ವಾಸ್ತು ಶಾಸ್ತ್ರ
ಚಿತ್ರ ಕೃಪೆ: ಎಐ
ಬದುಕಿನ ವಿಚಾರಗಳು ಹಲವು ಬಾರಿ ನಿಗೂಢ ಎಂಬುದು ಕೆಲವರ ಅನಿಸಿಕೆ. ಹಾಗೇನಿಲ್ಲ, ಏನೇ ಸಂಭವಿಸಿದರೂ ಅದು ಒಳಿತಿಗಾಗಿನ ದಾರಿ ಎಂದು ಭಾವಿಸಿ ಮುಂದುವರಿಯಬೇಕು ಎಂಬುದು ಇನ್ನೂ ಕೆಲವರ ವಾದ. ಬದುಕು ಹಲವು ನಿಗೂಢಗಳ ತವರು ಎಂಬ ನಿರ್ಣಯಕ್ಕೆ ಬಂದರೆ ಇದರಿಂದಾಗಿ ಮನಃಶಾಂತಿ ನಾಶವಾಗುತ್ತದೆಯೇ ವಿನಃ ಒಳಿತಿನ ದಾರಿ ಅಲಭ್ಯವೇ ಎಂಬುದನ್ನು ಈ ಗುಂಪು ಗಟ್ಟಿಯಾಗಿ ನಂಬುತ್ತದೆ. ಒಟ್ಟಿನಲ್ಲಿ ಬದುಕಿನ ನಿಗೂಢತೆಯಾಗಲಿ, ಆತ್ಮೀಯತೆಯೇ ಆಗಲಿ ಅವು ತಾರ್ಕಿಕವಾಗಿ ಒಂದು ಗಣಿತವಲ್ಲ ಎಂಬುದು ಸತ್ಯ. ಆದರೆ ಬದುಕು ಒಂದು ಗಣಿತದ ಮೇಲೆ ನಿಂತಿದೆ ಎಂಬುದನ್ನು ಅಲ್ಲಗೆಳೆಯಲಾಗದು. ನಮ್ಮೆಲ್ಲರ ವಾಸದ ಮನೆ, ಇತರ ಯಾವುದೇ ಕಟ್ಟಡಗಳು ಒಂದು ಗಣಿತದ ಆಧಾರದ ಮೇಲೆ ಕಟ್ಟಲ್ಪಟ್ಟಾಗಲೇ ಹಲವು ಕಾಲ ಗಟ್ಟಿಯಾಗಿ ಬಾಳಿಕೆ ಬರುತ್ತದೆ. ಮಳೆ ಬಿಸಿಲು, ಗಾಳಿ ಚಳಿಗಳ ಏಟುಗಳನ್ನು ತಡೆದು ನಿಲ್ಲುತ್ತವೆ ಎಂಬುದನ್ನು ನಾವು ತಿಳಿದಿದ್ದೇವೆ.
