಹಕ್ಕೊಂಡು ಕೆಲಸದ ಆಳುಗಳ ಮೇಲೆ ನೆದರುನೆಟ್ಟು, ಕೈಯಲ್ಲಿದ್ದ ಒಂದು ಪುಸ್ತಕದ ಪುಟವನ್ನು ಆಗಾಗ ತಿರುಗಿಸುತ್ತಿದ್ದರು.
ಲೋಕ ರೂಡಿಯಂತೆ ಊಟಕ್ಕೆ ಕುಳಿತ ಆಳುಮಕ್ಕಳು “ದನಿಯಾರ ಊಟಾ ಮಾಡೂನು ಬರ್ರೀ” ಅಂದ್ರು. “ನಿಧಾನ ಸಾಗ್ಲಿ” ಅಂತ ಮುಗುಳು ನಕ್ರು. “ನಮ್ಮ ಕೈಯಂದು ಜೀಂವಾ ಹ್ವಾದ್ರರಾ ತಿಂದಾರನ ಅವ್ರು” ಲೋಕಣ್ಣಗ ಮಗ್ಗಲಿದ್ಹಾಂವ ಕಿವ್ಯಾಗ ಗುಣಗಿದ. “ದೊಡ್ಡಾರ ಉಸಾಬರಿ ನಮಗ್ಯಾಕ ಸುಮ್ಮನಿರ್ಲೇ” ಎಂದು ಮಾತು ಬ್ಯಾರೆ ಕಡೆ ತಿರಗಿಸಲು ಯತ್ನಿಸಿದ ಲೋಕಣ್ಣ.
ಊಟ ಆಗಿ ಎಲ್ಲಾರೂ ಎಲಿ ಅಡಕಿ ಹಕ್ಕೊಂತ ಕುಂತಿದ್ರು. ಲೋಕಣ್ಣ ಭೀಮರಾಯರ ಹ್ವಲಾ ಬೆರಗಾಗಿ ನೋಡುತ್ತ ಕುಂತಿದ್ದ. ಸುತ್ತಲೂ ತೆಂಗಿನ ಗಿಡಗಳು, ನಾಕಾರು ಹಣ್ಣು ಕೊಡುವ ಮಾವಿನ ಮರಗಳು, ಬದುವಿನಲ್ಲಿ ಸುತ್ತಲೂ ದನಗಳಿಗಾಗಿ ನಳನಳಿಸುವ ಹಚ್ಚ ಹಸಿರಾದ ಹುಲ್ಲು, ಎಲ್ಲವನ್ನೂ ನೋಡುತ್ತ, ಮಗ್ಗಲದಲ್ಲಿದ್ದ ತನ್ನ ಬೀಳು ಬಿದ್ದ ಹ್ವಲದತ್ತ ನೋಡಿದ “ಉಣ್ಣುವ ಎಡೆಯಲ್ಲಿ ಮಣ್ಣು ಬಿದ್ಹಂಗ”ನಿಸಿತು.
ಭೀಮರಾಯರೂ ದೂರದಲ್ಲಿ ಕುಂತ್ಗೊಂಡ ಲೋಕಣ್ಣನ ಮನಸನ್ಯಾಗೀನ ಇಂಗಿತ ಅರತು. “ನಿನ್ನ ಜ್ವಾಳಾ ಇಟಗೊಂದ ಗೌಡರ ಜ್ವಾಳ ಹಾಡ್ಯಾಡಿ ಬೀಸಾಕತ್ತಿಯಲ್ಲೋ ಲೋಕಣ್ಣಾ, ಈ ಸೀಮ್ಯಾಗ ಕಣ್ಣಾಗ ಕಸರ ಬಿದ್ಹಂಗ ಇರುವ ಹ್ವಲಾ ಅಂದ್ರ ಅದು ನಿಂದ ಒಂದ,. ನಿನಗ್ಯಾಕ ಇದರ ಅರ್ಥ ಆಗವಲ್ದೋ ನಾಕಾಣೆ, ಹಿಂಗ ಮಂದಿ ಜೋಡಿ ದಿನಾ ಒಬ್ಬರ ಹ್ವಲದಾಗ ದೇಖೂ ಬದಲ, ನಿನ್ನ ಹ್ವಲದಾಗ ಬೇಕಾದ್ದ ಬ್ಯಾಡಾದ್ದ ಬೆಳಕೊಂಡ ಒಬ್ಬ ಪ್ರಗತಿಪರ ರೈತ ಆಗುವುದ್ರಾಗ ಏನ ತೆಪ್ಪ ಐತಿ, ನಿಮ್ಮ ಅಪ್ಪಗ ಗಿಳಿಗೆ ಹೇಳಿದ್ಹಂಗ ಹೇಳಿದ್ಯಾ, ಅಂವ ಒಂದ ಮಾತೂ ಕಿವ್ಯಾಗ ಹಕ್ಕೊಳಿಲ್ಲ, ನೀ ಇದ್ದರ ದಿನಾ ಒಂದ ಹ್ವಲಾ ಹುಡ್ಕೊಂಡ ತಿರಗತಿ, ಮಾಡ್ಕೊಂದ ತಿಂತೀನಿ ಅನ್ನುವರಿಗೆ ಭೂಮಿ ಇಲ್ಲಾ, ಭೂಮಿ ಇದ್ದವ್ರ ಹಿಂಗ, ಹಲ್ಲ ಇದ್ದವರಿಗೆ ಕಡ್ಲಿ ಇರಲಿಲ್ಲ, ಕಡ್ಡಲಿ ಇದ್ದವರಿಗೆ ಹಲ್ಲ ಇರ್ಲಿಲ್ಲ ಅನ್ನುವಂಗೈತಿ ನಿನ್ನ ಕತಿ” ಭೀಮರಾಯರು ಇಷ್ಟು ಹೇಳಿ ಮತ್ತೆ ಪುಸ್ತಕದ ಪುಟ ಹೊರಳಿಸಿದ್ರು.
