ADVERTISEMENT

Budget 2021: 'ಆತ್ಮಬರ್ಬರ' ಬಜೆಟ್; ಕರ್ನಾಟಕದ ನಿರ್ಲಕ್ಷ್ಯ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2021, 14:12 IST
Last Updated 1 ಫೆಬ್ರುವರಿ 2021, 14:12 IST
ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ
ಕರ್ನಾಟಕ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ   

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ತಿನಲ್ಲಿ ಮಂಡಿಸಿರುವ 2021-22ನೇ ಸಾಲಿನ ಕೇಂದ್ರ ಬಜೆಟ್ ಅನ್ನು 'ಆತ್ಮಬರ್ಬರ' ಬಜೆಟ್ ಎಂದು ಲೇವಡಿ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೋವಿಡ್ ಪರಿಹಾರಕ್ಕಾಗಿ 'ಆತ್ಮನಿರ್ಭರ' ಹೆಸರಲ್ಲಿ ಮೂರು ಪ್ಯಾಕೇಜ್ ಗಳನ್ನು ನೀಡಿದ್ದರು. ಅದರ ಮುಂದುವರಿದ ಭಾಗವಾಗಿ 'ಆತ್ಮಬರ್ಬರ' ಬಜೆಟ್ ನೀಡಿದ್ದಾರೆ. ಇದೊಂದು ರೀತಿಯಲ್ಲಿ 'ಆತ್ಮ ಬರ್ಬಾದ್' (ವಿನಾಶ) ಬಜೆಟ್ ಕೂಡಾ ಹೌದು ಎಂದು ಟೀಕಿಸಿದರು.

ಕೊರೊನಾದಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದೆ. ರೈತರ ಬೆಳೆಗೆ ಬೆಲೆ ಇಲ್ಲದೆ ದಿವಾಳಿ ಸ್ಥಿತಿಯಲ್ಲಿದ್ದಾರೆ, ಉದ್ಯಮಿಗಳು ಮಾರುಕಟ್ಟೆ ಇಲ್ಲದೆ ಕಷ್ಟದಲ್ಲಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಯಾವ ನಿರ್ದಿಷ್ಠ ಕ್ರಮಗಳು 2021-22ರ ಸಾಲಿನ ಬಜೆಟ್‌ನಲ್ಲಿ ಎಂದು ಆರೋಪಿಸಿದರು.

ADVERTISEMENT

ಕೊರೊನಾದಿಂದಾಗಿ ನೆಲಕಚ್ಚಿರುವ ಆರ್ಥಿಕತೆಯ ಚೇತರಿಕೆಗಾಗಿ ಜನರ ಕೈಗೆ ದುಡ್ಡು ಸೇರುವಂತೆ ಮಾಡಬೇಕೆಂಬುದು ನಮ್ಮ ದೇಶದ ಮತ್ತು ಅಂತರರಾಷ್ಟ್ರೀಯ ಆರ್ಥಿಕ ತಜ್ಞರೆಲ್ಲರೂ ಸೂಚಿಸಿದ್ದ ಸಾಮಾನ್ಯ ಪರಿಹಾರ. ನಿರ್ಮಲಾ ಸೀತಾರಾಮನ್ ಜನರಿಂದ ಇನ್ನಷ್ಟು ಹಣವನ್ನು ಕಿತ್ತುಕೊಳ್ಳಲು ಹೊರಟಿದ್ದಾರೆಯೇ ಹೊರತು ಅವರ ಜೇಬಿಗೆ ಏನನ್ನೂ ಹಾಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಜನರನ್ನು ರೈತರ ವಿರುದ್ದ ಎತ್ತಿಕಟ್ಟುವ ಹೀನ ಕೃತ್ಯ...
ತೆರಿಗೆ ಎನ್ನುವುದು ಬಜೆಟ್‌ಗಳ ಸಾಮಾನ್ಯ ಭಾಗ. ಪ್ರಮುಖವಾಗಿ ತೆರಿಗೆಗಳ ಮೂಲಕವೇ ಸರ್ಕಾರ ತನ್ನ ವೆಚ್ಚಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಡೀಕರಿಸುತ್ತದೆ. ಆದರೆ ನಿರ್ಮಲಾ ಸೀತಾರಾಮನ್ ಅವರು ನೇರವಾಗಿ ಹೆಚ್ಚು ತೆರಿಗೆ ವಿಧಿಸದೆ, ಕೃಷಿ ಮೂಲಸೌಕರ್ಯ ಸೆಸ್ ಹೇರಿ ರೈತರ ಹೆಸರಲ್ಲಿ ಪರೋಕ್ಷವಾಗಿ ಸಂಪನ್ಮೂಲ ಕ್ರೋಡಿಕರಿಸಲು ಹೊರಟಿದ್ದಾರೆ ಎಂದು ಟ್ವೀಟ್ ಮಾಡಿದರು.

