ADVERTISEMENT

ಕ್ಯಾರೆನ್ಸ್‌ ಬಿಡುಗಡೆ ಮಾಡಿದ ಕಿಯಾ ಇಂಡಿಯಾ: ಆರಂಭಿಕ ಬೆಲೆ ₹8.99 ಲಕ್ಷ

ಪಿಟಿಐ
Published 15 ಫೆಬ್ರುವರಿ 2022, 10:42 IST
Last Updated 15 ಫೆಬ್ರುವರಿ 2022, 10:42 IST
ಕಿಯಾ ಕ್ಯಾರೆನ್ಸ್‌
ಕಿಯಾ ಕ್ಯಾರೆನ್ಸ್‌   

ನವದೆಹಲಿ: ವಾಹನ ತಯಾರಿಕಾ ಕಂಪನಿ ಕಿಯಾ ಇಂಡಿಯಾ ತನ್ನ ನಾಲ್ಕನೇ ಎಸ್‌ಯುವಿ 'ಕಿಯಾ ಕ್ಯಾರೆನ್ಸ್‌' ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಆರಂಭಿಕ ಬೆಲೆ ₹8.99 ಲಕ್ಷದಿಂದ ₹16.99 ಲಕ್ಷದ ವರೆಗೂ ವಿವಿಧ ಮಾದರಿಗಳಲ್ಲಿ ಕ್ಯಾರೆನ್ಸ್‌ ಲಭ್ಯವಿದೆ.

‌ಆರು ಮತ್ತು ಏಳು ಸೀಟುಗಳ ಆಯ್ಕೆ ಇರುವ ಕ್ಯಾರೆನ್ಸ್‌ ವಾಹನವನ್ನು ಕಂಪನಿಯು ರಿಕ್ರಿಯೇಷನಲ್‌ ವೆಹಿಕಲ್‌ (ಆರ್‌ವಿ) ಸಾಲಿಗೆ ಸೇರಿಸಿದೆ. ದೂರದ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನೂ ಒಳಗೊಂಡಿರುವ ವಾಹನಗಳನ್ನು 'ಆರ್‌ವಿ' ಎನ್ನಲಾಗುತ್ತದೆ. ಈ ವಾಹನವು ಮಹೀಂದ್ರಾ ಎಕ್ಸ್‌ಯುವಿ700, ಟಾಟಾ ಮೋಟಾರ್ಸ್‌ ಸಫಾರಿ, ಹ್ಯುಂಡೈ ಆಲ್ಕಾಜಾರ್‌ ಹಾಗೂ ಮಾರುತಿ ಸುಜುಕಿ ಎಕ್ಸ್ಎಲ್‌6 ಎಸ್‌ಯುವಿಗಳಿಗೆ ಪ್ರತಿ ಸ್ಪರ್ಧಿ ಎನ್ನಲಾಗಿದೆ.

ಈಗಾಗಲೇ ಕಿಯಾ ಇಂಡಿಯಾ ದೇಶದಲ್ಲಿ ಸೆಲ್ಟೋಸ್‌, ಸಾನೆಟ್‌ ಹಾಗೂ ಕಾರ್ನಿವಾಲ್‌ ವಾಹನಗಳನ್ನು ಮಾರಾಟ ಮಾಡುತ್ತಿದೆ.

ADVERTISEMENT

ಕಿಯಾ ಕ್ಯಾರೆನ್ಸ್‌ 1.5 ಲೀಟರ್ ಪೆಟ್ರೋಲ್‌, 1.4 ಲೀಟರ್‌ ಪೆಟ್ರೋಲ್‌ ಹಾಗೂ 1.5 ಲೀಟರ್‌ ಡೀಸೆಲ್‌ ಎಂಜಿನ್‌ಗಳಲ್ಲಿ ಲಭ್ಯವಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಹಾಗೂ 6-ಸ್ಪೀಡ್ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳಿವೆ.

ಪೆಟ್ರೋಲ್‌ ಎಂಜಿನ್ ವಾಹನ ಮಾದರಿಗಳ ಬೆಲೆ ₹8.99 ಲಕ್ಷದಿಂದ ₹16.99 ಲಕ್ಷದವರೆಗೂ ಇದೆ. ಡೀಸೆಲ್‌ ಎಂಜಿನ್‌ನ ಕ್ಯಾರೆನ್ಸ್‌ ವಾಹನದ ಆರಂಭಿಕ ಬೆಲೆ ₹10.99 ಲಕ್ಷ ನಿಗದಿಯಾಗಿದೆ.

ಕಂಪನಿಯ ಪ್ರಕಾರ, ಪೆಟ್ರೋಲ್‌ ಎಂಜಿನ್‌ ವಾಹನವು ಪ್ರತಿ ಲೀಟರ್‌ ಇಂಧನಕ್ಕೆ 16.5 ಕಿ.ಮೀ ಮೈಲೇಜ್‌ ಕೊಡುತ್ತದೆ ಹಾಗೂ ಡೀಸೆಲ್‌ ಎಂಜಿನ್‌ ವಾಹನವು ಪ್ರತಿ ಲೀಟರ್‌ ಡೀಸೆಲ್‌ಗೆ 21.3 ಕಿ.ಮೀ. ವರೆಗೂ ಸಾಗುವ ಸಾಮರ್ಥ್ಯ ಹೊಂದಿದೆ.

ಈ ವಾಹನದಲ್ಲಿ ಸುರಕ್ಷತೆಗಾಗಿ ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌, ವೆಹಿಕಲ್‌ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್‌, ಹಿಲ್‌ ಅಸಿಸ್ಟ್‌ ಕಂಟ್ರೋಲ್‌, ಡೌನ್‌ಹಿಲ್‌ ಬ್ರೇಕ್‌ ಕಂಟ್ರೋಲ್‌ ಹಾಗೂ ಆಲ್‌ ವೀಲ್‌ ಡಿಸ್ಕ್‌ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

ಕ್ಯಾರೆನ್ಸ್‌ಗೆ ಜನವರಿಯಿಂದಲೇ ಬುಕ್ಕಿಂಗ್‌ ಆರಂಭವಾಗಿದ್ದು, ಈವರೆಗೂ 19,000ಕ್ಕೂ ಹೆಚ್ಚು ವಾಹನಗಳಿಗೆ ಬೇಡಿಕೆ ಬಂದಿರುವುದಾಗಿ ಕಿಯಾ ಇಂಡಿಯಾ ಉಪಾಧ್ಯಕ್ಷ ಹರ್ದೀಪ್‌ ಸಿಂಗ್‌ ಬ್ರಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.