ADVERTISEMENT

ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದ ಸಫಾರಿ–2023

ಜಯಸಿಂಹ ಆರ್.
Published 1 ನವೆಂಬರ್ 2023, 9:39 IST
Last Updated 1 ನವೆಂಬರ್ 2023, 9:39 IST
<div class="paragraphs"><p>ನೂತನ ಸಫಾರಿ</p></div>

ನೂತನ ಸಫಾರಿ

   

ಟಾಟಾ ಮೋಟರ್ಸ್‌ ತನ್ನ ಜನಪ್ರಿಯ ಎಸ್‌ಯುವಿ ಸಫಾರಿಯ ಫೇಸ್‌ಲಿಫ್ಟ್‌ ಅನ್ನು ಈಚೆಗೆ ಬಿಡುಗಡೆ ಮಾಡಿದೆ. 1998ರಲ್ಲಿ ಬಿಡುಗಡೆಯಾದಾಗ ಭಾರತದ ಮೊದಲ ದೇಶೀಯ ಎಸ್‌ಯುವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಫಾರಿ, ಈ 25 ವರ್ಷಗಳಲ್ಲಿ ಹಲವು ಬದಲಾವಣೆಗಳು, ಫೇಸ್‌ಲಿಫ್ಟ್‌ಗಳು ಮತ್ತು ಹಲವು ಹೊಸ ಜನರೇಷನ್‌ಗಳನ್ನು ಕಂಡಿದೆ.

2021ರಲ್ಲಿ ಬಿಡುಗಡೆಯಾದ ನೂತನ ಜನರೇಷನ್‌ನ ಸಫಾರಿಯು, ಈ ಎಸ್‌ಯುವಿಯ ಸವಲತ್ತುಗಳಲ್ಲಿ ಹೊಸ ಬೆಂಚ್‌ಮಾರ್ಕ್‌ ಅನ್ನು ರೂಪಿಸಿತ್ತು. ಆದರೆ ಈ ಮೂರು ವರ್ಷಗಳಲ್ಲಿ ಮಾರುಕಟ್ಟೆಗೆ ಬಂದ ಬೇರೆ ಎಸ್‌ಯುವಿಗಳು ತಂತ್ರಜ್ಞಾನ ಮತ್ತು ಸವಲತ್ತುಗಳಲ್ಲಿ ಸಫಾರಿಯನ್ನು ಹಿಂದಿಕ್ಕಿದ್ದವು. ಆದರೆ, ಈಗ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮತ್ತು ಹೊಸ ರೂಪದೊಂದಿಗೆ ಮಾರುಕಟ್ಟೆಗೆ ಬಂದಿರುವ 2023ರ ಸಫಾರಿ, ತನ್ನ ವರ್ಗದಲ್ಲೇ ಅತ್ಯಾಧುನಿಕ ಎನ್ನಬಹುದಾದ ಹಲವು ಮೊದಲುಗಳನ್ನು ಒಳಗೊಂಡಿದೆ. ಅಲ್ಲದೆ ಈಚೆಗೆ ನಡೆದ ಗ್ಲೋಬಲ್‌ ಎನ್‌ಸಿಎಪಿಯ ‘ಭಾರತಕ್ಕಾಗಿ ಸುರಕ್ಷಿತ ಕಾರ್‌’ ಕ್ರ್ಯಾಷ್‌ಟೆಸ್ಟ್‌ ಕಾರ್ಯಕ್ರಮದಲ್ಲಿ 5 ಸ್ಟಾರ್‌ ರೇಟಿಂಗ್‌ ಪಡೆದಿದ್ದು, ಭಾರತದ ಅತ್ಯಂತ ಸುರಕ್ಷಿತ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ADVERTISEMENT

ಕಂಪನಿಯ ಆಹ್ವಾನದ ಮೇರೆಗೆ ನೂತನ ಸಫಾರಿ ಮತ್ತು ನೂತನ ಹ್ಯಾರಿಯರ್‌ ಎಸ್‌ಯುವಿಗಳ ಸುದೀರ್ಘ ಟೆಸ್ಟ್‌ಡ್ರೈವ್‌ ನಡೆಸಲಾಗಿತ್ತು. ಟೆಸ್ಟ್‌ಡ್ರೈವ್‌ ವಿವರಗಳು ಮತ್ತು ಫೇಸ್‌ಲಿಫ್ಟ್‌ನ ವಿವರಗಳು ಇಂತಿವೆ.

ಸಫಾರಿ ಮತ್ತು ಹ್ಯಾರಿಯರ್‌ ಅನ್ನು ಲ್ಯಾಂಡ್‌ರೋವರ್‌ನ ಒಮೆಗಾಆರ್ಕ್‌ ಪ್ಲಾಟ್‌ಫಾರ್ಂನ ಮೇಲೆ ನಿರ್ಮಿಸಲಾಗಿತ್ತು. ಈಗಲೂ ಅದೇ ಪ್ಲಾಟ್‌ಫಾರ್ಂ ಅನ್ನು ಉಳಿಸಿಕೊಳ್ಳಲಾಗಿದೆ. ಮೊದಲಿಗೆ ಹ್ಯಾರಿಯರ್‌ ಅನ್ನು ಕಂಪನಿ ಬಿಡುಗಡೆ ಮಾಡಿತ್ತು ಮತ್ತು ಅದಕ್ಕೇ ಎರಡು ಸೀಟ್‌ಗಳನ್ನು ಹೆಚ್ಚಿಗೆ ಸೇರಿಸಿ ಸಫಾರಿ ಎಂದು ಬಿಡುಗಡೆ ಮಾಡಲಾಗಿತ್ತು. ಆ ಸಫಾರಿಯನ್ನು ‘ಹ್ಯಾರಿಯರ್‌+’ ಎಂದೂ ಲೇವಡಿ ಮಾಡಲಾಗುತ್ತಿತ್ತು. ಏಕೆಂದರೆ ಹಿಂಬದಿ ಮತ್ತು ಮುಂಬದಿಯಿಂದ ಎರಡೂ ಎಸ್‌ಯುವಿಗಳ ವಿನ್ಯಾಸ ಒಂದೇ ರೀತಿಯಂತಿತ್ತು. 2023ರ ಪೇಸ್‌ಲಿಫ್ಟ್‌ನಲ್ಲಿ ಎರಡೂ ಎಸ್‌ಯುವಿಯ ವಿನ್ಯಾಸಗಳನ್ನು ಸಂಪೂರ್ಣ ಬದಲಿಸಲಾಗಿದೆ. ಜತೆಗೆ ನೂತನ ಸಫಾರಿಗೆ ಈ ಬಾರಿ ಹ್ಯಾರಿಯರ್‌ಗಿಂತ ಸಂಪೂರ್ಣ ಭಿನ್ನವಾದ ವಿನ್ಯಾಸವನ್ನು ನೀಡಲಾಗಿದೆ.

