ADVERTISEMENT

ಗಡ್ಡವನ್ನು ಹೀಗೂ ಬಿಡಬಹುದು! ಇಲ್ಲಿದೆ ವಿಭಿನ್ನ ಶೈಲಿಯ ವಿನ್ಯಾಸಗಳು

ಅಬ್ದುಲ್ ರಹಿಮಾನ್
Published 5 ಡಿಸೆಂಬರ್ 2025, 12:28 IST
Last Updated 5 ಡಿಸೆಂಬರ್ 2025, 12:28 IST
<div class="paragraphs"><p>ಚಿತ್ರ; ಗೆಟ್ಟಿ</p></div>
   

ಚಿತ್ರ; ಗೆಟ್ಟಿ

ಪುರುಷರ ಸೌಂದರ್ಯ ಹೆಚ್ಚಿಸುವಲ್ಲಿ ಗಡ್ಡದ ಪಾತ್ರ ಪ್ರಮುಖ. ಗಡ್ಡ ಮುಖದ ಸೌಂದರ್ಯ ಹೆಚ್ಚಿಸುವುದು ಮಾತ್ರವಲ್ಲ, ವ್ಯಕ್ತಿತ್ವ ಪ್ರಕಟಣೆಯ ಭಾಗವೂ ಹೌದು. ಮುಖದ ಅಕಾರಕ್ಕೆ, ಉಡುಪಿನ ಶೈಲಿಗೆ ತಕ್ಕಂತೆ ಗಡ್ಡವನ್ನು ಹುರಿಗೊಳಿಸುವುದು ಈಗಿನ ಟ್ರೆಂಡ್.

ಹೀಗಾಗಿ ಗಡ್ಡವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿ ಒಪ್ಪಗೊಳಿಸುತ್ತಾರೆ. ಸೆಲೆಬ್ರೆಟಿಗಳಂತೂ ತಮ್ಮ ಕೇಶವಿನ್ಯಾಸದಷ್ಟೇ ಗಡ್ಡದ ಶೈಲಿಯ ಬಗ್ಗೆ ಹೆಚ್ಚು ಮುತುವರ್ಜಿ ವಹಿಸುತ್ತಾರೆ. ಯುವಕರು ಅವರನ್ನು ಅನುಸರಿಸುತ್ತಾರೆ. ‘ಜೆನ್ ಝೀ’ಗಳು ಥರಹೇವಾರಿ ಗಡ್ಡ ವಿನ್ಯಾಸಗಳ ಅನ್ವೇಷಣೆಯಲ್ಲಿ ಇರುತ್ತಾರೆ.

ADVERTISEMENT

ದುಂಡು, ಕೋಲು, ಉದ್ದ , ಚೌಕ ಹೀಗೆ ಮುಖದ ಆಕಾರಗಳಿಗೆ ತಕ್ಕಂತೆ ವಿವಿಧ ಶೈಲಿಯ ಗಡ್ಡದ ವಿನ್ಯಾಸಗಳಿವೆ. ಉದಾಹರಣೆಗೆ ದುಂಡು ಮುಖದವರು, ಕೆನ್ನೆಯ ಬಳಿ ತೆಳುವಾಗಿ ಗಡ್ಡ ಟ್ರಿಮ್ ಮಾಡಿ, ಗಲ್ಲದ ಬಳಿ ತುಸು ಉದ್ದವಾಗಿ ಬಿಟ್ಟರೆ ಮುಖಕ್ಕೆ ಒಳ್ಳೆಯ ಲುಕ್ ಸಿಗುತ್ತದೆ. ಪೂರ್ತಿ ಗಡ್ಡವನ್ನು ಸ್ವಲ್ಪ ದಪ್ಪಕ್ಕೆ ಬಿಟ್ಟರೆ, ಮುಖದ ಬೊಜ್ಜು ಮಾಯವಾದಂತೆ ಗೋಚರಿಸುತ್ತದೆ. ಗಲ್ಲದ ಬಳಿ ಚೂಪಾಗಿ ಬಿಟ್ಟರೂ ಕೂಡ ದುಂಡು ಮುಖದ ಆಕಾರವೇ ಬದಲಾಗುತ್ತದೆ. ಗಡ್ಡವನ್ನು ‘ಎಲ್’ ಆಕಾರದಲ್ಲಿ ವಿನ್ಯಾಸ ಮಾಡಿ, ಕೆನ್ನೆಯ ಭಾಗದಲ್ಲಿ ಸಣ್ಣಗೆ ಟ್ರಿಮ್ ಮಾಡಿ, ‘ಫ್ರೆಂಚ್’ ಭಾಗದಲ್ಲಿ ಗಾಢವಾಗಿ ಇಡುವುದು ಕೂಡ ಒಳ್ಳೆಯ ಆಯ್ಕೆ. ಸದ್ಯ ಈ ಶೈಲಿ ಟ್ರೆಂಡಿಂಗ್‌ನಲ್ಲಿದೆ. ಮೊಟ್ಟೆಯಾಕಾರದ ಮುಖವಿದ್ದವರಿಗೆ ಎಂತಹ ಶೈಲಿಯೂ ಒಗ್ಗುತ್ತದೆ. ಆದರೆ ಚೂಪಾಗಿ ಇಳಿಬಿಡುವ ವಿನ್ಯಾಸವನ್ನು ತಪ್ಪಿಸಬೇಕು. ಇದು ಮುಖದ ಸಮತೋಲನವನ್ನು ಗಾಳುಮೇಳು ಮಾಡುತ್ತದೆ.