ಪೆಟ್ರೋಲ್, ಡೀಸೆಲ್, ರಸಗೊಬ್ಬರ, ಕಲ್ಲಿದ್ದಲು, ಪಾಮ್ ಆಯಿಲ್, ಕಡಲೆ, ಬಟಾಣಿ, ಹತ್ತಿಯಿಂದ ಹಿಡಿದು ಸೇಬು, ಮದ್ಯದ ವರೆಗೆ ಎಲ್ಲದರ ಮೇಲೂ ಶೇಕಡಾ 2.5ರಿಂದ ಹಿಡಿದು ಶೇಕಡಾ ನೂರರ ವರೆಗೆ ಕೃಷಿ ಸೆಸ್ ಹೇರಲಾಗಿದೆ. ಇದರಿಂದಾಗುವ ಬೆಲೆ ಏರಿಕೆಗೆ ರೈತರೂ ಸೇರಿದಂತೆ ಎಲ್ಲರೂ ತಲೆಕೊಡಬೇಕಾಗುತ್ತದೆ ಎಂದು ತಿಳಿಸಿದರು.

ಕೃಷಿ ಮೂಲಸೌಕರ್ಯ ಸೆಸ್ ನಿಂದಾಗಿ ಬೆಲೆ ಏರಿಕೆಯಾದಾಗ ಜನ ಸರ್ಕಾರವನ್ನಲ್ಲ ರೈತರನ್ನು ದೂರತೊಡಗುತ್ತಾರೆ. ಈ ಮೂಲಕ ಬೆಲೆ ಏರಿಕೆಗೆ ಕೃಷಿ ಸೆಸ್ ಕಾರಣ ಎಂಬ ಜನಾಭಿಪ್ರಾಯವನ್ನು ಮೂಡಿಸಿ ಜನರನ್ನು ರೈತರ ವಿರುದ್ದ ಎತ್ತಿಕಟ್ಟುವ ಹೀನ ಕೃತ್ಯವನ್ನು ಬಿಜೆಪಿ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.

ಕೃಷಿ ಮೂಲಸೌಕರ್ಯ ಸೆಸ್ ನಿಂದಾಗಿ ಸಂಗ್ರಹವಾಗುವ ಹಣ ಎಷ್ಟು? ಇದನ್ನು ಬಳಸಿಕೊಂಡು ಕೃಷಿಕ್ಷೇತ್ರದಲ್ಲಿ ಅನುಷ್ಠಾನಗೊಳ್ಳಲಿರುವ ಮೂಲಸೌಕರ್ಯಗಳ ಯೋಜನೆಗಳೇನು ಎಂಬ ಬಗ್ಗೆ 65 ಪುಟಗಳ ಬಜೆಟ್ ಭಾಷಣದಲ್ಲಿ ಎಲ್ಲಿಯೂ ಉಲ್ಲೇಖ ಇಲ್ಲ. ನೀರಾವರಿ, ಶೈತ್ಯಾಗಾರ, ದಾಸ್ತಾನು ಮಳಿಗೆ ಹೀಗೆ ಯಾವುದೇ ನಿರ್ದಿಷ್ಠ ಯೋಜನೆಗಳನ್ನು ಘೋಷಿಸಿಲ್ಲ ಎಂದು ತಿಳಿಸಿದರು.

ನೀರಾವರಿ ಯೋಜನೆಗಳು, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಬೆಲೆ ರಕ್ಷಣೆಗೆ ಕ್ರಮಗಳು, ಕಡಿಮೆ ಬಡ್ಡಿದರದಲ್ಲಿ ಸಾಲ, ಕಡಿಮೆ ಬೆಲೆಯಲ್ಲಿ ಬೀಜ-ಗೊಬ್ಬರ ಸೇರಿದಂತೆ ರೈತರ ಅವಶ್ಯಕತೆಗಳನ್ನು ಪೂರೈಸುವ ಯಾವ ಯೋಜನೆಗಳೂ ಬಜೆಟ್ ನಲ್ಲಿ ಇಲ್ಲ.

