ADVERTISEMENT

Union Budget: ರಾಜ್ಯದ ತೆರಿಗೆ ಪಾಲು ಅಲ್ಪ ಏರಿಕೆ; 16ನೇ ಹಣಕಾಸು ಆಯೋಗದ ಶಿಫಾರಸು

ಮಂಜುನಾಥ್ ಹೆಬ್ಬಾರ್‌
Published 1 ಫೆಬ್ರುವರಿ 2026, 19:46 IST
Last Updated 1 ಫೆಬ್ರುವರಿ 2026, 19:46 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

(ಪಿಟಿಐ ಚಿತ್ರ)

ನವದೆಹಲಿ: ಹಿಂದಿನ ಹಣಕಾಸು ಆಯೋಗಗಳ ಮಾದರಿಯಲ್ಲೇ 16ನೇ ಹಣಕಾಸು ಆಯೋಗವೂ ಕೇಂದ್ರದ ತೆರಿಗೆ ಪಾಲಿನಲ್ಲಿ ಉತ್ತರದ ಬಡ (ಬಿಮಾರು) ರಾಜ್ಯಗಳಿಗೆ ಹೆಚ್ಚಿನ ಸಂಪನ್ಮೂಲ ಹಂಚಿಕೆ ಮಾಡಿದೆ. ಬಿಜೆಪಿಯೇತರ ರಾಜ್ಯಗಳಿಗೆ ‘ತೆರಿಗೆ ಯುದ್ಧ’ಕ್ಕೆ ಮಣಿದಿರುವ ಆಯೋಗವು, ಕರ್ನಾಟಕ ಸೇರಿದಂತೆ ದಕ್ಷಿಣದ ಪ್ರಗತಿಶೀಲ ರಾಜ್ಯಗಳ ಪಾಲನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸಿದೆ. 

ADVERTISEMENT

ಅರವಿಂದ ಪನಗರಿಯಾ ಅವರ ಅಧ್ಯಕ್ಷತೆಯ 16ನೇ ಹಣಕಾಸು ಆಯೋಗವು 2026ರ ಏಪ್ರಿಲ್‌ 1ರಿಂದ ಆರಂಭವಾಗುವ ಐದು ವರ್ಷಗಳ ಅವಧಿಗೆ ಕೇಂದ್ರ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಶೇಕಡಾ 41ರಷ್ಟು ಉಳಿಸಿಕೊಳ್ಳಲು ಶಿಫಾರಸು ಮಾಡಿದೆ. ಆಯೋಗದ ವರದಿಯನ್ನು ಲೋಕಸಭೆಯಲ್ಲಿ ಭಾನುವಾರ ಮಂಡಿಸಲಾಯಿತು. ಆಯೋಗದ ಶಿಫಾರಸಿನ ಪ್ರಕಾರ, ಕೇಂದ್ರವು 2026-27ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ ₹1.4 ಲಕ್ಷ ಕೋಟಿ ಹಂಚಿಕೆ ಮಾಡಿದೆ.

ಕರ್ನಾಟಕಕ್ಕೆ ಶೇ 4.13 ಪಾಲು ಹಂಚಿಕೆ ಮಾಡಲಾಗಿದೆ. ಇದು 15ನೇ ಹಣಕಾಸು ಆಯೋಗದ (ಶೇ 3.64) ಶಿಫಾರಸಿಗಿಂತ ಸ್ವಲ್ಪ ಜಾಸ್ತಿ, 14ನೇ ಹಣಕಾಸು ಆಯೋಗದ (ಶೇ 4.71) ಶಿಫಾರಸಿಗಿಂತ ಅಲ್ಪ ಕಡಿಮೆ. ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ. ರಾಜ್ಯಕ್ಕೆ ಶೇ 4.71ಕ್ಕಿಂತ ಹೆಚ್ಚು ತೆರಿಗೆ ಪಾಲು ಸಿಗಲೇಬೇಕು ಎಂದು ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಪಟ್ಟು ಹಿಡಿದಿತ್ತು. ಪರಿಷ್ಕೃತ ಹಂಚಿಕೆ ಪ್ರಕಾರ, ರಾಜ್ಯಕ್ಕೆ ಈ ವರ್ಷ ₹63,049 ಕೋಟಿ ಬರಬಹುದು ಎಂದು ಅಂದಾಜಿಸಲಾಗಿದೆ. 

