ತೆಲಂಗಾಣದ ಹೈದರಾಬಾದ್‌ನಲ್ಲಿರುವ
ವಿಡಿಯೊ ಸ್ಕ್ರೀನ್ ಶಾಟ್
ಬೆಂಗಳೂರು: ತೆಲಂಗಾಣದ ಹೈದರಾಬಾದ್‌ನಲ್ಲಿ ವೈವಿಧ್ಯಮಯ ಕಾರುಗಳುಳ್ಳ ಕಾರ್ ಮ್ಯೂಸಿಯಂ ಒಂದು ಈಗ ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ. ಹಿಂದೆಂದೂ ನೋಡಿರದ, ಶೂ, ಚೆಂಡು, ಕೈಚೀಲ, ಬರ್ಗರ್ ಮುಂತಾದವನ್ನು ಹೋಲುವ ವಿಭಿನ್ನ ವಿನ್ಯಾಸಗಳ ಕಾರುಗಳು ಇಲ್ಲಿನ ಆಕರ್ಷಣೆ.
‘ಸುಧಾ ಕಾರ್ ಮ್ಯೂಸಿಯಂ’ ಎಂಬ ವಿಭಿನ್ನ ಕಾರುಗಳನ್ನು ಹೊಂದಿರುವ ಮ್ಯೂಸಿಯಂ ಕುರಿತ ವಿಡಿಯೊವನ್ನು ಮಹೀಂದ್ರ ಸಮೂಹದ ಅಧ್ಯಕ್ಷ ಆನಂದ ಮಹೀಂದ್ರಾ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಮ್ಯೂಸಿಯಂ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ತಮ್ಮ ಪ್ಯಾಷನ್‌ಗಳನ್ನು ಪಟ್ಟುಬಿಡದೆ ಅನುಸರಿಸುವ ಜನರು ಇಲ್ಲದಿದ್ದರೆ, ಈ ಪ್ರಪಂಚ ಆಸಕ್ತಿದಾಯಕ ಎನಿಸುತ್ತಿರಲಿಲ್ಲ. ಹೈದರಾಬಾದ್‌ನ ‘ಸುಧಾ ಕಾರ್ ಮ್ಯೂಸಿಯಂ’ ಬಗ್ಗೆ ಇದುವರೆಗೂ ಕೇಳಿರಲಿಲ್ಲ ಎಂದು ಹೇಳಲು ನನಗೆ ಮುಜುಗರವಿದೆ. ಆಗಾಗ್ಗೆ ಹೈದರಾಬಾದ್‌ಗೆ ಹೋಗುತ್ತಿದ್ದರೂ, ಈ ವಿಡಿಯೊ ತುಣುಕನ್ನು ನೋಡುವವರೆಗೆ ನನಗೆ ಅದರ ಬಗ್ಗೆ ತಿಳಿದಿರಲಿಲ್ಲ. ಕಾರುಗಳ ಬಗ್ಗೆ ಯಾವುದೇ ರೀತಿಯ ಉತ್ಸಾಹಕ್ಕೆ ನನ್ನ ಬೆಂಬಲವಿದೆ. ಮುಂದಿನ ಹೈದರಾಬಾದ್ ಪ್ರವಾಸದಲ್ಲಿ ನಾನು ಅಲ್ಲಿಗೆ ಭೇಟಿ ನೀಡಲು ಯೋಜಿಸಲಿದ್ದೇನೆ’ ಎಂದು ಆನಂದ ಮಹೀಂದ್ರಾ ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ಸುಧಾ ಕಾರ್ ಮ್ಯೂಸಿಯಂ ಹೈದರಾಬಾದ್‌ನಲ್ಲಿರುವ ಆಟೋ ಮೊಬೈಲ್ ಮ್ಯೂಸಿಯಂ ಆಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ದೈನಂದಿನ ವಸ್ತುಗಳನ್ನು ಹೋಲುವ ವಿಶಿಷ್ಟ ವಿನ್ಯಾಸದ ಕಾರುಗಳನ್ನು ಪ್ರದರ್ಶಿಸಲಾಗಿದೆ.
ಈ ವಿಭಿನ್ನ ಕಾರುಗಳನ್ನು ಸುಧಾಕರ್ ಕನ್ಯಬೊಯಿನ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಕಾರುಗಳ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದ ಇವರು ತಮ್ಮ ಶಾಲಾ ದಿನಗಳಲ್ಲಿ ಇದನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದರು. ಈ ಬೆನ್ನಲ್ಲೇ ಹಲವು ಬಗೆಯ ಕಾರುಗಳನ್ನು ರೂಪಿಸಿ 2010ರಲ್ಲಿ ಕಾರುಗಳ ಮ್ಯೂಸಿಯಂ ಅನ್ನು ಪ್ರಾರಂಭಿಸಿದ್ದಾರೆ.
ಶೂ, ಆಟದ ಬಾಲ್‌ಗಳು, ಬ್ಯಾಗ್, ಟೀ ಕಪ್, ಕೇಕ್, ಕ್ಯಾಮೆರಾ, ಬರ್ಗರ್ ಹೀಗೆ ಇನ್ನು ಹತ್ತು ಹಲವು ಬಗೆಯ ವಿನ್ಯಾಸದ ಕಾರುಗಳನ್ನು ಸೃಷ್ಟಿಸಲಾಗಿದೆ. ಈ ಕಾರಿನ ವಿನ್ಯಾಸಗಳು ನೋಡುಗರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.