
ಎಲ್ಲಿ ನೋಡಿದರಲ್ಲಿ ಜನವೋ ಜನ... ಭಾರತ ಹುಣ್ಣಿಮೆ ಅಂಗವಾಗಿ ‘ಏಳುಕೊಳ್ಳದ ನಾಡು‘ ಯಲ್ಲಮ್ಮನ ಸನ್ನಿಧಿಗೆ ಹರಿದುಬಂದ ಭಕ್ತಸಾಗ.–ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ಜಾತ್ರೆ ಎಂದರೆ ಕೇವಲ ದೇವರ ದರ್ಶನದ ಸಂಭ್ರಮವಲ್ಲ. ನಾಡಿನ, ಜನಜೀವನದ ಚೈತನ್ಯ, ಸಂಸ್ಕೃತಿಯ ಸಂಭ್ರಮ. ಹಬ್ಬ-ಜಾತ್ರೆಗಳು ನಮ್ಮ ರಾಜ್ಯದ ಶ್ರೀಮಂತ ಪರಂಪರೆ, ಸಾಮಾಜಿಕ ಸಾಮರಸ್ಯ ಮತ್ತು ಜನಜೀವನದ ಒಗ್ಗಟ್ಟಿನ ಜೀವಂತ ಚಿತ್ರಣಗಳಾಗಿವೆ.
ರಥೋತ್ಸವಗಳು, ಕರಗ, ಕಂಬಳ, ಸಿಡಿ ಉತ್ಸವಗಳು, ಪಲ್ಲಕಿ ಮೆರವಣಿಗಳು ನಮ್ಮ ವಿಶಿಷ್ಟ ಸಂಪ್ರದಾಯ, ಭಕ್ತಿ ಮತ್ತು ವೈಭವವನ್ನು ಪ್ರದರ್ಶಿಸುವುದರ ಜೊತೆಗೆ ಸ್ಥಳೀಯ ಧಾರ್ಮಿಕ ಮತ್ತು ಪಾರಂಪರಿಕ ಮಹತ್ವವನ್ನು ಸಾರುತ್ತವೆ.
ರಾಜ್ಯದಲ್ಲಿ ಸಾಮಾನ್ಯವಾಗಿ ಮಕರ ಸಂಕ್ರಾಂತಿ ನಂತರ ಜಾತ್ರೆಗಳು ಆರಂಭವಾಗುತ್ತವೆ. ಇನ್ನು ಶಿವರಾತ್ರಿಯ ನಂತರ ರಾಜ್ಯದ ಹಲವು ಕಡೆಗಳಲ್ಲಿ ಜಾತ್ರೆಗಳು ಮತ್ತು ರಥೋತ್ಸವಗಳು ಸಾಲುಗಟ್ಟಿ ಬರುತ್ತವೆ.
ಜಾತ್ರೆಗಳು ಜಾತಿ-ಮತ ಬೇಧವಿಲ್ಲದೆ ಜನರನ್ನು ಒಂದು ಕಡೆ ಸೇರಿಸಿ ಪ್ರೀತಿ-ವಿಶ್ವಾಸ ಬೆಳೆಸುತ್ತವೆ. ಸ್ಥಳೀಯ ವ್ಯಾಪಾರಿಗಳು ಮತ್ತು ಕೃಷಿಕರಿಗೂ ಆದಾಯದ ಮೂಲಗಳಾಗಿವೆ. ಬಹುತೇಕ ಜಾತ್ರೆ ಮತ್ತು ರಥೋತ್ಸವಗಳಲ್ಲಿ ಅನ್ನದಾನ ಮಾಡುವ ದಾಸೋಹ ಸಂಸ್ಕೃತಿ ರಾಜ್ಯದ ವಿಶಿಷ್ಟತೆಯನ್ನು ಎತ್ತಿ ಹಿಡಿದಿದೆ.
ರೇಣುಕಾ ಯಲ್ಲಮ್ಮ ದೇವಿ ಜಾತ್ರೆ...
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ನಡೆಯುವ ರೇಣುಕಾ ಯಲ್ಲಮ್ಮ ದೇವಿ ಜಾತ್ರೆ ಉತ್ತರ ಕರ್ನಾಟಕದ ಅತಿದೊಡ್ಡ ಮತ್ತು ಅತ್ಯಂತ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿದೆ.
