ಟೆಸ್ಲಾ ಕಂಪನಿಯ ಮುಂಬೈ ಮಳಿಗೆಯಲ್ಲಿ ‘ಮಾಡೆಲ್ ವೈ’ ಕಾರಿನ ಪಕ್ಕದಲ್ಲಿ ನಿಂತು ಕಂಪನಿಯ ಪ್ರಾದೇಶಿಕ ನಿರ್ದೇಶಕಿ ಇಸಾಬೆಲ್ ಫ್ಯಾನ್ ಅವರು ಕ್ಯಾಮೆರಾ ಕಣ್ಣಿನಲ್ಲಿ ಹೀಗೆ ಸೆರೆಯಾದರು.
–ಪಿಟಿಐ ಚಿತ್ರ
ಮುಂಬೈ: ಇ.ವಿ ಕಾರುಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಖ್ಯಾತಿ ಸಂಪಾದಿಸಿರುವ ಟೆಸ್ಲಾ ಕಂಪನಿಯು ಭಾರತ ಪ್ರವೇಶಿಸಿದೆ. ₹59.89 ಲಕ್ಷ ಆರಂಭಿಕ ಬೆಲೆಯ ‘ಮಾಡೆಲ್ ವೈ’ ಕಾರನ್ನು ಕಂಪನಿಯು ಮುಂಬೈನಲ್ಲಿ ಆರಂಭವಾದ ತನ್ನ ಮೊದಲ ಮಳಿಗೆಯಲ್ಲಿ ಮಂಗಳವಾರ ಅನಾವರಣ ಮಾಡಿದೆ.
ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯು ಚೀನಾದ ಶಾಂಘೈನ ಘಟಕದಲ್ಲಿ ಪೂರ್ತಿಯಾಗಿ ಸಿದ್ಧಗೊಂಡ ‘ಮಾಡೆಲ್ ವೈ’ ಕಾರುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಿದೆ.
ಮಧ್ಯಮ ಗಾತ್ರದ ವಿದ್ಯುತ್ ಚಾಲಿತ ಎಸ್‌ಯುವಿ ಆಗಿರುವ ಈ ಕಾರಿನ ಎರಡು ಅವತರಣಿಕೆಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತದೆ. ಕಾರಿನ ಗರಿಷ್ಠ ಬೆಲೆಯು ₹67.89 ಲಕ್ಷ ಆಗಿರಲಿದೆ.
ಈ ವರ್ಷದ ಮೂರನೆಯ ತ್ರೈಮಾಸಿಕದಿಂದ ಕಾರುಗಳು ಗ್ರಾಹಕರಿಗೆ ಸಿಗಲಿವೆ. ಕಾರುಗಳಿಗೆ ನೋಂದಣಿ ಮತ್ತು ಕಾರುಗಳ ವಿತರಣೆಯು ಆರಂಭದಲ್ಲಿ ಮುಂಬೈ, ದೆಹಲಿ ಮತ್ತು ಗುರುಗ್ರಾಮದಲ್ಲಿ ಶುರುವಾಗಲಿದೆ ಎಂದು ಕಂಪನಿ ತಿಳಿಸಿದೆ.
ಕಾರಿನ ಒಂದು ಅವತರಣಿಕೆಯು ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ ಸಾಗುತ್ತದೆ, ಇನ್ನೊಂದು ಅವತರಣಿಕೆಯು 622 ಕಿ.ಮೀ. ಸಾಗುತ್ತದೆ. ‘ಮಾಡೆಲ್ ವೈ’ ಕಾರು ಮರ್ಸಿಡಿಸ್ ಬೆಂಜ್, ಬಿಎಂಡಬ್ಲ್ಯು, ಔಡಿ ಕಂಪನಿಯ ಕಾರುಗಳಿಗೆ ಪೈಪೋಟಿ ನೀಡಲಿದೆ.
ಭಾರತೀಯ ಕಾರು ತಯಾರಿಕಾ ಕಂಪನಿಗಳಾದ ಟಾಟಾ ಮೋಟರ್ಸ್ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ತಮ್ಮ ಇ.ವಿ. ಕಾರುಗಳ ಬೆಲೆಯನ್ನು ₹30 ಲಕ್ಷಕ್ಕಿಂತ ಕಡಿಮೆ ಇರಿಸಿವೆ.
ಫಡಣವೀಸ್ ಉದ್ಘಾಟನೆ: ಟೆಸ್ಲಾ ಕಂಪನಿಯು ಭಾರತದಲ್ಲಿ ತೆರೆದ ಮೊದಲ ಮಳಿಗೆಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಉದ್ಘಾಟಿಸಿದರು. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಈ ಮಳಿಗೆ ಇದೆ.
ಮುಂಬೈ, ದೆಹಲಿಯಲ್ಲಿ ತಲಾ ನಾಲ್ಕು ಚಾರ್ಜಿಂಗ್ ಕೇಂದ್ರ ಸ್ಥಾಪಿಸುವ ಆಲೋಚನೆ ಕಂಪನಿಗೆ ಇದೆ.
ಟೆಸ್ಲಾ ಕಂಪನಿಯು ತನ್ನ ತಯಾರಿಕಾ ಘಟಕವನ್ನು, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಭಾರತದಲ್ಲಿ ಆರಂಭಿಸಬೇಕು ಎಂದು ತಾವು ಬಯಸುವುದಾಗಿ ಫಡಣವೀಸ್ ಹೇಳಿದರು.
ಟೆಸ್ಲಾ ಕಂಪನಿಯು ಭಾರತದಲ್ಲಿ ಕಾರು ತಯಾರು ಮಾಡಲು ಆಸಕ್ತಿ ತೋರಿಸುತ್ತಿಲ್ಲ. ಆದರೆ ಭಾರತದಲ್ಲಿ ಮಳಿಗೆಗಳನ್ನು ತೆರೆಯಲು ಅದು ಆಸಕ್ತಿ ಹೊಂದಿದೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕಳೆದ ತಿಂಗಳು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.