
ಎಐ ಚಿತ್ರ
ಲಕ್ಷ್ಮೀ ದೇವಿಯನ್ನು ಶುಕ್ರವಾರ ಪೂಜಿಸುವುದು ಶುಭಕರ ಎಂದು ಪರಿಗಣಿಸಲಾಗಿದೆ. ಇದರಿಂದಾಗಿ ಮನೆಯಲ್ಲಿನ ಆರ್ಥಿಕ ಬಿಕ್ಕಟ್ಟು ಪರಿಹಾರವಾಗುತ್ತೆ ಎಂಬ ನಂಬಿಕೆ ಇದೆ. ಶುಕ್ರವಾರ ದಿನ ಲಕ್ಷ್ಮೀ ಪೂಜೆಯ ಜೊತೆಗೆ ಸಂತೋಷಿ ಮಾತಾ ಹಾಗೂ ದುರ್ಗಾ ದೇವಿಯನ್ನು ಪೂಜಿಸಿದರೆ ಸುಖ, ಶಾಂತಿ ಮತ್ತು ಸಮೃದ್ಧಿ ಲಭಿಸುತ್ತದೆ ಎಂದು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ತಿಳಿಸಿದ್ದಾರೆ.
ಶುಕ್ರವಾರ ಶುಕ್ರ ಗ್ರಹಕ್ಕೆ ಸಂಬಂಧಿಸಿದ ವಾರವಾಗಿದೆ. ಶುಕ್ರನ ಅನುಗ್ರಹ ಪಡೆಯುವುದರಿಂದ ಜೀವನದಲ್ಲಿ ಭೌತಿಕ ಸಂತೋಷ ದೊರೆಯುತ್ತದೆ ಎಂಬ ನಂಬಿಕೆ ಇದೆ. ಶುಕ್ರವಾರದಂದು ಲಕ್ಷ್ಮೀಯ ಜೊತೆ ತ್ರಿಮೂರ್ತಿಗಳನ್ನು ಪೂಜಿಸಿದರೆ ಒಳಿತಾಗುತ್ತದೆ ಎಂದು ಜ್ಯೋತಿಷ ಹೇಳುತ್ತದೆ.
ದುರ್ಗಾ ಪೂಜೆ:
ಶುಕ್ರವಾರದಂದು ದುರ್ಗಾ ದೇವಿಯನ್ನು ಪೂಜಿಸಿ, ‘ಓಂ ಶ್ರೀ ದುರ್ಗಾಯ ನಮಃ’ ಮಂತ್ರವನ್ನು 108 ಬಾರಿ ಪಠಿಸಿದರೆ ಒಳಿತಾಗುತ್ತದೆ.
ದುರ್ಗಾ ದೇವಿಯ ಫೋಟೋ ಅಥವಾ ವಿಗ್ರಹವನ್ನಿಟ್ಟು, ಪಂಚಾಮೃತದಿಂದ ಅಭಿಷೇಕ ಮಾಡಬೇಕು. ದೇವಿಯ ಅಲಂಕಾರಕ್ಕಾಗಿ ಆಭರಣ, ಹೂ ಮಾಲೆ, ಗಂಧ, ಕುಂಕುಮ ಹಾಗೂ ಅಷ್ಟಗಂಧ ಬಳಸಬಹುದು. ಕೆಂಪು ದಾಸವಾಳ ಹೂ ಅರ್ಪಿಸುವುದು ಶ್ರೇಷ್ಠವೆಂದು ಹೇಳಲಾಗುತ್ತದೆ.
ಲಕ್ಷ್ಮೀ ಪೂಜೆ:
ಶುಕ್ರವಾರದಂದು ಬಿಳಿ ಅಥವಾ ಗುಲಾಬಿ ಬಣ್ಣದ ಬಟ್ಟೆ ಧರಿಸಿ ಲಕ್ಷ್ಮೀಗೆ ಪೂಜೆ ಸಲ್ಲಿಸಿದರೆ ಒಳಿತಾಗುತ್ತದೆ.
ಈ ದಿನ ಮಧ್ಯರಾತ್ರಿ ಲಕ್ಷ್ಮೀಯನ್ನು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
ಪೂಜಾ ಸಮಯದಲ್ಲಿ ಲಕ್ಷ್ಮೀಗೆ ಗುಲಾಬಿ ಅಥವಾ ಕಮಲದ ಹೂವನ್ನು ಅರ್ಪಿಸಿ ಪೂಜೆ ಸಲ್ಲಿಸಬೇಕು.
ಸಂತೋಷಿ ಮಾತಾ ಪೂಜೆ:
ತ್ರಿಮೂರ್ತಿ ದೇವತೆಗಳ ನಡುವೆ ಸಂತೋಷಿ ಮಾತಾಳನ್ನು ಪೂಜಿಸುವುದರಿಂದ ಜೀವನದಲ್ಲಿ ಶಾಂತಿ ದೊರೆಯಲಿದೆ ಎಂಬ ನಂಬಿಕೆ ಇದೆ.
ಈ ದಿನ ಸೂರ್ಯೋದಯಕ್ಕೆ ಮನೆಯನ್ನು ಶುಚಿಗೊಳಿಸಿ ಉಪವಾಸ ಮಾಡುವ ಪ್ರತಿಜ್ಞೆಮಾಡಬೇಕು.
ದೇವಿಗೆ ಪೂಜೆ ಮಾಡಿ ಬೆಲ್ಲ ಮತ್ತು ಬೇಳೆಯನ್ನು ಪ್ರಸಾದವಾಗಿ ಇರಿಸಿ.
ಈ ದಿನ ಸಂತೋಷಿ ಮಾತಾಳ ಕಥೆ ಓದಿ ಕೊನೆಯಲ್ಲಿ ದೇವಿಗೆ ಆರತಿ ಮಾಡಿ.
ಉಪವಾಸ ವ್ರತ ಮುಗಿದ ನಂತರ ಹಸುವಿಗೆ ಬೆಲ್ಲ ಮತ್ತು ಕಾಳುಗಳನ್ನು ತಿನ್ನಲು ನೀಡಿ.
ಉಳಿದ ಪ್ರಸಾದವನ್ನು ಕುಟುಂಬದ ಎಲ್ಲಾ ಸದಸ್ಯರಿಗೂ ಹಂಚಿದರೆ ಒಳಿತಾಗುತ್ತದೆ.
ಶುಕ್ರವಾರದದಂದು ಈ ಮೂರು ದೇವತೆಗಳನ್ನು ಪೂಜಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ನೆಲೆಸುತ್ತದೆ ಎಂದು ಜ್ಯೋತಿಷಿ ಎಲ್. ವಿವೇಕಾನಂದ ಆಚಾರ್ಯ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.