ಈ ಜಾತ್ರೆ ಸಾಮಾನ್ಯವಾಗಿ ಬನದ ಹುಣ್ಣಿಮೆ(ಜನವರಿ-ಫೆಬ್ರುವರಿ) ಸಮಯದಲ್ಲಿ ಅದ್ಧೂರಿಯಾಗಿ ನಡೆಯುತ್ತದೆ. ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಕುಂಕುಮ-ಭಂಡಾರ ಎರಚಿ ‘ಉಧೋ ಉಧೋ‘ ಎಂಬ ಘೋಷಣೆಯೊಂದಿಗೆ ರೇಣುಕಾ ಯಲ್ಲಮ್ಮ ದೇವಿಯನ್ನು ಆರಾಧಿಸುತ್ತಾರೆ.
ಒಂದು ವಾರ ನಡೆಯುವ ಜಾತ್ರೆಗೆ ಯಲ್ಲಮ್ಮನ ಗುಡ್ಡಕ್ಕೆ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತರು ದೇವಿ ದರ್ಶನಕ್ಕೂ ಮುನ್ನ ಎಣ್ಣೆ ಹೊಂಡದಲ್ಲಿ ಮಿಂದು, ಪವಿತ್ರ ಜಲವನ್ನು ಸೇವಿಸುತ್ತಾರೆ. ಭಕ್ತರು ದೇವಿಗೆ ಪಂಚ ಭಕ್ಷ್ಯ ಪಕ್ವಾನ್ನ ನೈವೇದ್ಯ ಮಾಡುತ್ತಾರೆ. ಜೋಕುಮಾರರ ಉತ್ಸವ, ಜೋಗತಿಯರ ನೃತ್ಯ, ಮತ್ತು ಪರಂಪರಾಗತ ಆಚರಣೆಗಳು ಜಾತ್ರೆಯ ಪ್ರಮುಖ ಆಕರ್ಷಣೆಗಳಾಗಿವೆ.
ಕೊಪ್ಪಳದ ಗವಿಮಠದಲ್ಲಿ ಹರಕೆ ತೇರು
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆ...
ಕೊಪ್ಪಳದ ಐತಿಹಾಸಿಕ ಗವಿಸಿದ್ದೇಶ್ವರ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದು ಪ್ರಸಿದ್ಧವಾಗಿದೆ. ಪ್ರತಿವರ್ಷ ಜನವರಿ ತಿಂಗಳಲ್ಲಿ ಗವಿಸಿದ್ದೇಶ್ವರ ಜಾತ್ರೆ ನಡೆಯುತ್ತದೆ.
ಈ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೆಯಲ್ಲಿ ಮಾಡಲಾಗುವ ದಾಸೋಹ ವ್ಯವಸ್ಥೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ ಸುಮಾರು 20 ಲಕ್ಷಕ್ಕೂ ಹೆಚ್ಚು ರೊಟ್ಟಿ ತಯಾರಿಸುವುದು ವಾಡಿಕೆ.
ಗವಿಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮಾರ್ಗದರ್ಶನದಲ್ಲಿ ಈ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಜಾತ್ರೆ ಒಂದು ವಾರ ನಡೆಯುವ ಜಾತ್ರೆಯಲ್ಲಿ ರಥೋತ್ಸವ, ತೇಪ್ಪೋತ್ಸವ, ಗಂಗಾರತಿ, ಕೃಷಿ ಮೇಳ, ಮತ್ತು ಫಲಪುಷ್ಪ ಪ್ರದರ್ಶನಗಳು ಪ್ರಮುಖ ಆಕರ್ಷಣೆಗಳಾಗಿವೆ.
ಈ ಜಾತ್ರೆಯು ಜಾತಿ-ಮತ ಬೇಧವಿಲ್ಲದೆ ಭಕ್ತರನ್ನು ಆಕರ್ಷಿಸುತ್ತದೆ ಮತ್ತು ನಿರಂತರ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಈ ಜಾತ್ರೆಯು ದಾನದ ಹರಿವು, ಸ್ವಯಂಸೇವಕರ ಶ್ರಮ ಮತ್ತು ಭಕ್ತರ ಐಕ್ಯತೆಗೆ ಸಾಕ್ಷಿಯಾಗಿದೆ
ಶಿರಸಿ ಮಾರಿಕಾಂಬಾ ಜಾತ್ರೆ
ಉತ್ತರ ಕನ್ನಡದ ಮಾರಿಕಾಂಬಾ ಜಾತ್ರೆ ರಾಜ್ಯದಲ್ಲಿ ಅತ್ಯಂತ ಪ್ರಸಿದ್ದ ಜಾತ್ರೆಯಾಗಿದೆ. ದೇಶ ವಿದೇಶಗಳಿಂದ ಭಕ್ತರು ಮಾರಿಕಾಂಬಾ ದೇವಿಯ ಆಶೀರ್ವಾದ ಪಡೆಯಲು ಇಲ್ಲಿಗೆ ಬರುತ್ತಾರೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವವೇ ಇಲ್ಲಿನ ವಿಶೇಷ.
