ADVERTISEMENT

ಹೊಸ ವಿನ್ಯಾಸದಲ್ಲಿ ಮರ್ಸಿಡಿಸ್‌ನ ಜಿಎಲ್‌ಸಿ

ಎಸ್‌.ಸಂಪತ್‌
Published 4 ಡಿಸೆಂಬರ್ 2019, 18:30 IST
Last Updated 4 ಡಿಸೆಂಬರ್ 2019, 18:30 IST
mercedes-benz GLC
mercedes-benz GLC   

ನವದೆಹಲಿ: ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಿಕಾ ಕಂಪನಿ 'ಮರ್ಸಿಡಿಸ್ ಬೆಂಜ್', ಅತ್ಯಾಧುನಿಕ ತಂತ್ರಜ್ಞಾನ ಮತ್ತು ಹೊಸ ವಿನ್ಯಾಸದ ‘ಜಿಎಲ್‍ಸಿ’ ಶ್ರೇಣಿಯ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೊಸ ಶ್ರೇಣಿಯ ಈ ಎಸ್‌ಯುವಿ ಬಿಎಸ್-6 ಎಂಜಿನ್ ಹೊಂದಿದೆ. ‘ಜಿಎಲ್‍ಸಿ 200’ನ ಬೆಲೆ ₹ 52.75 ಲಕ್ಷ ಹಾಗೂ ‘ಜಿಎಲ್‍ಸಿ 220ಡಿ 4ಮ್ಯಾಟಿಕ್’ನ ಬೆಲೆ ₹ 57.75 ಲಕ್ಷದಿಂದ ಆರಂಭವಾಗುತ್ತದೆ. ಈಗಾಗಲೇ ಇರುವ ಜಿಎಲ್‍ಸಿ ಶ್ರೇಣಿಯ ಮಾದರಿಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸಿ, ವಿನ್ಯಾಸವನ್ನು ಮತ್ತಷ್ಟು ಉತ್ತಮಪಡಿಸಿ 'ಸ್ಪೋರ್ಟಿ' ಸ್ಪರ್ಶ ನೀಡಲಾಗಿದೆ.

ಹೊಸ ಜಿಎಲ್‍ಸಿಯನ್ನು ದೆಹಲಿಯಲ್ಲಿ ಮಂಗಳವಾರ ಬಿಡುಗಡೆ ಮಾಡಿದ, 'ಮರ್ಸಿಡಿಸ್ ಬೆಂಜ್ ಇಂಡಿಯಾದ' ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಾರ್ಟಿನ್ ಶೆವೆಂಕ್, 'ಹೊಸ ಎಸ್‌ಯುವಿಯು ಗ್ರಾಹಕರಿಗೆ ಉತ್ತಮ ಚಾಲನಾ ಅನುಭವವನ್ನು ಖಾತರಿಪಡಿಸುತ್ತದೆ' ಎಂದರು.

ADVERTISEMENT

ಎಂಬಿಯುಎಕ್ಸ್ ವಿಧಾನ: ಹೊಸ ಪೀಳಿಗೆಗೆ ಪೂರಕವಾಗಿ ಈ ಜಿಎಲ್‍ಸಿಯಲ್ಲಿ 'ಎಂಬಿಯುಎಕ್ಸ್' (ಮರ್ಸಿಡಿಸ್ ಬೆಂಜ್ ಬಳಕೆದಾರರ ಅನುಭವ) ವಿಧಾನ ಅಳವಡಿಸಿಲಾಗಿದೆ. ಸ್ಪರ್ಶ, ಧ್ವನಿ ನಿಯಂತ್ರಣ ವ್ಯವಸ್ಥೆಯನ್ನು ಇದು ಹೊಂದಿದ್ದು, ವಾಹನ ಮತ್ತು ಅದರ ಕಾರ್ಯ ನಿರ್ವಹಣೆ ಜತೆಗೆ ಚಾಲಕ ಸಂವಾದ ನಡೆಸಬಹುದು. ವಿನೂತನ ‘ಟೆಲಿಮ್ಯಾಟ್ರಿಕ್ಸ್’, ’ಟಚ್ ಸ್ಕ್ರೀನ್ ಮಲ್ಟಿಮೀಡಿಯಾ’ ಪ್ರದರ್ಶಕ, ‘ಟಾಕ್ ಬಟನ್’ ವ್ಯವಸ್ಥೆ ಮೂಲಕ ಜಿಎಲ್‍ಸಿಯನ್ನು 'ಇನ್ಫೊಟೇನ್‍ಮೆಂಟ್' ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಬಳಕೆದಾರರಿಗೆ ನವೀನ ಅನುಭವ ನೀಡುವುದಕ್ಕೆ ಪೂರಕವಾಗಿ ಇಲ್ಲಿ ಕೃತಕ ಬುದ್ಧಿಮತ್ತೆ ಕಾರ್ಯ ನಿರ್ವಹಿಸುತ್ತದೆ. ವಾಹನ, ಚಾಲಕ, ಪ್ರಯಾಣಿಕರ ನಡುವೆ ಭಾವನಾತ್ಮಕ ಸಂಪರ್ಕವನ್ನು ಕಲ್ಪಿಸಲು ಈ ವ್ಯವಸ್ಥೆ ಪೂರಕವಾಗಿದೆ. ‘ನ್ಯಾವಿಗೇಷನ್’, ರೇಡಿಯೊ, ಹವಾಮಾನ ಸೇರಿದಂತೆ ಅಗತ್ಯ ಮಾಹಿತಿ ಮತ್ತು ಮನರಂಜನೆಯನ್ನು ಧ್ವನಿ ಸಂದೇಶದ ಮೂಲಕ ಪಡೆಯಬಹುದಾಗಿದೆ.

ಬಾಹ್ಯ ವಿನ್ಯಾಸ: ನಿಗದಿತ ಮಾನದಂಡಕ್ಕೆ ಅನುಗುಣವಾಗಿ ಹಿಂಬದಿಯಲ್ಲಿ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ. ಹೆಡ್‍ಲೈಟ್‍ಗೆ ಹೊಸ ಸ್ಪರ್ಶ ನೀಡುವುದರ ಮೂಲಕ ಇಡೀ ಕಾರಿಗೆ 'ಸ್ಪೋರ್ಟಿ' ಸ್ಪರ್ಶ ನೀಡಲಾಗಿದೆ.

ಒಳ ವಿನ್ಯಾಸ: ಸ್ಪರ್ಶ ನಿಯಂತ್ರಣ ಬಟನ್‍ಗಳೊಂದಿಗೆ ಹೊಸ ಸ್ಟಿಯರಿಂಗ್ ವ್ಹೀಲ್, ಹೊಸ ವಾಲ್‍ನಟ್ ಓಪನ್ ಪೋರ್‌ವುಡ್‌ ಟ್ರಿಮ್, ವೈಯರ್‌ಲೆಸ್‌ ಚಾರ್ಜಿಂಗ್, ಮಿಡ್‍ಲೈನ್ ಶಬ್ದ ವ್ಯವಸ್ಥೆ ಕಲ್ಪಿಸುವ ಮೂಲಕ ಎಸ್‌ಯುವಿಯನ್ನು ಇನ್ನಷ್ಟು ವಿಲಾಸಿಗೊಳಿಸಲಾಗಿದೆ.

(ವರದಿಗಾರ, ಕಂಪನಿಯ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.