ಪರವಾಗಿಲ್ಲ, ಕಟ್ಟಡಗಳ, ಮನೆ ಹಾಗೂ ಮಂದಿರಗಳ ರಚನೆಯ ವಿಷಯ ಸ್ಪಷ್ಟವಾಯಿತು. ಕಟ್ಟಡಗಳು ಭದ್ರವಾದವು. ಆದರೆ ಕಟ್ಟಡಗಳ ಒಳಗಿನವರ ಬದುಕು ಏನಾಯಿತು? ಭದ್ರವಾಗಿ, ಸುಖವಾಗಿ ಇರುವುದಿಲ್ಲವಲ್ಲ ಯಾಕೆ? ಎಂಬ ಪ್ರಶ್ನೆ ನಿರಂತರವಾಗಿ ಕಾಡುತ್ತದೆ. ವಾಸ್ತು ತಜ್ಞರ ಪ್ರಕಾರ, ಗುರುತಿಸಿಕೊಂಡು ಗೌರವಿಸುವ ಪಂಚಭೂತಗಳ ಮುಖಾಂತರವಾಗಿಯೇ ಬದುಕಿನ ಸುಖ ಇದೆ ಎಂಬ ಸಲಹೆಗಳಿರುತ್ತವೆ. ಹೀಗಾಗಿ ನಾವು ವಾಸಿಸುವ ಅಥವಾ ವಿವಿಧ ಕಾರಣಗಳಿಗಾಗಿ ಕಟ್ಟಿಕೊಂಡ ಕಟ್ಟಡಗಳು ಕ್ರಮ ಬದ್ಧವಾದ ವಾಸ್ತು ಶಿಸ್ತಿನ ಹಳಿಗಳ ಮೇಲೇ ಹೆಜ್ಜೆ ಇಡುತ್ತ ಹೋದರೆ ಸರ್ವೋಚ್ಚ ಸುಖ ಸಿಗಲು ದಾರಿ ಮಾಡಿಕೊಡುತ್ತವೆ ಎಂಬ ಸೂತ್ರವನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ಈ ಸೂತ್ರ ಪ್ರಧಾನವಾಗಿ ಪಂಚಭೂತ ತತ್ವಗಳ ಮೇಲೆ ಅಧೀನ ಸೂಕ್ತವಾದ ಬೆಳಕು, ಸೂಕ್ತವಾದ ಗಾಳಿಯ ಸಂಚಾರ, ಜೀವ ಸಹಕಾರಿಯಾದ ನೀರು, ಗೃಹಗಳಿಗೆ ಅಥವಾ ಯಾವುದೇ ಕಟ್ಟಡಗಳಿಗೆ ಬೇಕಾದ ನೆಲದ ಗಟ್ಟಿತನ ಇತ್ಯಾದಿ ಸಮತೋಲನ ಹೊಂದಿಕೊಂಡು ಇದ್ದರೆ ಬಾಳೇ ಬಂಗಾರ ಎಂಬ ಸೂತ್ರ ಅವರದು. ಪಂಚಭೂತಗಳಲ್ಲಿ ಒಂದಾದ 'ಆಕಾಶ' ಕಟ್ಟಡಗಳ ಭದ್ರತೆಗೆ ಹೇಗೆ ಒದಗಿ ಬರುತ್ತದೆ ಎಂಬ ಪ್ರಶ್ನೆ ಮತ್ತೆ ಉಳಿದುಕೊಳ್ಳುತ್ತದೆ. ಇಲ್ಲಿ ಉತ್ತಮವಾದ ನೆಲೆಯಲ್ಲಿ ಮಣ್ಣು, ಗಾಳಿ, ಜಲ, ಬೆಂಕಿ (ಬೆಳಕು)ಗಳು ಸಮತೋಲನದಿಂದ ಸಂಯೋಜನೆಗೊಡರೆ ( ಅದೃಷ್ಟ - ದೈವಾನುಗ್ರಹಳ ಸಿದ್ಧಿ) ಬಯಸಿದ ಸಿದ್ಧಿ ಖಚಿತ ಎಂಬುದು ವಾಸ್ತುವಿನ ಪ್ರತಿಪಾದನೆಯಾಗಿದೆ.
