ADVERTISEMENT

Union Budget 2026 | ಬಂಡವಾಳ ವೆಚ್ಚ: ದಾಖಲೆಯ ₹12.22 ಲಕ್ಷ ಕೋಟಿ ನಿಗದಿ

ಪಿಟಿಐ
Published 1 ಫೆಬ್ರುವರಿ 2026, 15:49 IST
Last Updated 1 ಫೆಬ್ರುವರಿ 2026, 15:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ದೇಶದ ಬಂಡವಾಳ ವೆಚ್ಚವು 2026–27ರ ಸಾಲಿನಲ್ಲಿ ದಾಖಲೆಯ ಗರಿಷ್ಠ ಮಟ್ಟ ತಲುಪಲಿದೆ. ದೇಶದ ಜಿಡಿಪಿಯ ಗಾತ್ರದ ಶೇ 4.4 ರಷ್ಟನ್ನು, ಅಂದರೆ ₹12.22 ಲಕ್ಷ ಕೋಟಿಯನ್ನು ಬಂಡವಾಳ ವೆಚ್ಚಗಳಿಗಾಗಿ ಮೀಸಲು ಇಡಲಾಗಿದೆ. ಈ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. 

ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿರುವ ಬಂಡವಾಳ ವೆಚ್ಚವು 2025–26ರ ಹಣಕಾಸು ವರ್ಷದಲ್ಲಿ ಘೋಷಿಸಿರುವ ಮೊತ್ತಕ್ಕಿಂತ ಶೇ 10ರಷ್ಟು ಹೆಚ್ಚಾಗಿದೆ. ಕಳೆದ ಬಜೆಟ್‌ನಲ್ಲಿ ₹11.11 ಲಕ್ಷ ಕೋಟಿ ಬಂಡವಾಳ ವೆಚ್ಚವನ್ನು ಘೋಷಿಸಲಾಗಿತ್ತು.

ADVERTISEMENT

‘ಈ ಬಾರಿಯ ಬಂಡವಾಳ ವೆಚ್ಚವು ಜಿಡಿಪಿಯ ಶೇ 4.4 ರಷ್ಟಿದೆ. ಅಂದರೆ, ಇದು ಕಳೆದ 10 ವರ್ಷಗಳಲ್ಲೇ ಅತ್ಯಧಿಕ. 10 ವರ್ಷಗಳಿಗಿಂತ ಹಿಂದಿನ ಅವಧಿಯ ಅಂಕಿ–ಅಂಶವನ್ನು ನೀವು ತೆಗೆದುಕೊಂಡು ನೋಡಿದರೂ ಈ ಬಾರಿಯದ್ದು ಅತ್ಯಧಿಕವಾಗಿರಬಹುದು’ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

2021-22ರಲ್ಲಿ ಬಂಡವಾಳ ವೆಚ್ಚವು ಜಿಡಿಪಿಯ ಶೇ 2.5 ರಷ್ಟು ಮತ್ತು 2024-25ರಲ್ಲಿ ಜಿಡಿಪಿಯ ಶೇಕಡಾ 4ರಷ್ಟಿತ್ತು. 2015-16ರಲ್ಲಿ ಸರ್ಕಾರದ ಬಂಡವಾಳ ವೆಚ್ಚವು ₹2.35 ಲಕ್ಷ ಕೋಟಿಗಳಷ್ಟಿತ್ತು.

ಸಾರಿಗೆ ಮತ್ತು ಸಂಪರ್ಕ ವಲಯಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ವೆಚ್ಚ ನಿಗದಿ ಮಾಡಲಾಗಿದೆ. ರಸ್ತೆ, ಹೆದ್ದಾರಿಗಳು ಮತ್ತು ದೂರಸಂಪರ್ಕ ವಲಯಗಳಿಗೆ ಆದ್ಯತೆ ಲಭಿಸಿದೆ. ರೈಲ್ವೆ ವಲಯಕ್ಕೂ ಹೆಚ್ಚಿನ ಬಂಡವಾಳ ನಿಗದಿ ಮಾಡಲಾಗಿದೆ.

ಬಂಡವಾಳ ವೆಚ್ಚಕ್ಕಾಗಿ ದಾಖಲೆಯ ಮೊತ್ತವನ್ನು ನಿಗದಿಪಡಿಸುವ ಮೂಲಕ, ಪ್ರಮುಖ ನಗರಗಳನ್ನು ಮೀರಿ ಅಭಿವೃದ್ಧಿಯನ್ನು ವಿಸ್ತರಿಸುವ ಪ್ರಧಾನ ಮಂತ್ರಿಯವರ ‘ಭವಿಷ್ಯಕ್ಕೆ ಸಿದ್ಧವಾದ ಭಾರತ’ದ ನಿರ್ಮಾಣಕ್ಕೆ ಈ ಬಜೆಟ್‌ ಒತ್ತು ನೀಡಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.