ಲೋಕಣ್ಣನ ಜೋಡಿ ಬಂದ ಅಂವ್ನ ಗೆಳಿಯಾರು, ದನಿಯಾರ ಅನ್ನು ಮಾತ ಖರೇ ಐತಿ, ಅಂದ್ರು. “ನನಗ ಒಂದ ಎಕರೆ ಇದ್ದರೂ ಅದರಾಗ ಜೀಂವಾ ನೆಡಸ್ತಿದ್ಯಾ, ಇನ್ನೊಬ್ಬರ ಕೈಯ್ಯಾಗ ಬಂದ ಹಿಂಗತಿ ಸಾಯಿತಿದ್ದಲ್ಲಾ” ಅವನ ಗೆಳೆಯನೊಬ್ಬ ತನ್ನ ಅಳಲು ತೋಡಿಕೊಂಡ. ಎಷ್ಟೋ ಹೊತ್ತು ಕೆಲಸಾ ಮಾಡುತ್ತ ಲೋಕಣ್ಣನ ಬೀಳು ಬಿದ್ದ ಹ್ವಲದ ಮಾತು, ಚರ್ಚೆ ನಡೆಯಿತು.
ರಾತ್ರಿ ಮಲಗಿದಾಗ ಹೆಂತಿ ಮುಂದ ಭೀಮರಾಯರು, ಅವನ ಗೆಳೆಯರು ಆಡಿದ ಮಾತು ಎತಾವತ್ತಾಗಿ ಹೇಳಿದ. ಹೆಂತಿನೂ ಸೈ ಅಂದ್ಳು. ಹ್ವಲಾ ಹೆಂಗ ಹಸಣ ಮಾಡೂದು ಅಂತ ಇಬ್ರು ಎಷ್ಟೋ ಹೊತ್ತ ಚರ್ಚೆ ಮಾಡಿದ್ರು. “ಆಳ ಗೀಳ ಹಚ್ಚಿ ಮಾಡಿಸಿದ್ರ ಒಂದ ತಲೀನ ಊರಳಿ ಹೊಕೈತಿ, ಜೆ. ಸಿ. ಬಿ. ಹಚ್ಚಿ ಹಸಣ ಮಾಡಿದ್ರ ಇದ ವರ್ಷ ಪೀಕ ಮಾಡಬಹುದು” ಎಂದು ತನ್ನ ಹೆಂತಿ ಕೊಟ್ಟ ಸಲಹೆ ಲೋಕಣ್ಣನಿಗೆ ಸರಿ ಅನಿಸಿತು.
ಮರುದಿನವೇ ತಾಂಡಾದ ರತ್ನಪ್ಪನ ಮನಿಗೆ ಹೋಗಿ, ಐದು ಸಾವಿರ ಗಾಡಿ ಎಣ್ಣಿ ಕರ್ಚ ಕೊಟ್ಟು ಬಂದ. ಒಂದೇ ವಾರದಲ್ಲಿ ರತ್ನಪ್ಪ ಲೋಕಣ್ಣನ ಮಸಾರಿ ಹ್ವಲಾ ಉಣ್ಣುವ ಗಂಗಾಳದಂತೆ ಹಸಣು ಮಾಡಿದ್ದ.
“ನಿಮ್ಮ ಅಜ್ಜನ ಕಾಲಕ್ಕೂ ಆಗಿರಲಿಲ್ಲ, ನಿಮ್ಮಪ್ಪನ ಕಾಲಕ್ಕೂ ನೀಗಿರಲಿಲ್ಲ, ನಿನ್ನ ಕಾಲಕ್ಕ ಆ ಮಸಾರಿ ಹ್ವಲದ ನಶೀಬ ತಗೀತ ನೋಡ ಲೋಕಣ್ಣ” ಅವರ ತಂದೆಯ ಗೆಳೆಯ ಭಾಳ ಹಿಗ್ಗಿನಿಂದ ಹೇಳಿದ ಮಾತು ಕೇಳಿದ ಲೋಕಣ್ಣನಿಗೆ ಹ್ವಲದ ಹಂಬಲ ಮತ್ತಷ್ಟು ಹೆಚ್ಚಿತು.
****
ಗಂಡಾ ಹೆಂತಿ ಇಬ್ಬರೂ ಅದ ಹ್ವಲದಾಗ ಕಾಲ ಕಟಗೊಂದ ಇದ್ರು. ಬೇವಿನ ಕೆವ್ಲಾ, ಎಂಟ್ಹತ್ತ ಕಡಕೊಂಡ, ಕುಣಿ ತಗದ, ಹುಗದ, ಮ್ಯಾಲ ಉದ್ದನ ಕಟಗಿ ಹಾಕಿ, ತಂತಿಲೇ ಗಟ್ಟಮುಟ್ಟ ಗಾಳಿ ಬಿಟ್ರೂ ತಕ್ಕ ಮಟ್ಟಿಗೆ ಹಾರಿ ಹೋಗದ್ಹಂಗ ಬಂದು ಬಸ್ತ ಮಾಡಿ,ಅದರ ಸುತ್ತಲೂ ತೆಂಗಿನ ಗರಿ ಕಟ್ಟಿ ಮಸಾರಿ ಹ್ವಲದಾಗೊಂದ ಚಪ್ಪರಾ ಹಾಕಿದ್ರು.
