ADVERTISEMENT

ಸೇವಾ ತೆರಿಗೆ ವ್ಯಾಪ್ತಿಗೆ ಕಲಾವಿದ!

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST
ಸೇವಾ ತೆರಿಗೆ ವ್ಯಾಪ್ತಿಗೆ ಕಲಾವಿದ!
ಸೇವಾ ತೆರಿಗೆ ವ್ಯಾಪ್ತಿಗೆ ಕಲಾವಿದ!   

ನವದೆಹಲಿ(ಪಿಟಿಐ): ಕಿರುತೆರೆ ಮತ್ತು ರಂಗಭೂಮಿ  ಕಲಾವಿದರೂ ಸೇವಾ ತೆರಿಗೆ ವ್ಯಾಪ್ತಿಗೆ ಬಂದಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಶೇ 12ರಷ್ಟು ತೆರಿಗೆ ಪಾವತಿಸಬೇಕಿದೆ.

ಕೇಂದ್ರ ಸರ್ಕಾರ `ಸೇವೆ~ ಎಂಬ ಪದವನ್ನು ಬಹಳ ವಿಸ್ತಾರ ಹಾಗೂ ವಿಭಿನ್ನವಾಗಿ ವ್ಯಾಖ್ಯಾನಿಸಿರುವುದರ ಪರಿಣಾಮವಾಗಿಯೇ ಈವರೆಗೆ `ಕಲೆಯ ಕ್ಷೇತ್ರ~ ಎಂದು ಪರಿಗಣಿಸಲಾಗಿದ್ದ ರಂಗಭೂಮಿ ಮತ್ತು ಕಿರುತೆರೆಯೂ ಈಗ `ಸೇವಾ ತೆರಿಗೆ~ ವ್ಯಾಪ್ತಿಗೆ ಸೇರುವಂತಾಗಿದೆ.

ಅಂಚೆ ಕಚೇರಿ `ಸೇವೆ~:ಕೇಂದ್ರ ಸರ್ಕಾರ ಪ್ರಕಟಿಸಿರುವ ಸೇವಾ ತೆರಿಗೆ ವ್ಯಾಪ್ತಿಯ ಹೊಸ ಸೇವೆಗಳ ಸಾಲಿನಲ್ಲಿ ಅಂಚೆ ಕಚೇರಿಯ ಸ್ಪೀಡ್ ಪೋಸ್ಟ್ ಮತ್ತು ಎಕ್ಸ್‌ಪ್ರೆಸ್ ಪಾರ್ಸಲ್ ಸರ್ವಿಸ್ ಸಹ ಇದೆ. ಇನ್ನು ಅಂಚೆ ಕಚೇರಿಯ ಈ ಎರಡೂ ಸೇವೆಗಳು ಸ್ವಲ್ಪ ದುಬಾರಿಯೂ ಆಗಬಹುದು.38 ವಿವಿಧ ಸೇವೆಗಳನ್ನು ಸೇವಾ ತೆರಿಗೆಯ ವ್ಯಾಪ್ತಿಯಿಂದ ಹೊರಗಿಟ್ಟಿರುವ ಕೇಂದ್ರ ಸರ್ಕಾರ, 119 ಬಗೆಯ ಸೇವೆಗಳನ್ನು ಈ ತೆರಿಗೆ ಕಾಯ್ದೆಯಡಿ ತಂದಿದೆ. ಇಷ್ಟೂ ಸೇವೆಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ಇನ್ನು ಶೇ 12ರಷ್ಟು ತೆರಿಗೆ ಪಾವತಿಸುವುದು ಅನಿವಾರ್ಯ.ಆನ್‌ಲೈನ್ ಮೂಲಕ ವಿಮಾನ ಪ್ರಯಾಣದ ಟಿಕೆಟ್ ವಿತರಣೆ, ಸಾಗರೋತ್ತರ ಹಾಲಿಡೆ ಪ್ರವಾಸ ಆಯೋಜಿಸುವವರೂ ಇನ್ನು ಸೇವಾ ತೆರಿಗೆ ಪಾವತಿಸಬೇಕಿದೆ.

ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ `ಜಿಎಂಎಟಿ~ ಮತ್ತು          `ಜಿಆರ್‌ಇ~  ಪರೀಕ್ಷೆಗಳೂ ಇನ್ನು ಕೊಂಚ ದುಬಾರಿಯಾಗಲಿವೆ. ಏಕೆಂದರೆ ಈ ಪರೀಕ್ಷೆ ನಡೆಸುವ ಸಂಸ್ಥೆಗಳು ಸಹ ಈಗ ಸೇವಾ ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ.ಆದರೆ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ) ಸಂಸ್ಥೆಗಳಿಗೆ ಈ ಸೇವಾ ತೆರಿಗೆಯ ಹೊರೆ ಇರುವುದಿಲ್ಲ.

ಖಾಸಗಿಯಾಗಿ ಪಾಠ ಹೇಳುವ (ಟ್ಯೂಷನ್) ಸಂಸ್ಥೆಗಳೂ ವಾರ್ಷಿಕ 10 ಲಕ್ಷ ರೂಪಾಯಿ ವಹಿವಾಟು ನಡೆಸುವಂತಹವಾಗಿದ್ದರೆ ಆ ಸಂಸ್ಥೆಗಳೂ ಶೇ 12ರಷ್ಟು ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ.

