
ನವದೆಹಲಿ: ಗಡಿಯಲ್ಲಿ ದಾಳಿ, ನೆರೆ ರಾಷ್ಟ್ರಗಳ ಜೊತೆಗಿನ ಬಿಗುವಿನ ಸಂಬಂಧದ ಮಧ್ಯೆಯೂ, ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಗಣನೀಯ ಆದ್ಯತೆ ದೊರೆತಿಲ್ಲ.
2026–27ನೇ ಸಾಲಿನ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ₹ 7,84,678 ಕೋಟಿ ಕಾಯ್ದಿರಿಸಲಾಗಿದೆ. ಇದು ಕಳೆದ ವರ್ಷದ ಬಜೆಟ್‌ನಲ್ಲಿ ನಿಗದಿಯಾಗಿದ್ದಕ್ಕಿಂತ ₹ 1,03,468 ಕೋಟಿ ಅಧಿಕವಾಗಿದೆ.
ಕೇಂದ್ರ ಸರ್ಕಾರ 2026–27ನೇ ಆರ್ಥಿಕ ವರ್ಷದಲ್ಲಿ ಬೊಕ್ಕಸಕ್ಕೆ ಬರುವ ಪ್ರತಿ ರೂಪಾಯಿಯಲ್ಲಿ 11 ಪೈಸೆಯನ್ನು ರಕ್ಷಣಾ ಕ್ಷೇತ್ರಕ್ಕೆ ವಿನಿಯೋಗಿಸಲಿದೆ. 2025–26ನೇ ಸಾಲಿನಲ್ಲಿ ಈ ಕ್ಷೇತ್ರಕ್ಕೆ ಒಟ್ಟು ₹ 6,81,210 ಕೋಟಿ ಹಂಚಿಕೆ ಮಾಡಲಾಗಿತ್ತು.
ಆದರೆ, ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಉದ್ಯಮಗಳಿಗೆ ಉತ್ತೇಜನ ನೀಡುವ ಹೆಜ್ಜೆಯಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎರಡು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ನಾಗರಿಕ, ತರಬೇತಿ ಮತ್ತು ಇತರೆ ವಿಮಾನಗಳ ಉತ್ಪಾದನೆಗೆ ಅಗತ್ಯವಿರುವ ಬಿಡಿಭಾಗಗಳು, ಉತ್ಪನ್ನಗಳಿಗೆ ಮೂಲ ಕಸ್ಟಮ್ಸ್ ಸುಂಕ ವಿನಾಯಿತಿಯನ್ನು ಸಚಿವೆ ಪ್ರಕಟಿಸಿದ್ದಾರೆ.
ಅಲ್ಲದೆ, ವಿಮಾನಗಳ ನಿರ್ವಹಣೆ, ದುರಸ್ತಿ ಅಥವಾ ರಕ್ಷಣಾ ಕ್ಷೇತ್ರದ ಉದ್ಯಮಗಳಿಗೆ ಅಗತ್ಯವಿರುವ ಉತ್ಪನ್ನಗಳ ತಯಾರಿಕೆಗಾಗಿ, ಎಂಜಿನ್ ಒಳಗೊಂಡಂತೆ ಆಮದು ಆಗಲಿರುವ ಕಚ್ಚಾ ವಸ್ತುಗಳಿಗೂ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ಪ್ರಕಟಿಸಲಾಗಿದೆ.
ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಘಟಕಳು ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳಿಗೆ ಈ ವಿನಾಯಿತಿಗಳು ಅನ್ವಯವಾಗಲಿವೆ.
ಈ ಎರಡೂ ನಿರ್ಧಾರಗಳು ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖವಾಗಿ ವೈಮಾನಿಕ ಉದ್ಯಮಗಳಿಗೆ ಸಹಕಾರಿಯಾಗಲಿವೆ ಎಂದು ಅಂದಾಜು ಮಾಡಲಾಗಿದೆ.
ಬಜೆಟ್‌ಗೆ ಗಣನೀಯ ಮೊತ್ತ ಹಂಚಿಕೆ ಆಗಿಲ್ಲ ಎಂಬುದಕ್ಕೆ ಷೇರುಪೇಟೆ ನಕಾರಾತ್ಮಕವಾಗಿ ಸ್ಪಂದಿಸಿದೆ. ನಿಫ್ಟಿಯಲ್ಲಿ ಭಾರತ ರಕ್ಷಣಾ ವಲಯದ ಸೂಚ್ಯಂಕ ಶೇ 5.6ರಷ್ಟು ಕುಸಿದಿದೆ. ಈ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಹಂಚಿಕೆ ಆಗಬಹುದು ಎಂಬ ನಿರೀಕ್ಷೆ ಹೂಡಿಕೆದಾರರದಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.