ಹಾಗಾದರೆ ವಾಸ್ತು ವಿಚಾರಗಳು ಪಂಚ ಭೂತ ತತ್ವಗಳನ್ನು ಬಿಟ್ಟು ಮತ್ತೇನನ್ನೂ ಗಣನೆಗೆ ಪಡೆಯುದಿಲ್ಲವೆ ಎಂದು ಪ್ರಶ್ನೆ ನಿಮ್ಮಲ್ಲಿ ಉಂಟಾದರೆ, ಈ ಪ್ರಶ್ನೆಯೂ ಸೂಕ್ತವಾದುದೆ ಆಗಿದೆ. ಇನ್ನೂ ಹಲವಾರು ರೀತಿಯ ವಿಚಾರಗಳನ್ನು ಕೂಡ ವಾಸ್ತುಶಾಸ್ತ್ರ ನಮ್ಮೆದುರಿಗೆ ತೆರೆದಿಡುತ್ತದೆ. ಮನೆಯ ಏರು ತಗ್ಗುಗಳು ಹೀಗೇ ಇರಬೇಕು. ಮನೆಯ ತಳಪಾಯ ಇದೇ ನಿಯಮದಡಿ ಅಗೆಯಲ್ಪಟ್ಟಿರಬೇಕು ಎಂಬ ಇತ್ಯಾದಿ ವಾಸ್ತು ಶಿಸ್ತಿನ ಹಳಿಗಳ ಕುರಿತು ಹಲವು ಕಟ್ಟಳೆಗಳನ್ನು ನಾವು ಕೇಳಿರುತ್ತೇವೆ. ವಾಸ್ತು ಶಾಸ್ತ್ರ ತನ್ನದೇ ರೀತಿಯಲ್ಲಿ ವಿಶ್ಲೇಷಿಸುತ್ತದೆ. ಈ ಎಲ್ಲವನ್ನೂ ಪಂಚ ಭೂತಗಳ ಆದಾರದಲ್ಲೇ ವರ್ಗೀಕರಿಸಲಾಗುತ್ತದೆ.
ಗಣ್ಯರ ಮನೆಗಳು ಮತ್ತು ವಾಸ್ತು ಶುದ್ಧಿ
ಗಣ್ಯಾತಿ ಗಣ್ಯರ ಮನೆಗಳ ವಾಸ್ತು ವಿಚಾರದಲ್ಲಿ ಪರಿಪೂರ್ಣವಾಗಿ ಇರುತ್ತವೆಯೆ ಎಂಬ ಪ್ರಶ್ನೆ ಉಂಟಾಗುವುದು ಸಹಜ. ಕೆಲವು ವರ್ಷಗಳ ಹಿಂದೆ ವಾಷಿಂಗ್ಟನ್ ಡಿಸಿ ಯಲ್ಲಿ ಪರಿಚಯದವರ ಜೊತೆಗೆ ಅಲ್ಲಿನ ರಾಜಕೀಯ ಗಣ್ಯರೊಬ್ಬರ ಮನೆಗೆ ಹೋದಾಗ ವಾಸ್ತು ವಿಚಾರವಾಗಿ ಅವರ ಪತ್ನಿ ಅನೇಕ ವಿಷಯಗಳನ್ನು ನನ್ನ ಬಳಿ ಕೇಳಿದ್ದರು. ಮನೆ ಅಂದಮೇಲೆ ಒಂದಲ್ಲ ನೂರು ಲೋಪಗಳು ಇದ್ದೇ ಇರುತ್ತವೆ. ಕೆಲವರ ಮನೆಯೊಳಗೆ ಅಡಿ ಇಡುವಾಗಲೇ ಮನೆಯ ಕುರಿತಾದ ಹಲವು ವಿಚಾರಗಳು ತಿಳಿದು ಬರುತ್ತವೆ. ಇಂಥದೇ ದಿಕ್ಕು ಈ ರೀತಿಯ ಲೋಪಗಳನ್ನು ಹೊಂದಿವೆ ಎಂಬುದನ್ನು ತಿಳಿಯಲು ಸಾಧ್ಯವಿರುತ್ತದೆ. ಆದಾಗ್ಯೂ ಹಾಗೆ ಅದನ್ನು ಕೆದಕುವುದು ಕೂಡ ಸರಿ ಇರದು. ಅದೂ ಅಮೇರಿಕಾದಲ್ಲಿ ನಮಗೆ ಬೇಕಾದ ರೀತಿಯಲ್ಲಿ ಪ್ಲಾನ್ ಮತ್ತು ಸ್ಕೆಚ್ ಹಾಕಲಾಗದು. ವಾಸ್ತುವಿನ ವಿಚಾರದಲ್ಲಿ ಸಮತೋಲನ ರೂಪಿಸಿಕೊಳ್ಳುವುದು ಹಾಗೆ ಸುಲಭವೂ ಅಲ್ಲ.
