ಪ್ರಾತಿನಿಧಿಕ ಚಿತ್ರ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಸತತ 8ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ಗಳ ಕೆಲವು ಅಂಶಗಳು ಇಲ್ಲಿವೆ.
ಮೊದಲ ಬಜೆಟ್
ಸ್ವಾತಂತ್ರ್ಯ ಸಿಕ್ಕ ಬಳಿಕ 1947 ನವೆಂಬರ್ 26ರಂದು ಮೊದಲ ಬಜೆಟ್ ಮಂಡನೆ ಮಾಡಲಾಗಿತ್ತು. ದೇಶದ ಮೊದಲ ಹಣಕಾಸು ಸಚಿವ ಆರ್. ಕೆ ಶಣ್ಮುಖಂ ಚೆಟ್ಟಿ ಅವರು ಮೊದಲ ಬಜೆಟ್ ಮಂಡಿಸಿದ್ದರು.
ಅತಿ ಹೆಚ್ಚು ಬಾರಿ ಬಜೆಟ್ ಮಂಡನೆ
ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿದ್ದಾಗ ಮಾಜಿ ಪ್ರಧಾನಿ ಮೋರಾರ್ಜಿ ದೇಸಾಯಿ ಅವರು ಹಣಕಾಸು ಸಚಿವರಾಗಿದ್ದರು. ದೇಸಾಯಿ ಅವರು 10 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.
1959 ಫೆ.28ರಂದು ದೇಸಾಯಿ ಅವರು ಮೊದಲ ಬಾರಿ ಬಜೆಟ್ ಮಂಡಿಸಿದ್ದರು. ಬಳಿಕ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಹಾಗೂ 1962ರ ಮಧ್ಯಂತರ ಬಜೆಟ್ ಅನ್ನು ಓದಿದ್ದರು. ನಾಲ್ಕು ವರ್ಷಗಳ ಬಳಿಕ 1967ರಲ್ಲಿ ಮಧ್ಯಂತರ ಮತ್ತು ಪೂರ್ಣ ಬಜೆಟ್, 1968, 1969ರಲ್ಲಿ ಪೂರ್ಣ ಬಜೆಟ್ ಮಂಡನೆ ಮಾಡಿದ್ದರು.
ಪಿ. ಚಿದಂಬರಂ
ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು 9 ಬಾರಿ ಬಜೆಟ್ ಮಂಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ 1996 ಮತ್ತು 1997ರಲ್ಲಿ ಬಜೆಟ್ ನಡೆಸಿಕೊಟ್ಟಿದ್ದರು. 2009ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮತ್ತೆ ಹಣಕಾಸು ಸಚಿವರಾಗಿ ನೇಮಕಗೊಂಡಿದ್ದರು. 2004 ರಿಂದ 2008ರವರೆಗೆ ಸತತ ಐದು ಬಾರಿ ಬಜೆಟ್ ಮಂಡಿಸಿದ್ದರು.
ಬಳಿಕ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2013–2014ರಲ್ಲಿ ಪುನಃ ಹಣಕಾಸು ಸಚಿವರಾಗಿ ಬಜೆಟ್ ಮಂಡಿಸಿದ್ದರು.
ಪ್ರಣಬ್ ಮುಖರ್ಜಿ
ಪ್ರಣಬ್ ಮುಖರ್ಜಿ ಅವರು 8 ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. 1982, 1983, 1984 ಮತ್ತು 2009 ರಿಂದ 2012ರವರೆಗೆ ಸತತ 5 ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಜೆಟ್ ಮಂಡಿಸಿದ್ದರು.
ಈಗ 8ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಈ ಪಟ್ಟಿಗೆ ನಿರ್ಮಲಾ ಸೀತಾರಾಮನ್ ಅವರೂ ಸೇರುತ್ತಾರೆ.
ಮನಮೋಹನ್ ಸಿಂಗ್
ದಿವಂಗತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಿ.ವಿ. ನರಸಿಂಹರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. 1991–1995ರ ಅವಧಿಯಲ್ಲಿ ಐದು ಬಾರಿ ಬಜೆಟ್ ಮಂಡಿಸಿದ್ದಾರೆ.