ಹ್ವಲದಾಗಿದ್ದ ಕಂಟಿ ಕಾಬ್ಲಾ ಆರಿಸಿ,ಗುಂಪಿ ಹಾಕಿ,ಸುಟ್ಟು ಅಂಗಾಲಿಗೆ ಒಂದ ಕಲ್ಲಾ, ಮುಳ್ಳಾ ತಾಕದ್ಹಂಗ ವಾರೊಪ್ಪತ್ಯ್ನಾಗ ಹ್ವಲಾ ಅಂಬೋ ಹ್ವಾಲಾನ ಗರತಿಯ ಗಲ್ಲದ್ಹಂಗ ಹದಾಮಾಡಿಟ್ರು.
ಗಂಡ ಹೆಂತಿ ಹ್ವಲದಾಗಿದ್ದ ದೊಡ್ಡ ದೊಡ್ಡ ಕಲ್ಲುಗಳನ್ನೆತ್ತಿ, ಬದುವಿಗೆ ತಂದು ಇಡುತ್ತಿದ್ರು. ಹ್ವಲದ ಬಾಜು ಇದ್ದ ಭೀಮರಾಯರು ಅವರ ಹತ್ತಿರ ಬರುತ್ತಿದ್ದಂತೆ ಇಬ್ಬರು ಅವರಿಗೆ ಭಾಗಿ ನಮಸ್ಕರಿಸಿದರು. “ಇಷ್ಟೆಲ್ಲ ಕರ್ಚ ಮಾಡೀ ಬೋರ ಒಂದ ಹೊಡಿಸಿಬಿಡು. ಚಲೋ ನೀರ ಬಿದ್ರ, ಹಣೀಬರದಾಗ ಗಂಗವ್ವ ನಿನಗ ಒಲಮಿ ಇದ್ರ, ಈ ಮಸಾರಿ ಹ್ವಲದ ಕಳೇನ ಬದಲ ಅಕೈತಿ, ಒಣಾ ಬೇಸಾಯಂದ್ರ ಮಳಿ ಆದಾಗ ಬೆಳಿ. ಅದರಾಗ ಇದು ಮಸಾರಿ ನೆಲಾ, ವಾರಕ್ಕೊಂದ ನೀರ ಬೇಕ ಅಂತೈತಿ, ಈಗರ ಇದನ್ನ ಹಸಣ ಮಾಡಾಕ ಭಾಳ ಕರ್ಚ ಮಾಡ್ಕೊಂಡಿ, ಹಾಕಿದ ಕರ್ಚ ವಾಪಸ್ ವಣಾ ಬೇಸಾಯದಾಗ ಹೆಂಗ ಬಂದೀತು? ಆನೀನ ಹೊತ್ತ ಮ್ಯಾಲ ಅದರ ಬಾಲ ಯಾವ ಲೆಕ್ಕಾ?” ಕುಲಕರಣಿ ಭೀಮರಾಯರು ತಮ್ಮಗನಿಸಿದ್ದನ್ನು ಹೇಳಿ ಅಲ್ಲಿಂದ ಕಾಲ್ಕಿತ್ತರು. ಅವರಾಡಿದ ಮಾತು ಇಬ್ಬರಿಗೂ ಸರಿ ಕಂಡಿತು.
ಎಮ್ಮಿ ಹೈಣದ ರೊಕ್ಕಾ ಎಲ್ಲ ಜೆ.ಸಿ.ಬಿ. ಹ್ವಟ್ಯಾಗ ಕಾಕಿತ್ತು. “ಬೋರ್ ಹಾಕ್ಸೂದ ಆದ್ರ ಬ್ಯಾಂಕಿನ ದುಡ್ಡ ತಕ್ಕೊಬೇಕು” ಹೆಂತಿ ಹೇಳಿದ್ದ ಬರೊಬ್ಬರಿ ಅನಿಸಿದಾಗ ಲೋಕಣ್ಣ ಮರುದಿನ ಬ್ಯಾಂಕಿನಲ್ಲಿ ಕೂಡಿಟ್ಟ ತನ್ನ ಪರಿಶ್ರಮದ ದುಡ್ಡು ಬಿಡಿಸಿಕೊಳ್ಳಲು ಬ್ಯಾಂಕಿಗೆ ಹ್ವಾದ. ಬ್ಯಾಂಕ್ ಮ್ಯಾನೇಜರ್ “ಮಗನ ಮದವಿಯಾರ ಮಾಡಿ, ಎರಡ ಮೊಮ್ಮಕ್ಕಳ ಅದಾರ ಇನ್ನ ಸಣ್ಣೂ ಅದಾವ, ಹಣಾ ಯಾಕ ಈಗ ತಕ್ಕೊಂಡ ಕರ್ಚ ಮಾಡ್ತಿ” ಎಂದು ಸಲಹೆ ಕೊಟ್ಟ. “ಹ್ವಲಕ್ಕ ಬೋರ್ ಹಾಕ್ಸೂದ ಮಾಡಿನ್ರೀ ಸಾಹೇಬ್ರ” ಅಂದಾಗ ಮ್ಯಾನೇಜರ್ ಒಂದು ಎರಡು ಅನ್ನದ ಹಣ ಕೊಟ್ಟು ಲೋಕಣ್ಣನನ್ನು ಕಳಿಸಿದ್ದ.