ಚೌಕಾಕಾರದ ದವಡೆ ಇರಬೇಕು ಎನ್ನುವುದು ಫ್ಯಾಷನ್ ಪ್ರಿಯ ಪುರುಷರ ಬಯಕೆ. ಕ್ಲೀನ್ ಶೇವ್, ಉದಕ್ಕೆ ಗೆರೆ ಎಳೆದಂತೆ (ಚಿನ್ ಸ್ಟ್ರಾಪ್), ಕೆಳ ತುಟಿಯಲ್ಲಿ ಸಣ್ಣ ಪ್ರಮಾಣದ ಗಡ್ಡ (ಸೋಲ್ ಪ್ಯಾಚ್), ತೆಳುವಾದ ಅಥವಾ ಕುರುಚಲು ಗಡ್ಡ (ಸ್ಟಬಲ್) ಈ ಮಾದರಿಯ ಮುಖ ಇರುವವರಿಗೆ ಹೊಂದುತ್ತದೆ. ಗಲ್ಲದ ಬಳಿ ಚೂಪಾಗಿ ವಿನ್ಯಾಸಗೊಳಿಸಿದ ದಪ್ಪಗಡ್ಡ (ಸ್ಟಿಲೆಟ್ಟೊ), ನೀಳ ಗಡ್ಡ, ತುಟಿಗಳು ಮರೆಯಾಗುವಂತೆ ಗಡ್ಡ ಹಾಗೂ ಮೀಸೆಯನ್ನು ಬಿಡುವ ವಿನ್ಯಾಸ ಈ ಶೈಲಿಯ ಮುಖದವರಿಗೆ ಹೊಂದುತ್ತದೆ.

ಆಯತಾಕಾರದ ಮುಖದವರಿಗೆ ನೀಳವಾಗಿ ದಪ್ಪ ಗಡ್ಡ ಒಗ್ಗುತ್ತದೆ. ರಗಡ್ ನೋಟ ಕೊಡುವ ವಿನ್ಯಾಸಗಳೂ ಅಂಥವರಿಗೆ ಮುಖಕ್ಕೆ ಹೊಂದುತ್ತದೆ. ಚಿನ್ ಸ್ಟ್ರಾಪ್, ಹಿಪ್ ಸ್ಟರ್ ಮುಂತಾದ ವಿನ್ಯಾಸಗಳು ಈ ಮಾದರಿಯ ಮುಖದವರಿಗೆ ಸೂಕ್ತ. ವಿವಿಧ ವಿನ್ಯಾಸಗಳನ್ನು ಮಾಡಿ, ಅಲ್ಲಲ್ಲಿ ಗೆರೆ ಎಳೆಯುವುದು ಕೂಡ ಈಗಿನ ಟ್ರೆಂಡ್್ಗಳಲ್ಲಿ ಒಂದು.

ಗಡ್ಡ ವಿನ್ಯಾಸ ಮಾಡಿಸಲು ವಯಸ್ಸಿನ ಮಿತಿ ಇಲ್ಲ. ಹೊಸದಾಗಿ ಗಡ್ಡ ಚಿಗುರಿದವರಿಂದ ಹಿಡಿದು ವಯಸ್ಸಾದವರೂ ಕೂಡ ತಮ್ಮ ಗಡ್ಡಕ್ಕೆ ಒಳ್ಳೆಯ ವಿನ್ಯಾಸ ನೀಡಬಹುದು. ಒಳ್ಳೆಯ ಗಡ್ಡ ವಿನ್ಯಾಸ ವಯಸ್ಸಾದಂತೆ ಕಾಣುವುದು ತಡೆಯುತ್ತದೆ. ಕ್ಲೀನ್ ಶೇವ್ ಹಾಗೂ ಸರಳ ವಿನ್ಯಾಸ ವಯಸ್ಸಾದವರ ಮುಖದ ಅಂದ ಹೆಚ್ಚಿಸುತ್ತದೆ.

