ADVERTISEMENT

ಕೇಂದ್ರ ಬಜೆಟ್ 2021: ಮೊಬೈಲ್ ಆ್ಯಪ್‌ನಲ್ಲಿ ಸಿಗಲಿದೆ ಬಜೆಟ್ ಪ್ರತಿ

ಪಿಟಿಐ
Published 29 ಜನವರಿ 2021, 7:31 IST
Last Updated 29 ಜನವರಿ 2021, 7:31 IST
ಹಲ್ವಾ ಸಮಾರಂಭದ ಚಿತ್ರ – ಪಿಟಿಐ
ಹಲ್ವಾ ಸಮಾರಂಭದ ಚಿತ್ರ – ಪಿಟಿಐ   

ನವದೆಹಲಿ: ಬಜೆಟ್ ಪೂರ್ವಭಾವಿಯಾಗಿ ನಡೆಯುವ ಹಲ್ವಾ ಸಮಾರಂಭವು ಶನಿವಾರ ನಡೆಯಿತು. ಜತೆಗೆ, ಬಜೆಟ್‌ ಪ್ರತಿಗಳು ಸುಲಭವಾಗಿ ಸಂಸದರಿಗೆ ಮತ್ತು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲು ಹೊಸ ಮೊಬೈಲ್ ಆ್ಯಪ್‌ (Union Budget Mobile App) ಅನ್ನು ಕೂಡ ಬಿಡುಗಡೆ ಮಾಡಲಾಯಿತು.

ಕೋವಿಡ್–19 ಕಾರಣ ಈ ಬಾರಿ ಕೇಂದ್ರ ಬಜೆಟ್‌ ಮುದ್ರಣ ಇರುವುದಿಲ್ಲ. ಬದಲಿಗೆ ಬಜೆಟ್ ಪ್ರತಿಗಳು ಡಿಜಿಟಲ್ ರೂಪದಲ್ಲಿ ಲಭ್ಯವಿರಲಿವೆ ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ದೇಶದ ಮೊದಲ ಬಜೆಟ್ 1947ರ ನವೆಂಬರ್ 26ರಂದು ಮಂಡನೆಯಾದಂದಿನಿಂದ ಈವರೆಗೂ ಬಜೆಟ್ ಪ್ರತಿಗಳನ್ನು ಮುದ್ರಿಸಿ ಹಂಚಾಲಗುತ್ತಿತ್ತು. ಆದರೆ, ಈ ಬಾರಿ ಇದೇ ಮೊದಲ ಬಾರಿಗೆ ಕಾಗದರಹಿತ ಬಜೆಟ್ ಮಂಡಿಸಲಾಗುತ್ತಿದೆ.

ಕೇಂದ್ರ ಬಜೆಟ್ 2021 ಅನ್ನು ಫೆಬ್ರವರಿ 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ.

ವಾರ್ಷಿಕ ಹಣಕಾಸು ಸ್ಟೇಟ್‌ಮೆಂಟ್, ಡಿಮಾಂಡ್ ಫಾರ್ ಗ್ರಾಂಟ್ಸ್, ಹಣಕಾಸು ಬಿಲ್ ಸೇರಿದಂತೆ ಕೇಂದ್ರ ಬಜೆಟ್‌ನ ಎಲ್ಲ 14 ದಾಖಲೆಗಳು ಆ್ಯಪ್‌ನಲ್ಲಿ ದೊರೆಯಲಿವೆ.

ಬಜೆಟ್‌ ಪ್ರತಿಗಳ ಡೌನ್‌ಲೋಡ್, ಪ್ರಿಂಟಿಂಗ್, ಹುಡುಕುವುದು, ಝೂಮ್ ಮಾಡಿ ನೋಡುವುದು, ಸ್ಕ್ರಾಲಿಂಗ್ ಸೇರಿದಂತೆ ಬಳಕೆದಾರಸ್ನೇಹಿಯಾಗಿ ಆ್ಯಪ್‌ ಅನ್ನು ರೂಪಿಸಲಾಗಿದೆ. ಟೇಬಲ್‌ಗಳು, ಇತರ ಸಂಬಂಧಿತ ವಿಷಯಗಳ ಲಿಂಕ್‌ಗಳೂ ಆ್ಯಪ್‌ನಲ್ಲಿ ಬಜೆಟ್ ಪ್ರತಿಗಳ ಜತೆ ಸಿಗಲಿವೆ ಎಂದು ಹಣಕಾಸು ಇಲಾಖೆ ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ ವೆಬ್‌ ಪೋರ್ಟಲ್‌ನಿಂದಲೂ (www.indiabudget.gov.in), ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ಆರ್ಥಿಕ ವ್ಯವಹಾರಗಳ ಇಲಾಖೆಯ (ಡಿಇಎ) ಮಾರ್ಗದರ್ಶನದಲ್ಲಿ ಆ್ಯಪ್ ರೂಪಿಸಿದೆ. ಬಜೆಟ್ ಪ್ರತಿಯನ್ನು ಹಣಕಾಸು ಸಚಿವರು ಸಂಸತ್‌ನಲ್ಲಿ ಓದಿ ಮುಗಿಸಿದ ಬಳಿಕ ಬಜೆಟ್ ಪ್ರತಿಗಳು ಆ್ಯಪ್‌ನಲ್ಲಿ ಸಿಗಲಿವೆ ಎಂದೂ ಇಲಾಖೆ ತಿಳಿಸಿದೆ.

ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್‌,ಹಣಕಾಸು ಸೇವೆಗಳ ಕಾರ್ಯದರ್ಶಿ ದೆಬಾಸಿಶ್ ಪಾಂಡಾ, ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ, ವೆಚ್ಚ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಮತ್ತು ಬಜೆಟ್ ಸಿದ್ಧತೆಯಲ್ಲಿ ಭಾಗವಹಿಸಿದ ಇತರ ಹಿರಿಯ ಅಧಿಕಾರಿಗಳು ಹಲ್ವಾ ಮತ್ತು ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.