ಉದಾಹರಣೆಗೆ, ರಾಜ್ಯಗಳಿಗೆ ಹಂಚಿಕೆ ಮಾಡುವ ₹100ನಲ್ಲಿ ಕರ್ನಾಟಕಕ್ಕೆ ₹4.13 ಸಿಗಲಿದೆ. ಉತ್ತರ ಪ್ರದೇಶಕ್ಕೆ ₹17.61, ಬಿಹಾರಕ್ಕೆ ₹9.94, ಮಧ್ಯ ಪ್ರದೇಶಕ್ಕೆ ₹7.34, ಪಶ್ಚಿಮ ಬಂಗಾಳಕ್ಕೆ ₹7.21, ಮಹಾರಾಷ್ಟ್ರಕ್ಕೆ ₹6.44, ರಾಜಸ್ಥಾನಕ್ಕೆ ₹5.92 ದೊರಕಲಿದೆ. ಅಂದರೆ, ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲ ವಿಷಯದಲ್ಲಿ ದಕ್ಷಿಣದ ರಾಜ್ಯಗಳಿಗಿಂತ ಸಮೃದ್ಧವಾಗಿರುವ ಉತ್ತರದ ರಾಜ್ಯಗಳಿಗೆ ಮತ್ತೆ ತೆರಿಗೆ ಪಾಲಿನ ಮಹಾಪೂರ. ಹಿಂದಿ ನೆಲದ ಈ ರಾಜ್ಯಗಳು ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿರುವುದನ್ನೇ ಮಾನದಂಡವಾಗಿಟ್ಟುಕೊಂಡು ಅಧಿಕ ಪಾಲು ಹಂಚಿಕೆ ಮಾಡಲಾಗಿದೆ. 

ತೆರಿಗೆ ಹಂಚಿಕೆಯೂ ಸೇರಿದಂತೆ ಒಟ್ಟು ಸಂಪನ್ಮೂಲ ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ದಶಕಗಳಿಂದ ಇದೆ. ಈ ತಾರತಮ್ಯದ ವಿರುದ್ಧದ ದಕ್ಷಿಣದ ಬಿಜೆಪಿಯೇತರ ಸರ್ಕಾರಗಳು ಕೇಂದ್ರದ ವಿರುದ್ಧ ವರ್ಷಗಳಿಂದ ಸಂಘರ್ಷ ನಡೆಸಿದ್ದವು. ಈ ಹೋರಾಟಕ್ಕೆ ಈಗ ಸಮಾಧಾನಪಟ್ಟುಕೊಳ್ಳುವಂತಹ ಜಯ ಸಿಕ್ಕಿದೆ. ಬಿಮಾರು ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತಿತರ ರಾಜ್ಯಗಳ ಪಾಲನ್ನು ಸಣ್ಣ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. 

ವಿಪತ್ತು ನಿರ್ವಹಣೆಗಾಗಿ ರಾಜ್ಯಕ್ಕೆ ಐದು ವರ್ಷಗಳ ಅವಧಿಗೆ ₹8,559 ಕೋಟಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಎಸ್‌ಡಿಆರ್‌ಎಫ್‌ಗೆ (ರಾಜ್ಯ ವಿಪತ್ತು ನಿರ್ವಹಣೆ ನಿಧಿ) ₹6,847 ಕೋಟಿ ಹಾಗೂ ಎಸ್‌ಡಿಎಂಎಫ್‌ಗೆ (ರಾಜ್ಯ ವಿಪತ್ತು ತಗ್ಗಿಸುವಿಕೆ ನಿಧಿ) ₹1,712 ಕೋಟಿ. ಆದರೆ, ಇಲ್ಲಿ ಎಸ್‌ಡಿಆರ್‌ಎಫ್‌ ಹಾಗೂ ಎಸ್‌ಡಿಎಂಎಫ್‌ಗೆ ರಾಜ್ಯದ ಪಾಲು ತಲಾ ₹1,711 ಕೋಟಿ ಹಾಗೂ ₹428 ಕೋಟಿ ಇದೆ. ಆಯೋಗವು ಒಂದು ಕಡೆಯಲ್ಲಿ ತೆರಿಗೆ ಪಾಲನ್ನು ಹೆಚ್ಚಿಸಿ ಇನ್ನೊಂದು ಕಡೆಯಲ್ಲಿ ಕಿತ್ತುಕೊಳ್ಳುವ ಕೆಲಸ ಮಾಡಿದೆ. ಆಯೋಗ ವಿಧಿಸಿರುವ ಷರತ್ತುಗಳನ್ನು ಪಾಲನೆ ಮಾಡಿದರಷ್ಟೇ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ದೊರಕಲಿದೆ. ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸದ ಕಾರಣಕ್ಕೆ 15ನೇ ಹಣಕಾಸು ಆಯೋಗದ ₹1,219 ಕೋಟಿ ಅನುದಾನಕ್ಕೆ ಕೇಂದ್ರ ಸರ್ಕಾರ ಕತ್ತರಿ ಹಾಕಿರುವುದನ್ನು ಇಲ್ಲಿ ನೆನಪಿಸಬಹುದು. 