ನೂತನ ಸಫಾರಿಯ ಹಿಂಬದಿಯ ವಿನ್ಯಾಸ

ಸಫಾರಿ ಎಕ್ಸ್‌ಟೀರಿಯರ್‌

ಸಫಾರಿಯ ಎಕ್ಸ್‌ಟೀರಿಯರ್‌ ಅನ್ನು ಫೇಸ್‌ಲಿಫ್ಟ್‌ನಲ್ಲಿ ಸಂಪೂರ್ಣ ಬದಲಿಸಲಾಗಿದೆ. ಮುಂಬದಿಯಲ್ಲಿ ಬಂಪರ್‌, ಹೆಡ್‌ಲ್ಯಾಂಪ್‌ ಕ್ಲಸ್ಟರ್‌, ಗ್ರಿಲ್‌, ನೂತನ ವೆಲ್‌ಕಂ ಎಲ್‌ಇಡಿ ಬಾರ್‌, ನೂತನ ಲೋವರ್ ಗ್ರಿಲ್‌, ಹಾಟ್‌ಫಾಯಲ್ಡ್‌ ಗ್ರಿಲ್‌ ಇನ್‌ಸರ್ಟ್‌... ಇವೆಲ್ಲವೂ ಸಫಾರಿಯ ಎಕ್ಸ್‌ಟೀರಿಯರ್‌ ನೋಟವನ್ನು ಒಂದು ಸೆಗ್ಮೆಂಟ್‌ ಮೇಲಕ್ಕೆ ಏರಿಸಿವೆ. ಥಟ್ಟನೆ ನೋಡಿದರೆ, ಪ್ರೀಮಿಯಂ ಐಷಾರಾಮಿ ಎಸ್‌ಯುವಿಯನ್ನು ನೋಡಿದ ಅನುಭವವನ್ನು ನೂತನ ಸಫಾರಿ ನೀಡುತ್ತದೆ. ಜತೆಗೆ ಹಿಂಬದಿಯ ಟೇಲ್‌ಗೇಟ್‌, ಟೇಲ್‌ಲ್ಯಾಂಪ್‌ ಕ್ಲಸ್ಟರ್‌, ಬಂಪರ್‌, ನೇಮಿಕಾರ್ ಎಲ್ಲದರ ವಿನ್ಯಾಸವನ್ನು ಬದಲಾಯಿಸಲಾಗಿದೆ. ಇದು ಹ್ಯಾರಿಯರ್‌ ಮತ್ತು ಈ ಹಿಂದಿನ ಸಫಾರಿಗಿಂತ ನೂತನ ಸಫಾರಿ ಭಿನ್ನವಾಗಿ ಕಾಣುವಂತೆ ಮಾಡುತ್ತದೆ.

ಎಕ್ಸ್‌ಟೀರಿಯರ್‌ನಲ್ಲಿ ಅತ್ಯಂತ ಗಮನ ಸೆಳೆಯುವ ಅಂಶಗಳಲ್ಲಿ ನೂತನ ಹೆಡ್‌ಲ್ಯಾಂಪ್‌ ಮತ್ತು ಫಾಗ್‌ಲ್ಯಾಂಪ್‌ ಕ್ಲಸ್ಟರ್‌ ಮೊದಲನೆಯದ್ದು. ಇದನ್ನು ಬಂಪರ್‌ನ ಇಕ್ಕೆಲದಲ್ಲಿ ಸಂಯೋಜಿಸಿರುವ ರೀತಿ ಅತ್ಯಂತ ಮೊನಚಾಗಿದೆ ಮತ್ತು ಆಕರ್ಷಕವಾಗಿದೆ. ಇದು ಸಫಾರಿಗೆ ಮೊನಚು ಮತ್ತು ಒರಟು ನೋಟವನ್ನು ನೀಡುತ್ತದೆ.

ಹೆಡ್‌ಲ್ಯಾಂಪ್‌ ಮತ್ತು ಫಾಗ್‌ಲ್ಯಾಂಪ್‌ ಮಧ್ಯೆ ಸಫಾರಿ ನೇಮಿಕಾರ್‌ನ ಇನ್ಸರ್ಟ್ಸ್‌ ಇದೆ. ಇದು ಸಫಾರಿಗೆ ಪ್ರೀಮಿಯಂ ನೋಟವನ್ನು ನೀಡುತ್ತದೆ. ಬಂಪರ್‌ ಮತ್ತು ಹೆಡ್‌ಲ್ಯಾಂಪ್‌ನಲ್ಲಿ ಹ್ಯಾರಿಯರ್‌ ಸಫಾರಿಯನ್ನೇ ಹೋಲುತ್ತಿದ್ದರೂ, ನೇಮಿಕಾರ್‌ ಇನ್ಸರ್ಟ್ಸ್‌ ಇಲ್ಲದೇ ಇರುವುದರಿಂದ ಹ್ಯಾರಿಯರ್‌ ಸಂಪೂರ್ಣವಾಗಿ ಭಿನ್ನವಾಗಿ ಕಾಣುತ್ತದೆ. ಎರಡಕ್ಕೂ ಪ್ರತ್ಯೇಕ ಪರ್ಸನಾಲಿಟಿಯನ್ನು ನೀಡುವಂತೆ ವಿನ್ಯಾಸವನ್ನು ರೂಪಿಸಲಾಗಿದೆ.

