
ಅನೇಕರಿಗೆ ಅದೃಷ್ಟ ಎಂಬುದು ಒಂದು ದೊಡ್ಡ ನದಿಯಂತೆ, ಒಂದು ಚಿಕ್ಕ ಒರತೆಯಂತೆ ಜಿನುಗಿ ನಂತರ ಅದು ಮೈ ತುಂಬಿಕೊಳ್ಳುತ್ತ ತದನಂತರ ದೊಡ್ಡದೇ ಅಲೆಯಾಗಿ ಹರಿಯುತ್ತ ತಲುಪಬೇಕಾದ ಕಡಲಿನ ಕಡೆಗೆ ತಲುಪುತ್ತದೆ. ಕೆಲವರಿಗೆ ಕೊಹ್ಲಿಯವರಂತೆ ನೆಲಕ್ಕೆ ಕಚ್ಚಿ ನಿಂತು ಸಿಕ್ಕಿದ ಅವಕಾಶವನ್ನು
ಬಳಸಿಕೊಳ್ಳಲು ಆಗುವುದಿಲ್ಲ.
ಕೊಹ್ಲಿ ಅಪಾರ ಶಕ್ತಿಯುಳ್ಳ ಪ್ರತಿಭಾವಂತ ಕ್ರಿಕೆಟ್ ಆಟಗಾರ. ನಡುವೆ ಎಲ್ಲಿಯೋ ತುಸು ಬಿಕ್ಕಳಿಕೆಗಳು ಶುರುವಾಗಿದ್ದರೂ ಅದನ್ನು ಮೀರಿ ನಿಲ್ಲಲು ದೊಡ್ಡದೇ ಕಾಲಾವಕಾಶವನ್ನು ಆಯ್ಕೆ ಮಂಡಳಿ ಮಾಡಿಕೊಡುತ್ತದೆ. ನಮ್ಮ ರಾಜ್ಯದವರೇ ಆದ ಮಿಂಚಿನ ಬೌಂಡರಿಗಳ ಸರದಾರ ಗುಂಡಪ್ಪ ವಿಶ್ವನಾಥ ಅವರಿಗೆ ಈ ರೀತಿ ಅವಕಾಶ ಒದಗಿ ಬರಲಿಲ್ಲ. ಪುರಸ್ಕರಿಸುವ ಆಯ್ಕೆ ಮಂಡಳಿ ಮೃದು ಧೋರಣೆ ತೋರಿಸಲಿಲ್ಲ. ಗುಂಡಪ್ಪ ವಿಶ್ವನಾಥ್ ಕುಂಡಲಿಗೆ ದುರ್ಬಲ ಚಂದ್ರ ತಡೆ ತಂದನು. ನಂತರ ಅವಕಾಶ ಸಿಗದೇ ಹೋಯ್ತು.
ವಿರಾಟ್ ಕೊಹ್ಲಿ ಪ್ರಶ್ನಾತೀತವಾಗಿ ಬೆಳೆದು ನಿಲ್ಲಲು ಅವರ ಜಾತಕ ಕುಂಡಲಿರುವ ವಿನ್ಯಾಸದಲ್ಲಿ ಸೂರ್ಯ, ಚಂದ್ರ, ಶುಕ್ರ, ಮಂಗಳ, ಬುಧ, ಶನೈಶ್ಚರ, ರಾಹು ಹಾಗೆಯೇ ಗುರು ಗ್ರಹಗಳು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿವೆ. ಗ್ರಹ ಸಮೂಹದ ಒಂಭತ್ತು ಗ್ರಹಗಳಲ್ಲಿ ಕೇತು ಗ್ರಹದ ಹೊರತಾಗಿ ಮತ್ತೆಲ್ಲವೂ ನೇರ ನಿಂತು ಕೈ ಹಿಡಿದಿವೆ. ಕೈ ಇಟ್ಟಲ್ಲಿ ಯಶಸ್ಸು ಬಂತು. ಹಣ ಬಂತು. ರನ್‌ಗಳ ರಾಶಿ ಬಂದು ಸೇರಿತು. ನಾಯಕನಾಗಿ ದೇಶಕ್ಕೆ ಸಾಕಷ್ಟು ಕ್ರಿಕೆಟ್ ಸರಣಿಗಳನ್ನು ಗೆದ್ದು ಕೊಟ್ಟರು. ಒಂದೇ ಒಂದು ಸೋಲು ಎದುರಾದದ್ದು ’ಈ ವರ್ಷ ಕಪ್ ನಮ್ಮದೇ’ ಎಂದು ಐಪಿಎಲ್ ತಂಡದ ಅಭಿಮಾನಿಗಳು ಕೂಗಿಕೊಂಡಷ್ಟೂ ಕಪ್ ಗೆಲ್ಲಿಸಲು ವಿರಾಟ್ ವಿಫಲರಾದಾಗ ಕಪ್ ಅನ್ನು ಕೊನೆಗೂ ಗೆಲ್ಲಲು ವಿರಾಟ್ ಕೊಹ್ಲಿ ಅವರಿಗೆ ಸಾಧ್ಯ ಆಗಲಿಲ್ಲ. ಆದಾಗ್ಯೂ ತಂಡದಲ್ಲಿ ಸಹ ಆಟಗಾರನಾಗಿ ಇದ್ದಾಗ ಇವರ ಉತ್ತಮ ಆಟದ ಫಲವಾಗಿಯೇ ಇವರಿದ್ದ ರಾಯಲ್ ಚಾಲೆಂಜರ್ಸ್ ತಂಡ ಈ ಸಲ ಕಪ್ ಗೆದ್ದಿತು.
