ADVERTISEMENT

ಕಾರು ದಿಗ್ಗಜರ ಗೆಳೆತನ

ಆಟೊಮೊಬೈಲ್ ಕ್ಷೇತ್ರದಲ್ಲೊಂದು ಮಹತ್ವದ ಬೆಳವಣಿಗೆ

ಇ.ಎಸ್.ಸುಧೀಂದ್ರ ಪ್ರಸಾದ್
Published 16 ಜನವರಿ 2019, 19:30 IST
Last Updated 16 ಜನವರಿ 2019, 19:30 IST
   

ಇಬ್ಬರು ಸ್ಟಾರ್‌ಗಳನ್ನು ಒಗ್ಗೂಡಿಸಿ ಸಿನಿಮಾ ನಿರ್ಮಿಸಿದರೆ ಗಲ್ಲಾಪೆಟ್ಟಿಗೆ ಭಾರೀ ಸದ್ದು ಮಾಡುತ್ತದೆ. ಅದು ಸಿನಿಮಾ ರಂಗದ ತಂತ್ರಗಾರಿಕೆ. ಅಂಥದ್ದೇ ಒಂದು ತಂತ್ರಗಾರಿಕೆ ಈಗ ವಾಹನ ಕ್ಷೇತ್ರದಲ್ಲೂ ನಡೆದಿದೆ. ಜಾಗತಿಕ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿರುವ ಜಪಾನ್ ಮೂಲದ ಟೊಯೊಟ ಮತ್ತು ಸುಜುಕಿ ಕಂಪನಿಗಳ ನಡುವಿನ ಒಡಂಬಡಿಕೆ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.

ಭಾರತದ ಮಾರುಕಟ್ಟೆಯಲ್ಲಿ ಸದ್ಯ ಅಗ್ರ ಶ್ರೇಯಾಂಕ ಕಾಪಾಡಿಕೊಂಡಿರುವ ಮಾರುತಿ ಸುಜುಕಿ ಕಂಪನಿ ಹಾಗೂ ಐಷಾರಾಮಿ ಕಾರುಗಳ ತಯಾರಿಕೆಯಲ್ಲಿ ಹೆಸರು ಮಾಡಿರುವ ಟೊಯೊಟ ಹಲವು ವಿಭಾಗಗಳಲ್ಲಿ ಜಂಟಿ ಕಾರ್ಯದ ಒಡಂಬಡಿಕೆಗಳನ್ನು ಮಾಡಿಕೊಂಡಿವೆ. ತಯಾರಿಕೆ ಮತ್ತು ಬಿಡಿಭಾಗ, ಒಂದೇ ಸರ್ವೀಸ್ ಸೆಂಟರ್‌ಗಳು, ಕೆಲ ಮಾದರಿಗಳ ಹಂಚಿಕೆಗೆ ಸಂಬಂಧಿಸಿದಂತೆ ಮಾರಾಟದ ಮೇಲೆ ರಾಯಧನ ಹಂಚಿಕೆ ಇತ್ಯಾದಿಗಳು ನಡೆದಿವೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಈ ಒಡಂಬಡಿಕೆಯ ಮಾತುಕತೆಯ ಭಾಗವಾಗಿ 2019–20ರ ಹೊತ್ತಿಗೆ ಉಭಯ ಕಂಪನಿಗಳು ಹಂಚಿಕೊಳ್ಳುವ ಕಾರುಗಳು ಮಾರುಕಟ್ಟೆಗೆ ಬರಲಿವೆ.

ಈ ಒಪ್ಪಂದದ ಮೂಲಕ ಈಗಾಗಲೇ ಹೈಬ್ರಿಡ್‌ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂಚೂಣಿಯಲ್ಲಿರುವ ಟೊಯೊಟ ಜತೆಗೂಡಿ ಮಾರುತಿ ಸುಜುಕಿ ಕಂಪನಿಯೂ ಹಸಿರು ಇಂಧನ ಬಳಕೆಯ ಕಾರುಗಳ ತಯಾರಿಕೆಗೆ ಕೈಹಾಕಲಿದೆ. ಆ ಮೂಲಕ ಪರಿಸರ ಸ್ನೇಹಿ ಕಾರು ತಯಾರಿಕೆಯ ತಂತ್ರಜ್ಞಾನಗಳನ್ನು ಉಭಯ ಕಂಪನಿಗಳು ಹಂಚಿಕೊಳ್ಳಲಿವೆ ಎಂಬ ಸುದ್ದಿ ಈಗಾಗಲೇ ಎಲ್ಲರ ಗಮನ ಸೆಳೆದಿದೆ.