ಸಫಾರಿಯ ಪ್ರೀಮಿಯಂತನವನ್ನು ಹೆಚ್ಚಿಸಿದ್ದು ನೂತನ ಗ್ರಿಲ್‌ ಮತ್ತು ಅದರಲ್ಲಿ ಕುಸಿರಿಯಂತೆ ಕೂರಿಸಿರುವ ಹಾಟ್‌ಫಾಯಲ್ಡ್‌ ಇನ್ಸರ್ಟ್ಸ್‌ಗಳು. ಸಫಾರಿಯ ಗ್ರಿಲ್‌ನಲ್ಲಿ ಕ್ರೋಮ್‌, ಸ್ಮೋಕ್ಡ್‌ ಕ್ರೋಮ್‌ ಅನ್ನು ಬಳಸಿಲ್ಲ. ಬದಲಿಗೆ ಫೈಬರ್‌ನ ಮೇಲೆ ಸಫಾರಿಯ ದೇಹದ ಬಣ್ಣದ್ದೇ ಲೋಹದ ತುಣುಕುಗಳನ್ನು ಹಾಟ್‌ಫಾಯಲ್ಡ್‌ ತಂತ್ರಜ್ಞಾನದ ಮೂಲಕ ಕೂರಿಸಲಾಗಿದೆ. ಇದು ಸಫಾರಿಯ ಮುಂಬದಿಯ ನೋಟವನ್ನು ಹೆಚ್ಚು ಆಕರ್ಷಿಸಿದೆ. ಹ್ಯಾರಿಯರ್‌ನ ಗ್ರಿಲ್‌ನ ವಿನ್ಯಾಸನವನ್ನು ಬದಲಿಸಲಾಗಿದೆಯಾದರೂ, ಅದಕ್ಕೆ ಸಂಪೂರ್ಣವಾಗಿ ಬೇರೆಯದ್ದೇ ರೂಪ ನೀಡಲಾಗಿದೆ. ಹಾಟ್‌ಫಾಯಲ್ಡ್‌ ಇನ್ಸರ್ಟ್ಸ್‌ ಇರುವ ಕಾರಣಕ್ಕೆ, ಹ್ಯಾರಿಯರ್‌ಗಿಂತ ಸಫಾರಿ ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ರಸ್ತೆಯಲ್ಲೂ ತನ್ನ ವರ್ಗದ ಎಲ್ಲಾ ಎಸ್‌ಯುವಿಗಳಿಗಿಂತ ಎದ್ದು ಕಾಣುತ್ತದೆ.

ಹ್ಯಾರಿಯರ್‌ ಮತ್ತು ಸಫಾರಿ ಎರಡರ ಟೇಲ್‌ಲ್ಯಾಂಪ್‌ಗಳು ಒಂದು ಬದಿಯಿಂದ ಆರಂಭವಾಗಿ ಇನ್ನೊಂದು ಬದಿಯವರೆಗೆ ಚಾಚಿಕೊಂಡಿವೆ. ಇದರಲ್ಲೂ ವೆಲ್‌ಕಂ ಫಂಕ್ಷನ್‌ ಸೇರಿಸಿರುವ ಕಾರಣ, ತುಂಬಾ ಆಕರ್ಷಕವಾಗಿ ಕಾಣುತ್ತದೆ. ಎರಡೂ ಎಸ್‌ಯುವಿಗಳ ಮುಂಬದಿಯ ಡೋರ್‌ಗಳ ಮೇಲೆ ನೇಮಿಕಾರ್‌ಗಳನ್ನು ಅಂಟಿಸಲಾಗಿದೆ. ಇದು ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿದೆ. ಎರಡೂ ಎಸ್‌ಯುವಿಗಳಿಗೆ ಸಂಪೂರ್ಣ ಭಿನ್ನವಾದ ಅಲಾಯ್‌ವೀಲ್‌ಗಳನ್ನು ನೀಡಲಾಗಿದೆ. ಜತೆಗೆ ಭಿನ್ನ ವೇರಿಯಂಟ್‌ಗಳಿಗೆ ಸಂಪೂರ್ಣ ಭಿನ್ನವಾದ ಅಲಾಯ್‌ಗಳನ್ನೇ ನೀಡಲಾಗಿದೆ. ಸಫಾರಿಯ ಟಾಪ್‌ಎಂಡ್‌ ಅವತರಣಿಕೆಯಲ್ಲಿ ಲಭ್ಯವಿರುವ 19 ಇಂಚಿನ ಅಲಾಯ್‌ ಮತ್ತು ಲೋ ಪ್ರೊಫೈಲ್‌ ಟೈರ್‌, ಸಫಾರಿಯ ಆಕರ್ಷಣೆಯನ್ನು ಹೆಚ್ಚಿಸಿದೆ.

ಸಫಾರಿಯ ಇಂಟೀರಿಯರ್‌


ಇಂಟೀರಿಯರ್‌

ಸಫಾರಿಯ ಇಂಟೀರಿಯರ್‌ನಲ್ಲಿ ಹೆಚ್ಚು ಬದಲಾವಣೆ ಆಗಿರುವುದು ಕಾಕ್‌ಪಿಟ್‌ನಲ್ಲಿ. ಕಾಕ್‌ಪಿಟ್ ಅಂದರೆ, ಚಾಲಕ ಮತ್ತು ಮುಂಬದಿ ಪ್ರಯಾಣಿಕನ ಸೀಟು, ಗಿಯರ್‌ ಲಿವರ್ ಮತ್ತು ಸಂಬಂಧಿತ ಕಂಟ್ರೋಲ್‌ ಯುನಿಟ್‌ಗಳು ಇರುವ ಸೆಂಟರ್‌ ಕನ್ಸೋಲ್‌, ಎಸ್‌ಯುವಿಯ ವಿವಿಧ ಸವಲತ್ತುಗಳನ್ನು ನಿಯಂತ್ರಿಸುವ ಮತ್ತು ಎನ್ಫೊಟೈನ್‌ಮೆಂಟ್‌ ಸಿಸ್ಟಂ ಇರುವ ಡ್ಯಾಶ್‌ಬೋರ್ಡ್‌ ಕನ್ಸೋಲ್‌, ಸ್ಟಿಯರಿಂಗ್‌ ವೀಲ್‌, ಟಾಕೊ–ಸ್ಪೀಡೊ ಸೇರಿದಂತೆ ವಿವಿಧ ಗೇಜ್‌ಗಳನ್ನು ಒಳಗೊಂಡ ಮಿಡ್‌ ಕನ್ಸೋಲ್‌ ಮತ್ತು ಇವೆಲ್ಲವನ್ನೂ ಒಳಗೊಂಡ ಡ್ಯಾಶ್‌ಬೋರ್ಡ್‌. ಇದೇ ಎಸ್‌ಯುವಿಯ ಕಾಕ್‌ಪಿಟ್‌. ನೂತನ ಸಫಾರಿಯಲ್ಲಿ ಈ ಕಾಕ್‌ಪಿಟ್‌ ಅನ್ನು ಸಂಪೂರ್ಣವಾಗಿ ಮರುವಿನ್ಯಾಸ ಮಾಡಲಾಗಿದೆ. ಅವುಗಳ ಪ್ರಮುಖ ಅಂಶಗಳು ಇಂತಿವೆ.

