ADVERTISEMENT

Union Budget 2025 | ದೂರದೃಷ್ಟಿ, ಅಭಿವೃದ್ಧಿ ಆಧಾರಿತ ಬಜೆಟ್: ಬಿಜೆಪಿ

ಪಿಟಿಐ
Published 1 ಫೆಬ್ರುವರಿ 2025, 11:12 IST
Last Updated 1 ಫೆಬ್ರುವರಿ 2025, 11:12 IST
   

ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ ಕೇಂದ್ರ ಬಜೆಟ್ –2025 ಅನ್ನು ಕರ್ನಾಟಕ ಬಿಜೆಪಿ ಶ್ಲಾಘಿಸಿದೆ. ಇದು ದೂರದೃಷ್ಟಿ ಮತ್ತು ಅಭಿವೃದ್ಧಿ ಆಧಾರಿತವಾಗಿದೆ ಎಂದು ಬಣ್ಣಿಸಿದೆ.

ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸುವ ದೂರದೃಷ್ಟಿಯ ಬಜೆಟ್ ಅನ್ನು ಮಂಡಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಉದ್ಯಮಸ್ನೇಹಿ ಬಜೆಟ್

'ಪ್ರಮುಖವಾಗಿ ನಮ್ಮ ರೈತರು, ಮಧ್ಯಮ ವರ್ಗ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳ ಸಬಲೀಕರಣದ ಸಾಕಾರದ ಗುರಿ ಸಾಧಿಸಲು ಈ ಬಜೆಟ್ ಉಪಯುಕ್ತವಾಗಲಿದೆ. ಪ್ರಗತಿನಿಷ್ಠ ಮಾರ್ಗಸೂಚಿ, ರಫ್ತಿಗೆ ಆದ್ಯತೆ, ಹೂಡಿಕೆ ಸ್ನೇಹಿ ಮತ್ತು ಸುಧಾರಣಾ ಕ್ರಮಗಳು, ಪರಿವರ್ತನೆಯ ನೀತಿಗಳ ಮೂಲಕ ಸಶಕ್ತ, ಸಮಗ್ರ ಅಭಿವೃದ್ಧಿಯನ್ನು ಬಜೆಟ್ 2025-26 ಖಾತರಿಪಡಿಸುತ್ತಿದೆ. ಇದು ಉದ್ಯಮಸ್ನೇಹಿ ಬಜೆಟ್ ಆಗಿದ್ದು, ಉದ್ಯೋಗ ಸೃಷ್ಟಿಗೆ ಹೆಚ್ಚಿನ ಪ್ರಾಮುಖ್ಯತೆ ಒದಗಿಸಿದೆ' ಎಂದಿದ್ದಾರೆ.

ADVERTISEMENT

'ವಿಶೇಷವಾಗಿ, ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು ₹3 ಲಕ್ಷದಿಂದ ₹5ಲಕ್ಷಕ್ಕೆ ಹೆಚ್ಚಿಸಿರುವುದನ್ನು ಸ್ವಾಗತಿಸುತ್ತೇನೆ. ಜೊತೆಗೆ ಯುವಶಕ್ತಿ ಹಾಗೂ ಮಹಿಳಾ ಸಬಲೀಕರಣ, ಕೇಂದ್ರ-ರಾಜ್ಯ ಸಹಯೋಗಗಳಿಗೆ ಮತ್ತಷ್ಟು ಪ್ರಾಮುಖ್ಯತೆ ನೀಡಲಾಗಿದ್ದು, ನಗರಾಭಿವೃದ್ಧಿ ಮತ್ತು ಮೂಲಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 2025ರಲ್ಲಿ ಕ್ಷಯರೋಗ ನಿರ್ಮೂಲನೆಯ ಗುರಿ ಸೇರಿದಂತೆ ಆರೋಗ್ಯಸೇವಾ ವಲಯಕ್ಕೆ ಕಾಯಕಲ್ಪ ಒದಗಿಸಲಾಗಿದೆ. ಹೊಸ ಪದ್ಧತಿಯಡಿಯಲ್ಲಿ ಬಂಡವಾಳ ಲಾಭದಂತಹ ವಿಶೇಷ ಆದಾಯ ಹೊರತುಪಡಿಸಿ, ₹12 ಲಕ್ಷ ಆದಾಯದವರೆಗೆ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯ ಕ್ರಮ ಮಧ್ಯಮ ವರ್ಗಗಳಿಗೆ ಹೆಚ್ಚಿನ ಆರ್ಥಿಕ ಬಲವನ್ನು ನೀಡಲಿದೆ. ಒಟ್ಟಿನಲ್ಲಿ ಈ ಸಾಲಿನ ಬಜೆಟ್ ಸ್ವಾವಲಂಬನೆ, ಪ್ರಗತಿ ಮತ್ತು ಜಾಗತಿಕ ಆರ್ಥಿಕತೆಯ ಮುಂಚೂಣಿಯಲ್ಲಿ ಮುನ್ನಡೆಯಲು ಭಾರತವನ್ನು ಸಶಕ್ತಗೊಳಿಸಿದೆ' ಎಂದು ಅವರು ಹೇಳಿದ್ದಾರೆ.