ADVERTISEMENT

ಸದ್ಯದ ಮಟ್ಟಿಗೆ ಒಪ್ಪಂದದ ಭಾಗವಾಗಿಮಾರುತಿ ಬಲೆನೊ ಮತ್ತು ಪುಟ್ಟ ಎಸ್‌ಯುವಿ ವಿಟಾರಾ ಬ್ರೆಜಾ ಕಾರುಗಳು ಟೊಯೊಟ ಮಳಿಗೆಯಲ್ಲಿ ಮತ್ತು ಟೊಯೊಟ ಕರೋಲಾ ಕಾರು ಮಾರುತಿ ಮಳಿಗೆಯಲ್ಲಿ ಕಾಣ ಸಿಗುತ್ತವೆ. ವರದಿಯ ಪ್ರಕಾರ ಮಾರುತಿ ಕಂಪನಿ ಸುಮಾರು 50 ಸಾವಿರ ಬಲೆನೊ ಮತ್ತು ಬ್ರೆಜಾ ಕಾರುಗಳನ್ನು ಟೊಯೊಟಗೆ ನೀಡಲಿದೆ. ಅದರಂತೆಯೇ ಟೊಯೊಟ 10ಸಾವಿರ ಟೊಯೊಟ ಕಾರುಗಳನ್ನು ಮಾರುತಿಗೆ ನೀಡಲಿದೆ. ಇದರಲ್ಲಿ ಹೈಬ್ರಿಡ್ ಮತ್ತು ಪೆಟ್ರೋಲ್ ಎರಡೂ ಮಾದರಿಗಳು ಲಭ್ಯ.

ಟೊಯೊಟ ಕಂಪನಿ ಈಗಾಗಲೇ ಹೈಬ್ರಿಡ್ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲೇ ಮುಂಚೂಣಿಯಲ್ಲಿದೆ. ಇದೇ ವೇಳೆ ಭಾರತದಂತೆ ಹೆಚ್ಚಿನ ಗ್ರಾಹಕರು ಇರುವ ದೇಶದಲ್ಲಿ ಕಾರುಗಳ ಮಾರಾಟ ಮತ್ತು ಸೇವಾಗುಣಮಟ್ಟದಲ್ಲಿ ಮಾರುತಿ ಸಾಕಷ್ಟು ಹೆಸರು ಮಾಡಿದೆ. ಹೀಗಾಗಿ ಎರಡೂ ಕಂಪನಿಗಳು ಪರಸ್ಪರ ಕೊಡುಕೊಳ್ಳುವಿಕೆಯ ಮೂಲಕ ಸ್ನೇಹಹಸ್ತ ಚಾಚಿವೆ.

ಚೀನಾದ ಮೊದಲ ಪ್ರಯತ್ನ

ಈಗಾಗಲೇ ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಹೊರತುಪಡಿಸಿದರೆ ಭಾರತ ಅತಿ ಹೆಚ್ಚು ಕಾರು ಖರೀದಿದಾರರು ಹೊಂದಿರುವ ರಾಷ್ಟ್ರ ಎಂದೆನಿಸಿಕೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಟೊಯೊಟದ ಪಾಲು ಶೇ 40ರಷ್ಟಿದ್ದರೆ, ಭಾರತೀಯ ಮಾರುಕಟ್ಟೆಯಲ್ಲಿ ಶೇ 50ರಷ್ಟು ಮಾರುಕಟ್ಟೆಯನ್ನು ಮಾರುತಿ ಹೊಂದಿದೆ. ಇಂಥ ಅವಕಾಶವನ್ನು ಜಪಾನ್ ಮೂಲಕ ಎರಡೂ ಕಂಪನಿಗಳು ಬಾಚಿಕೊಳ್ಳಲು ಸಿದ್ಧತೆ ನಡೆಸಿವೆ.