ರಾಜ್ಯದಲ್ಲಿ ಮಾರಮ್ಮ ದೇವಿಯರಿಗೆ ವಿಶೇಷ ಸ್ಥಾನವಿದೆ. ಇಲ್ಲಿನ ಮಾರಿಕಾಂಬಾ ದೇವಿ ರಾಜ್ಯದ ಎಲ್ಲಾ ಮಾರಿಯಮ್ಮ ದೇವಿಯರಿಗೆ ದೊಡ್ಡಕ್ಕ ಎಂದು ಕರೆಯಲಾಗುತ್ತದೆ. ಕೊಲ್ಲೂರಿನ ಮೂಕಾಂಬಿಕೆ, ಮೈಸೂರಿನ ಚಾಮುಂಡೇಶ್ವರಿಗೂ ಈಕೆಯೇ ಅಕ್ಕ ಎಂದು ನಂಬಲಾಗಿದೆ.
ಫಾಲ್ಗುಣ ಮಾಸದಲ್ಲಿ ಎರಡು ವರ್ಷಗಳಿಗೊಮ್ಮೆ ಇಲ್ಲಿ ಸತತ 9 ದಿನಗಳವರೆಗೆ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುತ್ತದೆ. ದೇವಿಯ ಮೂಲ ವಿಗ್ರಹಕ್ಕೆ ಸರ್ವಾಲಂಕಾರ, ಪಲ್ಲಕ್ಕಿ ಮೆರವಣಿಗೆ, ದೇವಿಗೆ ವಿವಾಹ ಸೇರಿದಂತೆ ಕೋಣ ಬಲಿ ಕೊಟ್ಟು ಚಪ್ಪರಕ್ಕೆ ಬೆಂಕಿ ಹಚ್ಚುವುದರೊಂದಿಗೆ ಜಾತ್ರೆ ಮುಕ್ತಾಯವಾಗುತ್ತದೆ. ಕೋಣ ಬಲಿ ಕೊಡುವ ಬದಲು ಬೂದುಕುಂಬಳಕಾಯಿ ಒಡೆಯುವ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಮೈಲಾರಲಿಂಗೇಶ್ವರ ಜಾತ್ರೆ...
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ನಡೆಯುವ ಮೈಲಾರಲಿಂಗೇಶ್ವರ ಜಾತ್ರೆ ರಾಜ್ಯದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಮತ್ತು ಧಾರ್ಮಿಕ ಉತ್ಸವವಾಗಿದೆ.
ಈ ಜಾತ್ರೆ ಸಾಮಾನ್ಯವಾಗಿ ಮಾಘ ಮಾಸದ ಭರತ ಹುಣ್ಣಿಮೆ ದಿನಗಳಲ್ಲಿ ಒಂದು ವಾರ ನಡೆಯುತ್ತದೆ. ಗೊರವಯ್ಯನವರ ಕಾರ್ಣಿಕೋತ್ಸವ, ಕಂಚಾವೀರರ ಮೈನವಿರೇಳಿಸುವ ಪವಾಡಗಳು, ಸರಪಳಿ ಪವಾಡ ಪ್ರಮುಖ ಆಕರ್ಷಣೆಗಳಾಗಿವೆ.
ಮಣಿಕಾಸುರ ಮತ್ತು ಮಲ್ಲಾಸುರ ಎಂಬ ರಾಕ್ಷಸರನ್ನು ಸಂಹರಿಸಿದ ವಿಜಯದ ಸಂಕೇತವಾಗಿ ಈ ಜಾತ್ರೆಯನ್ನು ಆಚರಿಸಲಾಗುತ್ತದೆ. ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.
ಕಡುಬಿನ ಕಾಳಗ, ಮೌನ ಸವಾರಿ, ಗೊರವರ ದೋಣಿಸೇವೆ ಈ ಜಾತ್ರೆಯ ಪ್ರಮುಖ ಆಚರಣೆಗಳಾಗಿವೆ.
