
ಫಾತಿಮಾ ಬಾಷ್
ಇನ್‌ಸ್ಟಾಗ್ರಾಂ ಚಿತ್ರ
ಬ್ಯಾಂಕಾಕ್: ಈ ಬಾರಿಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮೆಕ್ಸಿಕೊ ಸುಂದರಿ ಫಾತಿಮಾ ಬಾಷ್ ಕಿರೀಟ ಮುಡುಗೇರಿಸಿಕೊಂಡು ಸಂಭ್ರಮದಲ್ಲಿ ಜಗತ್ತಿಗೊಂದು ಹಾರುಮುತ್ತು ನೀಡಿದ್ದಾರೆ. ಆದರೆ ಸ್ಪರ್ಧೆಯ ಹಂತದಲ್ಲಿ ನಿರೂಪಕನ ಅವಮಾನ ಮತ್ತು ಅದಕ್ಕೆ ಫಾತಿಮಾಗೆ ಇತರ 120 ಸುಂದರಿಯರು ನೀಡಿದ ಬೆಂಬಲ ಈಗ ಭಾರಿ ಸುದ್ದಿಯಲ್ಲಿದೆ.
ಬಹಿರಂಗವಾಗಿ ಟೀಕೆ, ಸ್ಪರ್ಧೆಯ ಪ್ರತಿಹಂತದಲ್ಲೂ ನಡೆದ ಅಚಾತುರ್ಯದ ನಡುವೆಯೂ ಫಾತಿಮಾ ಗೆಲುವು ಸೌಂದರ್ಯ ಜಗತ್ತನ್ನೇ ಬೆರಗುಗೊಳಿಸಿದೆ.
ಜಾಗತಿಕವಾಗಿ ನಡೆಯುವ ನಾಲ್ಕು ಪ್ರಮುಖ ಸೌಂದರ್ಯ ಸ್ಪರ್ಧೆಗಳಲ್ಲಿ ಮಿಸ್ ಯೂನಿವರ್ಸ್ ಕೂಡಾ ಒಂದು. ಭಾರತದ ಸುಶ್ಮಿತಾ ಸೇನ್ (1994), ಲಾರಾ ದತ್ತ (2000) ಹಾಗೂ ಹರ್ನಾಜ್ ಸಂಧು (2021) ಈವರೆಗೂ ಈ ಕಿರೀಟವನ್ನು ಮುಡಿಗೇರಿಸಿಕೊಂಡ ಭಾರತದ ಸುಂದರಿಯರು.
ಥಾಯ್ಲೆಂಡ್‌ನಲ್ಲಿ ಆಯೋಜನೆಗೊಂಡಿದ್ದ ಈ ಬಾರಿ ಸ್ಪರ್ಧಿಸಿದ್ದ ವಿವಿಧ ರಾಷ್ಟ್ರಗಳ 120 ಸ್ಪರ್ಧಿಗಳಲ್ಲಿ ಐವರಿ ಕೋಸ್ಟ್, ಫಿಲಿಪಿನ್ಸ್, ಥಾಯ್ಲೆಂಡ್ ಹಾಗೂ ವೆನುಝುಲಾ ಅಂತಿಮ ಸುತ್ತಿಗೆ ಪ್ರವೇಶ ಪಡೆದರು.
ಸಭೆಯೊಂದರಲ್ಲಿ ಥಾಯ್ಲೆಂಡ್‌ನ ಆಯೋಜಕ ನವಾತ್ ಇಟ್ಸಾರಾಗಿಸಿಲ್ ಅವರ ಖಂಡನೆಗೆ ಫಾತಿಮಾ ಗುರಿಯಾಗಿದ್ದರು. ಈ ಅವಮಾನಕ್ಕೆ ಪ್ರತಿಭಟನೆಯಾಗಿ ಅವರು ಸ್ಪರ್ಧೆಯಿಂದ ಹೊರನಡೆದರು. ಸ್ಪರ್ಧಿಗಳ ಆರೋಪದಿಂದ ತೀರ್ಪುಗಾರರು ಸ್ಪರ್ಧೆ ತೊರೆದರು. ಮಿಸ್ ಬ್ರಿಟನ್, ಮಿಸ್ ಜಮೈಕಾ ವೇದಿಕೆಯಿಂದ ಬಿದ್ದು ಗಾಯಗೊಂಡರು. ಹೀಗೆ ಹಲವು ಅಡೆತಡೆಗಳು 2025ರ ಮಿಸ್ ಯೂನಿವರ್ಸ್ ಅನ್ನು ಆವರಿಸಿದ್ದವು.
ನೇರ ಪ್ರಸಾರವಾಗುತ್ತಿದ್ದ ಕಾರ್ಯಕ್ರಮದಲ್ಲಿ ಇವೆಲ್ಲವೂ ನಾಟಕೀಯದಂತೆಯೇ ವೇದಿಕೆಯಲ್ಲಿ ನಡೆಯಿತು. ಭಾರತದ ಮಣಿಕಾ ಸೌಂದರ್ಯ ಸಹಿತ 120 ರಾಷ್ಟ್ರಗಳ ಪ್ರತಿನಿಧಿಗಳು ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. ನವಾತ್ ಅವರು ಮಾತನಾಡುತ್ತಾ, ‘ನಿಮ್ಮ ರಾಷ್ಟ್ರದ ಮಿಸ್ ಯೂನಿವರ್ಸ್‌ನ ನಿರ್ದೇಶಕರ ಮಾತುಗಳನ್ನು ನೀವು ಕೇಳುತ್ತೀರಿ ಎಂದರೆ ನೀವೊಬ್ಬ ಮೂರ್ಖಳು’ ಎಂದರು.
