ನವದೆಹಲಿ: ದೇಶದ ಹೆಚ್ಚಿನ ಜಿಲ್ಲೆಗಳಿಗೆ 5ಜಿ ಸಂಪರ್ಕವನ್ನು ವಿಸ್ತರಿಸುವ ಮೂಲಕ ಟೆಲಿಕಾಂ ಸೌಲಭ್ಯ ಮತ್ತು ಬಳಕೆದಾರರ ಅನುಭವವನ್ನು ಉತ್ತಮಪಡಿಸುವಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎಂದು 2024–25ನೇ ಸಾಲಿನ ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ.
ಭಾರತ್ ನೆಟ್ ಪ್ರಾಜೆಕ್ಟ್ ಮೂಲಕ ದೇಶದಲ್ಲಿ ಟೆಲಿಕಾಂ ಸೌಲಭ್ಯ ಗಣನೀಯವಾಗಿ ಸುಧಾರಿಸಿದೆ. ಈ ಯೋಜನೆ ಮೂಲಕ ಹಳ್ಳಿಗಳಿಗೆ ಮತ್ತು ಮೊಬೈಲ್ ನೆಟ್‌ವರ್ಕ್ ದೊರಕದ ಗಡಿ ಪ್ರದೇಶ, ದ್ವೀಪಗಳಲ್ಲಿ ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ನೀಡಲಾಗಿದೆ ಎಂದು ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಕಳೆದ ಆರ್ಥಿಕ ವರ್ಷದಲ್ಲಿ ಡಿಜಿಟಲ್ ಸಂಪರ್ಕ ವ್ಯವಸ್ಥೆಯು ತಂತ್ರಜ್ಞಾನಗಳ ನಾವಿನ್ಯತೆ ಮತ್ತು ನಿಯಂತ್ರಕಗಳ ಸುಧಾರಣೆಗಳಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತಂದಿದೆ ಎನ್ನಲಾಗಿದೆ.
ಸದ್ಯ ದೇಶದ 783 ಜಿಲ್ಲೆಗಳ ಪೈಕಿ 779ರಲ್ಲಿ 5ಜಿ ಸಂಪರ್ಕ ಸಿಗುತ್ತಿದೆ. ಭಾರತ್ ನೆಟ್ ಪ್ರಾಜೆಕ್ಟ್‌ನಡಿ 2024ರ ಡಿಸೆಂಬರ್ ಪ್ರಕಾರ 6.92 ಲಕ್ಷ ಕಿಲೋ ಮೀಟರ್‌ನಷ್ಟು ದೂರ ಆಪ್ಟಿಕಲ್ ಫೈಬರ್ ಕೇಬಲ್ ಅನ್ನು ಎಳೆಯಲಾಗಿದೆ ಎಂದು ವರದಿ ತಿಳಿಸಿದೆ.
ಇಷ್ಟೇ ಅಲ್ಲದೆ 2.14 ಲಕ್ಷ ಗ್ರಾಮ ಪಂಚಾಯತಿಗಳಲ್ಲಿ ಸ್ಯಾಟಲೈಟ್ ಮತ್ತು ಎಫ್‌ಟಿಟಿಎಚ್ ಮೂಲಕ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.