ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2025–26ನೇ ರಾಜ್ಯ ಬಜೆಟ್‌ನಲ್ಲಿ, ಮಂಡ್ಯದ ನೂತನ ‘ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ಸಮಗ್ರ ವಿವಿ) ಮೂಲಸೌಕರ್ಯ ಒದಗಿಸಲು ₹25 ಕೋಟಿ ಅನುದಾನ ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರಸಕ್ತ ಸಾಲಿನಿಂದಲೇ ತರಗತಿ ಆರಂಭಿಸಲಾಗುವುದು ಎಂದು ತಿಳಿಸಿರುವುದು ಜಿಲ್ಲೆಯ ಜನರಲ್ಲಿ ಹರ್ಷ ಉಂಟು ಮಾಡಿದೆ.
‘ಮಂಡ್ಯದಲ್ಲಿ ನೂತನ ಸಮಗ್ರ ಕೃಷಿ ವಿವಿ ಸ್ಥಾಪನೆ ಮಾಡಬಾರದು’ ಎಂದು ಕೆಲವು ವಿಶ್ರಾಂತ ಕುಲಪತಿಗಳು ಇತ್ತೀಚೆಗೆ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ನೀಡಿದ್ದರು. ಇದಕ್ಕೆ ಸೊಪ್ಪು ಹಾಕದ ಸಿಎಂ, ಅನುದಾನ ಘೋಷಣೆ ಮಾಡಿರುವುದು ವಿವಿ ಸ್ಥಾಪನೆಗೆ ಆನೆಬಲ ಬಂದಂತಾಗಿದೆ. ವಿವಿ ಸ್ಥಾಪನೆಯ ಹಿಂದೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯವರ ಪರಿಶ್ರಮ ಮತ್ತು ಕಾಳಜಿ ಇದೆ’ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ಬೋರಯ್ಯ ತಿಳಿಸಿದ್ದಾರೆ.
ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರ ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ವಿಶೇಷಾಧಿಕಾರಿಯಾಗಿ ಡಾ.ಕೆ.ಎಂ. ಹರಿಣಿಕುಮಾರ್ ಅವರನ್ನು ನೇಮಿಸಿದೆ. ಇದರಿಂದ ವಿವಿ ಶೈಕ್ಷಣಿಕ ಚಟುವಟಿಕೆಗಳು ಪ್ರಸಕ್ತ ವರ್ಷದಿಂದಲೇ ಆರಂಭಗೊಳ್ಳುವ ನಿರೀಕ್ಷೆಗೆ ಬಲ ಬಂದಿದೆ. ಮಂಡ್ಯದಲ್ಲಿ ಕೃಷಿ ವಿವಿ ಸ್ಥಾಪನೆಯಾದರೆ ಮೈಸೂರು ಕಂದಾಯ ವಿಭಾಗದ ಐದು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜತೆಗೆ ‘ಪ್ರಾದೇಶಿಕ ಅಸಮತೋಲನ’ ನಿವಾರಣೆಯಾಗುತ್ತದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
₹100 ಕೋಟಿಗೆ ಬೇಡಿಕೆ:
‘1931ರಲ್ಲಿ ಆರಂಭವಾದ ಮಂಡ್ಯದ ವಿಶ್ವೇಶ್ವರಯ್ಯ ಕಾಲುವೆ ಫಾರಂ (ವಿ.ಸಿ. ಫಾರಂ) 632 ಎಕರೆ ಪ್ರದೇಶ ಹೊಂದಿದ್ದು, ವಿವಿ ಸ್ಥಾಪನೆಗೆ ಸೂಕ್ತ ಜಾಗವಾಗಿದೆ. ಇಲ್ಲಿ ಪ್ರಸ್ತುತ ಲಭ್ಯವಿರುವ ಕಟ್ಟಡಗಳ ಜೊತೆಗೆ ಹೊಸದಾಗಿ ಆಡಳಿತಾತ್ಮಕ ಮುಖ್ಯ ಕಟ್ಟಡ, ಟೆಕ್ನಾಲಜಿ ಹಬ್, ವಸತಿಗೃಹಗಳು, ತರಗತಿ ಕೊಠಡಿಗಳು, ಪ್ರಯೋಗಾಲಯ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ₹100 ಕೋಟಿ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಕೋರಿದ್ದೆವು. ಮೊದಲ ಹಂತದಲ್ಲಿ ₹25 ಕೋಟಿ ಘೋಷಣೆ ಮಾಡಿರುವುದು ಸ್ವಾಗತಾರ್ಹ’ ಎಂದು ಮಂಡ್ಯ ಕೃಷಿ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ. ಹರಿಣಿಕುಮಾರ್ ತಿಳಿಸಿದ್ದಾರೆ.
