ADVERTISEMENT

ಹರಳುಗಳು ನಿಮ್ಮ ರಾಶಿಗಳ ಮೇಲೆ ಹೀಗೆ ಪ್ರಭಾವ ಬೀರುತ್ತವೆ; ಇಲ್ಲಿದೆ ಮಾಹಿತಿ

ಮಹಾಬಲಮೂರ್ತಿ ಕೊಡ್ಲೆಕೆರೆ
Published 26 ಫೆಬ್ರುವರಿ 2026, 1:25 IST
Last Updated 26 ಫೆಬ್ರುವರಿ 2026, 1:25 IST
<div class="paragraphs"><p>ಹರಳುಗಳು</p></div>

ಹರಳುಗಳು

   

ಗೆಟ್ಟಿ ಚಿತ್ರ

ಈ ಹರಳುಗಳ ಪ್ರಪಂಚ ಬಹು ದೊಡ್ಡ ವಿಚಿತ್ರಗಳ ಮಾಯಾ ಕ್ಷೇತ್ರ. ಇಲ್ಲಿ ಹೆಜ್ಜೆ ಇರಿಸಿದವರು, ಈ ಹರಳುಗಳುಗಳಿಗೆ ಮನ ಸೋಲುತ್ತಾರೆ. ಯಾಕೆಂದರೆ, ಒಂದೇ, ಎರಡೇ? ಸಂಖ್ಯೆಗಳನ್ನು ಎಣಿಸುವುದಾದರೆ ಸಾವಿರಾರು ಸಂಖ್ಯೆಯಲ್ಲಿ ಹರಳುಗಳುಂಟು. ಬಣ್ಣ ಬಣ್ಣದ ಪಕ್ಷಿಗಳು, ಮೀನುಗಳು, ಹೂಗಳನ್ನು ಲೆಕ್ಕ ಹಾಕಿ ಮುಗಿಸಲಾಯ್ತು ಎಂದು ಹೇಳುವುದು ಅತ್ಯಂತ ಕಷ್ಟದ ಕೆಲಸ. ಹಾಗೆಯೇ ಸಾಮಾನ್ಯವಾಗಿ ಅತ್ಯಂತ ಹೆಚ್ಚು ಸಮಂಜಸವಾದ ಹರಳುಗಳು ಕೇವಲ ಒಂಭತ್ತು ಮಾತ್ರ. ಇನ್ನೆಲ್ಲ, ಒಂದು ಮಿತಿಯಲ್ಲಿ ಕೆಲವು ಶುಷ್ಕ ಪರದಾಟಗಳನ್ನು ನಿಯಂತ್ರಿಸಲು ಉಪಯೋಗಿಸಲು ಬೇಕಾದ ಹರಳುಗಳು.

ADVERTISEMENT

ಅಂದರೆ ಹರಳುಗಳು ಜೀವಿಯ ಜೀವ ರಸಾಯನದ ಮೇಲೆ ತಮ್ಮ ಪ್ರಭಾವ ಬೀರುತ್ತವೆಯೇ? ಹೌದು.. ಬೀರುತ್ತವೆ. ಹೈ ಬ್ಲಡ್ ಪ್ರೆಶರ್ ಅನ್ನು ನಿಗ್ರಹಿಸಲು ತಾಮ್ರದ ಲವಣಾಂಶಗಳು ಸಹಕಾರಿಯಾಗುತ್ತವೆ ಎಂದು ಹಲವು,ಹದಿನೆಂಟು ಸಂಶೋಧನೆಗಳಿಂದ  ನಂಬಲಾಗಿದೆ. ತಾಮ್ರದ ಗಟ್ಟಿ ಬಳೆಯ ಬಳಕೆಯನ್ನು ಕೈಗೆ‌ ಧರಿಸಲು ವೈದ್ಯರು ಸಲಹೆ ಕೊಡುತ್ತಾರೆ. ಹಾಗೆಯೇ ಈ ಹರಳುಗಳ ಮೂಲಕ್ಕೆ ಕೈ ಹಾಕಿದರೆ ಇವು ಅನೇಕ ವಿಧದ ಧಾತುಗಳ ರಾಸಾಯನಿಕ ಸಂಯುಕ್ತಗಳು. ಈ ಕಾರಣದಿಂದಲೇ ಇವನ್ನು ಧರಿಸಿದರೆ ಕೆಲವು ಮಹತ್ವದ ಪರಿಣಾಮಗಳು ಲಭ್ಯ ಎಂಬುದನ್ನು ಲಾಗಾಯ್ತಿನಿಂದ ನಂಬಲಾಗಿದೆ. ಹಾಗೆಯೇ ಕೆಲವು ಹರಳು ಧರಿಸಲು ಯೋಗ್ಯವಾಗಿರುವುದಿಲ್ಲ. ಅಡ್ಡ ಪರಿಣಾಮಗಳೇ ಜಾಸ್ತಿ. ಪ್ರತಿ ಜಾತಕ ಕುಂಡಲಿಯ ಸಂಯೋಜನ ಸ್ವರೂಪ, ಈ ಈ ವ್ಯಕ್ತಿಗಳು ಈ ಹರಳನ್ನ ಮಾತ್ರ ಧರಿಸಬೇಕು ಎಂದು ಸೂಚಿಸುತ್ತದೆ.‌

