ನ್ಯೂಯಾರ್ಕ್ (ಪಿಟಿಐ): 2008ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ದಿವಾಳಿಯಾಗಿದ್ದ ಅಮೆರಿಕದ ಪ್ರಮುಖ ಹೂಡಿಕೆ ಬ್ಯಾಂಕ್ ಲೀಮನ್ ಬ್ರದರ್ಸ್, ಸದ್ಯ ಚೇತರಿಕೆಯ ಹಾದಿಯಲ್ಲಿದ್ದು, ಹೂಡಿಕೆದಾರರ ಹಣವನ್ನು ಮರು ಪಾವತಿಸುವುದಾಗಿ ಹೇಳಿದೆ.
`ಕಳೆದ ಮೂರೂವರೆ ವರ್ಷಗಳ ಬಳಿಕ ಬ್ಯಾಂಕ್ ದಿವಾಳಿ ಸ್ಥಿತಿಯಿಂದ ಹೊರಬಂದಿದೆ. ಹೂಡಿಕೆದಾರರಿಗೆ ಮರು ಪಾವತಿಸಬೇಕಾದ ಸುಮಾರು 450 ಶತಕೋಟಿ ಡಾಲರ್‌ಗಳಷ್ಟು ಹಣವನ್ನು ಏಪ್ರಿಲ್ 17ರಿಂದ ಹಂತ ಹಂತವಾಗಿ ಮರಳಿಸಲಿದ್ದೇವೆ~ ಎಂದು ಪ್ರವರ್ತಕ ಸಂಸ್ಥೆ ಲೀಮನ್ ಬ್ರದರ್ಸ್ ಹೋಲ್ಡಿಂಗ್ಸ್ ಬುಧವಾರ ಸ್ಪಷ್ಟಪಡಿಸಿದೆ.
`ಹಣ ಮರು ಪಾವತಿಗೆ ಸಂಬಂಧಿಸಿದಂತೆ ಅಂತಿಮ ಸುತ್ತಿನ ಪ್ರಕ್ರಿಯೆಗಳು ನಡೆಯುತ್ತಿವೆ. ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸುವುದು ಮತ್ತು ಹೂಡಿಕೆದಾರರಿಗೆ ಗರಿಷ್ಠ ಲಾಭಾಂಶ ನೀಡಲು ಬ್ಯಾಂಕ್ ಪ್ರಯತ್ನಿಸಲಿದೆ. ವೆಚ್ಚ ಮತ್ತು ಸಂಪತ್ತು ನಿರ್ವಹಣೆಯಲ್ಲಿ ಇನ್ನಷ್ಟು ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸಲಿದ್ದೇವೆ ಎಂದು ಲೀಮನ್ ಬ್ರದರ್ಸ್‌ನ ಅಧ್ಯಕ್ಷ ಜಾನ್ ಸ್ಯುಕೊ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಬಿಕ್ಕಟ್ಟು ಮತ್ತು ಅಮೆರಿಕದ ಗೃಹ ಮಾರುಕಟ್ಟೆ ಕುಸಿದ ಪರಿಣಾಮ ಲೀಮನ್ ಬ್ರದರ್ಸ್ ದಿವಾಳಿಗೆ ತುತ್ತಾಗಬೇಕಾಯಿತು. ತೀವ್ರ ಆರ್ಥಿಕ ನಷ್ಟಕ್ಕೊಳಗಾಗಿದ್ದ ಬ್ಯಾಂಕ್, 2008, ಸೆಪ್ಟೆಂಬರ್ 15ರಂದು `ದಿವಾಳಿ~ಯಾಗಿದೆ ಎಂದು ಘೋಷಿಸಲಾಗಿತ್ತು. ಪ್ರಪಂಚದ ಇತಿಹಾಸದಲ್ಲೇ ಇದು ಅತ್ಯಂತ ಸಂಕೀರ್ಣ ಮತ್ತು ದೊಡ್ಡ ಪ್ರಮಾಣದ ಬ್ಯಾಂಕ್ ದಿವಾಳಿ ಎಂದೇ ಗುರುತಿಸಲಾಗಿದೆ. ಭಾರತವೂ ಸೇರಿದಂತೆ ಜಾಗತಿಕ ಮಾರುಕಟ್ಟೆಗಳು ಇದರ ತೀವ್ರ ಪರಿಣಾಮ ಎದುರಿಸಬೇಕಾಯಿತು. ದಿವಾಳಿಯ ಹಿನ್ನೆಲೆಯಲ್ಲಿ ದಾಖಲೆ ಮಟ್ಟ 21 ಸಾವಿರ ಅಂಶಗಳಲ್ಲಿ ಇದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಕೆಲವು ವಾರಗಳ ಅಂತರದಲ್ಲಿ 8,500 ಅಂಶಗಳಷ್ಟು ಕುಸಿದು 15 ಸಾವಿರದ ಗಡಿಗೆ ಇಳಿದಿತ್ತು.
ಬಗೆಹರಿಯದ ಬಿಕ್ಕಟ್ಟು: ಜಾಗತಿಕ ಆರ್ಥಿಕ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಯೂರೋಪ್ ಒಕ್ಕೂಟದ ಸಾಲದ ಬಿಕ್ಕಟ್ಟು ಉಲ್ಬಣಗೊಂಡಿದೆ. ಈ ಪ್ರತಿಕೂಲ ಪರಿಸ್ಥಿತಿಯ ನಡುವೆಯೇ, ಆರೋಗ್ಯಕರ ಹಣಕಾಸಿನ ಸ್ಥಿತಿಗೆ ಮರಳಿರುವುದಾಗಿ 161 ವರ್ಷಗಳಷ್ಟು ಇತಿಹಾಸ ಇರುವ ಲೀಮನ್ ಬ್ರದರ್ಸ್ ಹೇಳಿದೆ. ಭಾರತವೂ ಸೇರಿದಂತೆ ಜಾಗತಿಕ ಷೇರುಪೇಟೆಗಳು ಗಣನೀಯವಾಗಿ ಚೇತರಿಸಿಕೊಂಡಿರುವುದು ಬ್ಯಾಂಕಿನ ಪುನಶ್ಚೇತನಕ್ಕೆ ಪ್ರಮುಖ ಕಾರಣ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಲೀಮನ್ ಬ್ರದರ್ಸ್ ದಿವಾಳಿಗೆ ಸಂಬಂಧಿಸಿದಂತೆ 40 ದೇಶಗಳಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ನ್ಯಾಯಾಲಗಳಲ್ಲಿದ್ದು, ಇನ್ನೂ ಇತ್ಯರ್ಥಗೊಳ್ಳಬೇಕಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.