ನವದೆಹಲಿ (ಪಿಟಿಐ): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಸಂಬಂಧಿಸಿದಂತೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದಿಸಿದೆ. ಮೂಲಗಳ ಪ್ರಕಾರ, ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಪುಟ ಅನುಮೋದಿಸಿದರೂ, ಇದರಲ್ಲಿ ಇನ್ನೂ ಅನೇಕ ಕಾನೂನಿನ ತೊಡಕುಗಳಿವೆ. ಕಾನೂನು ಸಚಿವಾಲಯ ಈ ಸಂಗತಿಗಳನ್ನು ಪರಿಶೀಲಿಸಲಿದೆ. ಆದಾಗ್ಯೂ ‘ಜಿಎಸ್‌ಟಿ’ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಇದರಿಂದ ಕೇಂದ್ರಕ್ಕೆ ರಹದಾರಿ ಲಭಿಸಿದಂತಾಗಿದೆ.
‘ಸಂವಿಧಾನ ತಿದ್ದುಪಡಿ ಮಸೂದೆಗೆ ಅನುಮೋದನೆ ಲಭಿಸಿದೆ. ನಾವು ಈ ಅಧಿವೇಶನದಲ್ಲೇ ಇದನ್ನು ಸಂಸತ್ತಿನಲ್ಲಿ ಮಂಡಿಸುತ್ತೇವೆ’ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ. ‘ಸಂವಿಧಾನ ತಿದ್ದುಪಡಿ ಮಸೂದೆಯ ಅಂತಿಮ ಕರಡನ್ನು ಹಣಕಾಸು ಸಚಿವಾಲಯ ಸಿದ್ಧಪಡಿಸುತ್ತಿದೆ. ಹೊಸ ತೆರಿಗೆಗೆ ಸಂಬಂಧಿಸಿದಂತೆ ಚರ್ಚೆಗಳು ಈಗಾಗಲೇ ಪ್ರಾರಂಭವಾಗಿದೆ’ ಎಂದು ಅವರು ಹೇಳಿದರು.
ಈ ಮೊದಲು ಕೇಂದ್ರ ಸಿದ್ಧ ಪಡಿಸಿದ್ದ ಮೂರು ಕರಡು ಮಸೂದೆಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳು ವಿರೋಧಿಸಿದ್ದವು. ‘ಜಿಎಸ್‌ಟಿ’ ಜಾರಿಯಿಂದ ರಾಜ್ಯಗಳ ತೆರಿಗೆ ವಿಚಾರದಲ್ಲಿ ಕೇಂದ್ರ ಹಣಕಾಸು ಸಚಿವರಿಗೆ ಪರಮಾಧಿಕಾರ (ವಿಟೋ) ಲಭಿಸುತ್ತದಂತಾಗುತ್ತದೆ ಎನ್ನುವುದು ಈ ವಿರೋಧಕ್ಕೆ ಮುಖ್ಯ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳ ಸೂಚನೆಯ ಮೇರೆಗೆ ‘ವಿಶೇಷ ಜಿಎಸ್‌ಟಿ’ ಸಮಿತಿ ರಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.