ಮರದಿನಾ ಮುಂಜಮುಂಜಾನೆ ಎದ್ದವ್ನ ಬಡಗೇರ ದ್ಯಾವಪ್ಪನ ಕರ್ಕೊಂಡ ನೀರ ನೋಡಾಕ ಮಸಾರಿ ಹ್ವಲಕ್ಕ ಲೋಕಣ್ಣ ಹ್ವಾದ. ದ್ಯಾವಪ್ಪ ನೀರ ಹೇಳಿದ್ರ ಮುಗೀತೀ. ಹುಸೀನ ಹೊಗಾಂಗಿಲ್ಲ ಅನ್ನುವ ಮಾತು ಸುತ್ತಮುತ್ತಲಿನ ಹಳ್ಯಾಗ ಮನೀಮತಾಗಿತ್ತು. ತೆಂಗೀನ ಕಾಯಿ ಅಂಗೈಯಾಗ ಹಿಡ್ಕೋಂಡ ಬರಿಗಾಲಿಂದ ಇಡೀ ಮಸಾರಿ ಹ್ವಲಾ ಎಲ್ಲಾ ಸುತ್ತಾಡಿದ. ಎರ್ಡ ಮೂರ ತಂವದಲ್ಲಿ ಹಿಡಿಗಲ್ಲ ಅಳತಿ ಕಲ್ಲ ಇಟ್ಟ, ಕೂನಾ ಮಾಡಿ, ಮುಂದ ಮುಂದ ಹೊಕ್ಕಿದ್ದ. ಅಂವನ ಅಂಗೈಯಾನ ತೆಂಗೀನ ಕಾಯಿ ನೀರ ಇದ್ದ ಮೆಟ್ಟಿನ್ಯಾಗ ಕೈಮ್ಯಾಲ ನಿಂದ್ರಲಾರ್ದ ಸೆರೆ ಕೂಡದಾವ್ರ ಗತೆ ಆಕಡೆಗೊಮ್ಮಿ ಈಕಡೆಗೊಮ್ಮೆ ಜೋಲಿ ಹೊಡಿತ್ತಿತ್ತು. ಕೂನಾ ಮಾಡಿದ ಒಂದ ಜಗಾ ಲೋಕಣ್ಣಗ ತೋರ್ಸಿ, “ಇಲ್ಲಿ ಹಾಕ್ಸು ನಿನ್ನ ಹ್ವಲ್ದಾಗ ಹ್ವಳಿ ಹರ್ದಂಗ ನೀರ ಹರಿತೈತಿ” ಎಂದು ಹೇಳಿ ತನ್ನ ಮಾಮೂಲಿ ಇಸ್ಕೊಂಡು ದ್ಯಾವಪ್ಪ ಮೋತಿತುಂಬ ನಗಿ ಹೊತಗೊಂಡು ಹ್ವಾದ.
ಲೋಕಣ್ಣನ ಹ್ವಲದಾಗ ಬೋರಿನ ಗಾಡಿ ಬಂದು ನಿಂತಿತು. ಊರ ಮಂದಿ ನೋಡುವ ಕುತೂಹಲದಿಂದ ಬೈಕು, ಸೈಕಲ್ ತಗೊಂದು ಮಸಾರಿ ಹ್ವಲಕ್ಕ ಬಂದು ಜಮಾಯಿಸಿದ್ರು. ಬೋರ್ ಗಾಡಿಗೆ ಲೋಕಣ್ಣ ಪೂಜಾ ಮಾಡಿ ತೆಂಗಿನ ಕಾಯಿ ಒಡೆದು, ಪಂಚಪಳಾರ ನೈವದ್ದೆ ಹಿಡಿದು, ನೆರದಿದ್ದ ಮಂದಿಗೆಲ್ಲ ಬೊಗಸೆ ತುಂಬ ಪಂಚಪಳಾರ ಕೊಟ್ಟ.
ಬೋರಿನ ಗಾಡಿ ದೊಡ್ಡ ದನಿ ತಗೀದು ಕೇ ಕೇ ಹಾಕುತ್ತ ಕೂಗು ಹೊಡೆಯುತ್ತ ಭೂಮಿಯಲ್ಲಿ ಕಬ್ಬಿನ ರಾಡು ಬಿಟ್ಟು ಗುಡುಗುಡು ಮಾಡತೊಡಗಿತು.ಭೂಮಿ ಒಳಗಿಂದ ತರತರದ ಮಣ್ಣು ಮ್ಯಾಲೇರಿ ಚಿಮ್ಮತೊಡಗಿತು. “ಇದ ಪಕ್ಕಾ ನೀರೀನ ಮಣ್ಣು” ಅಲ್ಲಿದ್ದವನೊಬ್ಬ ಮಣ್ಣು ಬೊಗಸೆಯಲ್ಲಿ ತಂದು ಅಲ್ಲಿದ್ದವರಿಗೆ ತಾನೊಬ್ಬ ಭೂಗರ್ಭ ಶ್ಯಾಸ್ತ್ರಜ್ಞನಂತೆ ಪೋಜುಕೊಡುತ್ತಿದ್ದ.