* ಡ್ಯಾಶ್‌ಬೋರ್ಡ್‌ನಲ್ಲಿರುವ ಮರದ ಪ್ಯಾನೆಲ್‌ ಡ್ಯಾಶ್‌ಬೋರ್ಡ್‌ನ ಆಕರ್ಷಣೆಯನ್ನು ಹೆಚ್ಚಿಸಿದೆ ಮತ್ತು ಇಂಟೀರಿಯರ್‌ಗೆ ಪ್ರೀಮಿಯಂ ಮೆರುಗನ್ನು ತಂದುಕೊಟ್ಟಿದೆ

* ಸೆಂಟರ್‌ ಮತ್ತು ಡ್ಯಾಶ್‌ಬೋರ್ಡ್‌ ಕನ್ಸೋಲ್‌ಗಳಲ್ಲಿ ಭೌತಿಕ ಬಟನ್‌ಗಳನ್ನು ತೆಗೆದುಹಾಕಲಾಗಿದೆ. ಬದಲಿಗೆ ಟಚ್‌ ಪ್ಯಾನೆಲ್‌ ಕೆಪಾಸಿಟರ್‌ಗಳನ್ನು ನೀಡಲಾಗಿದೆ. ಇಗ್ನಿಷನ್‌ ಆನ್‌ ಸ್ಥಿತಿಯಲ್ಲಿ ಇದ್ದರೆ ಮಾತ್ರ ಈ ಟಚ್‌ ಪ್ಯಾನೆಲ್‌ ಕೆಲಸ ಮಾಡುತ್ತದೆ. ಟಚ್‌ ಪ್ಯಾನಲ್‌ ಕಾರ್ಯನೀರ್ವಹಣೆ ಮುದವಾಗಿದೆ ಮತ್ತು ಪ್ರೀಮಿಯಂನ ಅನುಭವ ನೀಡುತ್ತದೆ. ವಿನ್ಯಾಸವೂ ಆಕರ್ಷಕವಾಗಿ

* ನೂತನ ಗಿಯರ್‌ ಲಿವರ್‌ ಆಕರ್ಷಕವಾಗಿದೆ ಮತ್ತು ಹಿಡಿದುಕೊಳ್ಳಲು ಹಿತವಾಗಿದೆ

* ಟೆರೇನ್‌ ರೆಸ್ಪಾನ್ಸ್‌ ಸಿಸ್ಟಂನ ರೋಟರಿ ಲಿವರ್‌ನ ವಿನ್ಯಾಸವನ್ನು ಬದಲಿಸಲಾಗಿದೆ. ಇದು ಆಕರ್ಷಕವಾಗಿಯೂ ಇದ್ದು, ಕಂಟ್ರೋಲಿಂಗ್‌ನಲ್ಲೂ ಉತ್ತಮವಾಗಿ ಸ್ಪಂದಿಸುತ್ತದೆ

* 31 ಸೆಂ.ಮೀಟರ್‌ ಅಳತೆಯ ಹರ್ಮಾನ್‌ ಇನ್ಫೊಟೈನ್‌ಮೆಂಟ್‌ ಸಿಸ್ಟಂ ಆಕರ್ಷಕವಾಗಿದೆ. ಟಚ್‌ ಸ್ಕ್ರೀನ್‌ನ ಕಾರ್ಯನಿರ್ವಹಣೆ ಚುರುಕಾಗಿದ್ದು, ಲ್ಯಾಗ್‌ ಇಲ್ಲ. ಆ್ಯಪಲ್‌ ಕಾರ್‌ಪ್ಲೇ ಮತ್ತು ಆ್ಯಂಡ್ರಾಯ್ಡ್‌ ಆಟೊ ಇದ್ದು, ಫೋನ್‌ಗಳನ್ನು ಕನೆಕ್ಟ್‌ ಮಾಡಿಕೊಳ್ಳುವಲ್ಲಿ ಯಾವುದೇ ಅಡೆತಡೆ ಇಲ್ಲ. ನ್ಯಾವಿಗೇಷನ್‌, ಮ್ಯೂಸಿಕ್‌, ಕಾಲ್‌, ಮೆಸೇಜ್‌ ರೀಡಿಂಗ್‌ ವ್ಯವಸ್ಥೆ ಎಲ್ಲವೂ ಉತ್ತಮವಾಗಿದೆ

* ಇಂಟೀರಿಯರ್‌ನ ಮುದವನ್ನು ಹೆಚ್ಚಿಸುವುದು ವಾಯ್ಸ್‌ ಕಮಾಂಡ್‌. ಕರೆ ಮಾಡಲು, ನ್ಯಾವಿಗೇಷನ್‌ ಚಾಲೂ ಮಾಡಲು, ಮ್ಯೂಸಿಕ್‌ ಪ್ಲೇ ಮಾಡಲು, ಸನ್‌ರೂಫ್‌ ತೆಗೆಯಲು ಅಥವಾ ಮುಚ್ಚಲು, ಎಸಿಯನ್ನು ಆನ್‌ ಮಾಡಲು ಮತ್ತು ಅದರ ಸೆಟ್ಟಿಂಗ್‌ಗಳನ್ನು ಬದಲಿಸಲು ವಾಯ್ಸ್‌ ಕಮಾಂಡ್‌ ನೀಡಬಹುದು. ಇಂಗ್ಲಿಷ್‌ ಮಾತ್ರವಲ್ಲದೆ ಹಿಂದಿ, ತಮಿಳು, ಮರಾಠಿ ಸೇರಿ ಆರು ಭಾಷೆಗಳನ್ನು ವಾಯ್ಸ್‌ ಕಮಾಂಡಿಂಗ್‌ ವ್ಯವಸ್ಥೆ ಹೊಂದಿದೆ. ಆದರೆ ಇದರಲ್ಲಿ ಕನ್ನಡ ಇಲ್ಲ. ಇದು ಕನ್ನಡಿಗರಿಗೆ ಬೇಸರ ತರಿಸಬಹುದು

