ಭಾರತಕ್ಕೆ ಟೆಸ್ಲಾ ಕಂಪನಿಯ ಸೈಬರ್‌ಟ್ರಕ್ ಕಾರು ತಂದ ಸೂರತ್‌ನ ಉದ್ಯಮಿ
ಚಿತ್ರಕೃಪೆ: ಇನ್‌ಸ್ಟಾಗ್ರಾಂ
ಸೂರತ್: ಗುಜರಾತ್‌ನ ಸೂರತ್ ನಗರದಲ್ಲಿ ವಿಭಿನ್ನ ರೀತಿಯ ಕಾರೊಂದು ಸಂಚರಿಸಿ ಜನರ ಗಮನ ಸೆಳೆದಿದೆ. ಅದು ಅಮೆರಿಕದ ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಕಂಪನಿಯ ‘ಸೈಬರ್‌ಟ್ರಕ್’ ಹೆಸರಿನ ಕಾರು.
ಇದನ್ನು ಖರೀದಿಸಿರುವುದು ಉದ್ಯಮಿ ಲಾವಜಿ ದಲಿಯಾ. ಇವರು ಲಾವಜಿ ಬಾದ್‌ಶಾ ಎಂದೇ ಜನಪ್ರಿಯರು.
ಈ ಕುರಿತು ಮಾತನಾಡಿರುವ ದಲಿಯಾ ಅವರ ಹಿರಿಯ ಪುತ್ರ ಪಿಯೂಷ್, ‘ಭಾರತದಲ್ಲಿ ಸೈಬರ್‌ಟ್ರಕ್ ಕಾರು ಖರೀದಿಸಿರುವುದು ಇದೇ ಮೊದಲು. ನಾವು ಆನ್‌ಲೈನ್‌ನಲ್ಲಿ ಪರಿಶೀಲಿಸಿದ ಪ್ರಕಾರ ಭಾರತದ ರಸ್ತೆಗೆ ಸೈಬರ್‌ಟ್ರಕ್ ಕಾರು ಇಳಿದಿದ್ದು ಇದೇ ಮೊದಲು’ ಎಂದು ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.
‘ಆರು ತಿಂಗಳ ಹಿಂದೆಯೇ ಟೆಕ್ಸಾಸ್‌ನಲ್ಲಿರುವ ಟೆಸ್ಲಾ ಶೋರೂಮ್‌ನಲ್ಲಿ ಕಾರನ್ನು ಬುಕ್ ಮಾಡಲಾಗಿತ್ತು. ಕಾರನ್ನು ದುಬೈಗೆ ಕಳುಹಿಸಲಾಗಿತ್ತು. ಅಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಡಗಿನ ಮೂಲಕ ಭಾರತಕ್ಕೆ ತರಲಾಗಿದೆ. ಗುರುವಾರ ಸೈಬರ್‌ಟ್ರಕ್ ಸೂರತ್‌ಗೆ ಬಂದಿದೆ. ಇದರ ಮೂಲ ಬೆಲೆ ₹60 ಲಕ್ಷ ಆಗಿದೆ’ ಎಂದು ಹೇಳಿದ್ದಾರೆ.
ಕಾರಿನ ಬೆಲೆಯ ಕುರಿತು ವಿವರಿಸಿದ ಅವರು, 'ಲಾಜಿಸ್ಟಿಕ್ಸ್ ಶುಲ್ಕವೇ ಹೆಚ್ಚಿರುತ್ತದೆ. ಸೈಬರ್‌ಟ್ರಕ್‌ನಲ್ಲಿ ಐವರು ಕುಳಿತುಕೊಳ್ಳುವಷ್ಟು ಸ್ಥಳಾವಕಾಶವಿದೆ. ನಾನು, ನನ್ನ ಕುಟುಂಬದೊಂದಿಗೆ ಪ್ರಯಾಣಿಸಿದಾಗ ಅದ್ಭುತ ಅನುಭವ ನೀಡಿತು. ಕಂಪನಿ ಭಾರತದಲ್ಲಿಯೂ ಶೋರೂಮ್ ತೆರೆಯಲಿ ಎನ್ನುವುದು ನಮ್ಮ ಆಶಯ’ ಎಂದಿದ್ದಾರೆ.
‘ಸಂಪೂರ್ಣ ಆಟೋಮೇಟೆಡ್ ಆಗಿರುವ ಈ ಕಾರನ್ನು ಆರು ಗಂಟೆಗಳ ಕಾಲ ಚಾರ್ಜ್ ಮಾಡಿದರೆ 550 ಕಿ.ಮೀವರೆಗೆ ಪ್ರಯಾಣಿಸಬಹುದು. ಕಾರಿನ ಹೊರಭಾಗವನ್ನು ಸ್ಟೀಲ್‌ನಿಂದ ಮಾಡಲಾಗಿದೆ. ಕಠಿಣ ರಸ್ತೆಯಲ್ಲೂ ಸುಗಮವಾಗಿ ಸಾಗುವಂತಹ ಟೈರ್‌ಗಳು ಈ ಕಾರಿಗಿದೆ. ಸದ್ಯ ಸೂರತ್‌ನಲ್ಲಿ ಮಾತ್ರ ಕಾರಿನಲ್ಲಿ ಪ್ರಯಾಣಿಸಿದ್ದೇವೆ. ಇನ್ನೂ ಹೆದ್ದಾರಿಗಳಲ್ಲಿ ಪ್ರಯಾಣಿಸಿಲ್ಲ. ಜನರು ಕಾರನ್ನು ನೋಡಲು ಮುಗಿಬೀಳುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಯಾರು ಈ ಲಾವಜಿ ದಲಿಯಾ?
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಲಾವಜಿ, ವ್ರಜದ ವ್ಯಾಪಾರಿಯೂ ಹೌದು. ಇವರು ಸೂರತ್‌ನಲ್ಲಿ ಸ್ವಂತ ವಿದ್ಯುತ್ ಮಗ್ಗವನ್ನೂ ಹೊಂದಿದ್ದಾರೆ.
ವರದಿ ಪ್ರಕಾರ, ಗುಜರಾತ್‌ನ ಭವಾನಗರದ ಮೂಲದವರಾದ ಇವರು 13ನೇ ವಯಸ್ಸಿನಲ್ಲಿ ಸೂರತ್‌ಗೆ ಬಂದು ವಜ್ರದ ಪಾಲಿಶರ್ ಆಗಿ ಕೆಲಸ ಆರಂಭಿಸಿದ್ದರು. ಬಳಿಕ ಉದ್ಯಮ ಆರಂಭಿಸಿ, ಗೋಪಿನ್ ಗ್ರೂಪ್‌ನ ಸ್ಥಾಪಕರಾಗಿದ್ದಾರೆ. ಈ ಸಂಸ್ಥೆ ರಿಯಲ್ ಎಸ್ಟೇಟ್, ಎನ್‌ಜಿಒ ಮತ್ತು ಹೂಡಿಕೆಗೆ ಸಂಬಂಧಿಸಿದ ಉದ್ಯಮವನ್ನು ಮುನ್ನಡೆಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.