ADVERTISEMENT

ಆರೋಗ್ಯ–ಸೌಂದರ್ಯಕ್ಕೆ ಸುಗಂಧ ತೈಲಗಳು: ಅರೊಮಾ...ಆರಾಮ..!

ಆರೋಗ್ಯ-ಸೌಂದರ್ಯಕ್ಕೆ ಸುಗಂಧತೈಲಗಳು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2022, 19:30 IST
Last Updated 18 ಫೆಬ್ರುವರಿ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪರಿಮಳ ಪಸರಿಸುವ ತೈಲಗಳಿಗೆ, ನೋವು ಮರೆಸುವ ಗುಣವಿದೆ. ಹೀಗೆ ಮನಸ್ಸನ್ನು ಉಲ್ಲಸಿತವಾಗಿಡುವ ಸುಗಂಧ ದ್ರವ್ಯ/ತೈಲಗಳ ಕುರಿತ ಮಾಹಿತಿ ಇಲ್ಲಿದೆ.

ಮೊಡವೆಯೇ ಚಿಂತೆ ಬಿಡಿ, ಲ್ಯಾವೆಂಡರ್‌ ತೈಲ ಬಳಸಿ; ತಲೆ ಹೊಟ್ಟೇ, ಟೀ ಟ್ರೀ ತೈಲವಿದೆ ನೋಡಿ; ಮೂಗು ಕಟ್ಟಿದೆಯೇ, ನೀಲಗಿರಿಯ ತೈಲ ಆದೀತು; ಮಲಗುವ ಕೋಣೆಯಲ್ಲಿ ಸೊಳ್ಳೆಗಳ ಕಾಟವೇ?, ಸಿಟ್ರೋನೆಲ್ಲಾದ ತೈಲ ಖಂಡಿತಾ ಉತ್ತಮ ಆಯ್ಕೆ; ಖಿನ್ನರಾಗಿರುವಿರಾ? ಚಿಂತಿಸದಿರಿ, ರೋಸ್ಮೆರಿಯ ಸುಗಂಧತೈಲವಿದೆ. ಸ್ನಾನದ ಮನೆಯಲ್ಲಿ ಪನ್ನೀರಿನ ತೈಲ, ಆಹಾ ಅದೇನು ಅದ್ಭುತ ಅನುಭವ...

ಹೌದು, ನಾನು ಹೇಳ ಹೊರಟಿರುವುದು ನೈಸರ್ಗಿಕ ಸುಗಂಧತೈಲಗಳ ಗುಣ-ವಿಶೇಷಗಳು ಹಾಗೂ ಅವುಗಳ ಬಳಕೆಯ ಕುರಿತಾಗಿ. ಒಂದು ಕಾಲದಲ್ಲಿ ರಾಣಿಯರಿಗಷ್ಟೇ ಸೀಮಿತವಾಗಿದ್ದವು, ಐಷಾರಾಮಿ ಬದುಕಿನ ಕುರುಹಾಗಿದ್ದವು, ಸಿರಿವಂತಿಕೆಯೆ ಪ್ರತೀಕಗಳಾಗಿದ್ದವು ಈ ಸುಗಂಧಿ ತೈಲಗಳು. ಅವುಗಳ ಘಮ ಅರಮನೆಗಳನ್ನು ದಾಟಿ ಸಾಮಾನ್ಯರ ಮನೆಗಳನ್ನು ಮುಟ್ಟುತ್ತಿರುವುದು ಉತ್ತಮ ಬೆಳವಣಿಗೆ. ಸೃಷ್ಟಿಯ ಅದ್ಭುತ ಕೊಡುಗೆಗಳಿವು.

ADVERTISEMENT

ಬಳಸುವ ಬಗೆ-ಬಗೆಗೆ

ಸುಮ್ಮನೆ ಘಮಿಸಿದರೂ ಸಾಕು. ಲ್ಯಾವೆಂಡರಿನ ತೈಲ ಮನಸ್ಸನ್ನು ಶಾಂತಗೊಳಿಸಿ, ತಿಳಿಯಾಗಿಸಿ, ಮುದ ನೀಡಿ, ಸಮ್ಮೋಹಕ ಅನುಭವವನ್ನು ನೀಡಿ ಬಿಡುತ್ತದೆ. ಸುಖ ನಿದ್ರೆಗೂ ಸಹಕಾರಿ. ನೋಡಿ ಈ ಘಮಲಿನ ರಾಣಿ. ಲ್ಯಾವೆಂಡರ್‌ ಸಿಗದಿದ್ದರೂ ಚಿಂತೆ ಬೇಡ, ಶ್ರೀಗಂಧ, ಲಾವಂಚ ಅಥವಾ ಪಚೋಲಿಯ ಸುಗಂಧದೆಣ್ಣೆಯೂ ಆಗಬಹುದು.