* ಸಫಾರಿಯಲ್ಲಿ ಡ್ಯುಯಲ್‌ ಝೋನ್‌ ಕ್ಲೈಮೇಟ್‌ ಕಂಟ್ರೋಲ್‌ ಇದೆ. ಚಾಲಕನಿಗೆ ತಂಪು ಬೇಕೆನಿಸಿದರೆ ಆತ ವಾಯ್ಸ್‌ ಕಮಾಂಡಿಂಗ್‌ ಮೂಲಕ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಅದೇ ರೀತಿ ಮುಂಬದಿಯ ಪ್ರಯಾಣಿಕನಿಗೆ ತಾನು ಬೆಚ್ಚಗಿರಬೇಕು ಎನಿಸಿದರೆ ವಾಯ್ಸ್‌ ಕಮಾಂಡಿಂಗ್‌ ಮೂಲಕ ತನ್ನ ಬದಿಯ ಎಸಿಯ ಉಷ್ಣತೆಯನ್ನು ಹೆಚ್ಚಿಸಿಕೊಳ್ಳಬಹುದು. ಇದು ಈ ವರ್ಗದಲ್ಲೇ ಮೊದಲ ಬಾರಿಗೆ ನೀಡಲಾಗಿರುವ ಸವಲತ್ತು

* ಹರ್ಮಾನ್‌ ಇನ್ಫೊಟೈನ್‌ಮೆಂಟ್‌ ಸಿಸ್ಟಂನಲ್ಲಿ ಜೆಬಿಎಲ್‌ನ ಅತ್ಯಂತ ಜನಪ್ರಿಯ ಮ್ಯೂಸಿಕ್‌ ಈಕ್ವಲೈಸರ್‌ಗಳನ್ನು ನೀಡಲಾಗಿದೆ. ಇದರಲ್ಲಿ ಒಟ್ಟು 13 ಪ್ರಿಸೆಟ್ಟಿಂಗ್‌ಗಳಿದ್ದು ಸಂಗೀತ ಕೇಳುಗರು ಮಾರುಹೋಗುವಂತೆ ಮ್ಯೂಸಿಕ್‌ ಪ್ಲೇ ಮಾಡುತ್ತದೆ. ಜತೆಗೆ 11 ಸ್ಪೀಕರ್‌ಗಳ ಸರ್ರೌಂಡ್‌ ಸಿಂಸ್ಟಂ ಹೋಂ ಥಿಯೇಟರ್‌ನ ಅನುಭವವನ್ನು ನೀಡುತ್ತದೆ

* ನ್ಯಾವಿಗೇಷನ್‌ ಅನ್ನು ತೋರಿಸುವ ಮಿಡ್‌ ಕನ್ಸೋಲ್‌, ಚಾಲಕನ ಒತ್ತಡವನ್ನು ಕಡಿಮೆ ಮಾಡುತ್ತದೆ

* ನೂತನ ನೆಕ್ಸಾನ್‌ನಲ್ಲಿ ನೀಡಲಾಗಿರುವ ಇಲ್ಯುಮಿನೇಟೆಂಡ್ ಸ್ಟಿಯರಿಂಗ್‌ ವೀಲ್‌ ಮತ್ತು ಮೊನಿಕಾರ್‌ ಅನ್ನು ಸಫಾರಿ ಮತ್ತು ಹ್ಯಾರಿಯರ್‌ನಲ್ಲೂ ನೀಡಲಾಗಿದೆ

ಚಾಲನೆ ಉತ್ತಮಗೊಳಿಸಿದ ಎಲೆಕ್ಟ್ರಿಕಲ್‌ ಸ್ಟಿಯರಿಂಗ್‌

ಸಫಾರಿ ಮತ್ತು ಹ್ಯಾರಿಯರ್‌ನಲ್ಲಿ ಈ ಮೊದಲು ಹೈಡ್ರಾಲಿಕ್‌ ಪವರ್ ಸ್ಟಿಯರಿಂಗ್ ವ್ಯವಸ್ಥೆ ಇತ್ತು. ಇದು ಅತಿಹೆಚ್ಚು ಕರಾರುವಕ್ಕಾದ ಮತ್ತು ಚಾಲನೆಯಲ್ಲಿ ಚಾಲಕನಿಗೆ ಹೆಚ್ಚು ನಿಯಂತ್ರಣ ನೀಡುವ ವ್ಯವಸ್ಥೆ. ಆದರೆ, ಇದರಲ್ಲಿ ಪ್ರವೇಶಮಟ್ಟದ ಸ್ವಯಂಚಾಲನಾ ವ್ಯವಸ್ಥೆಯಾದ ‘ಅಡಾಸ್‌’ ಅಳವಡಿಸಲು ಸಾಧ್ಯವಿಲ್ಲ. ಜತೆಗೆ ಹೈಡ್ರಾಲಿಕ್‌ ಸ್ಟಿಯರಿಂಗ್‌ನ ತೂಕ ಹೆಚ್ಚು. ಅಲ್ಲದೆ, ಹಿಂದಿನ ಸಫಾರಿ ಮತ್ತು ಹ್ಯಾರಿಯರ್‌ನಲ್ಲಿ ಹೈಡ್ರಾಲಿಕ್‌ ಸ್ಟಿಯರಿಂಗ್‌ಗಳಲ್ಲಿ ಅತಿವೇಗದಲ್ಲಿ ತೂಕ ಕಡಿಮೆಯಾಗುತ್ತಿತ್ತು. ಅತಿವೇಗದಲ್ಲಿ ಚಾಲಕ ಗಾಬರಿಗೊಳ್ಳುವಂತೆ ವರ್ತಿಸುತ್ತಿತ್ತು ಈ ಬಗ್ಗೆ ಈ ಹಿಂದೆ ಸಾಕಷ್ಟು ದೂರುಗಳು ಬಂದಿದ್ದವು. ಈ ಎಲ್ಲಾ ಕೊರತೆಗಳನ್ನು ನೀಗಿಸಲು ಟಾಟಾ ಮೋಟರ್ಸ್‌ ಸಫಾರಿ ಮತ್ತು ಹ್ಯಾರಿಯರ್‌ನಲ್ಲಿ ಎಲೆಕ್ಟ್ರಿಕಲ್‌ ಪವರ್ ಸ್ಟಿಯರಿಂಗ್ ಅಳವಡಿಸಿದೆ.