ಈ ಒಪ್ಪಂದದ ಅನ್ವಯ ಮೂರು ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ಮಾತ್ರ ಮಾರಾಟಗೊಳ್ಳಲಿವೆ. ಆದರೆ ಸುಜುಕಿಯ ಲಘು ಹೈಬ್ರಿಡ್ ಕಾರು ಬಲೆನೊ ಜಪಾನ್‌ನಲ್ಲಿ ಮಾರಾಟವಾಗಲಿದೆ. ಆದರೆ ಈ ಕಾರು ಭಾರತದ ಗುಜರಾತ್‌ನಲ್ಲಿರುವ ತಯಾರಿಕಾ ಘಟಕದಲ್ಲಿ ಉತ್ಪಾದನೆಯಾಗಿದೆ, ಜಪಾನ್‌ಗೆ ರಫ್ತಾಗುತ್ತಿದೆ. ಹಾಗೆಯೇ ಟೊಯೊಟದ ಹೈಬ್ರಿಡ್ ಕಾರು ಕರೋಲಾ ಜಗತ್ತಿನ ಇತರ ಭಾಗಗಳಲ್ಲಿ ಮಾರಾಟವಾಗಲಿದೆ. ಬ್ರೆಜಾ ಕಾರು ಮಾತ್ರ ಡೀಸೆಲ್ ವೇರಿಯಂಟ್‌ನಲ್ಲಿ ಸದ್ಯ ಮಾರಾಟವಾಗುವ ಸಾಧ್ಯತೆ ಇದೆ.

2020ಕ್ಕೆ ಎಲೆಕ್ಟ್ರಿಕಲ್ ಕಾರು

ಮುಂಬರುವ ವರ್ಷಗಳಲ್ಲಿ ಈ ಎರಡೂ ದೈತ್ಯ ಕಂಪನಿಗಳು ಜಂಟಿಯಾಗಿ ಎಲೆಕ್ಟ್ರಿಕಲ್ ಕಾರುಗಳನ್ನು ತಯಾರಿಸುವ ಸುಳಿವನ್ನು ಬಿಟ್ಟುಕೊಟ್ಟಿವೆ. 2020ರ ಹೊತ್ತಿಗೆ ಎಲೆಕ್ಟ್ರಿಕಲ್ ಕಾರನ್ನು ಪರಿಚಯಿಸಲು ಪಾಲುದಾರ ಕಂಪನಿಗಳು ಸಿದ್ಧತೆ ನಡೆಸಿವೆ.

ಪಿಟಿಐ ಮೂಲಗಳ ಪ್ರಕಾರ ಟೊಯೊಟ ವಿನ್ಯಾಸದ ಬಲೆನೊ ಹ್ಯಾಚ್‌ಬ್ಯಾಕ್ ಕಾರು 2019–20ರ ಆರ್ಥಿಕ ವರ್ಷದ ಮಧ್ಯದಲ್ಲಿ ಭಾರತದ ರಸ್ತೆಗಿಳಿಯುವ ಸಾಧ್ಯತೆ ಇದೆ ಎಂದೆನ್ನಲಾಗಿದೆ. ಇದು ಸುಜುಕಿ ಬಲೆನೊಗಿಂತ ಭಿನ್ನವಾಗಿರಲಿದೆಯೇ ಅಥವಾ ಅದೇ ಸ್ವರೂಪದಲ್ಲಿ ಪರಿಚಯಗೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕು.