ಎರ್ಡನೂರಾ ಐವತೈದು ಪೂಟ್ ಗೆ ಅಂತರ್ ಗಂಗೆ ಅಬ್ಬರಿಸುತ್ತ ಮೇಲ್ಮುಖವಾಗಿ ಲೋಕಣ್ಣನ ಮಸಾರಿ ಹ್ವಲದಲ್ಲಿ ಪುಟಿಯತೊಡಗಿದಳು. ಆಗ ಲೋಕಣ್ಣನಿಗೆ ಮುಗಿಲು ಮೂರೆ ಗೇಣು ಉಳಿದಿತ್ತು. ದೂರದಲ್ಲಿದ್ದ ಭೀಮರಾಯರು ನಾಳೆ ಇವನ ಬೋರಿನ ಕುಣಿ ತನ್ನ ಬೋರಿನಲ್ಲಿರುವ ನೀರುಗೀರು ಜಗ್ಗಿಗಿಗ್ಗಿತೆಂದು ಹಳವಂಡಮಾಡಿಕೊಂಡ.
ಹೊಸಾ ಮೋಟಾರ್, ಪೈಪ್, ಪಂಪು, ಬೋರ್ಡ ತಂದು ಮೆಸ್ತ್ರಿ ಕುನಿಯಲ್ಲಿ ಇಳಿಸಿ, ಎಲ್ಲಾ ಜೋಡಿಸಿ, ಪಿಟ್ ಮಾಡಿ. ಬೋರ್ ಮೋಟರ್ ಬಟನ್ ಒತ್ತಿ ಚಲೂ ಮಾಡಿದ. ನೀರು ಮಾರುದ್ದ ತೂರಾಡಿ ಜಿಗಿಯತೊಡಗಿತು. ಆಗ ಲೋಕಣ್ಣನ ಮಸಾರಿ ಹ್ವಲಾ ಎಲ್ಲಾ ನೀರೂ ನೀರಾಯಿತು. ತನ್ನ ಹ್ವಲದಲ್ಲಿ ನಿಂತು ನೋಡ್ತಿದ್ದ ಭೀಮರಾಯರು “ನಮಗಿಂತ ಆ ಬಡ್ಡಿ ಮಗಂದ ನೀರ ಭಾಳೈತಿ” ಅನ್ನುವುದು ಖಾತ್ರಿ ಮಾಡ್ಕೊಂಡ್ರು.
ಇಡೀ ಹೊಲಕ್ಕೆ ಕಬ್ಬು ಹಾಕಿದ. ಗಂಡ ಹೆಂತಿ ಇಬ್ಬರೂ ಮಸಾರಿ ಹ್ವಲದಲ್ಲಿಯೇ ವಸ್ತಿ ಮಾಡಿ, ಕಬ್ಬಿಗೆ ನೀರು ಹಾಸುತ್ತಾ, ಕಸಾಕಡ್ಡಿ ತಗೆಯುತ್ತಾ, ಕಬ್ಬು ಚೆನ್ನಾಗಿ ಬೆಳಸಿದ್ರು. ಮೊದಲೇ ಬೀಳು ಬಿದ್ದ ಹ್ವಲಾ. ಕಬ್ಬು ಬಲ್ಲಂಗ ಬೆಳದಿತ್ತು. ಎಕರೆಗೆ ಸರಾಸರಿ ನೂರಾ ಹತ್ತು ಟಣ್ ಕಬ್ಬು ಬೆಳದಿದ್ದ. ಶಿವನೂರಿಗೆ ಪತ್ರಿಕೆಯವರು, ಟಿ ವಿ. ಚಾನಲ್ ದವರು ಲೋಕಣ್ಣನ ಸಂದರ್ಶನ ಮಾಡಿಕೊಂಡು ಹೋಗಲು ಬಂದು. ಅವನನ್ನು ಮಾತಾಡಿಸಿ, ಹೊಲದಲ್ಲಿ ಕೃತಕವಾಗಿ ಕೆಲಸ ಮಾಡುವವನಂತೆ ನಿಲ್ಲಿಸಿ, ಪೋಟೋ ಕ್ಲಿಕ್ಕಿಸಿಕೊಂಡು ಪತ್ರಿಕೆಯಲ್ಲಿ ಪ್ರಕಟನೆ ಮಾಡಿದ್ರು. ಟಿ ವಿ ಯಲ್ಲಿ ಲೋಕಣ್ಣನ ಸಂದರ್ಶನದ ವಿಡಿಯೋ ಪ್ರಸಾರಗೊಂಡಿತು. ಇಡೀ ಊರೇ ಲೋಕಣ್ಣನನ್ನು ಕೊಂಡಾಡಿದ್ದೆ ಕೊಂಡಾಡಿದ್ದು.
ಲೋಕಣ್ಣ ತನ್ನ ಜೀವಮಾನದಲ್ಲಿ ಪೆಂಡಿ ಪೆಂಡಿ ಹಣವನ್ನು ಕಂಡದ್ದು ಆ ಮಸಾರಿ ಹ್ವಲದ ದಯದಿಂದ.