ಎಲೆಕ್ಟ್ರಿಕಲ್‌ ಪವರ್ ಸ್ಟಿಯರಿಂಗ್‌ಗಳು ಕಡಿಮೆ ಫೀಡ್‌ಬ್ಯಾಕ್‌ಗೆ ಕುಖ್ಯಾತಿ ಪಡೆದಿವೆ. ಅಂದರೆ ಸ್ಟಿಯರಿಂಗ್‌ ತಿರುಗಿಸುವುದಕ್ಕೂ, ಚಕ್ರಗಳು ತಿರುಗುವುದರ ಮಧ್ಯೆ ಸಂಬಂಧ ಇಲ್ಲದಂತೆ ಚಾಲಕನಿಗೆ ಭಾಸವಾಗುತ್ತದೆ. ಆದರೆ ಟಾಟಾ ಮೋಟರ್ಸ್‌ ತನ್ನ ಎಲೆಕ್ಟ್ರಿಕಲ್‌ ಪವರ್ ಸ್ಟಿಯರಿಂಗ್‌ನಲ್ಲಿ ಈ ಸಮಸ್ಯೆ ತಲೆದೋರದಂತೆ ಎಚ್ಚರವಹಿಸಿದೆ. ಪಾರ್ಕಿಂಗ್‌ ವೇಗದಲ್ಲಿ ಸ್ಟಿಯರಿಂಗ್‌ ಹಗುರವಾಗಿದೆ ಮತ್ತು ವೇಗ ಹೆಚ್ಚಿದಂತೆ ಅದರ ತೂಕವೂ ಹೆಚ್ಚಾಗುತ್ತಾ ಹೋಗುತ್ತದೆ. ಇದು ಅತಿವೇಗದ ಚಾಲನೆಯನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ. ಇನ್ನು ಸ್ಪೋರ್ಟ್ಸ್‌ ಮೋಡ್‌ನಲ್ಲಿ ಸ್ಟಿಯರಿಂಗ್ ವೀಲ್‌ನ ತೂಕ ಮತ್ತು ಫೀಡ್‌ಬ್ಯಾಕ್‌ ಇನ್ನಷ್ಟು ಹೆಚ್ಚಾಗುತ್ತದೆ. ಸ್ಟಿಯರಿಂಗ್‌ ಇನ್‌ಪುಟ್‌ಗೆ ಎಸ್‌ಯುವಿ ಹೆಚ್ಚು ಮೊನಚಾಗಿ ಪ್ರತಿಕ್ರಿಯಿಸುತ್ತದೆ. ಇದು ತಿರುವುಗಳಿಂದ ಕೂಡಿದ ರಸ್ತೆಯಲ್ಲಿ, ಹೆದ್ದಾರಿಯ ವೇಗದ ಚಾಲನೆಯಲ್ಲಿ, ಘಟ್ಟದ ರಸ್ತೆಗಳ ಚಾಲನೆಯಲ್ಲಿ ಚಾಲಕನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಎಲೆಕ್ಟ್ರಿಕಲ್‌ ಪವರ್ ಸ್ಟಿಯರಿಂಗ್‌ ಇರುವ ಕಾರಣಕ್ಕೆ ‘ಡ್ರೈವರ್‌ ಅಸಿಸ್ಟೆನ್ಸ್‌ ವ್ಯವಸ್ಥೆ–ಅಡಾಸ್‌’ನ ಹಲವು ಸವಲತ್ತುಗಳನ್ನು ಸಫಾರಿ ಮತ್ತು ಹ್ಯಾರಿಯರ್‌ಗೆ ನೀಡಲು ಸಾಧ್ಯವಾಗಿದೆ. ನೂತನ ಸಫಾರಿ ಮತ್ತು ಹ್ಯಾರಿಯರ್‌ನಲ್ಲಿ ಲೇನ್‌ ಬದಲಾಗುವ ಕುರಿತು ಎಚ್ಚರಿಕೆ ನೀಡುವ ವ್ಯವಸ್ಥೆ ಅಳವಡಿಸಲಾಗಿದೆ. ಇದು ದೀರ್ಘ ಚಾಲನೆಯ ವೇಳೆ ಚಾಲಕನ ನೆರವಿಗೆ ಬರುತ್ತವೆ. ಜತೆಗೆ ಅಪಘಾತಗಳನ್ನು ತಪ್ಪಿಸಲು ನೆರವಾಗುತ್ತದೆ.

ನೂತನ ಸಫಾರಿಯ ಮುಂಬದಿಯ ವಿನ್ಯಾಸ

ನೂತನ ಗಿಯರ್‌ಶಿಫ್ಟರ್‌ ಮತ್ತು ಪ್ಯಾಡಲ್‌ ಶಿಫ್ಟರ್‌

ಸಫಾರಿ ಮತ್ತು ಹ್ಯಾರಿಯರ್‌ನ ಆಟೊಮ್ಯಾಟಿಕ್‌ ಅವತರಣಿಕೆಗಳ ಗಿಯರ್‌ ಲಿವರ್‌ ಮೆಕ್ಯಾನಿಸಂ (ಕಾರ್ನಿರ್ವಹಣಾ ವಿಧಾನ) ಅನ್ನು ಬದಲಿಸಲಾಗಿದೆ. ಈ ಮೊದಲು ಡ್ರೈವ್‌ ಬೈ ವೈರ್‌ ತಂತ್ರಜ್ಞಾನವಿತ್ತು. ಈಗ ಅದನ್ನು ಡ್ರೈವ್‌ ಬೈ ಎಲೆಕ್ಟ್ರಿಕಲ್‌ ವ್ಯವಸ್ಥಗೆ ಮೇಲ್ದರ್ಜೆಗೆ ಏರಿಸಲಾಗಿದೆ. ಇದರಿಂದ ಅತ್ಯಂತ ಮೃದು ಸ್ಪರ್ಶದಿಂದಲೇ ಗಿಯರ್‌ ಬದಲಾವಣೆ ಮಾಡಲು ಸಾಧ್ಯವಿದೆ. ಜತೆಗೆ ಸ್ಟಿಯರಿಂಗ್‌ ವೀಲ್‌ನ ಹಿಂಬದಿಯಲ್ಲಿ ಪ್ಯಾಡೆಲ್‌ ಶಿಫ್ಟರ್‌ಗಳನ್ನು ನೀಡಲಾಗಿದೆ. ಇದು ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ನ ಮ್ಯಾನುಯಲ್‌ ಮೋಡ್‌ ಅನ್ನು ಚಾಲಕ ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೆರವಾಗುತ್ತವೆ. ಪ್ಯಾಡೆಲ್‌ ಶಿಫ್ಟರ್‌ಗಳ ಸಂಯೋಜನೆಯನ್ನು ಉತ್ತಮವಾಗಿ ಮಾಡಲಾಗಿದೆ. ಪ್ಯಾಡೆಲ್‌ ಶಿಫ್ಟರ್‌ಗಳ ಮೂಲಕ ಒಂದೆರಡು ಗಿಯರ್‌ಗಳನ್ನು ಒಮ್ಮೆಗೇ ಬದಲಿಸಿದರೂ, ಚಾಲನೆಯಲ್ಲಿ ಜರ್ಕ್‌ ಅನುಭವಕ್ಕೆ ಬರುವುದಿಲ್ಲ. ಅಷ್ಟು ನಯವಾಗಿ ಗಿಯರ್‌ ಶಿಫ್ಟ್‌ ಆಗುತ್ತವೆ. ಇದು ಚಾಲನೆ ತ್ರಾಸವನ್ನು ಕಡಿಮೆ ಮಾಡುತ್ತದೆ.