ರಸ್ತೆ ಅಭಿವೃದ್ಧಿಗೆ ಕ್ರಮ:
‘ಮದ್ದೂರು ನಗರದ ಮುಖ್ಯರಸ್ತೆ ವಿಸ್ತರಣೆಗಾಗಿ ವಿಸ್ತೃತ ಯೋಜನಾ ವರದಿ (ಡಿ.ಪಿ.ಆರ್) ತಯಾರಿಸಲಾಗುವುದು’ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಮದ್ದೂರು ಪಟ್ಟಣದ ಪ್ರವಾಸಿ ಮಂದಿರದ ವೃತ್ತದಿಂದ ಕೊಲ್ಲಿ ಸರ್ಕಲ್‌ವರೆಗೆ ಸುಮಾರು 2.5 ಕಿ.ಮೀ. ಉದ್ದದ ಈ ರಸ್ತೆ ಅತ್ಯಂತ ಕಿರಿದಾಗಿದೆ. ಜತೆಗೆ ಕೆಲವು ಕಡೆ ಒತ್ತುವರಿಯೂ ಆಗಿದೆ. ಈ ಎಲ್ಲ ಕಾರಣಗಳಿಂದ ವಾಹನ ಸಂಚಾರಕ್ಕೆ ತೀವ್ರ ತೊಡಕಾಗಿದೆ. ರಸ್ತೆ ವಿಸ್ತರಣೆ ಮಾಡುವಂತೆ ಹಲವು ವರ್ಷಗಳಿಂದ ಜನರಿಂದ ಕೂಗು ಕೇಳಿಬಂದಿತ್ತು. ಶಾಸಕ ಕೆ.ಎಂ. ಉದಯ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮದ್ದೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ಈ ರಸ್ತೆಯನ್ನು 100 ಅಡಿಗೆ ವಿಸ್ತರಣೆ ಮಾಡಲು ನಿರ್ಣಯ ಕೂಡ ಕೈಗೊಳ್ಳಲಾಗಿತ್ತು. ಡಿಪಿಆರ್ ತಯಾರಿಸುವಂತೆ ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿರುವುದನ್ನು ಮದ್ದೂರು ಪಟ್ಟಣದ ಜನರು ಸ್ವಾಗತಿಸಿದ್ದಾರೆ.