ಟೇಪರ್ ಗಡ್ಡ

ಚರ್ಮದ ಬಣ್ಣ ಮಾಸುವ ಸಮಸ್ಯೆ ಇರುವವರಿಗೆ ಈ ಶೈಲಿ ಒಳ್ಳೆಯ ಆಯ್ಕೆ. ಚರ್ಮದ ಬಣ್ಣ ಮಾಸಿದವರು ಕ್ಲೀನ್ ಶೇವ್ ಮಾಡಿದರೆ ಮುಖದ ಅಂದ ಹಾಳಾಗಬಹುದು. ಗಲ್ಲದ ಬಳಿ ಮೊನಚಾದ ವಿನ್ಯಾಸ ಮಾಡಿ, ಕಣತಲೆಯಲ್ಲಿ ಸಪೂರಕ್ಕೆ ಕತ್ತರಿಸಿ, ಶೂನ್ಯಕ್ಕೆ ಟ್ರಿಮ್ ಮಾಡಿದರೆ ಪರಿಣಾಮಕಾರಿಯಾಗಿ ಗೋಚರಿಸುತ್ತದೆ. ಇದು ಅಗಲವಾದ ಮುಖದ ಆಕಾರಗಳಿಗೆ ಸೂಕ್ತವಾದ ಶೈಲಿ. ಇದು ಮುಖವನ್ನು ಕಿರಿದಾಗಿ ಕಾಣುವಂತೆ ಮಾಡುತ್ತದೆ. ವಾರಕ್ಕೊಮ್ಮೆ ಈ ಶೈಲಿಯಲ್ಲಿ ಕತ್ತರಿಸಿದರೆ ಮುಖ ಒಪ್ಪವಾಗಿ ಕಾಣುತ್ತದೆ.

ಬಿಯರ್ಡ್ ಸ್ಟೇಚ್

ಮೀಸೆಯನ್ನು ಗಾಢವಾಗಿ ಹಾಗೂ ಗಡ್ಡವನ್ನು ಕುರುಚಲಾಗಿ ಬಿಡುವ ವಿನ್ಯಾಸ ಇದು. ಮೀಸೆಯನ್ನು ಎದ್ದು ಕಾಣಿಸುವಂತೆ ಇರಿಸಿ, ಗಡ್ಡವನ್ನು ಸಣ್ಣದಾಗಿ ಟ್ರಿಮ್ ಮಾಡಬೇಕು. ಇದು ವಿಶಿಷ್ಟ ಹಾಗೂ ಸಮತೋಲಿತ ಲುಕ್ ನೀಡುತ್ತದೆ. ಮೀಸೆ ದಟ್ಟವಾಗಿ ಬಿಡುವುದಿಂದ ಗುಂಪಿನಲ್ಲಿ ನೀವು ಎದ್ದು ಕಾಣುತ್ತೀರಿ. ಮೀಸೆಯನ್ನು ಉದ್ದಕ್ಕೆ ಬಿಟ್ಟು ತುಟಿ ರೇಖೆ ಬಳಿ ಮಾತ್ರ ಕತ್ತರಿಸಬೇಕು. ಸಣ್ಣ ಗಡ್ಡವನ್ನು ಕಾಪಾಡಿಕೊಳ್ಳಲು ಟ್ರಿಮ್ಮರ್ ಬಳಸಬೇಕು, ಮೀಸೆಯನ್ನು ಒಪ್ಪವಾಗಿಲು ಬಾಚಣಿಗೆ ಬಳಸಬೇಕು. ಸೆಟ್ಟಿಂಗ್ಸ್ ಸ್ಪ್ರೆ ಕೂಡ ಪರಿಣಾಮಕಾರಿ.