ಚಾಲಕನ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಹಲವು ಸವಲತ್ತುಗಳನ್ನು ಸಫಾರಿ ಮತ್ತು ಹ್ಯಾರಿಯರ್‌ನಲ್ಲಿ ನೀಡಲಾಗಿದೆ. ಅವುಗಳಲ್ಲಿ ಪ್ರಮುಖವಾದವು ಇಂತಿವೆ

* 360 ಡಿಗ್ರಿ ಕ್ಯಾಮೆರಾ: ಪಾರ್ಕಿಂಗ್‌ ಮತ್ತು ಚಾಲನೆ ಎರಡೂ ಸಂದರ್ಭಗಳಲ್ಲಿ ಇದನ್ನು ಬಳಸಬಹುದಾಗಿದ್ದು, ಚಾಲನೆಯನ್ನು ಸುಲಭಗೊಳಿಸುತ್ತದೆ

* ಬ್ಲೈಂಡ್‌ ಸ್ಪಾಟ್‌ ವಾರ್ನಿಂಗ್‌: ಸೈಡ್‌ ವ್ಯೂ ಮಿರರ್‌ಗಳಲ್ಲಿ ಕಾಣದೇ ಇರುವ, ಆದರೆ ಪಕ್ಕದಲ್ಲೇ ಚಲಿಸುತ್ತಿರುವ ವಾಹನ/ಪ್ರಾಣಿ/ಪಾದಚಾರಿಯ ಮಾಹಿತಿಯನ್ನು ಇದು ನೀಡುತ್ತದೆ. ಇದು ಚಾಲನೆಯನ್ನು ಸುರಕ್ಷಿತಗೊಳಿಸುತ್ತದೆ

* ಟರ್ನ್‌ ಇಂಡಿಕೇಟರ್‌ ವ್ಯೂ: ವಾಹನದ ದಿಕ್ಕು ಬದಲಿಸು ಇಂಡಿಕೇಟರ್‌ಗಳನ್ನು ಎಳೆದ ಕೂಡಲೇ ಈ ವ್ಯವಸ್ಥೆ ಚಾಲನೆಗೆ ಬರುತ್ತದೆ. ವಾಹನ ತಿರುಗಿಸುವಾಗ, ಪಕ್ಕದಲ್ಲಿ ಇರುವ ವಸ್ತುಗಳು/ಪಾದಚಾರಿಗಳು/ವಾಹನಗಳು/ಪ್ರಾಣಿಗಳನ್ನು ಇದು ತೋರಿಸುತ್ತದೆ. ರಿಯರ್ ವ್ಯೂ ಮತ್ತು ಸೈಡ್‌ ವ್ಯೂ ಮಿರರ್‌ಗಳಲ್ಲಿ ಕಾಣದೇ ಇರುವ ದೃಶ್ಯವನ್ನು ಇದು ತೋರಿಸುವುದರಿಂದ ಇಕ್ಕಟ್ಟಾದ ಜಾಗದಲ್ಲಿ ಚಾಲನೆ ಮಾಡುವುದು ಸರಾಗವಾಗುತ್ತದೆ

* ವೆಂಟಿಲೇಟೆಡ್‌ ಸೀಟ್‌: ಚಾಲಕ, ಮುಂಬದಿಯ ಪ್ರಯಾಣಿಕ ಮತ್ತು ಹಿಂಬದಿಯ ಪ್ಯಾಯಾಣಿಕರ ಕ್ಯಾಪ್ಟನ್‌ ಸೀಟುಗಳಲ್ಲಿ ವೆಂಟಿಲೇಷನ್‌ ಸವಲತ್ತು ನೀಡಲಾಗಿದೆ. ಈ ಸೀಟುಗಳಲ್ಲಿ ಎಸಿ ಮತ್ತು ಗಾಳಿಯ ವೇಗವನ್ನು ಬದಲಿಸಲು ಮೂರು ಭಿನ್ನ ಮೋಡ್‌ಗಳಿವೆ. ದೀರ್ಘಾವಧಿಯ ಚಾಲನೆಯಲ್ಲಿ ಇದು ಚಾಲಕ ಮತ್ತು ಪ್ರಯಾಣಿಕರ ಆಯಾಸವನ್ನು ಕಡಿಮೆ ಮಾಡುತ್ತದೆ. ಚಾಲನೆ ಮತ್ತು ಪ್ರಯಾಣವನ್ನು ಆರಾಮದಾಯಿಕವಾಗಿಸುತ್ತದೆ. ಈ ವ್ಯವಸ್ಥೆ ಈ ವರ್ಗದಲ್ಲೇ ಮೊದಲು