ಕಬ್ಬಿನ ಎರಡು ಬೆಳೆ ತಗೆದುಕೊಂಡ.ಮೂರನೆ ಬೆಳೆ ಇರವಾಗ ಬೋರಿನ ಕುಣಿಯಲ್ಲಿ ಅಂತರ್ ಗಂಗೆ ಕೆಳಸರಿದಳು. ಎರಡು ವರ್ಷದಿಂದ ಸರಿಯಾಗಿ ಮಳೆಯೇ ಆಗಿರಲಿಲ್ಲ. ಒಂದು ರೀತಿ ಬರಗಾಲವೇ ಆವರಿಸಿತ್ತು. ದಿನಾ ದಿನಾ ನೀರಿನ ಮಟ್ಟ ಕಮ್ಮಿಯಾಗುತ್ತ. ಒಂದು ದಿನ ಸಂಪೂರ್ಣ ಬತ್ತೇ ಬಿಟ್ಟಿತು. ಹೊಲದಲ್ಲಿ ಹಚ್ಚ ಹಸರಾಗಿ ಬೆಳಿದು ನಿಂತ ಕಬ್ಬು. ಅದನ್ನು ಉಳಿಸುವ ಪ್ರಯತ್ನದಲ್ಲಿ ಲೋಕಣ್ಣ ಬೋರಿನ ಗಾಡಿ ತರಿಸಿ, ಬೆಳಿದು ನಿಂತ ಕಬ್ಬಲ್ಲೇ ಗಾಡಿ ಒಳ ಹರಿಸಿ, ಬೋರು ಹಾಕಿಸಿದ. ಒಂದಲ್ಲ ಎರಡಲ್ಲ ಎಂಟ್ಹತ್ತು ಪೈಂಟ್ ಹಾಕಿಸಿದ್ರೂ ಅಂತರ್ ಗಂಗೆ ಕಾಣಲಿಲ್ಲ.
ಕಬ್ಬಿನಿಂದ ಬಂದ ಆದಾಯ ಮತ್ತೆ ಬೋರಿನ ಕುಣಿಯಲ್ಲಿ ಇಡಲಾಯಿತು. ಹೆಂತಿಯ ಮೈಯ್ಯಾಗಿನ ಬಂಗಾರ, ಸಸ್ವಿ ಕೊಳ್ಳಾಗಿನ ಬಂಗಾರ ಮಾರಿದ,ಊರಾಗ ಅವರಿವರಿಂದ ಸಾಲ ಮಾಡಿದ, ಮತ್ತೆ ಬೊರ್ ಗಾಡಿ ತಂದು ಗುದ್ದಿಸಿದ.ಮತ್ತೂ ನೀರು ತೋರಲಿಲ್ಲ.
ಕುಲಕರಣಿ ಭೀಮರಾಯರಿಗೆ ಒಂದು ನೀರು ಕೋಡ್ರಿ, ಕಬ್ಬ ಒಣಗಿ ಹೊಂಟೈತ್ರೀ ಹಾಸ್ತಿನೆಂದು ದೈನಾಸಬಿಟ್ಟು ಕೇಳದಾ. “ರೊಕ್ಕಾ ಬೇಕಾದ್ರ ಒಯ್ಯಿ, ಆದ್ರ ನೀರ ಕೊಡಾಕ ಆಗೂದಿಲ್ಲೆಂದು” ಕಡ್ಡಿ ಮುರದ್ಹಂಗ ಹೇಳಿದಾಗ ಲೋಕಣ್ಣ ಅವ್ರ ಹಂತೇಕೂ ರೊಕ್ಕ ಇಸ್ಕೋಳಾಕ ಸಜ್ಜಾದ.
ಒಂದ ವರ್ಷದಾಗ ರೊಕ್ಕಾ ಹೊಡಮರಳಿ ಕೊಡದಿದ್ರ ಹೊಲದ ಕಬ್ಜಾ ಕೊಡಬೇಕೆಂದು ಬಾಂಡ್ ಮ್ಯಾಲ್ ಗಂಡಾ-ಹೆಂತಿ, ಮಗಂದೂ ಸ್ವಸಿದೂ ಸಹಿ ಮಾಡಸ್ಕೊಂಡ ರೊಕ್ಕಾ ಕೊಟ್ಟಾ. ದುರ್ಧೈವಕ್ಕ ಮತ್ತೊಂದು ಕುಣಿ ಹೊಡಸಿದ್ರೂ ಅಂತರ್ ಗಂಗೆ ಸುಳಿವೇ ಸಿಗಲಿಲ್ಲ.
“ಅಯ್ಯೋ ಏನಾಯಿತು ನನ್ನ ಗತಿ ದೇವ್ರೇ” ಎಂದು ಕಣ್ಣೀರು ಹಾಕುತ್ತ ಲೋಕಣ್ಣ ಹಾಸಿಗೆ ಹಿಡಿದು ಮಲಗಿದ. ಹಾಸಿಗೆ ಹಿಡಿದು ಮಲಗಿದವ ಮತ್ತೆ ಮೇಲೆಳಲೇ ಇಲ್ಲ. ಲೋಕಣ್ಣ ಹ್ವಾದ ಮೇಲೆ ಅವನ ಚಿಂತೆಯಲ್ಲಿ ಅಂವನ ಹೆಂತಿಯೂ ಗಂಡ ಹ್ವಾದ ದಾರಿನೇ ಹಿಡದಳು.