₹142 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಲ್ಲಿ ಶ್ರೀರಂಗಪಟ್ಟಣ ಒಳಚರಂಡಿ ಯೋಜನೆಯನ್ನು ಸೇರ್ಪಡೆ ಮಾಡಲಾಗಿದೆ. ಕೆಶಿಪ್-4 ಯೋಜನೆಯಡಿ ಮಳವಳ್ಳಿ–ಬವಲಿ (ಕೇರಳ ಗಡಿ) (ಬನ್ನೂರು–ಎಚ್.ಡಿ.ಕೋಟೆ ಮಾರ್ಗ)– 141 ಕಿ.ಮೀ. ರಸ್ತೆ ಅಭಿವೃದ್ಧಿ. ಶ್ರೀರಂಗಪಟ್ಟಣ (ಪಾಂಡವಪುರ ರೈಲ್ವೆ ನಿಲ್ದಾಣ) ಬಿ.ಎಂ.ರಸ್ತೆ ಜಂಕ್ಷನ್ ಚನ್ನರಾಯಪಟ್ಟಣ (ಕೆ.ಆರ್.ಪೇಟೆ ಮಾರ್ಗ) –63 ಕಿ.ಮೀ. ರಸ್ತೆಗಳನ್ನು ಸೇರ್ಪಡೆ ಮಾಡಿದ್ದು, ಮಂಡ್ಯ ಜಿಲ್ಲೆಯ ಬಹುದಿನಗಳ ಬೇಡಿಕೆಗೆ ಸ್ಪಂದನೆ ಸಿಕ್ಕಂತಾಗಿದೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಟ್ಟಾರೆ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆಯನ್ನು ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಜಾರಿಗೊಳಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಮಂಡ್ಯ ಜಿಲ್ಲೆಯ ದೇಶಿ ತಳಿಯಾದ ಹಳ್ಳಿಕಾರ್ ದನಗಳು ಮತ್ತು ಮಳವಳ್ಳಿ ತಾಲ್ಲೂಕಿನ ಬಂಡೂರು ಕುರಿ ತಳಿ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ₹2 ಕೋಟಿಯನ್ನು ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವುದು ಸ್ವಾಗತಾರ್ಹಬಿ.ಪುಟ್ಟಬಸವಯ್ಯ ಸಾವಯವ ಕೃಷಿಕ ಬಂಡೂರು
ಮಂಡ್ಯ ನೂತನ ಕೃಷಿ ವಿಶ್ವವಿದ್ಯಾಲಯಕ್ಕೆ ₹25 ಕೋಟಿ ಅನುದಾನ ನೀಡುವುದರ ಜೊತೆಗೆ ಪ್ರಸಕ್ತ ಸಾಲಿನಿಂದಲೇ ತರಗತಿ ಪ್ರಾರಂಭಕ್ಕೆ ಅನುಮತಿ ನೀಡಿರುವುದು ಜಿಲ್ಲೆಗೆ ಸಿಕ್ಕ ದೊಡ್ಡ ಕೊಡುಗೆಸಿ.ತ್ಯಾಗರಾಜು ಮಾಜಿ ಅಧ್ಯಕ್ಷ ಮಂಡ್ಯ ತಾಲ್ಲೂಕು ಪಂಚಾಯಿತಿ
‘ಶುಗರ್ ಕೇನ್ ಹಾರ್ವೆಸ್ಟರ್ ಹಬ್’
ಕಾರ್ಮಿಕರ ಕೊರತೆಯಿಂದಾಗುವ ಕಬ್ಬು ಕಟಾವಿನ ಸಮಸ್ಯೆಯನ್ನು ನಿವಾರಿಸಲು ಹೈಟೆಕ್ ಹಾರ್ವೆಸ್ಟರ್ ಯಂತ್ರೋಪ ಕರಣಗಳನ್ನು ಬಾಡಿಗೆ ಆಧಾರದ ಮೇಲೆ ರೈತರಿಗೆ ಒದಗಿಸಲು 140ಕ್ಕಿಂತ ಹೆಚ್ಚು ಕಡೆ ‘ಶುಗರ್ ಕೇನ್ ಹಾರ್ವೆಸ್ಟರ್ ಹಬ್’ಗಳನ್ನು (ಕಬ್ಬು ಕಟಾವು ಯಂತ್ರ) ಸ್ಥಾಪಿಸಲು ರಾಜ್ಯ ಬಜೆಟ್‌ನಲ್ಲಿ ₹70 ಕೋಟಿ ಸಹಾಯಧನ ಒದಗಿಸುವುದಾಗಿ ಘೋಷಣೆ ಮಾಡಲಾಗಿದೆ.
‘ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ 2025–26ನೇ ಸಾಲಿಗೆ ₹20 ಕೋಟಿ ಒದಗಿಸಿರುವುದು ಸ್ವಾಗತಾರ್ಹ. ‘ಸಕ್ಕರೆ ನಾಡು’ ಮಂಡ್ಯದ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಮುಖ್ಯಮಂತ್ರಿಯವರು ಸ್ಪಂದಿಸಿದ್ದಾರೆ. ಮೈಷುಗರ್ ಅಭಿವೃದ್ಧಿಗೆ ನಮ್ಮ ಸರ್ಕಾರ ಅನುದಾನ ನೀಡಿ, ಲಾಭದ ಹಾದಿಗೆ ಮರಳಲು ಕ್ರಮ ಕೈಗೊಂಡಿದೆ’ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದ್ದಾರೆ.