ಕೆಲವು ಅಪಸವ್ಯಗಳು ಪ್ರತಿಯೊಬ್ಬ ಪ್ರತಿಭಾವಂತನ ಪಾಲಿಗೂ ಒದಗಿ ಬರುತ್ತವೆ. ಆದರೆ ವಿರಾಟ್ ಪಾಲಿಗೆ ಬಂದ ತಡೆಗಳಲ್ಲಿ ನೇರ ಯಾವುದೂ ದೊಡ್ಡದಲ್ಲ. ಆದರೂ ಮಹತ್ವದ ಪಂದ್ಯ ಗೆಲ್ಲಬೇಕಾದಾಗ ಇವರ ಪತ್ನಿ ಅನುಷ್ಕಾ ಶರ್ಮಾ ಇದ್ದರೆ ತೊಡಕು ಇರುತ್ತದೆ ಎಂದು ಜನರ ಗೇಲಿ ಇತ್ತು. ಆದರೆ ಈ ಗೇಲಿ ದೊಡ್ಡ ಕಾಲಾವಧಿಗೆ ವಿಸ್ತರಿಸಲಿಲ್ಲ. ವಿರಾಟ್ ಎಡವಿದಲ್ಲೇ ಎದ್ದು ನಿಂತರು. ಅನುಷ್ಕಾ ಇದ್ದಾಗಲೂ ಗೆದ್ದು ಬೀಗಿದರು.
ದುಷ್ಟನಾದರೂ ವರ ನೀಡಿದ ಶನೈಶ್ಚರ ಸ್ವಾಮಿ:
ಹಾಗೆ ನೋಡಿದರೆ ನೇರವಾಗಿ ಕೊಹ್ಲಿಯವರ ಜನ್ಮ ಕುಂಡಲಿಯಲ್ಲಿ ಶನಿ ಗ್ರಹ ಒಳಿತಿನ ಕುಂಭ ಕಲಶವಲ್ಲ. ಆದರೆ ಒಳಿತಿನ ಶ್ರೀ ರಕ್ಷೆಯನ್ನು ಹಾಗೆ ನೇರವಾಗಿ ಶನೈಶ್ಚರ ಸ್ವಾಮಿ ಕೊಡದಿದ್ದರೂ, ಕೊಹ್ಲಿಯವರಿಗೆ ತೀರಾ ಒಳಿತಿನ ಚಿನ್ನದ ಹರಿವಾಣ ಹಿಡಿಯಲು ಸಾಧ್ಯವಾಗದೇ ಹೋಗಬಹುದಿದ್ದ ಸೂರ್ಯನ ದುರ್ಬಲತನವನ್ನು ಕರಗಿಸಿ, ನೀಚ ಭಂಗ ರಾಜಯೋಗವನ್ನು ತಾನು ಸೂರ್ಯ ಗ್ರಹಕ್ಕೆ ಒದಗಿಸಿದ್ದಾನೆ. ಇದಲ್ಲದಿದ್ದರೆ ಕ್ರಿಕೆಟ್ ಕುರಿತಾದ ಕೊಹ್ಲಿಯವರ ಭವಿಷ್ಯ ಇಂದಿನ ರೀತಿಯ ವರ್ತಮಾನದಲ್ಲಿ ಕ್ರಿಕೆಟ್ ಆಟಗಾರನಾಗಿ ಇವರ ಹೆಸರು ಹೀಗೆ ಸರ್ವಕಾಲಿಕವಾಗಿ ಸುವರ್ಣ ಅಕ್ಷರಗಳಲ್ಲಿ ಬರೆಯಲ್ಪಡಬಹುದಾದ ಪ್ರಮುಖರ ಸಾಲಲ್ಲಿ ಸೇರ್ಪಡೆ ಸಾಧ್ಯವಾಗುತ್ತಿರಲಿಲ್ಲ. ಇವರು ಸಾವಿನಂತಹ ಅಪಾಯಕ್ಕೆ ಕೊಹ್ಲಿ ಸಿಲುಕಿಕೊಳ್ಳುವ ಭೀತಿ ಕೂಡಾ ಇರುತ್ತಿತ್ತು. ಶನೈಶ್ಚರ ಸ್ವಾಮಿಯ ಹಾಗೂ ಜನ್ಮ ಸ್ಥಾನಾಧಿಪತಿ ಗುರುವಿನ ಅನುಗ್ರಹದ ಫಲ, ಕೊಹ್ಲಿ ಯಾವುದೇ ತೊಂದರೆಗೂ ಸಿಲುಕದೆ ಇಂದಿನ ಕ್ರಿಕೆಟ್ ಲೋಕದ ದೊಡ್ಡ ಸಾಧಕರಾದರು. ಜೊತೆಗೆ ಧೈರ್ಯದ ಸ್ವಭಾವವನ್ನೂ ಇವರಿಗೆ ಶನಿ ಗ್ರಹವೇ ನೀಡಿದೆ. ಹುಂಬು ಧೈರ್ಯ ಅಲ್ಲ. ಸಮತೋಲನದ ದಿಟ್ಟ ಧೈರ್ಯ.
ಆದಾಗ್ಯೂ ‘ಸಾರ್ವಕಾಲಿಕ ಶ್ರೇಷ್ಠ’ ಎಂಬ ಕ್ರಿಕೆಟ್ ಆಟಗಾರರ ಸಾಲಲ್ಲಿ ಇವರನ್ನು ಶನಿ ಗ್ರಹ ಸಂಸ್ಥಾಪಿಸುವುದು ಅನುಮಾನವೇ ಇದೆ. ಈ ಗ್ರಹಗಳು ಅದು ಶನೈಶ್ಚರನೇ ಎಂದಲ್ಲ. ಶನೈಶ್ಚರ ಸ್ವಾಮಿಯ ಕೀಟಲೆ ಕೂಡಾ ಕೊಹ್ಲಿಯವರ ಪಾಲಿನ ಬಿಸಿ ತುಪ್ಪವಾಗಿ ಇದ್ದೇ ಇತ್ತು. ಹಾಗೆಯೇ ಮುಂದೆ ಕೂಡಾ ಇರುತ್ತದೆ.
ಅನುಪಮವಾದ ಬುಧಾದಿತ್ಯ ಯೋಗ:
ಬುಧ ಹಾಗೂ ಆದಿತ್ಯ (ಸೂರ್ಯ)ರು ಸೇರಿ ಉಂಟಾದ ಬುಧಾದಿತ್ಯ ಯೋಗವು ಕೊಹ್ಲಿಯವರಿಗೆ ಒಳ್ಳೆಯ ಯೋಗವೇ ಹೌದು. ಬುಧಾದಿತ್ಯ ಯೋಗವೇ ಇವರ ಪಾಲಿಗೆ ಧರ್ಮಕರ್ಮಾಧಿಪ ಯೋಗದ ರೂಪದಲ್ಲೂ ಹೆಚ್ಚು ಗಟ್ಟಿಯಾಗಿ ನಿಲ್ಲಲು ಸಹಾಯವಾಗಿತು. ಹೀಗಾಗಿ ವೃತ್ತಿ ಜೀವನದಲ್ಲಿನ ಯಶಸ್ಸು ಹಾಗೂ ಅದೃಷ್ಟ ಎರಡನ್ನೂ ಬಲಯುತಗೊಳಿಸಿ ಭಾಗ್ಯದ ಕುರಿತಾದ ವಿಷಯದಲ್ಲಿ ಬಲವನ್ನು ತುಂಬಿದೆ.