ಆತ್ಮವಿಶ್ವಾಸ ತುಂಬುವ ಭರವಸೆ–ವಿಜಯೇಂದ್ರ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಈವರೆಗೂ ನಡೆದು ಬಂದ ಹಾದಿ ಬಡತನ ನಿರ್ಮೂಲನೆಗಾಗಿ ಸುಧಾರಣೆ ಹಾಗೂ ಅಭಿವೃದ್ದಿಯ ಆರ್ಥಿಕ ಹೆಜ್ಜೆ ಗುರುತುಗಳು. ಮುಂದಿನ ಹೆಗ್ಗುರಿ ಸದೃಢ ಭಾರತ ಕಟ್ಟುವ ಮಹಾಸಂಕಲ್ಪ, 2047ರ ವೇಳೆಗೆ ವಿಶ್ವದಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಭಾರತ ನಿರ್ಮಾಣದ ಯೋಜನೆ ರೂಪಿಸಲು ಇಂದು ಸಂಸತ್ತಿನಲ್ಲಿ ಮಂಡನೆಯಾಗಿರುವ ಬಜೆಟ್ ಆತ್ಮವಿಶ್ವಾಸ ತುಂಬುವ ಭರವಸೆಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ .

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ದೇಶದ ಕೃಷಿ, ಸಾರಿಗೆ, ಕೈಗಾರಿಕೆ, ಉದ್ಯೋಗ, ಪ್ರವಾಸೋದ್ಯಮ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವ ನೀಡುವ ಮೂಲಕ ವಿಕಸಿತ ಭಾರತದ ಕನಸನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯ ಬಜೆಟ್ ಮಂಡಿಸುವುದರೊಂದಿಗೆ ಸತತ 8 ಬಾರಿ ಬಜೆಟ್ ಮಂಡಿಸಿದ ಆರ್ಥಿಕ ತಜ್ಞತೆಯ ದಿಟ್ಟ ಮಹಿಳೆಯಾಗಿ ರಾಷ್ಟ್ರ ರಾಜಕಾರಣದಲ್ಲಿ ದಾಖಲೆ ಬರೆದಿರುವ ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರಿಗೆ ಅಭಿನಂದನೆಗಳು' ಎಂದಿದ್ದಾರೆ.

ಪ್ರಧಾನಿ ಮೋದಿ ಅವರ ಸರ್ಕಾರವು ದೇಶದ ಆರ್ಥಿಕತೆ ಸುಭದ್ರವಾಗಿಸಿ, ವಿಕಸಿತ ಭಾರತದ ನಿರ್ಮಾಣದ ಸಂಕಲ್ಪ ಈಡೇರಿಸುವ ಅತ್ಯುತ್ತಮ ಬಜೆಟ್ ಮಂಡಿಸಿದೆ. ಜನಸಾಮಾನ್ಯರಿಗೆ ಭರವಸೆ ಮೂಡಿಸುವ ಮೂಲಕ ಮಹತ್ವದ ಹೆಜ್ಜೆಯಿಟ್ಟಿದೆ.
ಬಿ.ವೈ.ವಿಜಯೇಂದ್ರ , ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪ್ರಧಾನಿ ಮೋದಿ ಅವರ ಜನಪರ ಸರ್ಕಾರಕ್ಕೂ ಜನ ವಿರೋಧಿ ಲೂಟಿಕೋರ ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೂ ಇರುವ ವ್ಯತ್ಯಾಸ ಇಷ್ಟೇ. ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಮೂಲಕ ಕನ್ನಡಿಗರ ಆದಾಯಕ್ಕೆ ಕತ್ತರಿ ಹಾಕಿ ಲೂಟಿ ಹೊಡೆಯುತ್ತಿದೆ. ಆದರೆ ಕೇಂದ್ರ ಸರ್ಕಾರ ಬಡವರ ಆದಾಯ ಉಳಿತಾಯಕ್ಕೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ ತೆರಿಗೆಯಲ್ಲಿ ಭಾರೀ ವಿನಾಯಿತಿ ನೀಡಿದೆ.
ರಾಜ್ಯ ಬಿಜೆಪಿ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.