ಅಣೆಕಟ್ಟು ಗೇಟು ಸದೃಢತೆಗೆ ಕ್ರಮ
‘ರಾಜ್ಯದ ಪ್ರಮುಖ ಅಣೆಕಟ್ಟು ಗೇಟುಗಳ ಸದೃಢತೆಯನ್ನು ತಾಂತ್ರಿಕ ಪರಿಶೀಲನೆಗೊಳಪಡಿಸಿ ಅಗತ್ಯ ಕಂಡುಬಂದಲ್ಲಿ ಗೇಟುಗಳನ್ನು ದುರಸ್ತಿಗೊಳಿಸಲು ಮತ್ತು ಬದಲಿಸಲು ಆದ್ಯತೆಯ ಮೇಲೆ ಕ್ರಮವಹಿಸಲಾಗುವುದು’ ಎಂದು ರಾಜ್ಯ ಬಜೆಟ್‌ನಲ್ಲಿ ತಿಳಿಸಲಾಗಿದೆ. ಶತಮಾನದ ಹೊಸ್ತಿಲಲ್ಲಿರುವ ಕೃಷ್ಣರಾಜಸಾಗರ (ಕೆಆರ್‌ಎಸ್) ಅಣೆಕಟ್ಟೆಯ ಗೇಟುಗಳ ದುರಸ್ತಿ ಮತ್ತು ಹೊಸ ಗೇಟುಗಳ ಅಳವಡಿಕೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಲಭ್ಯತೆ ನೋಡಿಕೊಂಡು, ಅಣೆಕಟ್ಟೆಯ ಸಂರಕ್ಷಣೆಗೆ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುತ್ತೇವೆ’ ಎಂದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳು ತಿಳಿಸಿದ್ದಾರೆ.
‘ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಹಾಗೂ ಇತರ ನದಿಗಳ ಕಣಿವೆಯ ವಿವಿಧ ಯೋಜನೆಗಳಡಿ ಬಾಕಿ ಇರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು’ ಎಂದು ಆಯವ್ಯಯ ಪತ್ರದಲ್ಲಿ ಘೋಷಿಸಲಾಗಿದೆ. ಆದರೆ, ಕಾವೇರಿ ಕಣಿವೆಯಲ್ಲಿ ಬರುವ ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವುದೇ ನಿರ್ದಿಷ್ಟ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿಲ್ಲದಿರುವುದು ರೈತರಿಗೆ ಬೇಸರ ತರಿಸಿದೆ.
ಹುಸಿಯಾದ ನಿರೀಕ್ಷೆಗಳು
ಹುಸಿಯಾದ ನಿರೀಕ್ಷೆಗಳು
* ಮಂಡ್ಯ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸಿ ಮಿಮ್ಸ್ ಆಸ್ಪತ್ರೆ ಉನ್ನತೀಕರಣಗೊಳಿಸಬೇಕು. ಕ್ಯಾನ್ಸರ್ ಆಸ್ಪತ್ರೆಗೆ ಸಿಬ್ಬಂದಿ ನೇಮಿಸಿ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪವಿಲ್ಲ.
* ಜಿಲ್ಲೆಯಲ್ಲಿ ಕೃಷಿ ಸಂಬಂಧಿತ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಉತ್ತೇಜನ ಸಿಕ್ಕಿಲ್ಲ.
* ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿರುವ ಮಂಡ್ಯ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬ ಜನರ ಕೂಗಿಗೆ ಮನ್ನಣೆ ಸಿಕ್ಕಿಲ್ಲ.
* ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯಾವುದೇ ಅನುದಾನ ಮತ್ತು ಯೋಜನೆಗಳು ಘೋಷಣೆಯಾಗಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.