ಪೂರ್ತಿ ವಿವರಗಳನ್ನು ಇಲ್ಲಿ ಬರೆಯಲು ಹೋಗುವುದಿಲ್ಲ. ಅಲ್ಲಿನ ಒಂದು ತೊಂದರೆಯ ಬಗ್ಗೆ ತಿಳಿಸಬೇಕಾಯ್ತು. ಆ ಮುಂಚಿನ ಕೆಲ ವರ್ಷಗಳ ಒಂದು ಘಟ್ಟದಲ್ಲಿ ಏನಾದರೂ ಅವಘಡ ಸಂಭವಿಸಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದರು. ಎಲ್ಲಾ ಸಂಗತಿ ತಿಳಿಸಿದ್ದರು. ಅವರು ಅವಘಡದ ವಿಚಾರದಲ್ಲಿ ಗದ್ಗದಿತರಾದರೂ ಕೂಡ.
ಆದರೆ, ಬೆಂಗಳೂರಿನ ಬಹು ಪ್ರಖ್ಯಾತ ವ್ಯಕ್ತಿ ಒಬ್ಬರ ಕತೆ ಬೇರೆಯೇ ಇದೆ. ಅವರು ಅತೀ ಹೆಚ್ಚು ಪ್ರಖ್ಯಾತಿ ಪಡೆದ ವ್ಯಕ್ತಿಯಾಗಿದ್ದರು. ಪ್ರಖ್ಯಾತಿ ಇದ್ದಿದ್ದರಿಂದ ಸ್ವಂತ ಮನೆಯನ್ನು ಹೊಂದಿದ್ದರು. 55 ವರ್ಷದ ಬಳಿಕ ‘ಪರವಾಗಿಲ್ಲ ಈಗ ಹಣ ಸಂಪಾದಿಸಲು ಸಾಧ್ಯವಾಗಿದೆ‘ ಎಂದು ಸಂತೋಷಪಟ್ಟಿದ್ದರು. ದುಬಾರಿ ಏರಿಯಾದಲ್ಲಿ ಮನೆ ಕಟ್ಟಿದರು. ಆದರೆ., ಕ್ರಮೇಣ ಮನಃ ಶಾಂತಿ ಹಾಳಾಗತೊಡಗಿತ್ತು. ಯಾಕೆ? ಎಂಬುದು ಪ್ರಶ್ನೆ ಆಗುತ್ತಲೇ ಹೋಯ್ತು. ಮನೆಯೇ ಇರದಿದ್ದಾಗ ಇದ್ದ ಮನಃ ಶಾಂತಿ ಕಟ್ಟಿಕೊಂಡ ಸ್ವಂತ ಮನೆಯಲ್ಲಿ ದೊರಕದಾಗಿದೆ ಯಾಕೆ? ಎಂಬ ಪ್ರಶ್ನೆ ಅವರಿಗೆ ವೇದನೆ ತರತೊಡಗಿತ್ತು. ಖ್ಯಾತಿ ಮತ್ತು ಹಣಕ್ಕೆ ತೊಂದರೆ ಇರಲಿಲ್ಲ. ಆದರೆ ಶಾಂತಿಯೇ ಇರಲಿಲ್ಲ. ಇದಕ್ಕೆ ವಾಸ್ತು ದೋಷವೇ ಕಾರಣವೆ? ಸಹಜವಾದ ಈ ಪ್ರಶ್ನೆ ಅವರಲ್ಲೂ ಉಂಟಾಗಬೇಕಲ್ಲವೆ?
