ADVERTISEMENT

ಫ್ಯಾನ್ಸಿ ನಂಬರ್: ₹1.17 ಕೋಟಿ ಹರಾಜು ಕೂಗಿದ್ದ ವ್ಯಕ್ತಿಗೆ ಸಂಕಷ್ಟ

ಪಿಟಿಐ
Published 3 ಡಿಸೆಂಬರ್ 2025, 15:51 IST
Last Updated 3 ಡಿಸೆಂಬರ್ 2025, 15:51 IST
   

ಚಂಡೀಗಢ: ವಿಶೇಷ ನೋಂದಣಿ ಸಂಖ್ಯೆ (ಫ್ಯಾನ್ಸಿ ನಂಬರ್ ಪ್ಲೇಟ್) ಪಡೆಯಲು ₹1.17 ಕೋಟಿವರೆಗೂ ಹರಾಜು ಕೂಗಿದ್ದ ಹರಿಯಾಣದ ವ್ಯಕ್ತಿ, ಪೂರ್ಣ ಹಣ ಪಾವತಿಸಲು ವಿಫಲವಾಗಿದ್ದಾರೆ.

ಗಡುವಿನ ಒಳಗೆ ಹಣ ಪಾವತಿಸದ ಬಿಡ್‌ದಾರನ ಆದಾಯ ಮತ್ತು ಪಾವತಿ ಸಾಮರ್ಥ್ಯವನ್ನು ಪರಿಶೀಲನೆ ಮಾಡುವಂತೆ ಹರಿಯಾಣ ಸಾರಿಗೆ ಸಚಿವ ಅನಿಲ್‌ ವಿಜ್‌ ಅವರು ಬುಧವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಳೆದ ವಾರ ಹಿಸಾರ್‌ನ ವ್ಯಕ್ತಿಯೊಬ್ಬರು ಎಚ್‌ಆರ್–88–ಬಿ–8888 ನೋಂದಣಿ ಸಂಖ್ಯೆ ಪಡೆಯಲು ಅತಿ ಹೆಚ್ಚಿನ ಮೊತ್ತಕ್ಕೆ ಹರಾಜು ಕೂಗಿದ್ದರು. ಚಾರ್ಕಿ ದಾದ್ರಿ ಜಿಲ್ಲೆಯ ಬಾಧ್ರಾ ಉಪ ವಿಭಾಗ ₹1.17 ಕೋಟಿ ಮೊತ್ತವನ್ನು ನೋಂದಣಿಗಾಗಿ ನಿಗದಿ ಮಾಡಿತ್ತು. ₹1,000 ಪ್ರವೇಶ ಶುಲ್ಕ ಮತ್ತು ₹10,000 ಭದ್ರತಾ ಠೇವಣಿ ಇಟ್ಟಿದ್ದ ಆ ವ್ಯಕ್ತಿ, ಸೋಮವಾರದ ಒಳಗೆ ಪೂರ್ಣ ಹಣ ಪಾವತಿ ಮಾಡಬೇಕಿತ್ತು.

ADVERTISEMENT

ನಿಗದಿತ ಅವಧಿಯಲ್ಲಿ ಬಿಡ್‌ದಾರ ಹಣ ಪಾವತಿಸದೇ ಇರುವುದು ಬುಧವಾರ ಸಚಿವರ ಗಮನಕ್ಕೆ ಬಂದಿತ್ತು. ಆ ವ್ಯಕ್ತಿಯ ಆದಾಯ ಮತ್ತು ಸಂಪತ್ತಿನ ಪರಿಶೀಲನೆ ಮಾಡಿ, ಅಷ್ಟು ಹಣ ಪಾವತಿಸುವ ಸಾಮರ್ಥ್ಯ ಇದೆಯೇ ಎಂಬುದನ್ನು ತಿಳಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ವಿಜ್‌ ತಿಳಿಸಿದರು.

‘ಭದ್ರತಾ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು, ನೋಂದಣಿ ಸಂಖ್ಯೆಯನ್ನು ಮತ್ತೆ ಹರಾಜು ಕೂಗಲಾಗುವುದು’ ಎಂದು ಸಚಿವರು ಹೇಳಿದ್ದಾರೆ.

‘ಆದಾಯ ತೆರಿಗೆ ಇಲಾಖೆಗೂ (ಐ.ಟಿ) ಲಿಖಿತ ಮನವಿ ಸಲ್ಲಿಸಿ ಆ ವ್ಯಕ್ತಿಯ ಆದಾಯ ಮೂಲದ ಸಮಗ್ರ ತನಿಖೆ ನಡೆಸಲು ಕೋರುತ್ತೇವೆ. ಇದರಿಂದ ಮುಂದಿನ ದಿನಗಳಲ್ಲಿ ಕೆಲವರು ಸುಳ್ಳು ಮಾಹಿತಿ ನೀಡಿ ಹರಾಜಿನಲ್ಲಿ ಪಾಲ್ಗೊಳ್ಳುವುದು ತಪ್ಪಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.