ಇದಕ್ಕೆ ಫಾತಿಮಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನವಾತ್, ‘ನಾನು ನಿಮಗೆ ಮಾತನಾಡಲು ಅವಕಾಶ ನೀಡಿಲ್ಲ. ನನ್ನ ಮಾತು ಇನ್ನೂ ಮುಗಿದಿಲ್ಲ. ಸಭ್ಯತೆಯಿಂದ ವರ್ತಿಸಿ’ ಎಂದು ಹೇಳಿ ಭದ್ರತಾ ಸಿಬ್ಬಂದಿಯನ್ನು ಕರೆದರು.
ಫಾತಿಮಾ ಅವರ ಬೆಂಬಲಕ್ಕೆ ನಿಂತ ರೂಪದರ್ಶಿಯರು ಸಭೆಯಿಂದಲೇ ಹೊರ ನಡೆದರು. ಸಭಾತ್ಯಾಗಕ್ಕೆ ಮುನ್ನುಡಿ ಬರೆದವರು ಮಿಸ್ ಇರಾಕ್.
ಸಭೆಯಿಂದ ಹೊರಬಂದ ಫಾತಿಮಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ನಿಮ್ಮ ನಿರ್ದೇಶಕರು ನನ್ನನ್ನು ಮೂರ್ಖಳು ಎಂದಿದ್ದಾರೆ. ಇದು ಗೌರವಯುತ ನಡವಳಿಕೆಯಲ್ಲ. ಜಗತ್ತು ಇದನ್ನು ನೋಡಬೇಕು. ನಾವು ಸಬಲೆಯರು. ನಮ್ಮ ಧ್ವನಿಯನ್ನು ಜಗತ್ತಿಗೆ ತಲುಪಿಸುವ ವೇದಿಕೆ ಇದು’ ಎಂದು ಆಕ್ರೋಶ ಹೊರಹಾಕಿದ್ದರು.
ಈ ಘಟನೆ ನಂತರ ಮೆಕ್ಸಿಕೊ ಅಧ್ಯಕ್ಷೆ ಕೌಡಿಯಾ ಶೀನ್‌ಬಾಮ್ ಅವರು ಫಾತಿಮಾಗೆ ಕರೆ ಮಾಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ‘ಮಹಿಳೆಯರು ಹೇಗೆ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕು ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ’ ಎಂದಿದ್ದಾರೆ.
ಘಟನೆ ನಂತರ ನವಾತ್ ಕ್ಷಮೆ ಕೋರಿದರು. ಸ್ಪರ್ಧೆ ಮುಂದುವರಿಯಿತು.
ಇದಾದ ನಂತರ ಮತ್ತೊಂದು ವಿವಾದ ಸ್ಪರ್ಧೆಯಲ್ಲಿ ಎದುರಾಯಿತು. ಅಂತಿಮ ಸುತ್ತಿಗೂ ಮುನ್ನ ನಡೆದ ಸುತ್ತಿನಲ್ಲಿ ಇಬ್ಬರು ತೀರ್ಪುಗಾರರು ಸ್ಪರ್ಧೆ ತೊರೆದರು. ಅಧಿಕೃತ ತೀರ್ಪುಗಾರರು ಇಲ್ಲದ ಕಾರಣ ರಹಸ್ಯ ಹಾಗೂ ಅಕ್ರಮ ಮತದಾನವಾಗಿದೆ ಎಂದು ಸ್ಪರ್ಧಿಯೊಬ್ಬರು ಆರೋಪಿಸಿದ್ದೂ ಒಂದು ವಿವಾದವಾಯಿತು.
ಮಾಜಿ ಫುಟ್‌ಬಾಲ್ ಆಟಗಾರ ಕ್ಲೌಡ್ ಮಕಾಲೆ ಅವರೂ ತೀರ್ಪುಗಾರರಾಗಲು ನಿರಾಕರಿಸಿದರು. ನ. 19ರಂದು ನಡೆದ ವೇಷಭೂಷಣ ಸುತ್ತಿನಲ್ಲಿ ಮಿಸ್ ಬ್ರಿಟನ್ ಡೇನಿಯಲ್ ಲ್ಯಾಟಿಮೆರ್ ಅವರು ಎಡವಿ ವೇದಿಕೆ ಮೇಲೆ ಬಿದ್ದರು. ಅವರು ಎಲಿಜಾ ಡೂಲಿಟಲ್ ಅವರಿಂದ ಪ್ರೇರೇಪಿತ ಕಾಕ್ನಿ ವಿನ್ಯಾಸದಲ್ಲಿ ಭಾಗವಹಿಸಿದ್ದರು.
ವೇದಿಕೆ ಮೇಲೆ ಗೌನ್ ತೊಟ್ಟು ಬಂದ ಮಿಸ್ ಜಮೈಕಾ ಗೇಬ್ರಿಯಲ್ ಹೆನ್ರಿ ಅವರು ಮುಖ್ಯ ವೇದಿಕೆಯಿಂದ ಕೆಳಗೆ ಬಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ವಿಶ್ರಾಂತಿಗೆ ಶಿಫಾರಸು ಮಾಡಿದರು. ಈ ವಿಷಯವನ್ನು ಮಿಸ್ ಯೂನಿವರ್ಸ್ ಸಂಸ್ಥೆಯ ಅಧ್ಯಕ್ಷೆ ರೌಲ್ ರೊಚಾ ತಮ್ಮ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.