ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆಯಲ್ಲಿ ತಮ್ಮದೇ ದಾಖಲೆ ಮುರಿದು 16ನೇ ಬಜೆಟ್ ಅನ್ನು ಇಂದು (ಶುಕ್ರವಾರ, ಮಾರ್ಚ್ 7) ಮಂಡಿಸಿದ್ದಾರೆ. ರಾಜ್ಯ ಬಜೆಟ್ ಗಾತ್ರ ಇದೇ ಮೊದಲ ಬಾರಿಗೆ ₹ 4 ಲಕ್ಷ ಕೋಟಿ ಗಡಿ ದಾಟಿದೆ.
₹ 4.09 ಲಕ್ಷ ಕೋಟಿ ಗಾತ್ರದ ಈ ಬಜೆಟ್‌ನಲ್ಲಿ, ಕೃಷಿ, ಶಿಕ್ಷಣ, ಕೈಗಾರಿಕೆ, ನಗರಾಭಿವೃದ್ಧಿ, ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣ ಸೇರಿದಂತೆ ವಿವಿಧ ವಲಯಗಳಿಗೆ ಸಾವಿರಾರು ಕೋಟಿ ಅನುದಾನ ಘೋಷಿಸಿದ್ದಾರೆ.
ಪ್ರವಾಸೋದ್ಯಮ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ನೂತನ ಪ್ರವಾಸೋದ್ಯಮ ನೀತಿ 2024–2029 ಮೂಲಕ ₹ 8,000 ಕೋಟಿ ಹೂಡಿಕೆ ಮತ್ತು 1.5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹಾಕಿಕೊಂಡಿರುವುದಾಗಿ ಸಿಎಂ ಹೇಳಿದ್ದಾರೆ.
ಪ್ರವಾಸೋದ್ಯಮಕ್ಕೆ ಪ್ರಮುಖ ಘೋಷಣೆಗಳು
ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಸವದತ್ತಿಯ ರೇಣುಕಾ ಯಲ್ಲಮ್ಮ ಹಾಗೂ ಬೆಂಗಳೂರಿನ ದೇವಿಕಾರಾಣಿ ರೋರಿಚ್ ಎಸ್ಟೇಟ್ ಅನ್ನು ₹ 199 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
ಆಯ್ದ 10 ಜಿಲ್ಲೆಗಳಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ 2025-26ನೇ ಸಾಲಿನಲ್ಲಿ ₹ 50 ಕೋಟಿ ಅನುದಾನ
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಡಲ ತೀರದ ಅಭಿವೃದ್ಧಿ ಹಾಗೂ ರಸ್ತೆಬದಿ ಸೌಲಭ್ಯಗಳನ್ನು (Highway Hubs) ಉನ್ನತೀಕರಿಸುವ ಮೂಲಕ ಶೈಕ್ಷಣಿಕ, ಆರೋಗ್ಯ, ಸಾಹಸ, ಪರಿಸರ, ಜಲಸಾರಿಗೆ ಹಾಗೂ ಕಡಲ ತೀರದ ಪ್ರವಾಸೋದ್ಯಮಗಳಿಗೆ ಲಭ್ಯವಿರುವ ಅವಕಾಶ ಬಳಸಿಕೊಳ್ಳಲಾಗುವುದು.
UNESCO ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಬೇಲೂರು–ಹಳೇಬೀಡು–ಸೋಮನಾಥಪುರ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ
ಪ್ರವಾಸಿಗರ ಸುರಕ್ಷತೆಗಾಗಿ ಪ್ರವಾಸಿ ತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವಾಸಿ ಮಿತ್ರರಿಗೆ ತರಬೇತಿ ನೀಡಲಾಗುವುದು ಹಾಗೂ ಅವರ ಸಂಖ್ಯೆಯನ್ನು 1,000ಕ್ಕೆ ಹೆಚ್ಚಿಸಲಾಗುವುದು. ಪ್ರವಾಸಿಗರಿಗೆ ಮಾಹಿತಿ ನೀಡಲು 24X7 ಪ್ರವಾಸಿ ಸಹಾಯವಾಣಿ
ಸ್ಮಾರಕಗಳ ಸಂರಕ್ಷಣೆಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಸೃಷ್ಟಿಸಲು 25 ಸ್ಮಾರಕಗಳನ್ನು ದತ್ತು ನೀಡಲಾಗಿದೆ. ಮುಂದಿನ ಹಂತದಲ್ಲಿ ಇನ್ನೂ ಹೆಚ್ಚಿನ ಸ್ಮಾರಕಗಳನ್ನು ʻನಮ್ಮ ಸ್ಮಾರಕʼ ಡಿಜಿಟಲ್ ವೇದಿಕೆಯ ಮುಖಾಂತರ ದತ್ತು ನೀಡಲು ಉದ್ದೇಶಿಸಲಾಗಿದೆ.
ರಾಜ್ಯದ ಪ್ರವಾಸಿ ತಾಣಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ONE-TAC Digital Grid ಅನ್ನು ಉಪಯೋಗಿಸಲಾಗುವುದು.
ಐತಿಹಾಸಿಕ ಲಕ್ಕುಂಡಿಯಲ್ಲಿನ ಪಾರಂಪರಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಪ್ರಾಚ್ಯಾವಶೇಷಗಳ ಸಂರಕ್ಷಣೆಗಾಗಿ ಬಯಲು ವಸ್ತು ಸಂಗ್ರಹಾಲಯವನ್ನು ಪ್ರಾರಂಭಿಸಲಾಗುವುದು.
ರಾಜ್ಯದ ಸಂಸ್ಕೃತಿ, ನಾಗರಿಕತೆಯ ಉಗಮ, ವಿಕಾಸಗಳೂ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಸಂಗತಿಗಳನ್ನು ಬಿಂಬಿಸುವ ರಾಜ್ಯ ಮಟ್ಟದ ವಸ್ತು ಸಂಗ್ರಹಾಲಯವನ್ನು ಮೈಸೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸ್ಥಾಪಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.