*****
ಅಪ್ಪ ಮಾಡಿದ ಸಾಲದ ಕಾಟ ಸಹಿಸಿಕೊಳ್ಳಲಾಗದೆ ಧರಿಯಪ್ಪ ಮಂಗ್ಳೂರಿನ ಹಾದಿ ಹಿಡಿದ. ನಾಲ್ಕೈದು ವರ್ಷ ಗಂಡ ಹೆಂಡತಿ ಮಕ್ಕಳು ಹೊಟ್ಟಿ ಕಟ್ಟಿ ದುಡಿದು ಊರಿನ ಚಾರು ಚೂರು ಸಾಲ ಹರೆದು ನಿರುಮ್ಮಳಾದರು. ಉಳದದ್ದು ಕುಲಕರಣಿಯವರದೊಂದೆ, ಅವರ ಸಾಲ ತೀರಿಸಲು ಮತ್ತೇ ಮೂರು ವರ್ಷ ಧರಿಯಪ್ಪ ದೇಕಿದ. ಅವರ ಬಡ್ಡಿ ಗಂಟು ಚುಕ್ತಾ ಮಾಡಿ ಮರಳಿ ಹ್ವಲಾ ಬಿಡಿಸಿಕೊಂಡು ಮಸಾರಿ ಹ್ವಲದ ಉಸಾಬರಿ ಬಿಟ್ಟು ತನ್ನ ಪಾಡಿಗೆ ತಾನು ದುಡಿಮೆ ಮುಂದುವರಸಿದ್ದ.
ಮಳಿ ಭಾಳ ಆಗೇತಿ ಊರಿಗೆ ಬಾರಪೋ ಎಂದು ಗೆಳೆಯರು ಪೋನ್ ಮಾಡಿದಾಗ ಧರಿಯಪ್ಪನಿಗೆ ಆಗ ಮಸಾರಿ ಹ್ವಲಾ ನೆನಪಾಗಿತ್ತು. .ಆಗ ಬಸ್ಸು ಹತ್ತಿ ಕುಂತು ಊರಿಗೆ ಬರಲು ಸಜ್ಜಾಗಿದ್ದು.
ಊರಿಗೆ ಬಂದ ಕೂಡಲೇ ಮೂರ ಜನಾ ಚಡ್ಡಿ ದೋಸ್ತರು ಕೂಡಿ, ಧೂಳು ಹಿಡಿದ ದರಿಯಪ್ಪನ ಮನಿ ಹಸಣುಗೊಳಸಿ, ಧರಿಯಪ್ಪನ ಹೆಂಡತಿ ಮಾಡಿದ ಬಿಸಿ ಬಿಸಿ ಉಪ್ಪಿಟ್ಟು ತಿಂದು, ಮಸಾರಿ ಹ್ವಲದ ಹಾದಿ ಹಿಡಿದಾಗ ಸೂರ್ಯಾ ನೆತ್ತಿಯ ಮೇಲಿದ್ದ. ಒಡ್ಡಿನ ಬದುವಿನಲ್ಲಿ ನಿಂತ ನೀರಿನ ಮೇಲೆ ಸೂರಪ್ಪನ ಕಿರಣಗಳು ಬಿದ್ದು ನೀರು ಕನ್ನಡಿಯಂತೆ ಪಳಪಳ ಪಳಗುಟ್ಟುತ್ತಿತ್ತು. ಧರಿಯಪ್ಪ “ಮಳಿ ಮಸ್ತ ಆಗೇತೆಂದು” ಆಗ ಖಚಿತ ಪಡಿಸುಕೊಂಡ. ಭಾಳ ದಿನದ ನಂತ್ರ ಹ್ವಲದಾಗ ಕಾಲಿಟ್ಟಿದ್ದ. ಅಲ್ಲಿ ಕಸಕಡ್ಡಿ ಬಿಟ್ಟು ಬೇರೇನೂ ಕಾಣಲಿಲ್ಲ. ಈ ಹ್ವಲಕ್ಕಾಗಿ ಅವ್ವ ಅಪ್ಪ ಹೆಣವಾದರೆಂದು ಅಂವನ ಅಂತರಾತ್ಮ ಸಾರುತ್ತಿತ್ತು.
“ಲೇ ಬಸ್ಯಾ ಟ್ರ್ಯಾಕ್ಟರ್ ಖಾಲಿ ಐತೇನ ಖಾಲಿ ಇದ್ರ ಲೋಕಪ್ಪ ಕಾಕಾನ ಮಸಾರಿ ಹ್ವಲಕ್ಕ ನೆಗ್ಲಾ ಜೋಡಸ್ಕೊಂಡ ಬಾ” ಎಂದು ಪೋನ್ ಮಾಡಿ ಕೌದ್ಯಾರಾಮ ಹೇಳಿ ಮಾತು ಮುಗಿಸಿದ್ದ. ಅಪ್ಪ ಸತ್ತರೂ ಹ್ವಲದೊಂದಿಗೆ ಅಂವನ ಹೆಸರು ತಳಕಾಗಿ ಉಳದಿತ್ತು. ಇನ್ನೂ ಜನರ ಮನದಲ್ಲಿ ಅದು ಅಳಕಿಲ್ಲ, ಅನ್ನುವ ಸತ್ಯ ಗೆಳೆಯನಾಡಿದ ಮಾತಿಂದ ತಿಳಿದಾಗ ಅಂವನಿಗೆ ಗೊತ್ತಿಲ್ಲದಂತೆ ಧರಿಯಪ್ಪ ಕಣ್ಣಾಲೆಗಳು ತೇವಗೊಂಡಿದ್ದವು.
ಬಸ್ಯಾ ಬಂದು ನೆಗಿಲ ಹೊಡೆಯಲು ಶುರು ಮಾಡಿದ. ಹೊತ್ತು ಮುಣುಗುವುದರಲ್ಲಿ ಮಸಾರಿ ಹ್ವಲ ಬೆಣ್ಣೆಯಂತೆ ಅರಳಿಕೊಂಡಿತ್ತು, ಮಗುವಿನ ಗಲ್ಲದಂತೆ ಮಣ್ಣು ಮೀದುವಾಗಿತ್ತು. ಅದನ್ನು ನೋಡಿದ ಧರಿಯಪ್ಪನಿಗೆ ಮಸಾರಿ ಹ್ವಲಾ ಬಿಟ್ಟು ಎಲ್ಲೂ ಹೋಗಬಾರದೆನಿಸಿತು.