15ನೇ ಹಣಕಾಸು ಆಯೋಗವು ಜನಸಂಖ್ಯೆಯನ್ನು 1971ರ ಬದಲಾಗಿ 2011ನ್ನು ಆಧಾರವಾಗಿರಿಸಿಕೊಂಡ ಕಾರಣದಿಂದಲೂ ರಾಜ್ಯಕ್ಕೆ ತೀವ್ರ ರೂಪದ ಅನ್ಯಾಯವಾಗಿದೆ. ಜನಸಂಖ್ಯಾ ನಿಯಂತ್ರಣದ ಮೂಲಕ ಅಭಿವೃದ್ಧಿ ಸಾಧಿಸುತ್ತಿರುವ ರಾಜ್ಯಗಳಿಗೆ ಇದರಿಂದ ದೊಡ್ಡ ಹೊಡೆತ ಬಿದ್ದಿತು’ ಎಂದು ಕರ್ನಾಟಕ ಸರ್ಕಾರವು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಸಲವೂ 2011ರ ಜನಸಂಖ್ಯೆಯನ್ನೇ ಆಧಾರವಾಗಿಟ್ಟುಕೊಂಡು ತೆರಿಗೆ ಪಾಲು ಹಂಚಿಕೆ ಮಾಡಲಾಗಿದೆ. 

ಇನ್ನೊಂದೆಡೆ, ವಿಶೇಷ ಮೂಲಸೌಕರ್ಯ ವ್ಯವಸ್ಥೆ ಒದಗಿಸಲು ಅರ್ಹ ನಗರಗಳನ್ನು ಆಯೋಗ ಪಟ್ಟಿ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯದ ಯಾವ ನಗರವೂ ಸ್ಥಾನ ಪಡೆದಿಲ್ಲ. 

ರಾಜ್ಯಕ್ಕೆ ಮತ್ತೆ ಅನ್ಯಾಯ: ಸಿ.ಎಂ ಸಿದ್ದರಾಮಯ್ಯ
ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರವು ಅನ್ಯಾಯ ಮುಂದುವರಿಸಿದೆ. ನಾವು ಕನಿಷ್ಠ 14ನೇ ಹಣಕಾಸು ಆಯೋಗದಲ್ಲಿ ನಿಗದಿಯಾಗಿದ್ದ ಶೇ 4.71ರಷ್ಟಾದರೂ ಕೊಡಿ ಎಂದು 16ನೇ ಹಣಕಾಸು ಆಯೋಗದ ಎದುರು ವಾದ ಮಂಡಿಸಿದ್ದೆವು. ತೆರಿಗೆ ಹಂಚಿಕೆಯಲ್ಲಿ ನ್ಯಾಯಯುತ ಪಾಲಿಗಾಗಿ ಪ್ರಧಾನಿ, ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದೆವು. ಆದರೂ, ತೆರಿಗೆಯಲ್ಲಿ ಬರೀ ಶೇ 4.13ರಷ್ಟು ಪಾಲು ಕೊಡಲಾಗಿದೆ. ನಗರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳಿಗೆ ರಾಜ್ಯಕ್ಕೆ ಕೇವಲ ತಲಾ ₹ 18 ಸಾವಿರ ಕೋಟಿಗಳಷ್ಟು ಹಂಚಿಕೆ ಮಾಡಿದೆ. ಕರ್ನಾಟಕದಿಂದ ವರ್ಷಕ್ಕೆ ₹ 4.50 ಲಕ್ಷ ಕೋಟಿಗಳಷ್ಟು ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ರಾಜ್ಯ ಒಂದು ರೂಪಾಯಿ ತೆರಿಗೆ ಕಟ್ಟಿದರೆ ಬರೀ 14 ಪೈಸೆ ತೆರಿಗೆ ರೂಪದಲ್ಲಿ ಕೊಡುತ್ತಿದೆ. ಇದು ಅನ್ಯಾಯವಲ್ಲವೇ?
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.