ಈ ನಡುವೆ ಭಾರತದ ಮೊದಲ ಹೈಬ್ರಿಡ್ ತಂತ್ರಜ್ಞಾನದ ಕಾರು ಉತ್ಪಾದಿಸಲು ಅಗತ್ಯವಿರುವ ಎಲ್ಲಾ ವಿಭಾಗಗಳಲ್ಲೂ ಸುಜುಕಿ ಕಂಪನಿ ತನ್ನ ಸಿದ್ಧತೆ ಆರಂಭಿಸಿದೆ. ಹೈಬ್ರಿಡ್ ಕಾರಿಗೆ ಅಗತ್ಯವಿರುವ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಡೆನ್ಸೊ ಕಾರ್ಪೊರೇಷನ್ ಮತ್ತು ತೊಷಿಬಾ ಕಾರ್ಪೊರೇಷನ್ ಜತೆ ಒಪ್ಪಂದ ಮಾಡಿಕೊಂಡಿದೆ. ಮತ್ತೊಂದೆಡೆ ಈಗಾಗಲೇ ಈ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಟೊಯೊಟ ಜತೆ ಮಾಡಿಕೊಂಡಿರುವ ಒಪ್ಪಂದವೂ ಇದಕ್ಕೆ ಪುಷ್ಟಿ ನೀಡುವಂತಿದೆ.

ದರಮಿತಿಯ ಎಲೆಕ್ಟ್ರಿಕ್ ಕಾರು

ಈಗಾಗಲೇ ಮಹಿಂದ್ರಾ ಕಂಪನಿ ರೇವಾ ಕಂಪನಿಯನ್ನು ಖರೀದಿಸಿದ ನಂತರ 35 ಕಿಲೋ ವ್ಯಾಟ್‌ನ ಎಲೆಕ್ಟ್ರಿಕಲ್ ಕಾರನ್ನು ಉತ್ಪಾದಿಸುತ್ತಿದೆ. ಸದ್ಯ ₹ 11ಲಕ್ಷ ಬೆಲೆಯಲ್ಲಿ ಈ ಕಾರು ಲಭ್ಯ. ಮಾರುತಿ ಸುಜುಕಿ ಕಂಪನಿಯು 25 ರಿಂದ 35 ಕಿಲೋ ವ್ಯಾಟ್‌ನ ಕಾರು ಉತ್ಪಾದಿಸುವ ಯೋಜನೆ ಹೊಂದಿದೆ. ಜತೆಗೆ ₹10ಲಕ್ಷದೊಳಗೆ ದರ ಮಿತಿಯನ್ನು ಹಾಕಿಕೊಳ್ಳುವ ಉದ್ದೇಶವೂ ಹೊಂದಿರುವುದು ಇತ್ತೀಚೆಗೆ ವರದಿಯಾಗಿತ್ತು.

ಹಿಂದೆಯೂ ನಡೆದಿತ್ತು...

ಇಂಥ ಒಪ್ಪಂದಗಳು ಇದೇ ಮೊದಲೇನೂ ಅಲ್ಲ. ಈ ಹಿಂದೆ ರಿನೊ ಮತ್ತು ನಿಸ್ಸಾನ್ ಜತೆಗೂಡಿ ಚೆನ್ನೈನ ತಯಾರಿಕಾ ಘಟಕದಲ್ಲಿ ಏಕರೂಪ ವಿನ್ಯಾಸದ ಕಾರುಗಳನ್ನು ಉತ್ಪಾದಿಸಿದ್ದವು. ಹಾಗೆಯೇ ತಂತ್ರಜ್ಞಾನದ ವಿಷಯದಲ್ಲಿ ಹಲವು ಕಂಪನಿಗಳು ಇಂಥ ಒಡಂಬಡಿಕೆಗಳ ಮೂಲಕ ತಂತ್ರಜ್ಞಾನ, ಮಾರುಕಟ್ಟೆ ವಿಸ್ತರಣೆಯನ್ನು ವೃದ್ಧಿಸಿಕೊಂಡಿರುವ ಉದಾಹರಣೆ ನಮ್ಮ ಮುಂದಿದೆ. ಹೀಗಾಗಿ ಬರಲಿರುವ ದಿನಗಳಲ್ಲಿ ಟೊಯೊಟ ಹಾಗೂ ಸುಜುಕಿ ಒಡಂಬಡಿಕೆ ಮೂಲಕ ಬರುವ ಕಾರುಗಳತ್ತ ಎಲ್ಲರ ನಿರೀಕ್ಷೆಯ ಚಿತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.