ದೇಶಾದ್ಯಂತ ರೈತರು ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವ ಯೋಜನೆಯ ಬಗ್ಗೆ ಒತ್ತಾಯಿಸುತ್ತಾ ಬಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ದಿಯಾಗಬೇಕಾದರೆ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯ ಸಿಗಬೇಕು. ಇದರ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪ ಇಲ್ಲ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಕೃಷಿ ಸಾಲವನ್ನು ಮನ್ನಾ ಮಾಡಬೇಕೆಂಬ ಬೇಡಿಕೆಯನ್ನು ಕಳೆದ 7 ವರ್ಷಗಳಿಂದ ರೈತರು ಮಾಡುತ್ತಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಸರ್ಕಾರ ಮಾಡಿದ್ದ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾವೇ ಕೊನೆ. ಈ ಸಾಲಮನ್ನಾ ಮಾಡಿದ್ದರೆ ಸಂಕಷ್ಟದಲ್ಲಿರುವ ರೈತರು ಸ್ವಲ್ಪ ನಿರಾಳವಾಗುತ್ತಿದ್ದರು ಎಂದು ಹೇಳಿದರು.

ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ಚಾಲನೆ ನೀಡಿರುವುದು ರೈತರು ಸೇರಿದಂತೆ ಎಲ್ಲ ವರ್ಗದ ಜನಗಳ ಮೇಲೆ ಇನ್ನೊಂದು ಹೊಡೆತ. ಖಾಸಗೀಕರಣಗೊಂಡರೆ ರೈತರಿಗೆ ಈಗ ಲಭ್ಯ ಇರುವ ಉಚಿತ ವಿದ್ಯುತ್ ಖಂಡಿತ ಕಡಿತ ಆಗಲಿದೆ. ಇದರ ಜೊತೆಗೆ ಸಾಮಾನ್ಯ ಜನರ ಮನೆ ಬಳಕೆಯ ವಿದ್ಯುತ್ ಕೂಡಾ ದುಬಾರಿಯಾಗಲಿದೆ. ಉದ್ಯಮಿಗಳ ಮೇಲೆಯೂ ಹೆಚ್ಚಿನ ಹೊರೆ ಬೀಳಲಿದೆ ಎಂದು ತಿಳಿಸಿದರು.

ವಿಮಾ ಕ್ಷೇತ್ರದಲ್ಲಿ 74% ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಅಪಾಯಕಾರಿಯಾದ ಬೆಳವಣಿಗೆ. ನಮ್ಮಲ್ಲಿ ಬಹಳ ದುರ್ಬಲವಾದ ಸಾಮಾಜಿಕ ಭದ್ರತಾ ವ್ಯವಸ್ಥೆಯಿದೆ. ವಯಸ್ಸಾದವರು ಮತ್ತು ನಿವೃತ್ತರು ತಮ್ಮ ಆರೋಗ್ಯ ಭದ್ರತೆಗಾಗಿ ವಿಮೆಯನ್ನು ನಂಬಿದ್ದಾರೆ. ಈ ಕ್ಷೇತ್ರದ ಖಾಸಗೀಕರಣದಿಂದಾಗಿ ವಿಮೆಯಿಂದಲೂ ಭದ್ರತೆ ಇಲ್ಲದಂತಾಗುವ ದಿನ ದೂರ ಇಲ್ಲ ಎಂದು ಹೇಳಿದರು.

ಕರ್ನಾಟಕವನ್ನು ಸಂಪೂರ್ಣವಾಗಿನಿರ್ಲಕ್ಷಿಸಲಾಗಿದೆ...
ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಸಂಸದರಾಗಿದ್ದರೂ ಬಜೆಟ್ ನಲ್ಲಿ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಮೆಟ್ರೋ ಮತ್ತು ಬೆಂಗಳೂರು-ಚೆನ್ನೈ ಕಾರಿಡಾರ್ ಗೆ ನೀಡಿರುವ ಅನುದಾನ ಹೊಸದೇನಲ್ಲ. ಉಳಿದಂತೆ ಹಣಕಾಸು ಸಚಿವರು ಒಮ್ಮೆಯೂ ಕರ್ನಾಟಕದ ಹೆಸರನ್ನೂ ಕೂಡಾ ಎತ್ತಿಲ್ಲ ಎಂದು ಆರೋಪಿಸಿದರು.

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಯಾವುದೇ ಪರಿಹಾರ ಬಜೆಟ್ ನಿಂದ ಸಿಕ್ಕಿಲ್ಲ. ಚುನಾವಣೆ ನಡೆಯುವ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಅಸ್ಸಾಂ ರಾಜ್ಯಗಳಿಗೆ ಹೆಚ್ಚು ಹಣ ನೀಡಲಾಗಿದೆ. ಪ್ರತಿ ವರ್ಷ ಚುನಾವಣೆ ನಡೆಸಿದರೆ ನಮಗೂ ಹೆಚ್ಚಿನ ಅನುದಾನ ನೀಡಬಹುದು ಎಂದು ವ್ಯಂಗ್ಯವಾಡಿದರು.

