ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ನಿರೀಕ್ಷೆ ಇರಿಸಲಾಗಿದೆ. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಕೈಗೆಟುಕುವಂತಿರಬೇಕು. ಇಂದಿನ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೋ, ಸರ್ಕಾರದ ವತಿಯಿಂದ ಆರೋಗ್ಯ ಸೇವೆಗೆ ಸಿಗುವ ಸವಲತ್ತುಗಳ ಅಗತ್ಯವೂ ಅಷ್ಟೇ ಇದೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವ ಸ್ಪಷ್ಟವಾದ ಅಸಮಾನತೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಬಾರಿ ಕ್ರಮ ಕೈಗೊಳ್ಳುವ ಆಶಾಭಾವನೆ ಇದೆ. ಮೊದಲನೆಯದಾಗಿ, ಸಾರ್ವತ್ರಿಕ ಆರೋಗ್ಯ ರಕ್ಷಣೆ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಇರುವ ಏಕೈಕ ಮಾರ್ಗವೆಂದರೆ, “ಆರೋಗ್ಯ ಸೇವಾ ಸೆಸ್” ಅಥವಾ ಆರೋಗ್ಯ ದತ್ತಿ ನಿಧಿ ನಿರ್ಮಿಸುವುದು.
ಇಂದು ಸಾಕಷ್ಟು ಕ್ಷೇತ್ರಗಳಲ್ಲಿ ಸೆಸ್ ವಿಧಿಸುವುದು ಅಥವಾ ದತ್ತಿ ನಿಧಿ ರಚಿಸಿರುವುದನ್ನು ನೋಡಿದ್ದೇವೆ. ಕಟ್ಟಡ ನಿರ್ಮಾಣ ಸೇರಿದಂತೆ ಹಲವಾರು ವಿಚಾರಗಳ ಮೇಲೆ ಸೆಸ್ ವಿಧಿಸಿ, ನಂತರ ಅದನ್ನು ಅದೇ ಕ್ಷೇತ್ರದ ಜನರಿಗೆ ಬಳಕೆ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಆರೋಗ್ಯ ಸೇವಾ ಸೆಸ್ ವಿಧಿಸುವುದನ್ನು ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿ ಕಡ್ಡಾಯ ಮಾಡಬೇಕು. ಆರೋಗ್ಯ ಕ್ಷೇತ್ರಕ್ಕೆ ಸೆಸ್ ವಿಧಿಸುವುದಕ್ಕೆ ಬಹುಶಃ ಪ್ರತಿಯೊಂದು ಕ್ಷೇತ್ರದಿಂದಲೂ ಒಮ್ಮತವಿರಲಿದೆ.
ಹೀಗೆ ಸಂಗ್ರವಾಗುವ ಸೆಸ್ ಹಣವನ್ನು ಸಂಪೂರ್ಣವಾಗಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಬಳಕೆ ಮಾಡಿಕೊಳ್ಳಲು ಅನುಕೂಲವಾಗಲಿದೆ. ಅಷ್ಟೇ ಅಲ್ಲದೆ, ಈ ಸೆಸ್ ಅಡಿಯಲ್ಲಿ ಸಂಗ್ರಹವಾಗುವ ಅಥವಾ ಮೀಸಲಿಡುವ ಅನುದಾನದ ಆಧಾರದಲ್ಲಿ ಬಡವರಿಗಾಗಿ ಒಂದಷ್ಟು ಆರೋಗ್ಯ ಸೇವಾ ಯೋಜನೆಗಳನ್ನು ಕೇಂದ್ರ ಸರ್ಕಾರದ ಘೋಷಿಸಬಹುದು.
ಇನ್ನು, ಗ್ರಾಮೀಣ ಭಾಗದ ಜನರ ಆರೋಗ್ಯದತ್ತ ಕೇಂದ್ರ ಸರ್ಕಾರ ಗಮನ ಹರಿಸಬೇಕು. ಗ್ರಾಮೀಣ ಭಾಗದ ಜನರ ಆರೋಗ್ಯದ ಮೇಲೆ ಒಂದು ಕೈ ಹೆಚ್ಚೇ ಆಸಕ್ತಿ ತೋರುವ ಅಗತ್ಯತೆ ಕಂಡು ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವೆ ನಗರ ಪ್ರದೇಶದಲ್ಲಿ ಸುಲಲಿತವಾಗಿ ಸಿಗುತ್ತಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಸೂಕ್ತ ಸೌಲಭ್ಯಗಳು ಸುಲಭವಾಗಿ ದೊರೆಯುತ್ತಿಲ್ಲ. ಅದರಲ್ಲೂ ಸಣ್ಣ-ಪುಟ್ಟ ಹಳ್ಳಿ, ಗ್ರಾಮಗಳಲ್ಲಿ ತುರ್ತು ಆರೋಗ್ಯ ಸೇವೆಗೆ ಈಗಲೂ ಕಿಲೋಮೀಟರ್ ಗಟ್ಟಲೆ ದೂರ ಹೋಗಬೇಕಾದ ಅನಿವಾರ್ಯತೆಯಿದೆ. ಕೆಲವೊಮ್ಮೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೇ ಸಾವು ಸಂಭವಿಸಿದ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಈ ಎಲ್ಲದಕ್ಕೂ ಕಾರಣ ತುರ್ತು ಚಿಕಿತ್ಸೆ ಸಿಗದೇ ಇರುವುದು.