ವಕೀಲರೊಬ್ಬರು ಸಹೋದ್ಯೋಗಿ ಮಿತ್ರರಿಗೆ ಕಾನೂನು ನೆರವು ಒದಗಿಸಿದರೆ ಅದನ್ನು ಸೇವಾ ತೆರಿಗೆ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 10 ಲಕ್ಷದವರೆಗೆ ವಹಿವಾಟು ನಡೆಸುವ ವಾಣಿಜ್ಯ ಸಂಸ್ಥೆಗಳೂ ಈಗ ಸೇವಾ ತೆರಿಗೆ ಮಿತಿಯಿಂದ ಹೊರಗುಳಿದಿವೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.

 `ಕರಾಳ ಕಾನೂನು~

`ಸರ್ಕಾರ ನಟ-ನಟಿಯರ ಗ್ಲ್ಯಾಮರ್ ನೋಡಿ ಅವರೆಲ್ಲ ಶ್ರೀಮಂತ ವರ್ಗ ಎಂದು ಭಾವಿಸಿದಂತಿದೆ. ಆದರೆ ಬಣ್ಣದ ಬದುಕಿನ ತೆರೆಯ ಹಿಂದೆ ಬದುಕಿಗಾಗಿ ಒದ್ದಾಡುತ್ತಿರುವ ಲಕ್ಷಾಂತರ ಕಲಾವಿದರಿದ್ದಾರೆ.

ಅವರ‌್ಯಾರೂ ಈ ತೆರಿಗೆ ಹೇರುವವರ ಕಣ್ಣಿಗೆ ಕಾಣುತ್ತಿಲ್ಲ. ರೈತ ಹೇಗೆ ಬಹಳ ಸಂಕಷ್ಟದಲ್ಲಿದ್ದಾನೆಯೋ ಕಲಾವಿದರೂ ಅದೇ ಪರಿಸ್ಥಿತಿಯಲ್ಲಿದ್ದಾರೆ. ನಾಡಿನ ಶೇ 80ರಷ್ಟು ಸಹ ಕಲಾವಿದರು ಬಡತನದಲ್ಲಿಯೇ ದಿನದೂಡುತ್ತಿದ್ದಾರೆ. ಇಂಥ ಕಲಾವಿದರ ಪಾಲಿಗೆ ಇದೊಂದು ಕರಾಳ ಕಾನೂನು.
 
ಈಗಾಗಲೇ ನಮ್ಮ ಭಾಷೆ, ಬದುಕಿಗೆ ಬೆಲೆ ಇಲ್ಲಂದಂತಾಗಿದೆ. ಮುಂದೆ ಇನ್ನೇನು ಪರಿಣಾಮ ಬೀರಲಿದೆಯೋ ಊಹಿಸಲೂ ಸಾಧ್ಯವಿಲ್ಲ~.
- ಅಶೋಕ್, ಹಿರಿಯ ಕಲಾವಿದ-ಸಿನಿ ಕಾರ್ಮಿಕರ ಸಂಘದ ಅಧ್ಯಕ್ಷ

ADVERTISEMENT

ಸರ್ಕಾರದ ಲೆಕ್ಕದಲ್ಲಿ ಕಲೆಯೂ `ಸರ್ವಿಸ್~!
`ಕಲಾ ಸೇವೆ ಎನ್ನುವುದನ್ನೂ ಸರ್ಕಾರ ಸರ್ವಿಸ್ ಎಂದು ಪರಿಗಣಿಸಿದಂತಿದೆ. ಇದು ನೋವಿನ ಸಂಗತಿ. ಉದ್ಯಮವೇ ಆಗಿರುವ ಚಿತ್ರರಂಗದಲ್ಲಿ ರೂ. 3-4 ಕೋಟಿ ಸಂಭಾವನೆ ಪಡೆಯುವ ನಟ-ನಟಿಯರಿಗೆ ಇಂಥ ತೆರಿಗೆ ವಿಧಿಸುವುದೇನೋ ಸರಿ. ಆದರೆ ಅಸ್ಥಿತ್ವಕ್ಕಾಗಿಯೇ ಹೆಣಗಾಡುತ್ತಿರುವ ರಂಗಭೂಮಿ ಕಲಾವಿದರಿಗೆ ಇದು ಮಾರಕವಾಗಲಿದೆ.

ಸಂಸ್ಕೃತಿವಾಹಕರಲ್ಲದೇ ಇರುವವರು ಅಧಿಕಾರದಲ್ಲಿದ್ದರೆ ಎಂಥ ಅನಾಹುತಗಳು ಆಗುತ್ತವೆ ಎನ್ನುವುದಕ್ಕೆ ಈ ಕಾನೂನೇ ಒಂದು ಉದಾಹರಣೆ. ವಸ್ತುಗಳ ಬೆಲೆ ಏರಿಕೆಯನ್ನೇನೋ ಸಹಿಸಿಕೊಳ್ಳಬಹುದು. ಆದರೆ ಭಾವನೆಗಳ ಮೇಲೆಯೇ ನಿರ್ಮಾಣವಾಗುವ ಕಲೆಯ ಮೇಲೆಯೂ ಸವಾರಿ ಮಾಡುವುದು ಸರಿ ಅಲ್ಲ. ಮುಂದಿನ ದಿನಗಳಲ್ಲಿ ರಂಗಭೂಮಿ ಕಲಾವಿದರ ಪಾಡು ಮತ್ತಷ್ಟು ಭೀಕರವಾಗಲಿದೆ.
- ಮಂಡ್ಯ ರಮೇಶ್,  ರಂಗಭೂಮಿ-ಕಿರುತೆರೆ-ಸಿನಿಮಾ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.