ನೀಳ , ಗಾಢ ಗಡ್ಡ

ನೀಳವಾಗಿ ದಪ್ಪ ಗಡ್ಡ ಬಿಡುವುದು ಈಗಿನ ಹೊಸ ಟ್ರೆಂಡ್. ಹೆಚ್ಚಿನ ಸೆಲೆಬ್ರೆಟಿಗಳು ಈ ಮಾದರಿಯ ಗಡ್ಡ ವಿನ್ಯಾಸ ಮಾಡಿಕೊಳ್ಳುತ್ತಾರೆ. ಕೆ.ಜಿ.ಎಫ್ ಸಿನಿಮಾದಲ್ಲಿ ಯಶ್ ಇದೇ ಮಾದರಿಯ ಗಡ್ಡ ವಿನ್ಯಾಸ ಮಾಡಿಸಿದ್ದರು. ಈ ಮಾದರಿಯ ಗಡ್ಡ ನಿಮ್ಮ ವ್ಯಕ್ತಿತ್ವಕ್ಕೆ ವಿಶೇಷ ಮೆರುಗನ್ನು ನೀಡುತ್ತದೆ. ಎಲ್ಲಾ ಮಾದರಿಯ ಮುಖಗಳಿಗೂ ಈ ವಿನ್ಯಾಸ ಹೊಂದುತ್ತದೆ. ತಲೆಯ ಕೂದಲಿನಷ್ಟೇ ಈ ಶೈಲಿಯ ಗಡ್ಡವನ್ನು ನೀವು ಕಾಳಜಿವಹಿಸಬೇಕು. ಅದನ್ನು ಚೊಕ್ಕವಾಗಿಟ್ಟುಕೊಳ್ಳಬೇಕು.

ಪ್ಯಾಚಿ ಗಡ್ಡ

ಅಸಮಾನವಾಗಿ ಗಡ್ಡ ಬೆಳೆಯುವರಿಗೆ ಇದು ಸೂಕ್ತ ಆಯ್ಕೆ. ಕೆಳ ತುಟಿಯ ಭಾಗದಲ್ಲಿ ವಿವಿಧ ಆಕಾರದಲ್ಲಿ ಅಲ್ಪ ಪ್ರಮಾಣದ ಗಡ್ಡ ಇಡುವ ಶೈಲಿ ಇದು. ಮೀಸೆ ಹಾಗೂ ಗಲ್ಲದ ರೋಮವನ್ನು ಟ್ರಿಮ್ ಮಾಡಿ, ಕೆಳದುಟಿಯಲ್ಲಿ ಚೆಂದದ ವಿನ್ಯಾಸ ಮಾಡಬೇಕು. ಚೌಕ, ಆಯತಾಕಾರ, ತ್ರಿಕೋನ ಮುಂತಾದ ವಿನ್ಯಾಸ ಚೆನ್ನಾಗಿ ಒಪ್ಪುತ್ತದೆ. ಬೋಳು ತಲೆಯವರಿಗೂ ಈ ಶೈಲಿ ಸೂಕ್ತ.

ಸರ್ಕಲ್ ಅಥವಾ ಫ್ರೆಂಚ್ ಗಡ್ಡ

ಹೆಚ್ಚು ಪ್ರೊಫೆಶನಲ್ ಆಗಿ ಕಾಣಬೇಕೆಂದು ಬಯಸುವವರು ಈ ವಿನ್ಯಾಸವನ್ನು ಆಯ್ದುಕೊಳ್ಳಬಹುದು. ಬಾಯಿಯ ಸುತ್ತಲೂ ವೃತ್ತಾಕಾರದಲ್ಲಿ ಗಡ್ಡ ಹಾಗೂ ಮೀಸೆಯನ್ನು ‘ಕೆತ್ತ’ಬೇಕು. ಇದು ಮುಖಕ್ಕೆ ಹೆಚ್ಚು ಸಮತೋಲಿತ, ರಚನಾತ್ಮಕ ನೋಟವನ್ನು ನೀಡುತ್ತದೆ. ಇದು ಯಾವುದೇ ಮುಖದ ಆಕಾರಕ್ಕೆ ಸರಿಹೊಂದುತ್ತದೆ. ಬಾಯಿಯ ಸುತ್ತಲೂ ದುಂಡಗಿನ ಆಕಾರವನ್ನು ರಚಿಸಿ ಮೀಸೆಯ ಅಂಚುಗಳನ್ನು ಟ್ರಿಮ್ ಮಾಡಬೇಕು. ಫಾರ್ಮಲ್ ಬಟ್ಟೆಗಳಿಗೆ ಇದು ಸೂಕ್ತವಾಗಿ ಹೊಂದುತ್ತದೆ. ಬೋಳು ತಲೆಯವರಿಗೆ ಸೂಕ್ತವಾದ ಶೈಲಿ ಇದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.