ಹೆಚ್ಚು ಅವಧಿಯ ಬಜೆಟ್ ಭಾಷಣ
ನಿರ್ಮಲಾ ಸೀತಾರಾಮನ್ ಅವರು ಅತಿ ಹೆಚ್ಚು ಅವಧಿ ಬಜೆಟ್ ಭಾಷಣ ಮಾಡಿದ್ದಾರೆ. 2020ರ ಫೆ.1 ರಂದು ಬಜೆಟ್ ಪುಸ್ತಕದಲ್ಲಿನ ಎರಡು ಪುಟಗಳನ್ನು ಬಿಟ್ಟರೂ ಬರೋಬ್ಬರಿ 2 ಗಂಟೆ 40 ನಿಮಿಷ ಬಜೆಟ್ ಮಂಡಿಸಿದ್ದರು.
ಕಡಿಮೆ ಅವಧಿಯ ಬಜೆಟ್
1977ರಲ್ಲಿ ಹಿರುಭಾಯಿ ಮುಲಜಿಭಾಯಿ ಪಟೇಲ್ ಅವರು ಮಧ್ಯಂತರ ಬಜೆಟ್ ಮಂಡಿಸಿದ್ದರು. ಕೇವಲ 800 ಪದಗಳಲ್ಲಿ ಬಜೆಟ್ ಭಾಷಣ ಮುಗಿಸಿ, ಅತೀ ಕಡಿಮೆಯಲ್ಲಿ ಬಜೆಟ್ ಭಾಷಣ ಮುಗಿಸಿದ್ದರು.
ಬಜೆಟ್ ಸಮಯ ಬದಲಾವಣೆ
ಈ ಹಿಂದೆ ಫೆಬ್ರುವರಿ ಕೊನೆಯ ದಿನದಂದು ಸಂಜೆ 5 ಗಂಟೆಗೆ ಬಜೆಟ್ ಮಂಡನೆಯಾಗುತ್ತಿತ್ತು. ವಸಾಹತುಶಾಹಿಗಳ ಕಾಲದಲ್ಲಿದ್ದ ವ್ಯವಸ್ಥೆಯನ್ನೇ ಮುಂದುವರಿಸಲಾಗಿತ್ತು. ಭಾರತ ಮತ್ತು ಲಂಡನ್ ಎರಡೂ ದೇಶಗಳಲ್ಲೂ ಪ್ರಸಾರವಾಗುವಂತೆ ಮಾಡಲು ಸಂಜೆ 5 ಗಂಟೆಯನ್ನು ನಿಗದಿ ಮಾಡಲಾಗಿತ್ತು. ಏಕೆಂದರೆ ಭಾರತವು ಲಂಡನ್ ಬೇಸಿಗೆ ಸಮಯಕ್ಕಿಂತ 4 ಗಂಟೆ 30 ನಿಮಿಷಗಳು ಮುಂದಿದೆ. ಆದ್ದರಿಂದ ಭಾರತದಲ್ಲಿ ಸಂಜೆ 5 ಗಂಟೆಗೆ ಬಜೆಟ್ ಅನ್ನು ಪ್ರಸ್ತುತಪಡಿಸುವುದರಿಂದ ಲಂಡನ್‌ನಲ್ಲಿ ಹಗಲಾಗಿರುತ್ತಿತ್ತು.
1999ರಲ್ಲಿ ಈ ವ್ಯವಸ್ಥೆಯನ್ನು ಬದಲಾಯಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಯಶವಂತ್ ಸಿಂಗ್ ಹಣಕಾಸು ಸಚಿವರಾಗಿದ್ದರು. ಇವರ ಕಾಲದಲ್ಲಿ ಬಜೆಟ್ ಭಾಷಣವನ್ನು ಭಾರತಕ್ಕೆ ಸೀಮಿತಗೊಳಿಸಿ, ಬೆಳಿಗ್ಗೆ 11 ಗಂಟೆಗೆ ನಿಗದಿ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ ಬೆಳಿಗ್ಗೆ 11 ಗಂಟೆಗೆ ಬಜೆಟ್ ಭಾಷಣ ಆರಂಭವಾಗುತ್ತದೆ.
ಆದರೆ ಫೆಬ್ರುವರಿ ಕೊನೆಯಲ್ಲಿ ನಡೆಯುತ್ತಿದ್ದ ಬಜೆಟ್ ಅನ್ನು 2017ರಲ್ಲಿ ಫೆಬ್ರುವರಿ 1ಕ್ಕೆ ನಡೆಯುವಂತೆ ಬದಲಾಯಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.