ನೀಲ, ಪಚ್ಚ, ವಜ್ರ ಒಂದು ರೀತಿಯ ಜನರ ಪಾಲಿಗೆ ಒಳಿತು ತಂದರೆ, ಕನಕ ಪುಷ್ಯರಾಗ, ಹವಳ, ಮಾಣಿಕ್ಯ, ಮುತ್ತುಗಳು ಅನ್ಯ ಇನ್ನೊಂದು ರೀತಿಯ ಜನರ ಪಾಲಿಗೆ ಒಳಿತನ್ನು ತರಬಲ್ಲವು. ವ್ಯಕ್ತಿ, ವ್ಯಕ್ತಿಯ ಬಗೆ ರಕ್ತದ ಪ್ರಭೇದಗಳ ಪಟ್ಟಿಗೆ ಹೇಗೆ ಭಿನ್ನ ಭಿನ್ನವೋ.. ಹಾಗೆ, ಹರಳುಗಳೂ ಕೂಡ.

ಮೇಷ, ಕರ್ಕ, ಸಿಂಹ, ವೃಶ್ಚಿಕ, ಧನು ಹಾಗೂ ಮೀನ

ಈ ರಾಶಿಗಳ ಒಡೆತನದ ಗ್ರಹಗಳು ಪರಸ್ಪರ ಮೈತ್ರಿ ಧೋರಣೆಯಲ್ಲಿಯೇ ನಿರತ. ಮೇಷ ಹಾಗೂ ವೃಶ್ಚಿಕ ರಾಶಿಯ ಜನರು, ತಾಮ್ರದಲ್ಲಿ ಹವಳ ಧಾರಣೆಯ ಮೂಲಕ ಒಳಿತು ನಿರೀಕ್ಷಿಸ ಬೇಕಾಗುತ್ತದೆ. ಕರ್ಕ ರಾಶಿಯವರು ಸಾಗರ ಜನ್ಯ ಮುತ್ತನ್ನು ಬೆಳ್ಳಿಯಲ್ಲಿ ಧರಿಸಬೇಕು. ಸಿಂಹ ರಾಶಿಯವರು ಮಾಣಿಕ್ಯದ ಹರಳು, ಧನು ಹಾಗೂ ಮೀನ ರಾಶಿಯವರು ಕನಕ ಪುಷ್ಯರಾಗ ಹರಳುಗಳನ್ನು ಚಿನ್ನದಲ್ಲಿ ಧರಿಸಬೇಕು. ಗೋಮೇಧಿಕ ಹಾಗೂ ವೈಡೂರ್ಯದ ಹರಳುಗಳನ್ನು ಮನಸ್ಸಿಗೆ ಬಂದಂತೆ ಧರಿಸಕೂಡದು. ಕ್ರಮವಾಗಿ ರಾಹು ದಶಾ ಕಾಲದ 18 ವರ್ಷಗಳು, ಕೇತು ದಶಾ ಕಾಲದ, 7 ವರ್ಷಗಳ ಅವಧಿಗೆ ಮಾತ್ರ ಈ ಮೇಲೆ ನಮೂದಿಸಿದ ಎಲ್ಲಾ ರಾಶಿಯ ಜನ ಧರಿಸುವುದು ಸೂಕ್ತ. ಜತೆಗೆ ಇವನ್ನುಪಂಚ ಲೋಹದಲ್ಲೇ ಧರಿಸಬೇಕು.

