ADVERTISEMENT

ಮುಳುಗಿದ ವಾಹನ: ‘ಎಂಜಿನ್ ಪ್ರೊಟೆಕ್ಟರ್’ ವಿಮೆ ನೆರವು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 18:52 IST
Last Updated 7 ಸೆಪ್ಟೆಂಬರ್ 2022, 18:52 IST
ನೀರಿನಲ್ಲಿ ಮುಳುಗಿದ್ದ ಕಾರನ್ನು ಎಳೆದು ತರುತ್ತಿರುವ ಜನ (ರಾಯಿಟರ್ಸ್‌ ಚಿತ್ರ)
ನೀರಿನಲ್ಲಿ ಮುಳುಗಿದ್ದ ಕಾರನ್ನು ಎಳೆದು ತರುತ್ತಿರುವ ಜನ (ರಾಯಿಟರ್ಸ್‌ ಚಿತ್ರ)    

ಬೆಂಗಳೂರು: ಮಳೆಯಲ್ಲಿ ವಾಹನ ಮುಳುಗಿ, ಅದರಿಂದ ಎಂಜಿನ್‌ಗೆ ಹಾನಿ ಆದಾಗ ವಿಮಾ ಪರಿಹಾರ ಪಡೆಯಲು ‘ಎಂಜಿನ್ ಪ್ರೊಟೆಕ್ಟರ್’ ಆ್ಯಡ್‌ ಆನ್ ಇದ್ದರೆ ಒಳಿತು ಎಂದು ವಿಮಾ ತಜ್ಞರು ಹೇಳುತ್ತಾರೆ.

ವಾಹನಕ್ಕೆ ಆಕಸ್ಮಿಕವಾಗಿ ಆಗುವ ಹಾನಿಗೆ ಪರಿಹಾರ ಪಡೆಯಲು ವಾಹನ ಮಾಲೀಕರು ಓನ್ ಡ್ಯಾಮೇಜ್‌ ವಿಮೆ ಪಡೆದಿರುತ್ತಾರೆ. ಇದಕ್ಕೆ ಹೆಚ್ಚುವರಿಯಾಗಿ ‘ಎಂಜಿನ್ ಪ್ರೊಟೆಕ್ಟರ್’ ಸೌಲಭ್ಯ ಪಡೆಯಲು ಅವಕಾಶ
ಇದೆ.

ವಾಹನವನ್ನು ಮನೆಯಲ್ಲಿ ಪಾರ್ಕ್‌ ಮಾಡಿದ್ದಾಗ ಭಾರಿ ಮಳೆ ಸುರಿದು, ಎಂಜಿನ್‌ಗೆ ನೀರು ನುಗ್ಗಿ ಹಾನಿ ಉಂಟಾದರೆ ಎಂಜಿನ್‌ ಪ್ರೊಟೆಕ್ಟರ್ ಆ್ಯಡ್‌ ಆನ್‌ ಸೌಲಭ್ಯ ಇಲ್ಲದಿದ್ದರೂ ವಿಮೆ ಪರಿಹಾರ ಪಡೆಯಬಹುದು. ಆದರೆ, ಇಂತಹ ಸಂದರ್ಭದಲ್ಲಿ ವಾಹನ ಚಾಲಕರು ವಾಹನ ಸ್ಟಾರ್ಟ್‌ ಮಾಡಲು ಯತ್ನಿಸಬಾರದು ಎಂದು ಮೂಲಗಳು ವಿವರಿಸಿವೆ.

ADVERTISEMENT

‘ಎಂಜಿನ್‌ಗೆ ನೀರು ನುಗ್ಗಿದ್ದಾಗಲೂ ವಾಹನ ಸ್ಟಾರ್ಟ್‌ ಮಾಡಲು ಯತ್ನಿಸಿದಾಗ ಆಗುವ ಹಾನಿಗೆ ವಿಮಾ ಪರಿಹಾರ ಸಿಗಬೇಕು ಎಂದಾದರೆ, ಎಂಜಿನ್ ಪ್ರೊಟೆಕ್ಟರ್ ಸೌಲಭ್ಯ ಪಡೆದಿರಬೇಕಾಗುತ್ತದೆ’ ಎಂದು ಮೂಲಗಳು ವಿವರಿಸಿವೆ.

‘ಎಂಜಿನ್ ಪ್ರೊಟೆಕ್ಟರ್’ ಆ್ಯಡ್ ಆನ್ ಸೌಲಭ್ಯ ಪಡೆಯದವರು, ಇಂತಹ
ಸಂದರ್ಭಗಳಲ್ಲಿ ಎಂಜಿನ್‌ಗೆ ಆಗುವ ಹಾನಿಯ ರಿಪೇರಿಗೆ ತಾವೇ ಹಣ ಪಾವತಿಸಬೇಕು.

ಎಂಜಿನ್‌ಗೆ ನೀರು ನುಗ್ಗಿದೆ ಎಂದಾ
ದಲ್ಲಿ ವಾಹನ ಸ್ಟಾರ್ಟ್‌ ಮಾಡಲು ಮುಂದಾಗಬಾರದು. ವಾಹನದ ಡೀಲರ್ ಕಂಪನಿ ಅಥವಾ ವಿಮಾ ಕಂಪನಿಗೆ ಕರೆ ಮಾಡಿ ವಾಹನವನ್ನು ಟೋ ಮಾಡಿಕೊಂಡು ಹೋಗಲು ಮನವಿ ಮಾಡಬೇಕು. ಆಗ ಅವರು ವಾಹನಕ್ಕೆ ಆಗಿರುವ ನಷ್ಟ ಯಾವ ಬಗೆಯದ್ದು ಎಂಬುದನ್ನೂ ಗಮನಿಸುತ್ತಾರೆ ಎಂದು ಬಜಾಜ್ ಅಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಯ ಮೋಟರ್ ಬ್ಯುಸಿನೆಸ್ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಸುಭಾಶಿಷ್ ಮಜುಮ್ದಾರ್ ಹೇಳಿದ್ದಾರೆ.

ಎಂಜಿನ್ ಪ್ರೊಟೆಕ್ಟರ್ ಸೌಲಭ್ಯವನ್ನು ಸಾಮಾನ್ಯವಾಗಿ ಇತರ ಆ್ಯಡ್‌ ಆನ್‌ಗಳ ಜೊತೆಯಲ್ಲಿಯೇ ಮಾರಾಟ ಮಾಡಲಾಗುತ್ತದೆ. ವಿಮೆ ಖರೀದಿಸುವಾಗ ಅಥವಾ ವಿಮೆ ನವೀಕರಿಸುವಾಗ ಇದನ್ನು ಖರೀದಿಸಬೇಕು. ಅವಧಿ ಮಧ್ಯದಲ್ಲಿ ಈ ಸೌಲಭ್ಯ ಪಡೆಯಲಾಗದು ಎಂದು ಮಜುಮ್ದಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.