ವಾಸ್ತು ದೋಷ ಇರಬಹುದೇ ? ಎಂಬ ಪ್ರಶ್ನೆ ಉದ್ಭವವಾಯಿತು. ಇಲ್ಲ ಎಂಬುದು ಅವರಿಗೆ ಖಾತರಿ. ಯಾಕೆಂದರೆ ಪಕ್ಕಾ ವಾಸ್ತು ಶಾಸ್ತ್ರದ ಆಧಾರದ ಮೇಲೆ ಕಟ್ಟಿದ ಮನೆ ಅದಾಗಿತ್ತು. ಮನೆಯ ಪ್ರತಿ ಅಂಗುಲವೂ ವಾಸ್ತು ಶಾಸ್ತ್ರದ ಪ್ರಕಾರವೇ ಕಟ್ಟಲಾಗಿತ್ತು. ಹಾಗಾದರೆ ಏನು ದೋಷ? ಏನೋ ಇದೆ. ಯಾವುದೋ, ಏನೋ ಒಳಗೆ ನುಸುಳಿದೆ. ಈ ಪ್ರಖ್ಯಾತ ವ್ಯಕ್ತಿ ಹಲವು ರೀತಿಯ ಮಾನಸಿಕ ಬಿಕ್ಕಟ್ಟುಗಳನ್ನು ಎದುರಿಸಿದರು. ಇನ್ನೂ 10 ವರ್ಷ ಬದುಕಿರಬಹುದಾದವರು ಬೇಗನೆ ಮರಣ ಹೊಂದಿದರು.
ಇದು ಸರಿಯೇ. ಮತ್ತೊಂದು ನಿದರ್ಶನ ಕುತೂಹಲಕಾರಕವಾಗಿದೆ. ಇದು ಕಳೆದ 70 ದಶಕದ ಮಾತು. ಹಿಂದಿ ಚಲನಚಿತ್ರ ರಂಗವನ್ನು ಆಳಿದ ಜನಪ್ರಿಯ ನಟರ ಕುರಿತು. 60ರ ದಶಕದ ಖ್ಯಾತ ನಟ ಮನೆಯೊಂದನ್ನು ಖರೀದಿಸುತ್ತಾನೆ. ಮನೆ ಖರೀದಿಸಿದ ಖ್ಯಾತ ಜನಪ್ರಿಯ ನಟ ಖರೀದಿಸಿದ ಮೇಲೆ ಹಲವು ರೀತಿಯಲ್ಲಿ ವಾಸ್ತು ಸಿದ್ಧಿಗೆ ಬೇಕಾದಂತೆ ಮನೆಯನ್ನು ರೂಪಿಸಿಕೊಳ್ಳುತ್ತಾನೆ. ನಂತರ ಹೊಸ ಮನೆಗೆ ಹೋಗುತ್ತಾನೆ. 70ರ ದಶಕದ ನಟ ಯಶಸ್ಸಿನ ಏಣಿ ಏರುತ್ತಾ ಹೋಗುತ್ತಾನೆ. ಆ ವರೆಗೂ ಹಿಂದಿ ಚಿತ್ರ ರಂಗದ ಯಾವ ನಟನೂ ಕಂಡು, ಕೇಳರಿಯದ ಯಶಸ್ಸು ಅವನದ್ದಾಗುತ್ತದೆ. ಹಾಗಾದರೆ ವಾಸ್ತವಕ್ಕೂ ವಾಸ್ತು ದೋಷದ ಆಳ ಅಗಲಗಳೇನು? ಯಾವ ಗಟ್ಟಿಯಾದ ಅಂಶ ವಾಸ್ತು ಶಾಸ್ತ್ರದ ಸಕಾರಾತ್ಮಕ ಅಂಶವಾಗಿದೆ? ಈ ಹಲವು ಪ್ರಶ್ನೆಗಳನ್ನು ಹರವಿಟ್ಟುಕೊಂಡು, ಮುಂದಿನ ಬರಹಗಳಲ್ಲಿ ಇನ್ನೂಹೆಚ್ಚಿನ ವಿಚಾರಗಳನ್ನು ಚರ್ಚಿಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.