* ಪವರ್ಡ್‌ ಆಟೊ ಟೇಲ್‌ಗೇಟ್‌: ಎರಡೂ ಎಸ್‌ಯುವಿಗಳಲ್ಲಿ ಆಟೊ ಟೇಲ್‌ಗೇಟ್‌ ವ್ಯವಸ್ಥೆ ಇದೆ. ಹಿಂಬದಿಯ ಬಂಪರ್ನ ಕೆಳಗೆ ಕಾಲನ್ನು ಆಡಿಸುವ ಮೂಲಕ ಟೇಲ್‌ಗೇಟ್‌ಗಳನ್ನು ಸ್ವಯಂಚಾಲಿತವಾಗಿ ತೆಗೆಯಬಹುದು. ಜತೆಗೆ ಒಂದು ಗುಂಡಿ ಒತ್ತುವ ಮೂಲಕ ಟೇಲ್‌ಗೇಟ್‌ ಮುಚ್ಚಬಹುದು. ಇದು ಲಗೇಜ್‌ ಒಳಗಿರಿಸುವ ಮತ್ತು ಹೊರಗೆ ತೆಗೆಯುವ ಸಂದರ್ಭದಲ್ಲಿ ಹೆಚ್ಚು ಅನುಕೂಲಕ್ಕೆ ಬರುವ ಸವಲತ್ತಾಗಿದೆ. ಸಫಾರಿಯು ತನ್ನ ವರ್ಗದಲ್ಲಿ ಈ ವ್ಯವಸ್ಥೆ ಹೊಂದಿರುವ ಮೊದಲ ಎಸ್‌ಯುವಿ ಎನಿಸಿದೆ

ಅತ್ಯಂತ ಸುರಕ್ಷಿತ ಎಸ್‌ಯುವಿ

ಸಫಾರಿಯು ಭಾರತದ ಅತ್ಯಂತ ಸುರಕ್ಷಿತ ಎಸ್‌ಯುವಿ ಮತ್ತು ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಚೆಗೆ ನಡೆದ ಗ್ಲೋಬಲ್‌ ಎನ್‌ಸಿಎಪಿಯಲ್ಲಿ 5 ಸ್ಟಾರ್‌ ರೇಟಿಂಗ್‌ ಪಡೆದಿದೆಯಲ್ಲದೇ, ಭಾರತದ ಯಾವ ಕಾರೂ ಈವರೆಗೆ ಪಡೆಯದೇ ಇರುವಷ್ಟು ಗರಿಷ್ಠ ಅಂಕಗಳನ್ನು ಸಫಾರಿ ಪಡೆದಿದೆ. 5 ಸ್ಟಾರ್‌ ರೇಟಿಂಗ್‌ ಇರುವ ಬೇರೆ ಕಾರುಗಳು ಮತ್ತು ಎಸ್‌ಯುವಿಗಳೂ ತನ್ನ ಹತ್ತಿರಕ್ಕೆ ಬರದಷ್ಟು ಗರಿಷ್ಠ ಅಂಕಗಳನ್ನು ಸಫಾರಿ ಪಡೆದಿದೆ. ನೂತನ ಸಫಾರಿಯಲ್ಲಿ ಇರುವ ಸುರಕ್ಷತಾ ಸವಲತ್ತುಗಳು ಇದಕ್ಕೆ ಕಾರಣ.

ಗ್ಲೋಬಲ್‌ ಎನ್‌ಸಿಎಪಿಯ ಕ್ರಾಶ್‌ಟೆಸ್ಟ್‌ನಲ್ಲಿ ಗರಿಷ್ಠ ಅಂಕಗಳೊಂದಿಗೆ 5 ಸ್ಟಾರ್‌ ರೇಟಿಂಗ್‌ ಪಡೆದ ಸಫಾರಿ  ಚಿತ್ರ: Global NCAP 

* ಏಳು ಏರ್‌ಬ್ಯಾಗ್‌: ಸಫಾರಿಯ ಟಾಪ್‌ಎಂಡ್‌ ಅವತರಣಿಕೆಗಳಲ್ಲಿ ಏಳು ಏರ್‌ಬ್ಯಾಗ್‌ಗಳಿವೆ. ಆದರೆ ಎಲ್ಲಾ ಅವತರಣಿಕೆಗಳಲ್ಲಿ ಆರು ಏರ್‌ಬ್ಯಾಗ್‌ ಇವೆ. ಸೈಡ್‌ ಇಂಪಾಕ್ಟ್‌ ಏರ್‌ ಬ್ಯಾಗ್‌ ಮುಂಬದಿಯಿಂದ, ಮೂರನೇ ಸಾಲಿನ ಸೀಟಿನವರೆಗೂ ಚಾಚಿಕೊಂಡಿವೆ. ಈ ಸವಲತ್ತು ಇರುವುದು ಈ ವರ್ಗದ ಸಫಾರಿಯಲ್ಲಿ ಮಾತ್ರ

* ಎಲ್ಲಾ ಏಳೂ ಸೀಟ್‌ಗಳಿಗೆ ಮೂರು ಪಾಯಿಂಟ್‌ಗಳ ಸೀಟ್‌ಬೆಲ್ಟ್‌ ನೀಡಲಾಗಿದೆ. ಇದು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಿದೆ

* ವಿಸ್ತರಿಸಿದ ಹೆಡ್‌ರೆಸ್ಟ್‌ಗಳನ್ನು, ಪ್ರಯಾಣಿಕರ ಆರಾಮವನ್ನು ಹೆಚ್ಚಿಸುವುದರ ಜತೆಗೆ ಅಪಘಾತದ ಸಂದರ್ಭದಲ್ಲಿ ಕುತ್ತಿಗೆಗೆ ಆಗುವ ಹಾನಿಯ ಪ್ರಮಾಣವನ್ನು ಕಡಿಮೆ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ಕ್ರಾಶ್‌ಟೆಸ್ಟ್‌ನಲ್ಲಿ ಹೆಚ್ಚು ಅಂಕ ಬರಲು ಇದೂ ಒಂದು ಕಾರಣ

* ಲೇನ್‌ ಬದಲಾವಣೆ ಎಚ್ಚರಿಕೆ

* ಅಡಾಟ್ಪೀವ್ ಕ್ರೂಸ್‌ ಕಂಟ್ರೋಲ್‌

* ಸ್ವಯಂಚಾಲಿತ ತುರ್ತು ಬ್ರೇಕಿಂಗ್‌ ವ್ಯವಸ್ಥೆ

* ತುರ್ತು ಸಂದರ್ಭದಲ್ಲಿ ಸ್ವಯಚಾಲಿತ ಕರೆ ವ್ಯವಸ್ಥೆ

ಇವೆಲ್ಲವೂ ಸಫಾರಿಯ ಸುರಕ್ಷತೆಯ ಮಟ್ಟವನ್ನು ಹೆಚ್ಚಿಸಿವೆ

ಮೂರೂ ಸಾಲಿನ ಸೀಟ್‌ಗಳಿಗೆ ವ್ಯಾಪಿಸಿರುವ ಸೈಡ್‌ ಏರ್‌ಬ್ಯಾಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.