ಮತ್ತೊಂದು ರೀತಿಯಲ್ಲಿ, ಗ್ರಾಮೀಣ ಭಾಗದ ಜನಸಾಮಾನ್ಯರು ಆರೋಗ್ಯ ಬಗ್ಗೆ ಹೆಚ್ಚಾಗಿ ಜಾಗೃತಿ ಇರದ ಕಾರಣ, ಕೆಲವು ಪ್ರಮುಖ ಆರೋಗ್ಯ ಸಮಸ್ಯೆಯ ಗಂಭೀರತೆಯನ್ನು ನಿರ್ಲಕ್ಷಿಸುತ್ತಾರೆ. ಪರಿಣಾಮವಾಗಿ ಚಿಕಿತ್ಸೆ ನೀಡಿದರೂ ಗುಣಮುಖವಾಗದ ಹಂತಕ್ಕೆ ಆ ಕಾಯಿಲೆ ತಲುಪುತ್ತದೆ. ಹೀಗಾಗಿ ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಸೇವೆ ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಒಂದಷ್ಟು ಕಾರ್ಯಕ್ರಮ ಬರಬೇಕು, ಜೊತೆಗೆ ಗ್ರಾಮೀಣ ಭಾಗದಲ್ಲಿ ತುರ್ತು ಚಿಕಿತ್ಸೆಯ ಸೌಲಭ್ಯ ಸಿಗುವಂತಾಗಬೇಕು.
ದಕ್ಷ ಖಾಸಗಿ ಆಸ್ಪತ್ರೆಗಳ ವತಿಯಿಂದ “ಸ್ಮಾರ್ಟ್” ಪ್ರೋತ್ಸಾಹದ ಅಗತ್ಯವಿದೆ. ಇದರಿಂದ ನಗರ ಮತ್ತು ಗ್ರಾಮೀಣ ಎಂಬ ವಿಭಜನೆ ನಿವಾರಣೆಯಾಗಿ, ಎಲ್ಲರಿಗೂ ಕೈಗೆಟುಕುವ ಆರೋಗ್ಯ ಸೇವೆಯನ್ನು ಒದಗಿಸಬೇಕಿದೆ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲೂ ಸಹ ಗ್ರಾಮೀಣ ಭಾಗದ ಮಕ್ಕಳು ತಮ್ಮ ಪದವಿಯ ನಂತರ ಉದ್ಯೋಗ ಮತ್ತು ಉದ್ಯಮಶೀಲತೆಯ ಸಾಮರ್ಥ್ಯವನ್ನು ಸುಧಾರಿಸಲು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುವಂತೆ ಕೇಂದ್ರ ಸರ್ಕಾರವು ಹೊಸ ಯೋಜನೆ ಪರಿಚಯಿಸುವ ತುರ್ತು ಅವಶ್ಯಕತೆ ಇದೆ.
ಎಲ್ಲ ದೇಶಗಳೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುತ್ತವೆ. ತಮ್ಮ ಬಜೆಟ್‌ನಲ್ಲಿ ಬಹುಪಾಲು ಈ ಕ್ಷೇತ್ರಗಳಿಗೇ ಮೀಸಲಿಡುತ್ತವೆ. ಕೇಂದ್ರ ಸರ್ಕಾರವೂ ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರಕ್ಕೆ ವಿಶೇಷವಾದ ಬಜೆಟ್ ಮಂಡನೆ ಮಾಡುವಂತಾಗಲಿ. ಆರೋಗ್ಯ ಪ್ರತಿಯೊಬ್ಬರ ಮೂಲಭೂತ ಹಕ್ಕು. ಈ ಹಕ್ಕಿಗೂ ಹೋರಾಡುವುದು ಸೂಕ್ತವಲ್ಲ. ಹೀಗಾಗಿ ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಒಂದಷ್ಟು ಹೆಚ್ಚಿನ ಪಾಲು ಸಿಗಬೇಕು.
ಲೇಖಕರು ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.