ಎಷ್ಟು ಹೊತ್ತು ತೈಲದ ಬಾಟಲ್‌ ಹಿಡಿದು ಘಮಿಸುವುದು? ಆ ಕಷ್ಟ ಬಿಡಿ, ತೈಲದ ನಾಲ್ಕೈದು ಹನಿಗಳನ್ನು ‘ಘಮ ಪ್ರಸರಕ’(ಡಿಫ್ಯೂಸರ್)‌ ಅಥವಾ ‘ಆವಿಕಾರಕ’ಕ್ಕೆ (ವೇಪರೈಸರ್)‌ ಹಾಕಿ ಆರಾಮ ಕುರ್ಚಿಯಲ್ಲಿ ಕೂತು ಅರೆ ತಾಸು ಕಣ್ಣುಮುಚ್ಚಿ ಘಮವ ಆಘ್ರಾಣಿಸಿ ನೋಡಿ. ಮನಸ್ಸು ಅದೆಷ್ಟು ಹಗುರಗುರ.

ಹೇಗಿದ್ದರೂ ನೀವು ಆಗೊಮ್ಮೆ-ಈಗೊಮ್ಮೆ ಎಣ್ಣೆ ಸ್ನಾನ ಮಾಡುವಿರಿ. ಎಣ್ಣೆಯೊಂದಿಗೆ ಸುಗಂಧ ತೈಲ ಹನಿಗಳೂ ಸೇರಿದರೆ ಸ್ವರ್ಗಾನುಭವ. ಹರಳೆಣ್ಣೆಗೋ ಎಳ್ಳೆಣ್ಣೆಗೋ ಕೊಬ್ಬರಿಯ ಎಣ್ಣೆಗೋ ಜೊಜೋಬಾದ ತೈಲಕ್ಕೋ ಪಚೋಲಿ, ಲ್ಯಾವೆಂಡರ್‌, ಜಿರೇನಿಯಂ, ಗುಲಾಬಿ ಅಥವಾ ಅಪೂರ್ವಸಂಪಿಗೆ (ಯ್ಲಾಂಗ್‌ ಯ್ಲಾಂಗ್)‌ಯ ಸುಗಂಧತೈಲಗಳನ್ನು ಮಿತವಾಗಿ ಮಿಶ್ರಿಸಿ ಅರೆ ತಾಸು ಅಂಗಮರ್ದಿಸಿ ಅಭ್ಯಂಜನ ಮಾಡಿ ನೋಡಿ. ದೇಹವಷ್ಟೇ ಅಲ್ಲ, ಮನಸ್ಸೂ ಪ್ರಫುಲ್ಲ.

ತಲೆ ಕೂದಲಿನಲ್ಲಿ ಹೊಟ್ಟಿನ ಕಿರಿಕಿರಿಯಿದ್ದಲ್ಲಿ ಶಾಂಪೂ/ಕಂಡೀಷನರ್‌ ಜೊತೆ ರೋಸ್ಮೆರಿ/ಟೀ ಟ್ರೀ ತೈಲದ ಎರಡು-ಮೂರು ಹನಿ ಹಾಕಿ ತಲೆಗೂದಲಿಗೊಂದಷ್ಟು ಮಾಲೀಷ್‌ ಮಾಡುವುದು ಮರೆಯಬೇಡಿ.

ಸ್ನಾನದ ನಂತರ ಧ್ಯಾನಿಸುವಾಗ ಪರಿಮಳ ಸೂಸುವ ಮೇಣದಬತ್ತಿಯಿರಲಿ, ಪೂಜಿಸುವಾಗ ಕೋಣೆಯ ತುಂಬ ತುಳಸಿಯದ್ದೋ ಅಥವಾ ಸಿರಿಗಂಧದ್ದೋ ತೈಲದ ಘಮ ಅಲೆಅಲೆಯಾಗಿ ಬರುತಿರಲಿ. ದೈವ ಸಿಕ್ಕ ಅನುಭವ-ಅನುಭೂತಿ ನಿಮ್ಮದಾಗದಿದ್ದರೆ ಕೇಳಿ. ಪೂಜೆಯ ತರುವಾಯ ಚರ್ಮಕ್ಕೊಂದಿಷ್ಟು ಪೋಷಣೆ ಅಗತ್ಯವಾಗಿ ಮಾಡಿಕೊಳ್ಳುವಿರಿ. ಬಳಸುವ ಆರ್ದ್ರಕದ (ಮಾಯಿಶ್ಚರೈಸರ್) ಮುಲಾಮಿಗೆ ಒಂದು ಹನಿ ಲ್ಯಾವೆಂಡರ್ ತೈಲ ಹಾಕಿ ಬಿಡಿ, ನೀವು ಖಂಡಿತವಾಗಿ ಲ್ಯಾವೆಂಡರ್‌ ಬಳಸುವುದನ್ನು ಮುಂದುವರೆಸುವಿರಿ.