ಹೂವಿನಹಡಗಲಿ ತಾಲ್ಲೂಕು ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಣಿಕೋತ್ಸವ
ಸುತ್ತೂರು ಜಾತ್ರೆ...
ಸಾವಿರಾರು ವರ್ಷಗಳ ಇತಿಹಾಸವಿರುವ, ಕಪಿಲಾ ತಟದಲ್ಲಿರುವ ಸುತ್ತೂರು ಜಾತ್ರೆ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ. ಇದು ಮೈಸೂರು ಜಾತ್ರೆ ಎಂದು ಕೂಡ ಪ್ರಸಿದ್ಧವಾಗಿದೆ.
ಸಾಮಾನ್ಯವಾಗಿ ಜನವರಿ ಅಥವಾ ಫೆಬ್ರುವರಿ ತಿಂಗಳಲ್ಲಿ ಈ ಜಾತ್ರೆ ನಡೆಯುತ್ತದೆ. 6 ದಿನಗಳ ಕಾಲ ಅದ್ಧೂರಿಯಾಗಿ ನಡೆಯುವ ಈ ಜಾತ್ರೆಗೆ ಪ್ರತಿ ವರ್ಷ 20 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುತ್ತಾರೆ.
ಜಾತ್ರೆಯಲ್ಲಿ ರಥೋತ್ಸವ ಮತ್ತು ತೇಪ್ಪೋತ್ಸವ ಪ್ರಮುಖ ಆಕರ್ಷಣೆಯಾಗಿವೆ. ಸಾಮೂಹಿಕ ವಿವಾಹ, ಕೃಷಿ ಮೇಳ, ಮತ್ತು ಫಲಪುಷ್ಪ ಪ್ರದರ್ಶನ, ರಾಸುಗಳ ಮೇಳ ಕೂಡ ನಡೆಯಲಿದೆ.
ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆ...
ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯ ತಿಪ್ಪೇರುದ್ರಸ್ವಾಮಿ ಜಾತ್ರೆ ಮಧ್ಯ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ.
ಆಧ್ಯಾತ್ಮಿಕ ಗುರು, ಸಮಾಜ ಸುಧಾರಕ ಮತ್ತು ಪವಾಡ ಪುರುಷರಾಗಿದ್ದ ತಿಪ್ಪೇರುದ್ರಸ್ವಾಮಿ ಶಿವಭಕ್ತರಾಗಿದ್ದರು. ಕಾಯಕವೇ ಕೈಲಾಸ ತತ್ವ ಬೋಧಿಸುವ ಮೂಲಕ ಕೆರೆಗಳನ್ನು ನಿರ್ಮಿಸಿ ಜನಹಿತ ಕಾರ್ಯಗಳನ್ನು ಮಾಡಿದರು.
ತಿಪ್ಪೇರುದ್ರಸ್ವಾಮಿ ರಥೋತ್ಸವ ಫಾಲ್ಗುಣ ಮಾಸದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯುತ್ತದೆ. 70 ಅಡಿ ಎತ್ತರದ ರಥೋತ್ಸವ, ಪಲ್ಲಕ್ಕಿ ಮೆರವಣಿಗೆ ಹಾಗೂ 'ಮುಕ್ತಿ ಬಾವುಟ' ಹರಾಜು ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ. ಈ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದ ಭಕ್ತರು ಭಾಗವಹಿಸುವುದು ವಿಶೇಷ.
ಜಾತ್ರೆಗಳು ದೇವಾಲಯದ ಗರ್ಭಗುಡಿ ಮಾತ್ರ ಸೀಮಿತವಾಗಿಲ್ಲ. ಅವು ಗ್ರಾಮೀಣರ ಆರ್ಥಿಕತೆ ಚಕ್ರವನ್ನು ತಿರುಗಿಸುವ ಶಕ್ತಿ, ಜನಪದ ಕಲೆಯ ವೇದಿಕೆ, ದಾಸೋಹ ಪರಂಪರೆಯ ಮೂಲಕ ಜನಮನಗಳನ್ನು ಜೋಡಿಸುವ ಬಂಧ. ಭಕ್ತಿ, ವ್ಯಾಪಾರ, ಸಂಸ್ಕೃತಿ, ಸೇವೆ, ಇವೆಲ್ಲವೂ ಸೇರಿ ರೂಪುಗೊಳ್ಳುವ ಜಾತ್ರೆ ನಿಜಕ್ಕೂ ನಾಡಿನ ಜೀವಂತ ಉತ್ಸವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.