ಏಕ ದಿನ ಪಂದ್ಯದ ದಾಖಲೆಗಳನ್ನು ಹೊಸ ಹೊಸ ಸ್ವರೂಪದಲ್ಲಿ ಕೊಹ್ಲಿ ತಮ್ಮ ಹೆಸರಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ. ತೆಂಡೂಲ್ಕರ್ ಅವರನ್ನೂ ಹಿಂದಕ್ಕೆ ತಳ್ಳಿ ಹೊಸ ದಾಖಲೆಯನ್ನು ತಾವೇ ಬರೆಯುತ್ತಿದ್ದಾರೆ. ಬುಧಾದಿತ್ಯ ಯೋಗವನ್ನು ಹಾಗೆಯೇ ಧರ್ಮಕರ್ಮಾಧಿಪ ಯೋಗವನ್ನು ಪಡೆದ ಕೊಹ್ಲಿ ಸದ್ಯ ನಿವೃತ್ತಿಯ ದಾರಿಯಲ್ಲಿ ಇರುವುದೂ ಗಮನಾರ್ಹ.ಯಶಸ್ಸಿಗಾಗಿನ ದಾರಿಯನ್ನು ಸಂಶೋಧಿಸಲೆಂದು ಹಿಂದೆ ಬೀಳದ ಕೊಹ್ಲಿಯವರು ಒಳ್ಳೆಯ ಬುದ್ಧಿವಂತ ನಾಯಕ ಎಂದು ಸಾಬೀತಾದದ್ದು ರವಿ ಬುಧರಿಂದಲೇ. ಬುಧ ಗ್ರಹದ ಉತ್ತಮ ಸ್ಥಿತಿ ಜನ್ಮ ಕುಂಡಲಿಯಲ್ಲಿ ಹರಳುಗಟ್ಟಿರುವ ಪರಿಣಾಮದಿದ ಅನುಷ್ಕಾ ಶರ್ಮಾ ಅವರನ್ನು ಬಯಸಿ ಮದುವೆ ಆಗಿದ್ದಾರೆ. ದಾಂಪತ್ಯದ ಚಕ್ಕಡಿಗೆ ತೂಕ ಒದಗಿದೆ. ಒದಗಿದ ತೂಕ ಸಮತೋಲನವನ್ನೂ ಹೊಂದಿದೆ.
ಮಂಗಳ ಗ್ರಹದ ಸಂಯೋಜನೆ, ಹಿತಕರವಾದ ಸ್ಥಾನದಲ್ಲಿ ಸರಿಯಾಗಿ ಎದುರಿಗೆ ಚಂದ್ರನ ಉಪಸ್ಥಿತಿಯ ಲಾಭವನ್ನೂ ಪಡೆದು (ಇವರ ಜನ್ಮ ಕುಂಡಲಿಯಲ್ಲಿ) ಹಣಕಾಸಿನ ಸಮೃದ್ಧಿಯನ್ನು ಸಾಕಷ್ಟು ಬಲಯುತಗೊಳಿಸುವ ಅದೃಷ್ಟ ಪಡೆದಿದೆ. ಆಸ್ತಿ, ಅಂತಸ್ತು, ಧನಸ್ಸು ರಾಶಿಯ ಸಂಚಯನದ ವಿಚಾರಕ್ಕೆ ಗಟ್ಟಿಯಾಗಿ ತಲೆ ಎತ್ತಿಕೊಂಡ ಇವರ ಜಾತಕದ ಶಶಿ ಮಂಗಳ ಯೋಗ ಬರಲಿರುವ ದಿನಗಳಲ್ಲೂ ಇವರ ಪಾಲಿಗೆ ಧನ ಲಾಭಕ್ಕಾಗಿನ ಬಹು ರೀತಿಯ ಮಹತ್ತರ ಅವಕಾಶಗಳನ್ನು ತೆರೆದು ಕೊಡುತ್ತದೆ. ಆರೋಗ್ಯದ ಬಗೆಗೆ ಮಾತ್ರ ಕೊಹ್ಲಿ ಹೆಚ್ಚಿನ ಎಚ್ಚರ ಬೇಕು. ಅಂತೂ ಜಗತ್ತು ಕಂಡ ಅಪರೂಪದ ಕ್ರಿಕೆಟ್ ಆಟಗಾರ, ವಿರಾಟ್ ಎಂಬುದಕ್ಕೆ ಅನುಮಾನವೇ ಇಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.