ಪಚೋಲಿ/ಲಾವಂಚ/ಶ್ರೀಗಂಧದ ಸುಗಂಧತೈಲದ ಹನಿಯೊಂದನ್ನು ನೀವು ಧರಿಸುವ ದಿರಿಸಿಗೆ (ಮೂಗಿಗೆಹತ್ತಿರವಿರುವ ಬಟ್ಟೆಯ ಭಾಗ ಕೊರಳ ಪಟ್ಟಿಗೆ) ಹಾಕಿ ನೋಡಿ, ಬಟ್ಟೆ ಮಾಸಬಹುದು. ಘಮ ಮೂರ್ನಾಲ್ಕು ದಿನ ಮಾಸಲಾರದು.

ಪೆಪ್ಪರ್ಮಿಂಟ್‌, ಸ್ಪಿಯರ್ಮಿಂಟ್‌, ಕಿತ್ತಳೆ, ರೋಸ್ಮೆರಿ ಹಾಗೂ ನಿಂಬೆಯ ಸುಗಂಧ ತೈಲಗಳು ಆಲಸ್ಯ ದೂರಮಾಡುತ್ತವೆ; ಚಕ್ಕೆ ತೈಲ ಆಘ್ರಾಣಿಸಿದರೆ ಚೈತನ್ಯ ವೃದ್ಧಿಸುವುದು; ನಿಂಬೆ ಹಾಗೂ ಕಾಡುಕಿತ್ತಳೆಯ ತೈಲಗಳು ಮನಸ್ಥಿತಿಯ ಔನ್ನತ್ಯಕ್ಕೆ ಉತ್ತಮ; ಫ್ರಾಂಕಿನ್ಸೆನ್‌ ತೈಲ ನರವ್ಯೂಹದ ಸಮಸ್ಥಿತಿಯಲ್ಲಿಡುತ್ತದೆ; ದುಃಖಿತರಾಗಿದ್ದರೆ ಲ್ಯಾವೆಂಡರಿನ ಸುಗಂಧದೆಣ್ಣೆ, ಉದ್ವೇಗಕ್ಕೆ ಒಳಗಾಗಿದ್ದರೆ ಪನ್ನೀರ ಪತ್ರೆಯ (ಜಿರೇನಿಯಂ) ತೈಲ; ಮನಸ್ಸು ದಣಿದಿದ್ದರೆ ಕಾಳುಮೆಣಸಿನ ತೈಲ; ಪ್ರಣಯಕ್ಕೆ ಗುಂಡುಮಲ್ಲಿಗೆಯ ತೈಲ; ಪ್ರೇರಣೆ ಬೇಕೆನಿಸಿದರೆ ತುಳಸಿಯ ಎಣ್ಣೆಯ ಸುವಾಸನೆಯನ್ನು ತುಸು ಹೊತ್ತು ಅನುಭವಿಸಿದರೆ ಸಾಕು... ಹೀಗೆ ಒಂದೊಂದು ಭಾವನೆಗೆ ಒಂದೊಂದು ಸುಗಂಧದೆಣ್ಣೆ.

ಬಳಸುವ/ಕೊಳ್ಳುವ ಮೊದಲು

ಮೈಕೈಗೆ ಸುಗಂಧತೈಲ ಹಚ್ಚುವ ಮೊದಲು ಅವುಗಳನ್ನು ಜಒಜೊಬಾ ಅಥವಾ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯೊಡನೆ ಮಿಶ್ರ ಮಾಡಬೇಕು. ಚರ್ಮಕ್ಕೆ ಬಳಸುವ ಮೊದಲು ರೂಪಾಯಿ ನಾಣ್ಯದಷ್ಟು ಜಾಗದಲ್ಲಿ ಹಚ್ಚಿ ನೋಡಿ. ಯಾವುದೇ ಅಡ್ಡಪರಿಣಾಮ ಆಗುವುದಿಲ್ಲವೆಂಬುದನ್ನು ಖಾತ್ರಿ ಮಾಡಿಕೊಂಡ ನಂತರವೇ ಮುಂದುವರೆಯಿರಿ. ನೆನಪಿರಲಿ; ಯಾವ ಕಾರಣಕ್ಕೂ ಈ ತೈಲಗಳನ್ನು ಬಾಯಿಯ ಮೂಲಕ ಹೊಟ್ಟೆಗೆ ತೆಗೆದುಕೊಳ್ಳುವಂತಿಲ್ಲ.

