
ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಕ್ಯಾನ್ಸರ್ ಔಷಧಿಗಳು ಮತ್ತು ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಿಗಳ ಮೇಲೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ಕಸ್ಟಮ್ಸ್ ಸುಂಕ ವಿನಾಯಿತಿ ಘೋಷಿಸಿದ್ದಾರೆ. ಸರಳವಾಗಿ ಹೇಳುವುದಾದರೆ, ಇದರಿಂದ ಅನೇಕ ಜೀವ ಉಳಿಸುವ ಔಷಧಿಗಳು ಅಗ್ಗವಾಗಲಿವೆ.
ಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ಸ್ ರದ್ದು
ಕ್ಯಾನ್ಸರ್ ರೋಗಿಗಳು ಕೇವಲ ಕೀಮೋಥೆರಪಿಯಿಂದ ಮಾತ್ರ ಗುಣಮುಖರಾಗುವುದಿಲ್ಲ. ಅದರ ಬಳಿಕ ಕೆಲವು ನಿರ್ದಿಷ್ಟ ಚಿಕಿತ್ಸೆ, ದೀರ್ಘಕಾಲೀನ ಆರೈಕೆಗಾಗಿ ವಿಶೇಷ ಔಷಧಿಗಳು, ಪೌಷ್ಟಿಕಾಂಶ ಪೂರಕಗಳು ಬೇಕು. ಇವುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆ ಸಾಲಿನ 17 ಔಷಧಿಗಳ ಮೇಲಿನ ಕಸ್ಟಮ್ ಸುಂಕವನ್ನು ನಿರ್ಮಲಾ ಸೀತಾರಾಮನ್ ತೆಗೆದು ಹಾಕಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಯು ದುಬಾರಿಯಾಗಿದ್ದು, ಅದರ ಜೊತೆಗೆ ಔಷಧಿ ಮೇಲಿನ ಕಸ್ಟಮ್ ಸುಂಕ ರೋಗಿಗಳಿಗೆ ಹೊರೆಯಾಗಿತ್ತು. ಈ ವಿನಾಯಿತಿ ಮೂಲಕ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಅನುಕೂಲವಾಗಲಿದೆ.
ಸುಂಕ ರಹಿತ ಔಷಧಿಗಳ ಪಟ್ಟಿಗೆ ಇನ್ನೂ ಏಳು ಅಪರೂಪದ ಕಾಯಿಲೆಗಳಿಗೆ ಬಳಸುವ ಔಷಧಿಗಳನ್ನು ಸೇರಿಸಲಾಗಿದೆ. ವಿದೇಶಗಳಿಂದ ಾಮದು ಮಾಡಿಕೊಳ್ಳುವ ವಿಶೇಷ ಥೆರಪಿಗಳು, ಔಷಧಿಗಳಿಗೆ ಈ ವಿನಾಯಿತಿಯಿಂದ ಅನುಕೂಲವಾಗಲಿದೆ.
ದೈನಂದಿನ ಅಗತ್ಯ ವಸ್ತುಗಳು, ಆರೋಗ್ಯ ರಕ್ಷಣೆ, ವೈಯಕ್ತಿಕ ಬಳಕೆಯ ಆಮದು ವಸ್ತುಗಳು ಅಗ್ಗವಾದರೆ, ಜೀವನವು ಸುಲಭವಾಗುತ್ತದೆ ಎಂಬ ತರ್ಕವನ್ನು ನಿರ್ಮಲಾ ಬಜೆಟ್ ಮಂಡನೆ ವೇಳೆ ಪ್ರಸ್ತಾಪಿಸಿದ್ದಾರೆ. ಇದಕ್ಕಾಗಿ, ವೈಯಕ್ತಿಕ ಬಳಕೆಯ ಆಮದು ಸರಕುಗಳಿಗೆ ಕಸ್ಟಮ್ಸ್ ಸುಂಕ ರಚನೆಯನ್ನು ತರ್ಕಬದ್ಧಗೊಳಿಸಲು ಸರ್ಕಾರ ನಿರ್ಧರಿಸಿದೆ. ಗೊಂದಲರಹಿತ ಸ್ಲ್ಯಾಬ್‌ಗಳು ಮತ್ತು ಒಟ್ಟಾರೆಯಾಗಿ ದರ ತಗ್ಗಿಸುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.