ಈ ಹರಳುಗಳನ್ನು ಧರಿಸಬೇಕಾದ ರಾಶಿಯ ಜನ ಒಂದೋ ಜಲ ತತ್ವದ ರಾಶಿಯ, ಇಲ್ಲಾ!! ಅಗ್ನಿ ತತ್ವದ ರಾಶಿಗೆ ಸೇರಿರುತ್ತಾರೆ. ಮೇಷ, ಕರ್ಕ, ವೃಶ್ಚಿಕ ರಾಶಿಯವರಿಗೆ ಬೇಕಾದ ಹವಳ ಅಥವಾ ಮುತ್ತುಗಳು ರಾಸಾಯನಿಕ ಸಂಯೋಜನೆಲ್ಲಿ ಕ್ಯಾಲ್ಸಿಯಂ ಕಾರ್ಬೋನೇಟ್ ಆಗಿರುತ್ತವೆ. ಇನ್ನು ಕನಕ ಪುಷ್ಯರಾಗ ಹಾಗೂ ಮಾಣಿಕ್ಯಗಳು ಕ್ರಮವಾಗಿ ಧನಸ್ಸು, ಮೀನ ಹಾಗೂ ಸಿಂಹ ರಾಶಿಯವರಿಗೆ ಬೇಕಾದವುಗಳಾಗಿರುತ್ತವೆ. ಇವೆರಡೂ ಮೂಲ ಸ್ವರೂಪದಲ್ಲಿ ರಾಸಾಯನಿಕ ಸಂಯೋಜನೆಯಲ್ಲಿ ಅಲುಮಿನಿಯಂ ಆಕ್ಸೈಡ್ ಆಗಿರುತ್ತವೆ. ಸಂಯೋಜಿತ ರಾಸಾಯನಿಕ ಧಾತುಗಳು ಒಂದೇ ಆದರೂ ರೂಪ ಬಣ್ಣಗಳೇ ಬೇರೆಬೇರೆ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.

‌ಇನ್ನು ಗೋಮೇಧಿಕ ಹಾಗೂ ವೈಡೂರ್ಯಗಳು ಕ್ರಮವಾಗಿ ಅಲುಮಿನಿಯಂ ಕ್ಯಾಲ್ಸಿಯಂ ಸಿಲಿಕೇಟ್ ಹಾಗೂ ಅಲ್ಯೂಮಿನಿಯಂ ಬೆರಿಲಿಯಮ್ ಆಕ್ಸೈಡ್ ನ ರೂಪ ಪಡೆದಿವೆ. ಇದು ಪ್ರಕೃತಿಯ ಕೈಚಳಕ. ಮಣ್ಣಿನ ಸ್ವಭಾವ. ಕೇವಲ ಮಣ್ಣು ಎಂಬ 'ಮೃತ್ತಿಕೆ' ಹೇಗೆಲ್ಲ ತನ್ನನ್ನು ಚಿನ್ನ, ಬೆಳ್ಳಿ, ವಜ್ರ, ವೈಡೂರ್ಯಗಳಾಗಿ ಅರಳುತ್ತವೋ ತಿಳಿಯದು. ಇದೇ ಮಣ್ಣು ಮೋದಿಯನ್ನು, ರಾಹುಲ್ ಗಾಂಧಿ, ಟ್ರಂಪ್, ಅಂಬಾನಿ, ಹಿಟ್ಲರ್, ನೆಹರು, ಮರ್ಲಿನ್ ಮನ್ರೋ, ಬ್ರಿಟ್ನಿ ಸ್ಪಿಯರ್ಸ್ ಅವರನ್ನು ರೂಪಿಸುತ್ತದೆ. ಮಾಯೆಯ ಆಳ ಅಗಲಗಳು ಪ್ರಕೃತಿಯನ್ನು ಗ್ರಹಿಸಿದಾಗ ಎಲ್ಲವೂ ಅಯೋಮಯ.

ವೃಷಭ, ಮಿಥುನ, ಕನ್ಯಾ, ತುಲಾ, ಮಕರ ಹಾಗೂ ಕುಂಭ

ಭೂ ತತ್ವ(ವೃಷಭ ಹಾಗೂ ಮಕರ), ವಾಯು ತತ್ವ(ತುಲಾ ಹಾಗೂ ಕುಂಭ), ಗಳಿಗೆ  ಚಂಚಲತೆಗೆ ಒಳಗಾಗುವ (ಮಿಥುನ ಹಾಗೂ ಕನ್ಯಾ) ರಾಶಿಗಳಲ್ಲಿ ಈ ಆರು ರಾಶಿಗಳು ಸಮಾವೇಶವಾಗಿವೆಯಾದರೂ ವೃಷಭ ಹಾಗೂ ತುಲಾ ರಾಶಿಯ ಜನರಿಗೆ ವಜ್ರ ಧಾರಣೆ(ಚಿನ್ನದಲ್ಲಿ ಸಂಯೋಜನೆ ಬೇಕು) ಅಪೇಕ್ಷಿತ. ಇನ್ನು ಮಕರ ಹಾಗೂ ಕುಂಭ ರಾಶಿಯ ಜನರಿಗೆ ನೀಲ ಹರಳು ಧಾರಣೆಯೇ ಸೂಕ್ತ. ಈ ಹರಳುಗಳನ್ನು ಪಂಚ ಲೋಹದಲ್ಲಿ ಕೂಡಿಸಿ ಧರಿಸಬೇಕು. ಇನ್ನು ಪಚ್ಚೆ ಹರಳಿನ ಉಪಯೋಗ ಮಿಥುನ ಹಾಗೂ ಕನ್ಯಾ ರಾಶಿಯವರಿಗೆ ಸೂಕ್ತ.