ಯಾವಾಗಲೂ ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಶುದ್ಧ ತೈಲಗಳನ್ನೇ ಖರೀದಿಸಿ. ಬಹಳಷ್ಟು ಜನರು ತೈಲಗಳನ್ನು ಕೊಳ್ಳುವಾಗ ಮೋಸ ಹೋಗುತ್ತಾರೆ. ಮಾರಾಟ ಮಾಡುವ ಎಲ್ಲ ತೈಲಗಳನ್ನು ಪರಿಶುದ್ಧವೆಂದು ನಂಬುದೂ ಕಷ್ಟ. ಇವುಗಳ ಶುದ್ಧತೆಯ ಪರೀಕ್ಷೆ ಅಷ್ಟು ಸರಳವೂ ಅಲ್ಲ. ಬಹಳಷ್ಟು ಸುಗಂಧತೈಲಗಳ ಬೆಲೆ ಹೆಚ್ಚಿರುವುದರಿಂದ ಕಲಬೆರಕೆ ಮಾಡಿ ಮಾರುವವರೇ ಹೆಚ್ಚು. ವಯೋವೃದ್ಧರು, ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರು ವೈದ್ಯರ ಸಲಹೆ ಪಡೆದೇ ಈ ಸುಗಂಧತೈಲಗಳನ್ನು ಬಳಸಬೇಕು.

ಕೆಲವು ಕೃಷಿಕರು ಈ ತೈಲಗಳನ್ನು ಉತ್ಪಾದಿಸುವ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇನ್ನೂ ಕೆಲವರು ಇಂಥ ಬೆಳೆಗಳನ್ನು ಬೆಳೆದು ಸ್ವಯಂ ಭಟ್ಟಿ ಇಳಿಸಿ ತೈಲಗಳನ್ನು ಉತ್ಪಾದಿಸುತ್ತಿದ್ದಾರೆ. ಅಂಥವರಿಂದ ನೇರವಾಗಿ ಖರೀದಿಸಿದರೆ ಕಲಬೆರಕೆಯ ಸಾಧ್ಯತೆ ಕಡಿಮೆ. ಪರ್ಯಾಯವಾಗಿ ಖರೀದಿಸಿದ ತೈಲಗಳ ಗುಣಮಟ್ಟವನ್ನು ಕೃಷಿ/ತೋಟಗಾರಿಕೆ ವಿಶ್ವವಿದ್ಯಾಲಯಗಳಲ್ಲೋ ಅಥವಾ ಬೆಂಗಳೂರಿನ ಕೇಂದ್ರೀಯ ಔಷಧ ಹಾಗೂ ಸುಗಂಧದ್ರವ್ಯ ಬೆಳೆಗಳ ಸಂಶೋಧನಾ ಸಂಸ್ಥೆ, ಇಲ್ಲವೇ ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ ಪರೀಕ್ಷಿಸಬಹುದಾಗಿದೆ. ಈ ತೈಲಗಳ ಬಳಕೆಯ ಬಗೆಗೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9480557634ಗೆ ಸಂಪರ್ಕಿಸಬಹುದು.

* ಸುಗಂಧ ದ್ರವ್ಯ/ತೈಲಗಳು ನಿಸರ್ಗದ ಅದ್ಭುತ ಕೊಡುಗೆಗಳು; ಅರೊಮಾ ಥೆರಪಿ ಒಂದು ಪರ್ಯಾಯ ಹಾಗೂ ಪೂರಕ ಚಿಕಿತ್ಸಾ ಪದ್ಧತಿ; ನೋವು ಮರೆಸುವ ಗುಣ ಈ ತೈಲಗಳಿಗಳಿಗಿವೆ. ಅಷ್ಟೇ ಅಲ್ಲ, ನೋವು ನಿವಾರಿಸುವ ಗೂಣವೂ ಇದೆ. ಅನೇಕ ಮಾನಸಿಕ ರೋಗಗಳಿಗೆ, ಖಿನ್ನತೆಗೆ ಅರೊಮಾ ಥೆರಪಿ ಉತ್ತಮ ಆಯ್ಕೆ. ಉತ್ಕೃಷ್ಟ ಜೀವನಶೈಲಿಗೂ ಇದು ಒಳ್ಳೆಯ ಆಯ್ಕೆ. ದಣಿದ ದೇಹ ಮನಸ್ಸಿಗೆ ಈ ಸುಗಂಧತೈಲಗಳ ಪರಿಮಳ ದಿವ್ಯೌಷಧ.

–ಶರ್ಮಿಳಾ ಜೋಷಿ, ಅರೊಮಾ ಚಿಕಿತ್ಸಕರು

(ಲೇಖಕರು ಸಹಾಯಕ ಪ್ರಾಧ್ಯಾಪಕರು, ತೋಟಗಾರಿಕೆ ಮಹಾವಿದ್ಯಾಲಯ ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.