ADVERTISEMENT

ಬಜೆಟ್‌: ಕಾಫಿನಾಡಿಗೆ ಕೆಲವು ಕೊಡುಗೆ, ಪ್ರತ್ಯೇಕ ಹಾಲು ಒಕ್ಕೂಟ ರಚನೆ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 11:32 IST
Last Updated 4 ಮಾರ್ಚ್ 2022, 11:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಿಕ್ಕಮಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಜಿಲ್ಲೆಗೆ ಕೆಲವು ಕೊಡುಗೆಗಳನ್ನು ಘೋಷಿಸಿದ್ದಾರೆ.

ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ ಪ್ರಸ್ತಾಪಿಸಲಾಗಿದೆ. ಹಾಸನ ಹಾಲು ಒಕ್ಕೂಟದಿಂದ ಪ್ರತ್ಯೇಕಿಸಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು ಎಂದು ಜಿಲ್ಲೆಯ ಶಾಸಕರು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು.

ಭದ್ರಾ ಮೇಲ್ಡಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ಪಡೆದು ಕೇಂದ್ರದ ನೆರವಿನೊಂದಿಗೆ ಯೋಜನೆ ಅನುಷ್ಠಾನವನ್ನು ಪ್ರಸ್ತಾಪಿಸಲಾಗಿದೆ. ತರೀಕೆರೆ ಏತ ನೀರಾವರಿಯಡಿ 20,150 ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಹಾಗೂ 79 ಕೆರೆಗಳಿಗೆ ನೀರು ಹರಿಸುವುದಾಗಿ ತಿಳಿಸಲಾಗಿದೆ. ಭದ್ರಾ ಮೇಲ್ಡಂಡೆ (ಚಿತ್ರದುರ್ಗ ಶಾಖಾ ಕಾಲುವೆ, ಹೊಳಲ್ಕೆರೆ ಫೀಡರ್‌ ಕಾಲುವೆ...) ವಿವಿಧ ಯೋಜನೆಗಳಿಗೆ ಒಟ್ಟು 3 ಸಾವಿರ ಕೋಟಿ ಮೀಸಲಿಡಲಾಗಿದೆ.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲು ‘ಮುಖ್ಯಮಂತ್ರಿ ಆರೋಗ್ಯವಾಹಿನಿ’ ಯೋಜನೆ ಘೋಷಿಸಲಾಗಿದೆ. ಈ ಯೋಜನೆಯಡಿ ಚಿಕ್ಕಮಗಳೂರು ಸಹಿತ ಮೂರು ಜಿಲ್ಲೆಗಳಲ್ಲಿ ಸಂಚಾರಿ ಕ್ಲಿನಿಕ್‌ ಸ್ಥಾಪನೆಗೆ 11 ಕೋಟಿ ಮೀಸಲಿಡಲಾಗಿದೆ.

ರೈಲ್ವೆಯೊಂದಿಗೆ ಶೇ 50: 50 ವೆಚ್ಚ ಹಂಚಿಕೆ ಆಧಾರದಲ್ಲಿ ಚಿಕ್ಕಮಗಳೂರು– ಬೇಲೂರು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿರುವುದನ್ನು ಪ್ರಸ್ತಾಪಿಸಲಾಗಿದೆ.

ಪ್ರವಾಸೋದ್ಯಮ ಉತ್ತೇಜನಕ್ಕೆ ಮುಳ್ಳಯ್ಯನಗಿರಿ ದತ್ತಪೀಠ ಬೆಟ್ಟದಲ್ಲಿ ‘ರೋಪ್‌ ವೇ’ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ‘ಪರ್ವತ ಮಾಲಾ’ ಯೋಜನೆಯಡಿ ಪ್ರಸ್ತಾವ ಸಲ್ಲಿಸಲು ಉದ್ದೇಶಿಸಲಾಗಿದೆ.

ಕಾಡಂಚಿನ ಪ್ರದೇಶಗಳಲ್ಲಿ ಆನೆ ಹಾವಳಿ ತಡೆಯಲು ಚಿಕ್ಕಮಗಳೂರು ಸಹಿತ ಮೂರು ಜಿಲ್ಲೆಗಳಲ್ಲಿ ರೈಲು ಹಳಿ ತಡೆಗೋಡೆ ನಿರ್ಮಾಣ ಪ್ರಸ್ತಾಪಿಸಲಾಗಿದೆ. ಇದಕ್ಕೆ ₹ 100 ಕೋಟಿ ಮೀಸಲಿಡಲಾಗಿದೆ.

ಸಾರ್ವಜನಿಕ– ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಚಿಕ್ಕಮಗಳೂರು ಸಹಿತ ಮೂರು ಕಡೆ ಹೆಲಿಪೋರ್ಟ್‌ ನಿರ್ಮಾಣಕ್ಕೆ ಉದ್ದೇಶಿಸಿ, ₹ 30 ಕೋಟಿ ಮೀಸಲಿಡಲಾಗಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.