ವಜ್ರವು ಕಾರ್ಬನ್ ಆಗಿರುವ ಇದ್ದಲಿನ ರೂಪಾಂತರವಾಗಿದೆ. ಪಚ್ಚೆ ಕಲ್ಲಂತೂ ಅಲುಮಿನಿಯಂ ಆಕ್ಸೈಡ್ ಆಗಿದೆ. ನೀಲವೂ ಅಲುಮಿನಿಯಂ ಆಕ್ಸೈಡ್ ಆಗಿದೆ.  ಪಚ್ಚೆಯನ್ನು ಬಂಗಾರದಲ್ಲೇ ಧರಿಸಬೇಕು. ಇಲ್ಲೂ ಮಣ್ಣೇ ಬಹು ಬೆಲೆಯ ವಜ್ರ ಆಗುತ್ತದೆ. ನೀಲ ಅಥವಾ ಪಚ್ಚೆಯಾಗುತ್ತದೆ. ಅಂತೂ ಪ್ರಕೃತಿಯ ಸೊಗಸೇ ಭಿನ್ನ. ವೃಷಭ ಹಾಗೂ ತುಲಾ ರಾಶಿಯ ಒಡೆತನ ಶುಕ್ರ ಗ್ರಹದ್ದು. ಮಕರ ಹಾಗೂ ಕುಂಭ
ರಾಶಿಗಳ ಒಡೆತನ ಶನಿ ಗ್ರಹದ್ದು. ಮಿಥುನ ಹಾಗೂ ಕನ್ಯಾ ರಾಶಿಗಳ ಒಡೆತನ ಬುಧ ರಾಶಿಯದ್ದಾಗಿದೆ.

ನೂರಾರು ಆಂಶಿಕ ಅದೃಷ್ಟದ ಕಲ್ಲುಗಳು

ಇತರ ನೂರಾರು ಅರೆಬರೆ,ಆಂಶಿಕ ಅದೃಷ್ಟ ಹಾಗೂ ಸೌಭಾಗ್ಯಕ್ಕೆ ಕಾರಣೀಕೃತ ಹರಳುಗಳಿವೆ. ಇವು ಹೆಚ್ಚಾಗಿ ನಮ್ಮ ಗುಣಪಡಿಸಲಾಗದ ವ್ಯಾಧಿ, ಭಯ, ರೋಗ ರುಜಿನುಗಳನ್ನು ನಿವಾರಿಸುವಲ್ಲಿ, ಮನುಷ್ಯ ಲಾಗಾಯ್ತಿನಿಂದ ತಾ ನಂಬುತ್ತಲೇ ಬಂದ ಭೂತ, ಪಿಶಾಚ, ಪ್ರೇತಗಳ ಕಾಟವನ್ನು ನಿವಾರಿಸುವಲ್ಲಿ, ಅಪಸ್ಮಾರ, ನರ‌ರೋಗ, ಉನ್ಮಾದ, ಮೂರ್ಛಾ ಸ್ಥಿತಿ, ಅವ್ಯಕ್ತರ ಜತೆಗಿನ ಮಾತು ಸಾರಾವಳಿಯ ಭ್ರಮಾತ್ಮಕ ಸ್ಥಿತಿ ನಿವಾರಣೆಗಾಗಿ, ಕೃತ್ರಿಮ ಪ್ರಯೋಗ, ವಾಮಾಚಾರ, ವಶೀಕರಣ ಸರಪಳಿ ಹರಿಯುವುದಕ್ಕಾಗಿ,ದೃಷ್ಟಿ ದೋಷ ಛೇದನಕ್ಕಾಗಿ ಹಲವು ಹದಿನೆಂಟು
ರೀತಿಯ ಆಂಶಿಕ ಅದೃಷ್ಟ, ಅನೂಹ್ಯ ಶಕ್ತಿ ಹರಳುಗಳ ಧಾರಣೆ ಮಾಡುತ್ತಾರೆ.

ಈ ಹರಳುಗಳು ನಾಗರಿಕ ಜಗತ್ತಿನ ಅಲಂಕಾರದ,ಪ್ರದರ್ಶನದ ಭೂಮಿಕೆಗೆ ಅಗತ್ಯವಾದ ಘಟಕಗಳೂ ಆಗಿವೆ. ಅಂಗನೆಯ ಅಂಗಾಂಗ ಸಿರಿಯ ಶ್ರೀಮಂತ ಒಡವೆಗಳ ಕಣ್ಣಾಗಿವೆ. ಮಿಂಚಾಗಿವೆ. 'ಸೆಳೆ'ಯಾಗಿವೆ, 'ಹೊಳೆ'ಯಾಗಿವೆ. ಹೀಗೆ ಹಾಗೇ ಇದು ಎಂಬ ಸೌಂದರ್ಯಕ್ಕೆ ಪಥವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.