ವಿತ್ತೀಯ ಕೊರತೆ ಶೇ. 3.5ಕ್ಕೆ ತರುವುದಾಗಿ ಹೇಳಿದ್ದರು. ಈಗ ಶೇ. 9.7ಕ್ಕೆ ಏರಿದೆ. ಇದರಿಂದ ಹೆಚ್ಚು ಸಾಲ ಮಾಡಬೇಕಾಗುತ್ತದೆ. ನನ್ನ ಪ್ರಕಾರ ವಿತ್ತೀಯ ಕೊರತೆ ಶೇ.14-15 ಇದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಜಿಡಿಪಿ ಬೆಳವಣಿಗೆ ಕುಸಿಯುತ್ತಲೇ ಇದೆ. ಡಾ. ಮನಮೋಹನಸಿಂಗ್ ಅವರ ಅವಧಿಯಲ್ಲಿ ಇದ್ದಿದುಕ್ಕಿಂತ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.

ಈ ವರ್ಷ ಕೊರೊನಾ ಸಂಕಷ್ಟ ಎದುರಾಗಿತ್ತು. ಆದರೆ, ಕಳೆದ ವರ್ಷ ಏನಾಗಿತ್ತು? ನಿರುದ್ಯೋಗ ಪ್ರಮಾಣ ನಗರದಲ್ಲಿ ಶೇ.9.2 ಇತ್ತು. ಇದರಿಂದ ಯುವಕರಿಗೆ ಉದ್ಯೋಗ ಎಲ್ಲಿ ಸಿಗುತ್ತದೆ. ಅವರು ಪಕೋಡಾ ಮಾರಲು ಹೋಗಬೇಕಾಗುತ್ತದೆ. ಈ ವರ್ಷ ಜಿಡಿಪಿ ಬೆಳವಣಿಗೆ -7.7% ಆಗಿದೆ ಎಂದು ಬೊಟ್ಟು ಮಾಡಿದರು.

ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ...
2020-2021ನೇ ಸಾಲಿಗೆ ಜಿಡಿಪಿ ಬೆಳವಣಿಗೆಯನ್ನು ಶೇ.11ಕ್ಕೆ ಏರಿಸುವುದಾಗಿ ಕೇಂದ್ರ ಘೋಷಣೆ ಮಾಡಿದೆ. ಇದು ನಂಬಲು ಸಾಧ್ಯವೇ ? ಇದು ಸುಳ್ಳಿನ ಕಂತೆ. ಅಂಕಿ-ಅಂಶಗಳನ್ನು ನೀಡದೆ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಇದಾಗಿದೆ. ನಿರ್ಮಲಾ ಸೀತಾರಾಮನ್ ಅವರು ಬಜೆಟ್ ನಲ್ಲಿ ವಿವರಗಳನ್ನು ಬಿಚ್ಚಿಟ್ಟದ್ದಕ್ಕಿಂತ ಮುಚ್ಚಿಟ್ಟದ್ದೇ ಹೆಚ್ಚು ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. 80 ಕೋಟಿ ಮಂದಿಗೆ ಅಂದರೆ ಶೇ. 80ರಷ್ಟು ಮಂದಿಗೆ ಪಡಿತರ ಚೀಟಿ ಮೂಲಕ ಆಹಾರ ಧಾನ್ಯ ನೀಡಲಾಗುತ್ತಿದೆ. ಶಾಂತಕುಮಾರ್ ಅವರ ಸಮಿತಿ ವರದಿ ಜಾರಿಗೆ ತಂದರೆ ಶೇ.20ರಷ್ಟು ಮಂದಿ ಮಾತ್ರ ಪಡಿತರ ಮೂಲಕ ಆಹಾರ ಧಾನ್ಯ ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿದರು.

ರೈಲ್ವೆ ನಿಲ್ದಾಣ, ಬಂದರು, ವಿಮಾನ ನಿಲ್ದಾಣಗಳನ್ನು ಅಂಬಾನಿ, ಅಂದಾನಿ ಮೊದಲಾದ ಉದ್ಯಮಿಗಳಿಗೆ ಮಾರಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ. ಇದರಿಂದ ದೇಶ ತನ್ನ ಆಸ್ತಿ ಕಳೆದುಕೊಳ್ಳುವುದಲ್ಲದೆ, ತಳಸಮುದಾಯಗಳು ಮೀಸಲಾತಿ ಸೌಲಭ್ಯವನ್ನೂ ಕಳೆದುಕೊಳ್ಳಲಿವೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.