ಹಳ್ಳ ಕೊಳ್ಳ ತುಂಬಿ ಹರಿವಂಗ ಊರ ಸೀಮ್ಯಾಗ ಬಲ್ಲಂಗ ಮಳಿ ಆಗಿತ್ತು. ಅಪ್ಪ ಹ್ವಲದ ತುಂಬೆಲ್ಲಾ ಬೋರ್ ಹಾಕಿದ್ರೂ ಅಂತರ್ ಗಂಗವ್ವ ಮೋತಿ ತೋರ್ಸಿರಲಿಲ್ಲ. ಈಗೇನಾರ ಮಳಿ ಹೆಚ್ಚಾಗಿ ಬೋರ್ ಕುಣಿಯಾಗ ನೀರ್ ಗೀರ್ ಬಂದೈತೋ, ಹೆಂಗೋ, ಐದಾರ ವರ್ಷ ನಿಂತ ಹ್ವಾದ ಕುಣಿಗೋಳು ಮತ್ತ ಮಳಿ ಹೆಚ್ಚಾದಾಗ ಚಾಲೂ ಆಗಿದ್ದು ಸಾಕಷ್ಟ ಕಡೆ ಉದಾರಣೆ ನಡದದ್ದು ಧರಿಯಪ್ಪ ತಿಳದಿದ್ದ. ನನ್ನ ಹಣಿಬರದಾಗ ಏನೈತೋ ನೋಡಿಯೇ ಬಿಡಬೇಕಂತ ಅವನ ಮನದಾಗ ಮೂಡಿತು.
ಹಿಂಗಾಗಿ ಧರಿಯಪ್ಪ ಅವರಪ್ಪ ಮೊದಲು ಹಾಕಿಸಿದ ಬೋರಿನ ಕುಣಿಯತ್ತ ಹ್ವಾದ. ಅದರಲ್ಲಿ ಮೋಟರ್ ಪಂಪ್, ಡಬ್ಬಿಗೆ ಜೋಡಿಸಿದ ಕೇಬಲ್ ಹಾಗೇ ಇತ್ತು. ಬೋರ್ಡಿನ ಕೀಲಿ ತನ್ನ ಉಡದಾರಲ್ಲಿರುವದು ಖಚಿತ ಪಡಿಸಿಕೊಂಡು, ಅದನ್ನು ಉಡದಾರದಿಂದ ತಗೆದು, ಬೋರ್ಡ ಬಾಗಿಲ ಬಿಚ್ಚಿದ. ಅದರಲ್ಲಿ ಎರಡು ಇಲಿ ಸತ್ತು ಬಿದ್ದಿದ್ದವು, ಒಂದೆರಡು ಅಲ್ಲೇ ಓಡಾಡಿಕೊಂಡಿದ್ದವು. ಜೇಡರ ಹುಳು ಬಲೆ ಹೆಣದಿತ್ತು. ಒಣಾ ಕಟಿಗೆಯಿಂದ ಆ ಜೀಡವನ್ನು ತೆಗೆದ. ಕೆಬಲ್ ಕಟ್ಟಾಗಿದೆಯೋ ಇಲ್ಲವೋ ಒಮ್ಮೆ ಗಮನಿಸಿದ. ಕಟ್ಟಾದಂತೆ ಅನಿಸಲಿಲ್ಲ. ವಣಾ ಕಟ್ಟಿಗೆಯಿಂದ ಬೊರ್ಡನಲ್ಲಿರುವ ಹಸಿರು ಗುಂಡಿಗೆ ಚುಚ್ಚಿದ. ಸ್ಟಾಟರ್ ಚಟ್ ಪಟ್ ಸದ್ದು ಮಾಡಿತು, ಬೋರಿನ ಕುಣಿಯಿಂದ ಗುಳುಗುಳು ಶಬ್ಧ ಕೇಳುತ್ತ ಒಮ್ಮಿಂದೊಮ್ಮಲೇ ಅಂತರ್ ಗಂಗೆ ಹೊರ ಧೂಮಿಕಿದಳು. ಆಗ ಧರಿಯಪ್ಪ ಕೇ ಕೇ ಹಾಕಿದ . ಅಂವನೊಂದಿಗಿದ್ದ ಗೆಳೆಯರೂ “ಕೇ ಹೋ ಹೋ” ಎಂದು ದೊಡ್ಡ ದನಿಯಲ್ಲಿ ಕೂಗಿದರು. ಪೈಪಿನಿಂದ ಚಿಮ್ಮುತ್ತಿದ್ದ ನೀರನ್ನು ಧರಿಯಪ್ಪ ಬೊಗಸೆ ಒಡ್ಡಿ ಕುಡಿಯತೊಡಗಿದ, ಆಗ ಅವನ ತಂದೆ ನೆನಪಾಗಿ ಬಿಕ್ಕಿ ಬಿಕ್ಕಿ ಕಣ್ಣೊರಸಿಕೊಂಡ .ಮಸಾರಿ ಹ್ವಲದಲ್ಲಿ ಅಂತರ್ ಗಂಗೆ ಹಾವಿನಂತೆ ಹರೆಯುತ್ತಲೇ ಇದ್ದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.